ಎಚ್. ಜಿ. ರಾಧಾದೇವಿ
ಎಚ್. ಜಿ. ರಾಧಾದೇವಿ
ಎಚ್. ಜಿ. ರಾಧಾದೇವಿ ಕನ್ನಡದ ಜನಪ್ರಿಯ ಕಾದಂಬರಿಗಾರ್ತಿಯರಲ್ಲಿ ಒಬ್ಬರು.
ರಾಧಾದೇವಿ ಅವರು 1952ರ ಜನವರಿ 30ರಂದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಜನಿಸಿದರು. ಅವರ ನಿಜ ಹೆಸರು ರಾಧಾಮಣಿ. ತಂದೆ ಗೋಪಿನಾಥಾಚಾರ್ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ತಾಯಿ ಸರಸ್ವತಮ್ಮನವರು.
ತಂದೆಯವರಿಗೆ ಆಗಾಗ್ಗೆ ವರ್ಗವಾಗುತ್ತಿದ್ದುದರಿಂದ ಮಾಲೂರು, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ಚನ್ನಪಟ್ಟಣ, ಗೌರಿಬಿದನೂರು ಮುಂತಾದ ಕಡೆಗಳಲ್ಲಿ ರಾಧಾದೇವಿ ಅವರ ಪ್ರಾರಂಭಿಕ ಶಿಕ್ಷಣ ನಡೆಯಿತು. ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್‍ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಐವರು ಹುಡುಗಿಯರಲ್ಲಿ ರಾಧಾಮಣಿಯವರೂ ಒಬ್ಬರು. ಹೈಸ್ಕೂಲು ಓದುತ್ತಿದ್ದಾಗಿನಿಂದಲೂ ಕಾದಂಬರಿ ಓದುವ ಹುಚ್ಚು ಅವರಲ್ಲಿತ್ತು. ತರಗತಿಯ ನೋಟ್ ಪುಸ್ತಕಗಳೊಳಗೆ ಅನಕೃ, ತ್ರಿವೇಣಿ ಮುಂತಾದವರ ಕಾದಂಬರಿಗಳನ್ನಿಟ್ಟು ಕೊಂಡು ಓದಿದರೂ ವಿದ್ಯೆಯಲ್ಲಿ ಮುಂಚೂಣಿಯಲ್ಲಿದ್ದರು. ರಜೆಯ ದಿನಗಳಲ್ಲಿ ಕುಮಾರವ್ಯಾಸ ಭಾರತಕಥಾಮಂಜರಿಯ ಓದು ಅವರಿಗೆ ಅಚ್ಚುಮೆಚ್ಚಿನದಾಗಿತ್ತು. ಅಲ್ಲಿನ ಹಲವಾರು ಪ್ರಸಂಗಗಳು ಅವರಿಗೆ ಕಂಠಸ್ಥವಾಗಿದ್ದವು.
ಎಸ್ಎಸ್ಎಲ್‍ಸಿ ನಂತರ ರಾಧಾದೇವಿ ಅವರ ಮುಂದಿನ ಓದಿಗೆ ತಡೆಯುಂಟಾಗಿ ಬಿಡುವಿನ ವೇಳೆಯಲ್ಲಿ ಮನೆ ಪಾಠ ಆರಂಭಿಸಿದರು. ಇದರಿಂದ ದೊರೆತ ಅನುಭವದಿಂದ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ಹದಿನೆಂಟರ ವಯಸ್ಸಿನಲ್ಲೇ ಕೋಲಾರದ ಮೆಥೊಡಿಸ್ಟ್ ಮಿಷಿನ್ ಶಾಲೆಯಲ್ಲಿ ಉದ್ಯೋಗ ದೊರಕಿಸಿಕೊಂಡರು. ಬಾಲ್ಯದಿಂದಲೂ ರೂಢಿಸಿಕೊಂಡಿದ್ದ ವಿಸ್ತ್ರತ ಓದು ಬರವಣಿಗೆಯನ್ನು ಪ್ರಾರಂಭಿಸಲು ಉತ್ತೇಜನ ನೀಡಿತು. ರಾಧಾಮಣಿ ಆಗಿದ್ದವರು 'ರಾಧಾದೇವಿ’ ಎಂಬ ಕಾವ್ಯನಾಮದಿಂದ ಸಣ್ಣ ಕಥೆಗಳು, ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಪತ್ರಿಕೆಗಳಲ್ಲಿ ಬರೆಯತೊಡಗಿದರು. ದುಡಿಯುವ ಮಹಿಳೆಯರ ಸಮಸ್ಯೆಗಳ ಬಗ್ಗೆ ಹಲವಾರು ಲೇಖನಗಳನ್ನು ಬರೆದರು. ‘ಆಫೀಸ್ ಹೊತ್ತಿಗೆ ಅನಂತನ ಅವಾಂತರಗಳು’ ಎಂಬ ಹಾಸ್ಯ ಲೇಖನದಲ್ಲಿ ಪತಿಯ ಆಫೀಸ್ ತರಾತುರಿ, ಮಕ್ಕಳ ಕೋಟಲೆ, ಗೃಹಿಣಿಯ ಗಡಿಬಿಡಿಗಳನ್ನು ಚಿತ್ರಿಸಿದ್ದು ಓದುಗರಿಂದ ಅಪಾರ ಮೆಚ್ಚುಗೆ ಪಡೆಯಿತು.
ರಾಧಾದೇವಿ ಅವರ ಮೊದಲ ಪ್ರಕಟಿತ ಕಾದಂಬರಿ ‘ಸುವರ್ಣ ಸೇತುವೆ’. ಇದಕ್ಕೆ ಮುನ್ನ ಒಂಬತ್ತು ಕಾದಂಬರಿಗಳನ್ನು ಬರೆದಿದ್ದರೂ ಅದಾವುದಕ್ಕೂ ಪ್ರಕಟಣೆಯ ಯೋಗ ದೊರೆಯದಿದ್ದರೂ, ಪ್ರಜಾಮತ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ‘ಸುವರ್ಣ ಸೇತುವೆ’ಯು ಪ್ರಕಟವಾಗಿತ್ತಿದ್ದಂತೆ ಗಳಿಸಿದ ಜನಪ್ರಿಯತೆಯಿಂದ, ಹಿಂದೆ ಬರೆದ ಇತರ ಕಾದಂಬರಿಗಳಿಗೂ ಪ್ರಕಟವಾಗುವ ಯೋಗ ಕೂಡಿಬಂತು. ಪುಸ್ತಕ ರೂಪದಲ್ಲಿ ಪ್ರಕಟಿಸಿದವರು ಬೆಂಗಳೂರಿನ ಗೀತಾ ಏಜೆನ್ಸಿಸ್ ಪ್ರಕಾಶಕರು. ನಂತರ ಇದೇ ಪ್ರಕಾಶಕರು ಇವರ ಎಂಬತ್ತೆಂಟು ಕಾದಂಬರಿಗಳನ್ನು ಪ್ರಕಟಿಸಿದ್ದಲ್ಲದೆ, ಮೊದಲ ಹನ್ನೆರಡು ಕಾದಂಬರಿಗಳು ಮೂರಕ್ಕೂ ಹೆಚ್ಚು ಮುದ್ರಣ ಕಂಡವು. ಹೀಗೆ ನಿರಂತರ ಬೇಡಿಕೆಯ ಕಾದಂಬರಿಗಾರ್ತಿ ಎನಿಸಕೊಂಡ ರಾಧಾದೇವಿಯವರ ಕಾದಂಬರಿಗಳನ್ನು ವಿವಿಧ ಪ್ರಕಾಶನದವರು ಪ್ರಕಟಿಸಿದ್ದು ಸುಮಾರು ನೂರ ಎಪ್ಪತ್ತು ಕಾದಂಬರಿಗಳ ಲೇಖಕಿ ಎನಿಸಿದರು.
ರಾಧಾದೇವಿ ಅವರ ಜಿವನದಲ್ಲಿ ನಡೆದ ಮತ್ತೊಂದು ಸ್ವಾರಸ್ಯಕರ ಘಟನೆ ಎಂದರೆ ಮೊದಲ ಕಾದಂಬರಿ ‘ಸುವರ್ಣ ಸೇತುವೆ’ ಧಾರಾವಾಹಿಯಾಗಿ ಪ್ರಕಟಗೊಂಡ ನಂತರ, ಮೊದಲ ಕಂತು ಪ್ರಕಟವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಅಭಿಮಾನಿ ಓದುಗರೊಬ್ಬರು ಬಾಳ ಸಂಗಾತಿಯಾಗಿಯೂ ದೊರೆತರು. ಕಾದಂಬರಿಯ ಕಥೆಯಂತೆಯೇ ಮದುವೆಯಲ್ಲಿ ಪೂರ್ಣಗೊಂಡಿತು. ಮದುವೆಯ ನಂತರ ಉದ್ಯೋಗವನ್ನು ತೊರೆದು ಪತಿಯ ಗೃಹ ಗಂಗಾವತಿಗೆ ಬಂದ ನಂತರ ಪೂರ್ಣ ಪ್ರಮಾಣದಲ್ಲಿ ಕಾದಂಬರಿಗಳ ರಚನೆಯಲ್ಲಿ ತೊಡಗಿಕೊಂಡರು.
ರಾಧಾದೇವಿ ಅವರ ಕಾದಂಬರಿಗಳನ್ನು ಹಲವಾರು ನಿಯತಕಾಲಿಕೆಗಳು ಕಾಯ್ದಿರಿಸಿ ಪ್ರಕಟಿಸತೊಡಗಿದವು. ಅವರಿಗೆ ಅಷ್ಟೊಂದು ಜನಪ್ರಿಯತೆ ಇತ್ತು. ರಾಧಾದೇವಿ ಅವರು ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರಿ, ರಾಧೆಗೊಲಿದ ಕೃಷ್ಣ, ಸತ್ಯಭಾಮಾವೃತ ಶ್ರೀಕೃಷ್ಣ, ಶ್ರೀನಿವಾಸ ಕಲ್ಯಾಣ ಎಂಬ ಪೌರಾಣಿಕ ಕಾದಂಬರಿಗಳನ್ನೂ ಬರೆದರು. ಜೊತೆಗೆ ‘ಮನಸ್ಸಿನ ಕಣ್ಣು’ ಎಂಬ ಪತ್ತೇದಾರಿ ಕಾದಂಬರಿ ಮತ್ತು ‘ಬೆಳಕು’ ಎಂಬ ಧಾರ್ಮಿಕ ಕೃತಿಯನ್ನೂ ರಚಿಸಿದರು.
ರಾಧಾದೇವಿ ಅವರ 'ಸುವರ್ಣ ಸೇತುವೆ’ ಕಾದಂಬರಿಯು ಇದೇ ಹೆಸರಿನಿಂದ ಚಲನಚಿತ್ರವಾಗಿ ವಿಷ್ಣುವರ್ಧನ್, ಆರತಿಯವರ ಅಭಿನಯದಲ್ಲಿ ತೆರೆಕಂಡು ಜನಮನ್ನಣೆಗಳಿಸಿತು. ಮತ್ತೊಂದು ಕಾದಂಬರಿ ‘ಅನುರಾಗ ಅರಳಿತು’ ಇದೇ ಹೆಸರಿನಿಂದ ಚಲನಚಿತ್ರವಾಗಿ ರಾಜ್‌ಕುಮಾರ್, ಮಾಧವಿ ಮತ್ತು ಗೀತಾ ಅವರ ಅಭಿನಯದ ಜನಪ್ರಿಯ ಚಲನಚಿತ್ರವೆನಿಸಿತು.
ರಾಧಾದೇವಿ ಅವರ ಐವತ್ತನೆಯ ಕಾದಂಬರಿ ‘ಅಂಬರ ಚುಂಬಿತೆ’ ತರಂಗ ವಾರ ಪತ್ರಿಕೆಯಲ್ಲೂ, ನೂರನೆಯ ಕಾದಂಬರಿ ‘ಬಂಗಾರದ ಕಿಡಿ’ ಹಾಗೂ ನೂರ ಐವತ್ತನೆಯ ಕಾದಂಬರಿ ‘ಹಂಸ ಉಗುಳಿದ ಹಾರ’ ಇವು ಕರ್ಮವೀರ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು. ಹಿಂದಿ ಭಾಷೆಗೂ ಇವರ ಕೆಲವು ಕೃತಿಗಳು ತರ್ಜುಮೆಗೊಂಡವು.
ರಾಧಾದೇವಿ ಅವರು ತಮ್ಮ ಮೊದಲ ಕಾದಂಬರಿ ಪ್ರಕಟವಾಗುವುದಕ್ಕೆ ಮುಂಚೆಯೇ ಸುಮಾರು 12 ರೇಡಿಯೋ ನಾಟಕಗಳನ್ನು ಬರೆದಿದ್ದು ಎಲ್ಲವೂ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಪ್ರಕಟಗೊಂಡಿವು.
‘ಭ್ರಮರ ಬಂಧನ’ ಕಾದಂಬರಿಗೆ ಅನಕೃ ಸ್ಮಾರಕ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಂದಿತ್ತು. 'ಮಿಂಚಿನಿಂದಿಳಿದ ಮೋಹನಾಂಗಿ’ ಜಾನಪದ ಕಥಾಸಂಕಲನಕ್ಕೆ ಧಾರವಾಡದ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಸಂದಿತು. ಇದಲ್ಲದೆ ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, ಅನುರಾಗ ಅರಳಿತು ಚಿತ್ರ ಕಥೆಗಾಗಿ ಚಿತ್ರ ಅತ್ಯುತ್ತಮ ಕಥಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿದ್ದವು.
ರಾಧಾದೇವಿಯವರು 2006ರ ನವೆಂಬರ್ 9 ರಂದು ಈ ಲೋಕವನ್ನಗಲಿದರು.
On the birth anniversary of popular novelist H G Radhadevi
ಕಾಮೆಂಟ್‌ಗಳು