ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆಂಡಾಳ್


 ಆಂಡಾಳ್


ಡಿಸೆಂಬರ್ ಮಧ್ಯದಿಂದ ಸಂಕ್ರಾಂತಿಯವರೆಗೆ ಕೇಳಿಬರುವ ಪ್ರಮುಖ ದೇವತೆಯ ಹೆಸರು ಗೋದಾದೇವಿ ಅಥವಾ ಆಂಡಾಳ್.  ಆಂಡಾಳ್ ಶ್ರೀವೈಷ್ಣವ ಪರಂಪರೆಯಲ್ಲಿನ ಶ್ರೇಷ್ಠ ಆಳ್ವಾರರುಗಳಲ್ಲಿ ಒಬ್ಬರೆಂದು ಪರಿಗಣಿತರಾಗಿರುವ ಏಕೈಕ ಸ್ತ್ರೀ. ಆಕೆ ಶ್ರೀಕೃಷ್ಣನನ್ನು ಕಲಿಯುಗದಲ್ಲಿ ವರಿಸಿದ ದೇವತೆಯೆಂದು ಶ್ರೀವೈಷ್ಣವ ಸಂಪ್ರದಾಯದ ಮನೆಮನೆಗಳಲ್ಲಿ, ಮುದ್ದು ಮುಖದ  ದೇವತೆಯಾಗಿ ಶ್ರೀವಿಲ್ಲಿಪುತ್ತೂರಿನ ವಿಗ್ರಹದ ಪ್ರತಿರೂಪವಾದ ಸುಂದರ ಚಿತ್ರಪಟಗಳ ಮುಖೇನ ಕಂಗೊಳಿಸುತ್ತಾಳೆ. 

ಸಕಲ ಮಾನವರಿಗೆ ಸನ್ಮಾರ್ಗ ತೋರಿ, ಅವರು ಸತ್ಪಥದಲ್ಲಿ ನಡೆದು ಮೋಕ್ಷ ಪಡೆಯಲು ಅನುಕೂಲವಾಗುವಂತಹ ಮಾರ್ಗಗಳನ್ನು ತೋರುವುದಕ್ಕಾಗಿಯೇ ಆಳ್ವಾರರುಗಳು, ಆಚಾರ್ಯರುಗಳು ಈ ಭೂಮಿಯಲ್ಲಿ ಅವತರಿಸಿದರು.

ಆಂಡಾಳ್, ನೀಳಾದೇವಿಯ ಅಂದರೆ ಭೂದೇವಿಯ ಅವತಾರ.  ಈಕೆಯು ಶ್ರೀವಿಲ್ಲಿಪುತ್ತೂರಿನ ಪೆರಿಯಾಳ್ವಾರರ ನಂದನವನದಲ್ಲಿ ತುಳಸೀ  ಗಿಡದಡಿಯಲ್ಲಿ ದೊರೆತವಳು.  ಪೆರಿಯಾಳ್ವಾರರು ಈಕೆಯ ಸಾಕುತಂದೆ.  ‘ವಿಷ್ಣುಚಿತ್ತ ಕುಲನಂದನ ಕಲ್ಪವಲ್ಲಿ’ ಎಂದು ಆಕೆಯ ವರ್ಣನೆಯಿದೆ.  ಯಾವಾಗಲೂ ವಿಷ್ಣುಚಿತ್ತದಲ್ಲೇ ಮುಳುಗಿದ ಆಳ್ವಾರರ ಆವರಣದಲ್ಲಿದ್ದ ಗೋದೆಯು ಹುಟ್ಟಿನಿಂದಲೇ  ಭಗವದ್ಭಕ್ತಳು.  ವಟಪತ್ರಶಾಯಿಯ ಸನ್ನಿಧಿ, ಪೆರಿಯಾಳ್ವಾರರ ದೈವಭಕ್ತಿಯ ಪ್ರಭಾವದಿಂದ ಈಕೆಯು ಭಕ್ತಿ, ಜ್ಞಾನ ವೈರಾಗ್ಯಗಳಿಂದ ಹಾಗೂ ಭಗವದ್ ಪ್ರೇಮದಿಂದ ತುಂಬಿದ ‘ತಿರುಪ್ಪಾವೈ’ ಎನ್ನುವ ಕೃಷ್ಣ ಭಕ್ತಿಗೀತೆಯನ್ನು ರಚಿಸಿದಳು.  ಶ್ರೀರಂಗನಾಥನೇ ತನ್ನ ಪತಿಯೆಂದು ಭಾವಿಸಿ, ಆತನನ್ನು ಸ್ತುತಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಳು.  ಕನಸು ಕಾಣುತ್ತಿದ್ದಳು. 

ಧನುರ್ಮಾಸದಲ್ಲಿ ಎಲ್ಲೆಲ್ಲೂ ‘ತಿರುಪ್ಪಾವೈ’ ಪ್ರವಚನ ನಡೆಯುತ್ತದೆ.  ತಿರುಪತಿ ವೆಂಕಟೇಶ್ವರನ ಸನ್ನಿಧಿಯನ್ನೂ ಒಳಗೊಂಡಂತೆ ಎಲ್ಲಾ ಪ್ರಮುಖ ಶ್ರೀವೈಷ್ಣವ ಪದ್ಧತಿಯಂತೆ ನಡೆಯುವ ಪೂಜಾ ಸ್ಥಳಗಳಲ್ಲಿ ‘ಕೌಸಲ್ಯಾ ಸುಪ್ರಜಾರಾಮ’ ಸುಪ್ರಭಾತಕ್ಕೂ ಮಿಗಿಲಾಗಿ ಈ ತಿರುಪ್ಪಾವೈ ಎಂಬ ಸುಶ್ರಾವ್ಯ ಪಠಣವೇ ಕೇಳುಗರ ಕಿವಿಮನಗಳನ್ನು ತಣಿಸುತ್ತದೆ.  ಶ್ರೀರಂಗನಾಥನನ್ನೇ ತನ್ನ ಪತಿಯನ್ನಾಗಿ ಪಡೆಯಲು ಗೋದಾದೇವಿಯು ನಡೆಸುವ ವ್ರತದ ಸಂಪೂರ್ಣ ಭಕ್ತಿಪೂರ್ಣ ರಸಮಯ ಆತ್ಮೀಯ ವರ್ಣನೆಯೇ ಈ  ‘ತಿರುಪ್ಪಾವೈ’. 

‘ತಿರುಪ್ಪಾವೈ’ನಲ್ಲಿರುವ ಒಂದು ಪದ್ಯ ಅದರಲ್ಲಿನ ವೃತದ ಅಂತರ್ಯವನ್ನು ಹೀಗೆ ಸುಂದರವಾಗಿ ಬಣ್ಣಿಸುತ್ತದೆ.  “ಏನೂ ಅರಿಯದ ಓ! ಚಿಕ್ಕ ಹುಡುಗಿಯೇ! ಬೆಳಗಾಯಿತು. ಪಕ್ಷಿಗಳು ಕೂಡಾ ಚಿಲಿಪಿಲಿಗುಟ್ಟುತ್ತಾ ಶಬ್ದಮಾಡುತ್ತಿವೆ. ಪಕ್ಷಿರಾಜನಾದ ಗರುಡನಿಗೆ ಪ್ರಭುವಾಗಿರುವ ಪರಮಾತ್ಮನ ದೇವಾಲಯದಲ್ಲಿ ಬಿಳಿಯ ಶಂಖದ ಮಹಾನಾದವನ್ನು ನೀನು ಕೇಳಲಿಲ್ಲವೇ? ಬೇಗ ಏಳುವವಳಾಗು. ರಾಕ್ಷಸಿಯಾದ ಪೂತನಿಯ ವಿಷಭರಿತವಾದ ಸ್ತನ್ಯಪಾನಮಾಡಿ ಗಾಡಿಯರೂಪದಿಂದ ಬಂದ ವಂಚಕ ಶಕಟಾಸುರನನ್ನು ಅವನ ಬಲವೆಲ್ಲಾ ನಾಶವಾಗುವಂತೆ ಕಾಲಿನಿಂದ ಒದೆದು, ಕ್ಷೀರಾಬ್ದಿಯಲ್ಲಿ ಆದಿಶೇಷನಮೇಲೆ ಮಲಗಿ ಯೋಗನಿದ್ರೆಯಲ್ಲಿರುವ ಜಗತ್ಕಾರಣೀಭೂತನಾದ ಪರಮಾತ್ಮನನ್ನು, ಮನಸ್ಸಿನಲ್ಲಿ ಧ್ಯಾನಿಸುತ್ತಾ, ಮುನಿಗಳೂ, ಯೋಗಿಗಳೂ, ಮೆಲ್ಲನೆ ಎದ್ದು ‘ಹರಿ ಹರಿ’ ಎಂದು ಹೇಳುವ ಮಹಾಘೋಷವು ನಮ್ಮ ಹೃದಯದೊಳಗೆ ಪ್ರವೇಶಿಸಿ ನಮ್ಮ ಮನಸ್ಸಿಗೆ ತಂಪನ್ನುಂಟುಮಾಡಿ ನಮ್ಮ ಸಂತಾಪವನ್ನು ಹೋಗಲಾಡಿಸಿದೆ. ನಮ್ಮ ಅದ್ವಿತೀಯವಾದ ಈ ವ್ರತವು ಶುಭವಾಗಿ ನೆರವೇರುತ್ತದೆ” 

ಈ ತಿರುಪ್ಪಾವೈ ಎಂಬ ವ್ರತದಲ್ಲಿ ಗೋದಾದೇವಿಗೆ ಇರುವ ಬೇಡಿಕೆಯ ಜೊತೆಗೆ ಆಕೆಯ ಭಕ್ತಿಯಲ್ಲಿರುವ ಭರವಸೆಯನ್ನು ನೋಡಿ.  “ಪ್ರಾತಃ ಕಾಲದಲ್ಲಿ ನಾವೆಲ್ಲರೂ ಬಂದು ನಿನಗೆ ನಮಸ್ಕರಿಸಿ, ಪೂಜಿಸಿ, ಕಮಲದಂತಿರುವ ನಿನ್ನ ದಿವ್ಯ ಪಾದಗಳನ್ನು ಸ್ತುತಿಸಿ ಮಂಗಳಾಶಾಸನ ಮಾಡುವುದರ ಪ್ರಯೋಜನವನ್ನು ಕೇಳುವವನಾಗು. ಹಸುಗಳನ್ನು ಪೋಷಿಸಿ ಅವುಗಳಿಂದ ಜೀವನ ಸಾಗಿಸುವ ನಮ್ಮ ಗೋಕುಲದಲ್ಲಿ ಹುಟ್ಟಿರುವ ನೀನು ನಮ್ಮಿಂದ ಸೇವಾಕಾರ್ಯಗಳನ್ನು ಅಂಗೀಕರಿಸದೆ ಇರಬೇಡ. ಗೋವಿಂದನೇ! ನಾವು ಈಸರೈ ಎಂಬ ವಾದ್ಯವನ್ನು ನುಡಿಸುತ್ತಾ ಬಂದಿದ್ದು, ಎಂದೆಂದಿಗೂ ಅಂದರೆ ಏಳು ಏಳು ಜನ್ಮಗಳಲ್ಲಿಯೂ ನಿನ್ನೊಂದಿಗೆ ಸಂಬಂಧ ಪಡೆದವರಾಗಿರಬೇಕು. ನಿನಗೆ ನಾವೆಲ್ಲರೂ ದಾಸರಾಗಿ ಕೈಂಕರ್ಯ (ಸೇವೆ) ಮಾಡುತ್ತೇವೆ. ನಮ್ಮ ಇತರ ಸ್ವಾರ್ಥ, ಆಸೆಗಳನ್ನೆಲ್ಲಾ ನಿನ್ನನ್ನು ಹೊಂದುವ ಸಲುವಾಗಿ ಮಾರ್ಪಡಿಸು. ನಮ್ಮ ಅದ್ವಿತೀಯವಾದ ವ್ರತವು ಶುಭವಾಗಿ ನೆರವೇರುತ್ತದೆ.”

ಆಂಡಾಳ್, ತಾನು ಪರಮಾತ್ಮನನ್ನು ವಿವಾಹವಾಗುವ ಕಂಡ ಕನಸೇ ‘ವಾರಣಮಾಯಿರಂ’. ಇದು ಈಕೆಯ ‘ನಾಚ್ಚಿಯಾರ್ ತಿರುಮೊಳಿ’ಯಲ್ಲಿದೆ.  ಶ್ರೀ ಗೊದಾದೇವಿಯು ತಾವರೆಯ ಮೇಲಿನ ಶ್ರೀದೇವಿಯ ಸಖಿ.  ಆಕೆಯು ತಿರುಮಲ್ಲಿ ನಾಡನ್ನು ತನ್ನ ಗುಣಗಳಿಂದ ಆಳಿದ ಮೃದು ಸ್ವಭಾವದವಳು.  ಗೋಪಕುಲದರಸನ ಮನದನ್ನೆ.  ಸುಂದರ ಪುದುವೈ ನಗರವು ಪಡೆದ ಬೆಳಕು. ‘ವಾರಣಮಾಯಿರಂ’ ಎಂಬುದು ಗೋದಾದೇವಿಯು ತನ್ನ ವಿವಾಹದ ಕುರಿತಾಗಿ ಕಂಡ ಕನಸಾಗಿದೆ.  ಅದನ್ನು ಆಕೆ ತನ್ನ ಸಖಿಯರೊಂದಿಗೆ  ಹೇಳಿಕೊಳ್ಳುತ್ತಾಳೆ.

ಸರ್ವೇಶ್ವರನು ಕೃಷ್ಣನ ರೂಪದಲ್ಲಿ ಅನೆಗಳ ಮೇಲೆ ಪ್ರದಕ್ಷಿಣವಾಗಿ ಬರುವನು.  ಊರಲ್ಲೆಲ್ಲಾ ತಳಿರುತೋರಣಗಳ ಅಲಂಕಾರ.  ಆತನ ಎದುರಿಗೆ ತಮ್ಮ ತಮ್ಮ ಮನೆಗಳ ಎದುರು ಹೂಗೊಂಡಗಳನ್ನಿಟ್ಟು ಸ್ವಾಗತಿಸುವ ಕನಸು ಕಂಡಳು ಗೋದೆ.  ನಾಳೆ ಮದುವೆ ಎಂದು ಮುಹೂರ್ತವಿಡುವರು.  ಬಾಳೆಗಿಡ, ಅಡಿಕೆ ಮರಗಳಿಂದ ಆ ಚಪ್ಪರವನ್ನು ಸಿಂಗರಿಸಿದ್ದಾರೆ.  ಬಲಶಾಲಿ,  ಸಿಂಹಗತಿಯ ಗೋವಿಂದನು ಯುವಕನಾಗಿ ಆ ಚಪ್ಪರವನ್ನು ಪ್ರವೇಶಿಸಿದ ಕನಸು ಕಂಡಳು ಗೋದೆ.  ಇಂದ್ರಾದಿ ದೇವತೆಗಳ ಸಮೂಹದಲ್ಲಿ ಕುಳಿತಿದ್ದೆ.  ನನ್ನನ್ನು ಕನ್ಯೆಯೆಂದು ನಿಶ್ಚಯಿಸಲಾಯಿತು.  ನಾದಿನಿಯಾದ ದುರ್ಗೆಯು ಮಂತ್ರ ವಸ್ತ್ರ ಹಾಗೂ ವಿವಾಹ ಮಾಲಿಕೆಯನ್ನು ಧರಿಸುವಂತೆ ತಿಳಿಸಿದ ಕನಸು ಕಂಡೆ.  ಎಲ್ಲೆಡೆಯ ಪುಣ್ಯಕ್ಷೇತ್ರಗಳಿಂದ ತಂದ ತೀರ್ಥವನ್ನು ಪ್ರೋಕ್ಷಿಸಿದರು.  
ಹಿರಿಯರು ಉಚ್ಚಸ್ವರದಲ್ಲಿ ಮಂಗಳಾಶಾಸನ ಮಾಡಿದರು.  ನಂತರ ಹೂಮಾಲೆಗಳಿಂದ ಅಲಂಕೃತನಾದ ಕೃಷ್ಣನಿಗೆ ಕಂಕಣ ಕಟ್ಟುವ ಕನಸು ಕಂಡೆ.  ಸ್ತ್ರೀಯರು ದೀಪ ಕಳಶಗಳಿಂದ ಆತನನ್ನು ಎದುರುಗೊಂಡರು.  ಪಾದುಕೆ ಧರಿಸಿದ ಮಧುರಾಧಿಪನು ಭೂಮಿಯೆಲ್ಲಾ ನಡುಗುವಂತೆ ನಡೆದು ಬರುವ ಕನಸು ಕಂಡೆ.  ಮದ್ದಳೆ, ಶಂಖಗಳ ಸತತ ಧ್ವನಿಯಾಗುತ್ತಿರಲು ಮುತ್ತಿನ ಹಾರಗಳಿಂದ ಅಲಂಕೃತವಾದ ಚಪ್ಪರದ ಕೆಳಗೆ ನನ್ನ ಪ್ರೇಮಿ ಮಧುಸೂದನನು ಬಂದು ನನ್ನ ಕೈ ಹಿಡಿದ ಕನಸು ಕಂಡೆ.  ಸುಸ್ವರದಿಂದ ಬ್ರಾಹ್ಮಣರು ವೇದ ಘೋಷ ಮಾಡುತ್ತಿದ್ದಾರೆ.  ಹೋಮದ ನಂತರ ಹಸಿರೆಲೆಯ ದರ್ಭೆ ಹಾಸಿ ಪರಿಧಿಯನ್ನು ಇಡಲಾಯಿತು.  ಮದಗಜದಂತೆ ನಡೆಯುವ ಕೃಷ್ಣನು ನನ್ನ ಕೈ ಹಿಡಿದು ಅಗ್ನಿ ಪ್ರದಕ್ಷಿಣೆ ಮಾಡುವ ಕನಸು ಕಂಡೆ.  ಈ ಜನ್ಮಕ್ಕೂ ಏಳೇಳು ಜನ್ಮಕ್ಕೂ ನನ್ನ ಜೊತೆಯಾದವನು, ನನ್ನ ಸ್ವಾಮಿ ಶ್ರೀಮನ್ನಾರಾಯಣನು ತನ್ನ ಕೆಂಪು ಕೈನಿಂದ ನನ್ನ ಕಾಲನ್ನು ಹಿಡಿದು ಅಮ್ಮ ಕಲ್ಲನ್ನು ತುಳಿಯುವ ಕನಸು ಕಂಡೆ.  ನಾಚಿ ನಿಂತಿದ್ದ ನನ್ನನ್ನು ನನ್ನ ಅಣ್ಣಂದಿರು ಬಿಲ್ಲಿನಂತಹ ಹುಬ್ಬು, ಕಾಂತಿಯುತ ಮುಖದ ಕೃಷ್ಣನ ಎದುರಿನಲ್ಲಿ ನಿಲ್ಲಿಸಿದರು.  ನಂತರ ಅಚ್ಯುತನ ಕೈ ಮೇಲೆ ನನ್ನ ಕೈಯನ್ನಿರಿಸಿ ಪುರಿಯನ್ನು ಕೊಟ್ಟರು.  ಅದನ್ನು ಅಗ್ನಿಗೆ ಸಮರ್ಪಿಸುವ ಕನಸು ಕಂಡೆ.  ಕುಂಕುಮ ಕೇಸರಿಯನ್ನು ಮೈಗೆಲ್ಲ ಹಚ್ಚಿಕೊಂಡು ಕುಳಿರ್ ಗಂಧವನ್ನು ಧರಿಸಿದೆ.  ಪರಿಮಳಯುತ ವಸಂತ ಜಲವನ್ನು ತೆಗೆದುಕೊಂಡು ಮಂಗಳ ಬೀದಿಗಳಲ್ಲಿ ಆನೆಯ ಮೇಲೆ ಕುಳಿತು ಪ್ರದಕ್ಷಿಣೆಯಾಗಿ ಆ ಕೃಷ್ಣನೊಡನೆ ಓಕುಳಿಯಾಡಿ, ಜಳಕ ಮಾಡಿದ ಕನಸು ಕಂಡೆ.  ಹೀಗೆ ಪೆರಿಯಾಳ್ವಾರರ ಮಗಳಾದ ಗೋದಾದೇವಿಯು ತನಗೆ ತಿಳಿದಿದ್ದ ಶುದ್ಧ ತಮಿಳಿನಲ್ಲಿ ತಾನು ಶ್ರೀಕೃಷ್ಣನನ್ನು ವರಿಸಿದ  ರೀತಿಯನ್ನು ಸುಂದರವಾಗಿ ಬಣ್ಣಿಸುತ್ತಾಳೆ.  

ಈ ಕಲಿಯುಗದಲ್ಲಿ ಕ್ರಿಸ್ತಶಕ ಏಳನೆಯ ಶತಮಾನದ ಮಧ್ಯಭಾಗದಲ್ಲಿ ಉದಿಸಿದ  ಆಂಡಾಳ್  ತನ್ನ ಭಕ್ತಿ ಪರವಶತೆಗಳಿಂದ ಶ್ರೀರಂಗದ ರಂಗನಾಥನಲ್ಲಿ ಐಕ್ಯಳಾಗಿ ರಂಗನಾಯಕಿ ಎನಿಸಿಕೊಂಡಳು.  ಶ್ರೀವಿಲ್ಲಿಪುತ್ತೂರಿನಲ್ಲಿರುವ ಆಂಡಾಳ್ ದೇಗುಲ ಭಾರತೀಯ ದೇಗುಲಗಳಲ್ಲಿ ಪ್ರಖ್ಯಾತವಾಗಿದೆ.

Time to remember Andal or Godadevi, the only female Alvar in Sri vaishnava tradition 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ