ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಪಾಲ ಶೆಣೈ


ರಂಜಾಳ ಗೋಪಾಲ ಶೆಣೈ


ರಂಜಾಳ ಗೋಪಾಲ ಶೆಣೈ ಮಹಾನ್  ಶಿಲ್ಪಿಗಳಾಗಿ ಮತ್ತು ವಿದ್ವಾಂಸರಾಗಿ ಖ್ಯಾತರಾಗಿದ್ದಾರೆ.

ಗೋಪಾಲ ಶೆಣೈರವರು 1897ರ ಜನವರಿ 6ರಂದು ಕಾರ್ಕಳದ ಬಳಿಯ ರಂಜಾಳದಲ್ಲಿ ಜನಿಸಿದರು.  ತಂದೆ ಜನಾರ್ಧನ ಶೆಣೈ ಅವರು.

ಶ್ರೀ ವೆಂಕಟ್ರಮಣ ದೇವಳದ ಸಂಸ್ಕೃತ ಪಾಠಶಾಲೆಯಲ್ಲಿ ಏಳನೆಯ ತರಗತಿಯವರೆಗೆ ಓದಿದ ಗೋಪಾಲ ಶೆಣೈ ಅವರು ಬಾಲಕನಾಗಿರುವಾಗಲೇ ಮಣ್ಣಿನ ಗಣಪತಿ ನಿರ್ಮಿಸಿ ಊರವರ ಗಮನ ಸೆಳೆದಿದ್ದರಂತೆ.   ಶಿಲ್ಪಕಲೆ ವಂಶ ಪಾರಂಪರ್ಯವಾಗೇನೂ ಬಂದಿರದಿದ್ದರೂ ತಂದೆ ಜನಾರ್ಧನ ಶೆಣೈರವರು ಶ್ರೀಮದ್ಭುವನೇಂದ್ರಸ್ವಾಮಿಗಳಲ್ಲಿ  ಶಿಲ್ಪಕಲೆಯನ್ನು ಕಲಿತಿದ್ದರು. 

ಚಿತ್ರಕಲೆಯಲ್ಲಿ ಆಸಕ್ತಿಯಿದ್ದ ಗೋಪಾಲ ಶೆಣೈರವರು ಮದರಾಸು ಸರಕಾರದ ಚಿತ್ರಕಲಾ ಶಾಲೆಯಿಂದ ಇಂಟರ್ ಮೀಡಿಯೆಟ್ ಪರೀಕ್ಷೆ ಪಾಸು ಮಾಡಿದರು. ಮುಂದೆ ವೆಂಕಟ್ರಮಣ ದೇವಳದ ಸಂಸ್ಕೃತ ಪಾಠಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ಅವರು ಸಂಸ್ಕೃತ ಮಹಾಕಾವ್ಯ, ಧರ್ಮಗ್ರಂಥಗಳು ಮತ್ತು ಜೈನ ಶಾಸ್ತ್ರಗಳ ವಿಶೇಷಾಧ್ಯಯನ ಕೈಗೊಂಡರು. 

ಗೋಪಾಲ ಶೆಣೈ ಆವರು ಕಲಿಕಾ ಅಭ್ಯಾಸಕ್ಕಾಗಿ ಮೊದಮೊದಲು  ಉಂಗುರದ ನೀಲಿ, ಪಚ್ಚೆ ಮತ್ತು ಕೆಂಪು ಕಲ್ಲುಗಳಲ್ಲಿ ಮೋನೋಗ್ರಾಂ ಕೆತ್ತನೆಗಳನ್ನು ಆರಂಭಿಸಿದರು. ಶಿಲ್ಪದಷ್ಟೇ ಚಿತ್ರಕಲೆಯಲ್ಲೂ ಅವರು ಪರಿಣತರಾಗಿದ್ದರು. ಹಿರಿಯಂಗಡಿ ಮಾನಸ್ತಂಭಗಳ ಮೇಲೆ ಅನೇಕ ವರ್ಣಚಿತ್ರಗಳನ್ನು ಮೂಡಿಸಿದರು. ಇವರ ಮನೆಯಲ್ಲಿ ಇನ್ನೂ ಮಾಸದೇ ಉಳಿದಿರುವ ಸಿದ್ಧಾರ್ಥನ ರಾಜ್ಯತ್ಯಾಗ, ಹೊಲಯರ ಮದುವೆ ಮುಂತಾದ ಚಿತ್ತಾಕರ್ಷಕ ವರ್ಣಚಿತ್ರಗಳು ಕೂಡ ಇವರ ಚಿತ್ರಕಲೆಯ ನೆನಪಿನ ಹೆಗ್ಗುರುತುಗಳಾಗಿ ಕಾಣಬರುತ್ತವೆ.

ಕುಂಚ, ವರ್ಣಗಳೊಡನೆ ಆಟವಾಡುತ್ತ ಶ್ರೀಮದ್ಭುವನೇಂದ್ರ ಶಿಲ್ಪಶಾಲೆ ಸ್ಥಾಪಿಸಿ ಸುತ್ತಿಗೆ, ಉಳಿ, ಚಾಣಗಳನ್ನು ಹಿಡಿದರು. 

ರಂಜಾಳರಿಗೆ ಮೊದಲ ಕೀರ್ತಿ ತಂದ ಶಿಲ್ಪ ಕಾರ್ಕಳದ ವೆಂಕಟ್ರಮಣ ದೇವಳದ ಗರುಡ ಮಂಟಪದ ನಾಲ್ಕು ಕಂಭಗಳ ಕಲಾವೈಖರಿ. ಇಲ್ಲಿನ ಪ್ರತಿ ಸ್ತಂಭದಲ್ಲೂ ಹೇರಳವಾದ ಕುಸುರಿ ಕೆಲಸವಿದ್ದು ಚಿಗುರೆಲೆ, ಮೊಗ್ಗು, ಹೂವು, ಮಕರಂದ ಹೀರುವ ಜೇನ್ನೊಣ, ಹಕ್ಕಿ, ದ್ರಾಕ್ಷಿಗೊಂಚಲು, ಅಳಿಲು, ಗುಬ್ಬಚ್ಚಿಗೂಡು, ಕೊಕ್ಕಿನಿಂದ ತಿನಿಸು ಕಸಿಯುತ್ತಿರುವ ಹಕ್ಕಿ ಮುಂತಾದ ಕಲಾವೈಭವಗಳು ಹೃದಯಗಳನ್ನರಳಿಸುವಂತಿವೆ.

ರಂಜಾಳ ಗೋಪಾಲ ಶೆಣೈ ಅವರ ಪ್ರಖ್ಯಾತಿಗೆ ಶಾಶ್ವತ ಕುರುಹುಗಳಾಗಿ ಧರ್ಮಸ್ಥಳದ  39 ಅಡಿ ಎತ್ತರದ ಬಾಹುಬಲಿ ಮೂರ್ತಿ, ಉತ್ತರ ಪ್ರದೇಶದ ಫಿರೋಜ್‌ ನಗರದ ಬಾಹುಬಲಿ, ಜಪಾನಿನ ತ್ಸುಬೇಸಾ ಬೌದ್ಧ ಮಂದಿರದ 67 ಅಡಿ ಎತ್ತರದ ಬುದ್ಧಮೂರ್ತಿ, ಜಪಾನಿನ ನಾಲಾ ಯಾತ್ರಾಸ್ಥಳದ ಮಲಗಿರುವ ಬುದ್ಧ, ಮುಂಬಯಿಯಲ ರಾಮ, ಲಕ್ಷ್ಮಣ, ಸೀತೆ, ಹನುಮಂತ ವಿಗ್ರಹ, ಲಂಡನ್ ನಗರದ ಶೇಕ್ಸ್‌ಪಿಯರನ ವಿಗ್ರಹಗಳು ಕಂಗೊಳಿಸುತ್ತಿವೆ.  ಹೀಗೆ ವಿಶ್ವದಾದ್ಯಂತ  ಅವರ ಕೈಚಳಕದ ಕಲಾವೈಭವ ವ್ಯಾಪಿಸಿದೆ.

ರಂಜಾಳ ಗೋಪಾಲ ಶೆಣೈ ಅವರಿಗೆ,  ರಾಜ್ಯ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಧರ್ಮಸ್ಥಳದ ಹೆಗ್ಗಡೆಯವರಿಂದ ಬಂಗಾರದ ಕಡಗ, ಶಿಲ್ಪ ವಿಶಾರದ ಬಿರುದು, ಕಾಶೀ ಮಠದಿಂದ ‘ಶಿಲ್ಪ ಸಾಮ್ರಾಜ್ಯ ಚಕ್ರವರ್ತಿ’ ಬಿರುದು, ಭಾರತ ಸರಕಾರದ ಮಾಸ್ಟರ್ ಕ್ರಾಫ್ಟ್‌ಸ್‌ಮನ್ ಪ್ರಶಸ್ತಿ, ಮೈಸೂರು ಮತ್ತು ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್ ಮುಂತಾದ ಅನೇಕ ಗೌರವಗಳು ಸಂದವು.

ಈ ಮಹಾನ್ ಕಲಾ ಆಚಾರ್ಯರು 1985 ವರ್ಷದ ಡಿಸೆಂಬರ್ 1 ರಂದು ಇಹಲೋಕದ ಯಾತ್ರೆಯನ್ನು ಮುಗಿಸಿದರು.  ಕಲೆಗಾರ ರಂಜಾಳ ಗೋಪಾಲ ಶೆಣೈ ಅವರು ವಿಶ್ವವ್ಯಾಪಿಯಾಗಿ ತಮ್ಮ ಸೃಜನೆಗಳಲ್ಲಿ ಜೀವಂತವಿದ್ದಾರೆ.

On the birth anniversary of great sculptor Ranjala Gopala Shenoy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ