ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೈಲಾಶ್ ಸತ್ಯಾರ್ಥಿ


 ಕೈಲಾಶ್ ಸತ್ಯಾರ್ಥಿ

ಮಕ್ಕಳಿಗೆ ಅವರ ಬಾಲ್ಯವನ್ನು ಉಳಿಸಿಕೊಡುವ ನಿಟ್ಟಿನಲ್ಲಿ ಅಸಾಮಾನ್ಯ ಕಂಕಣಬದ್ಧರಾದವರು ನೊಬೆಲ್ ಶಾಂತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ. 


ಕೈಲಾಶ್ ಸತ್ಯಾರ್ಥಿ ಅವರು 1954ರ ಜನವರಿ 11ರಂದು ಮಧ್ಯಪ್ರದೇಶದ ವಿದಿಶಾ ನಗರದಲ್ಲಿ ಜನಿಸಿದರು. ಅವರ ತಂದೆ ಪೋಲೀಸ್ ಪೇದೆಯಾಗಿದ್ದರು.


“ಬಚಪನ್ ಬಚಾವೋ" ಆಂದೋಳನದ ಮೂಲಕ ಸುಮಾರು ಲಕ್ಷ ಮಕ್ಕಳನ್ನು ಜೀತಮುಕ್ತರಾಗಿಸಿರುವ ಕೈಲಾಶ್ ಸತ್ಯಾರ್ಥಿಯವರು ಈ ದೇಶದಲ್ಲಿ ಇದ್ದಾರೆ ಅಂತ ಈ ದೇಶಿಗ ಮಹಾಶಯರಾದ ನಮಗೆ ಗೊತ್ತಾಗಿದ್ದೇ ಅವರಿಗೆ 2014ರಲ್ಲಿ ನೋಬೆಲ್ ಶಾಂತಿ ಪುರಸ್ಕಾರ ಘೋಷಣೆ ಆದಾಗ ಎಂಬುದು ಸುಳ್ಳೇನಲ್ಲ. 


ಕೈಲಾಶ್ ಸತ್ಯಾರ್ಥಿ ಅವರು ವಿದಿಶಾದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ ಹಾಗೂ ಹೈ ವೋಲ್ಟೇಜ್ ಇಂಜಿನಿಯರಿಂಗ್‍ನಲ್ಲಿ ಪಿಜಿ ಡಿಪ್ಲೋಮಾ ಪೂರೈಸಿದ ಕೆಲ ಸಮಯ ಭೋಪಾಲಿನಲ್ಲಿ ಶಿಕ್ಷಕರಾಗಿ ವೃತ್ತಿ ಮಾಡಿದರು.   ನಂತರ ಮಕ್ಕಳ ಕುರಿತಾದ ಹೃದಯಾಂತರಾಳದ ಕರೆಗೆ ಓಗೊಟ್ಟು ತಮ್ಮ 26 ನೇ ವರ್ಷ ವಯಸ್ಸಿನಲ್ಲಿ ಮಕ್ಕಳ ಹಕ್ಕುಗಳ ಹೋರಾಟಕ್ಕೆ ಧುಮುಕಿದರು.  ಹೀಗೆ ಧುಮುಕಿದ್ದು ಒಂದು ಕ್ಷಣದಲ್ಲಿ ಘಟಿಸಿದ್ದಲ್ಲ.  ಅದರ ಹಿಂದಿನ ಮೊಳಕೆ ಚಿಗುರಿದ್ದು, ಅವರ ಬಾಲ್ಯದಲ್ಲಿ ಸಂಭವಿಸಿದ್ದ ಶುಭ್ರಮನದಲ್ಲಿನ  ಫಲವತ್ತತೆಯಲ್ಲಿ.


ಕೈಲಾಶ್ ಸತ್ಯಾರ್ಥಿ ತಮ್ಮ ಬಾಲ್ಯದಲ್ಲಿ  ನಿತ್ಯವೂ ಶಾಲೆಗೆ ನಡೆದು ಹೋಗುತ್ತಿದ್ದ ದಿನಗಳವು.  ತನ್ನದೇ ಓರಗೆಯ ಹುಡುಗನೋರ್ವ ತನ್ನ ತಂದೆಯೊಡನೆ ಕುಳಿತು ಚಪ್ಪಲಿ ರಿಪೇರಿ ಮಡುತ್ತಿದ್ದುದನ್ನು ಬಾಲಕ ಸತ್ಯಾರ್ಥಿ ದಿನವೂ ಕಾಣುತ್ತಿದ್ದ.  'ನಾನು ಉತ್ಸಾಹದಿಂದಲೂ ಸಂತೋಷದಿಂದಲೂ ಪ್ರತಿದಿನ ಆಟವಾಡುತ್ತ ಶಾಲೆಗೆ ಹೋಗುತ್ತಿದ್ದರೆ ಈ ಹುಡುಗ ಮಾತ್ರ ತನ್ನ ತಂದೆಯೊಂದಿಗೆ ಕುಳಿತು ಬೂಟು ಹೊಲಿಯುತ್ತಿದ್ದಾನೆ, ಅದೇಕೆ ಹೀಗೆ?' ಎಂಬ ಚಿಂತನೆ  ಬಾಲಕ ಕೈಲಾಶ್ ಸತ್ಯಾರ್ಥಿಯ ಮನದಲ್ಲಿ ಉದ್ಭವಿಸುತ್ತಿತ್ತು.  ಅದೇ ಪ್ರಶ್ನೆಯನ್ನು ತನ್ನ ಶಾಲಾ ಉಪಾಧ್ಯಾಯರ ಬಳಿ ಕೇಳಿದಾಗ "ಅವರ ಬಳಿ ಹಣವಿಲ್ಲ, ಅವರು ಬಡವರು. ವಿದ್ಯಾಭ್ಯಾಸ ಪಡೆದುಕೊಳ್ಳಲಿಕ್ಕೆ ಸಾಕಷ್ಟು ಹಣಬಲ ಇಲ್ಲದವರು." ಎನ್ನುವ ಉತ್ತರ ದೊರಕಿತು.


ಆ ಉತ್ತರದಿಂದ ತೃಪ್ತನಾಗದ ಆ ಬಾಲಕ ಚಪ್ಪಲಿ ಹೊಲಿಯುತ್ತಿದ್ದ ಆ ಹುಡುಗನ ತಂದೆಯನ್ನೇ ನೇರವಾಗಿ ಪ್ರಶ್ನಿಸಿದ "ನೀವೇಕೆ ನಿಮ್ಮ ಮಗನನ್ನು ಶಾಲೆಗೆ ಸೇರಿಸಿಲ್ಲ, ಅವನನ್ನು ಯಾಕೆ ಚಪ್ಪಲಿ ಹೊಲಿಯಲು ಇರಿಸಿಕೊಂಡಿದ್ದೀರಿ?".  ಒಂದು ಕ್ಷಣ ಬಾಲಕ ಸತ್ಯಾರ್ಥಿಯ ಮುಖವನ್ನೇ ದೃಷ್ಟಿಸಿ ನೋಡಿದ ಹುಡುಗನ ಆ ತಂದೆ ನುಡಿದರು.  "ಮಗು, ನಾವು ಹುಟ್ಟಿದ್ದೇ ದುಡಿಯಲಿಕ್ಕಾಗಿ, ಶಾಲೆಯಲ್ಲಿ ಕಲಿಯಲಿಕ್ಕಲ್ಲ!” 


ಆ ಬಡ ತಂದೆ ಅಂದು ಆಡಿದ ಆ ಮಾತು ಕೈಲಾಶ್ ಸತ್ಯಾರ್ಥಿಯ ಎದೆಯಲ್ಲಿ ನಾಟಿ ಕುಳಿತಿತು. ಮುಂದೆ ತಾನು ಪಡೆದ ಉನ್ನತ ತಾಂತ್ರಿಕ ಶಿಕ್ಷಣವನ್ನೂ, ಅದರಿಂದ ಲಭಿಸಬಹುದಾಗಿದ್ದ ದೊಡ್ಡ ಸಂಬಳದ ವೃತ್ತಿಯನ್ನೂ ತೊರೆದು ದೇಶದಲ್ಲಿನ ಬಾಲ ಕಾರ್ಮಿಕರ ಸಮಸ್ಯೆ ಹಾಗೂ ಬಡ ಮಕ್ಕಳ ಶಿಕ್ಷಣ ಹಕ್ಕಿಗಾಗಿ ಹೋರಾಟ ನಡೆಸುವುದಕ್ಕೆ ಅದು ಕೈಲಾಶ್ ಸತ್ಯಾರ್ಥಿ ಅವರನ್ನು  ಪ್ರೇರಿಸಿತು.


1983ರಲ್ಲಿ ತಮ್ಮ ಮಹತ್ವಪೂರ್ಣ ಯೋಜನೆಯಾದ "ಬಚ್ ಪನ್ ಬಚಾವೋ" ಆಂದೋಲನವನ್ನು ಹುಟ್ಟು ಹಾಕಿದ ಸತ್ಯಾರ್ಥಿಯವರು ಮುಂದೆ ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಜೀತ ವಿಮುಕ್ತಗೊಳಿಸಿದ್ದಾರೆ. ತಾವು ತಮ್ಮ ಸಹಚರರ ನೆರವಿನೊಂದಿಗೆ ದೇಶದಲ್ಲಿನ ನೂರಾರು ಕಾರ್ಖಾನೆಗಳು ಮತ್ತು ಗೋದಾಮುಗಳಲ್ಲಿ  ನಿಸ್ಸಹಾಯಕರಾಗಿ ಬಂಧಿಗಳಂತೆ ತಮ್ಮ ಬಾಲ್ಯದ ಅರಿವಿಲ್ಲದೆ ಶೋಷಿತರಾಗಿದ್ದ  ಮಕ್ಕಳನ್ನು  ಸಂರಕ್ಷಿಸಿದ್ದಾರೆ.  ಈ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕುವಂತೆ ಮಾಡಿದ್ದಾರೆ.


ಈ ಹಿನ್ನೆಲೆಯಲ್ಲಿ ಒಂದು ವಿಚಾರವನ್ನು ಮನ ನೆನಪಿಸಿಕೊಳ್ಳುತ್ತದೆ.  ನಾವು ಬದುಕು ಬೆಳೆಸಿಕೊಂಡ ವರ್ಷಗಳಲ್ಲಿ ಹೋಟಲುಗಳಲ್ಲಿ, ರಸ್ರೆ ಬದಿಯ ರಿಪೇರಿ ಅಂಗಡಿಗಳಲ್ಲಿ, ಎಲ್ಲ ಬಗೆಯ ಅಂಗಡಿಗಳಲ್ಲಿ ಮಕ್ಕಳು ಕೂಲಿಗಳಾಗಿ ಅವರ ಅಪ್ಪ ಅಮ್ಮಂದಿರ  ಮನೆ ನಿರ್ವಹಿಸುವುದಕ್ಕೊ ಇಲ್ಲವೇ  ಅಪ್ಪ ಮಹಾಶಯರ ಕುಡಿತದ ತೂರಾಟಕ್ಕಾಗಿನ ಬಿಡುಗಾಸಿಗಾಗಿಯೋ ಧನದಂತೆ ದುಡಿಯುವುದು ಸಾಮಾನ್ಯ ಎಂಬಂತೆ ಕಾಣುತ್ತಿದ್ದ ದೃಶ್ಯ.  


ನಾನು ತೊಂಭತ್ತರ ದಶಕದಲ್ಲಿ ಓದಿದ ಪುಸ್ತಕ ‘India: A people betrayed’ ಎಂಬ ಪುಸ್ತಕದಲ್ಲಿ, "ಉತ್ತರ ಭಾರತದಲ್ಲಿನ ಗಾಜಿನ ಕಾರ್ಖಾನೆಗಳಲ್ಲಿ ನಾನೂರು ಡಿಗ್ರಿಗಳಷ್ಟು ಸುಡುಬಿಸಿಯ ನಡುವೆ ಮಕ್ಕಳು ಕೂಲಿಗಾಗಿ ಜೀವ ತೇಯುತ್ತಾರೆ" ಎಂದು ಓದಿದ್ದು ಇಂದೂ ನನ್ನನ್ನು ಹಿಡಿದು ಅಲುಗಿಸುತ್ತದೆ.  ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿನ ಫೌಂಡ್ರಿ ವಿಭಾಗಗಳಲ್ಲಿ ಹೋದಾಗಲೆಲ್ಲ, ಕೇವಲ 30 ಡಿಗ್ರಿ ಬಿಸಿಲನ್ನು ಶೆಕೆ ಎನ್ನುವ ನಾನು,  ಇಲ್ಲಿ ಕಾರ್ಯನಿರ್ವಹಿಸುವವರು ಹೇಗಿದ್ದಾರೆ ಎಂದು ಭಯಭೀತನಾಗಿದ್ದಿದೆ. ಅದೂ ಆ ಮಕ್ಕಳನ್ನು ನೆನೆದಾಗ 😢ಆ ಬಿಸಿ ಎಲ್ಲ್ಲೋ ಇಲ್ಲೇ ನಮ್ಮ ಸುಡುವಂತಿದೆ.  ಇಂತಹ ಸಂವೇದನೆ ಕೈಲಾಶ್ ಸತ್ಯಾರ್ಥಿಯವರ ಕೆಲಸದ ಸಾರ್ಥಕತೆಯನ್ನು ಅರಿಯುವಲ್ಲಿ ಅತಿ ಅವಶ್ಯಕ ಎಂದು ನಾನು ಭಾವಿಸಿದ್ದೇನೆ.


ಸತ್ಯಾರ್ಥಿ ಅವರು ಕಾರ್ಖಾನೆಗಳು, ಗೋದಾಮುಗಳು, ಹೋಟೆಲುಗಳು, ಭೂಗತ ಉದ್ದಿಮೆಗಳು  ಇಲ್ಲೆಲ್ಲ ಹೋಗಿ ಮಕ್ಕಳನ್ನು ಸ್ವತಂತ್ರ ಮಾಡಿದರು. ಅಂದ್ರೆ ಅವುಗಳನ್ನು ನಡೆಸುತ್ತಿದ್ದ ವ್ಯಾಪಾರಿಶಾಹಿ ಜನ ಕಡಲೆಪುರಿ ತಿಂತ, ಯಾವನೋ ವಯ್ಯಾ ನೋಡು ಎಷ್ಟು ಪ್ರೀತಿಯಿಂದ ಮಕ್ಕಳನ್ನು ಕರ್ಕೊಂಡು ಹೋದ ಅಂತ, ಅಕ್ಕರೆಯಿಂದ ನೊಡ್ತಾ ಇರಲಿಲ್ಲ ಅಂತ ನಮಗೆಲ್ಲ ಅರ್ಥ ಆಗುತ್ತೆ ಅಲ್ವಾ!   ಅದೊಂದು ಅಸಾಮಾನ್ಯ ಜೀವದ ಹಂಗು ತೊರೆದ ಹೋರಾಟ.  ಹೊಟ್ಟೆಗಿಲ್ಲದ ಮಗುವೊಂದು ತನ್ನ ತುತ್ತಿಗಾಗಿ ಎಲ್ಲೋ ಮುಗ್ಧವಾಗಿ ಯಾರೋ ಹೇಳಿದ ಕೆಲಸಕ್ಕೆ ತನ್ನನ್ನು ಒಡ್ಡಿಕೊಂಡಿದ್ದಾಗ ಅದನ್ನು ಬಿಡಿಸುವುದು ಒಂದು ಹಂತ.  ಅದಕ್ಕೆ ತಪ್ಪಿದ ಊಟವನ್ನು, ಶೋಷಣೆ ಇಲ್ಲದಂತಹ ಪೋಷಣೆಯ ನೆಲೆಯಲ್ಲಿ ಉಳಿಸಿಕೊಡುವುದು ಅತಿ ದೊಡ್ಡ ಹಂತ. 


ಕೈಲಾಶ್ ಸತ್ಯಾರ್ಥಿ ಅವರು ಬೃಹತ್ ಶೋಷಕ ವ್ಯಾಪಾರಿಶಾಹಿಗಳಿಂದ, ಅದನ್ನು ಹಲವು ನಿಟ್ಟಿನಲ್ಲಿ ಪೋಷಿಸುವ ಆರಕ್ಷಕ, ಆಡಳಿತಾತ್ಮಕ ವ್ಯವಸ್ಥೆಗಳಿಂದ, ಹಾಗೂ ಇವೆಲ್ಲಕ್ಕೂ ಮಿಗಿಲಾಗಿ ಏನಾದ್ರೆ ಏನು, ಮುಚ್ಕೊಂಡಿರಕ್ಕೆ ಇವನಿಗೇನು ಎಂಬ ನಮ್ಮಂತಹ ಸಾರ್ವಜನಿಕ ಮಹಾನುಭಾವರುಗಳಿಂದ ಅನುಭವಿಸಿದ  ತೇಜೋವಧೆ, ಜೀವಬೆದರಿಕೆ, ನಿರಂತರ ಹಿಂಸೆ ಆಕ್ರಮಣಗಳು ಒಂದೊಂದಿರುವುದಿಲ್ಲ. ಸ್ವಯಂ ಸತ್ಯಾರ್ಥಿ ತೀವ್ರ ಹಲ್ಲೆಗೊಳಗಾಗಿದ್ದಾರೆ. ಅವರ ಸಹಚರರು ಕೊಲೆಗೀಡಾಗಿದ್ದಾರೆ.  ಆದರೆ ಭರವಸೆ ಮತ್ತು ತಾವು ನಂಬಿದ ಸತ್ಯಾರ್ಥಿಯಾಗಿ ಕೈಲಾಸದವರೆಗೂ ತಮ್ಮನ್ನು ಅನನ್ಯವಾಗೆಂಬಂತೆ ಕೈಲಾಶ್ ಸತ್ಯಾರ್ಥಿ ವ್ಯಾಪಿಸಿಕೊಂಡಿದ್ದಾರೆ.


ಪ್ರಶಸ್ತಿಗಳು ಶ್ರೇಷ್ಠತೆಯ ಮಾನದಂಡವೇನಲ್ಲ.  ಕೈಲಾಶ್ ಸತ್ಯಾರ್ಥಿ ಅವರಿಗೆ ನೊಬೆಲ್ ಪ್ರಶಸ್ತಿ ಬರದೆ ಇದ್ದಿದ್ದರೆ ಅವರೇನೂ ಕೆಲಸ ಮಾಡದೆ ಸುಮ್ಮನಿರುತ್ತಿರಲಿಲ್ಲ.  ಅವರ ಪ್ರಶಸ್ತಿಯನ್ನೂ ಯಾರೋ ಅವರ ಮನೆಯಿಂದ ದೋಚಿದ್ದರು ಎಂದು ಓದಿದ್ದೆ.  ಇನ್ನೂ ವಿಶ್ವಮಾನ್ಯತೆಯ ಅನೇಕ ಗೌರವಗಳು ಅವರತ್ತ ಬಂದಿವೆ.  ಅವರ ಪ್ರಾಮಾಣಿಕ ಕಾಳಜಿ ಅರ್ಥವುಳ್ಳದ್ದು ಎಂಬುದು ವಿಶಾಲವ್ಯಾಪ್ತಿಯಲ್ಲಿ ಜನಹೃದಯಗಳನ್ನು ಸ್ಪಂದಿಸಿರುವುದು ಬಹುಮುಖ್ಯ.  ಪ್ರಚಾರ ಎಂಬುದಿದ್ದಾಗ ಬಹಳ ಜನ ತೋರ್ಪಡಿಕೆಗಾದರೂ ಕೆಲವೊಂದು ಹಿಂಸಾತ್ಮಕ ಪ್ರವೃತ್ತಿಗಳಿಂದ ಸ್ವಲ್ಪ ದೂರ ಇರುತ್ತಾರೆ ಎಂಬುದು ಸುಳ್ಳಲ್ಲ. 


ಮಹಾತ್ಮರೆಂದರೆ ಸತ್ತುಹೋಗಿರೋ ಜೀವಗಳ ಹೂವಿನ ಹಾರ ಹಾಕಿದ ಫೋಟೋಗಳಲ್ಲ.  ಭೂಮಿಯ ಮೇಲೆ ಅಪ್ಪಿ ತಪ್ಪಿ ಹುಟ್ಟಿ ನಿರಂತರ ತಾವು ನಂಬಿದ್ದಕ್ಕೆ ಸತ್ಯಾರ್ಥಿಗಳಾಗಿ ಬದುಕುತ್ತಿರುವ ಕೈಲಾಶರಂತಹ ಹಿರಿಯ ಜೀವಗಳು.

On the birth day of Nobel laureate Kailash Satyarthi 🌷🙏🌷 Sathyarthi


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ