ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಛಾಯಾ ಭಟ್


ಛಾಯಾ ಭಟ್


ಛಾಯಾ ಭಟ್ ಕಥೆಗಾರ್ತಿಯಾಗಿ ಹೆಸರು ಮಾಡುತ್ತಿರುವ ಪ್ರತಿಭಾವಂತರು. 

ಛಾಯಾ ಭಟ್ ಅವರ ಜನ್ಮದಿನ ಜನವರಿ 24. ಛಾಯಾ ಭಟ್  ಕುಮಟಾ ತಾಲ್ಲೂಕಿನ ಹೊಲನಗದ್ದೆಯವರು. ತಂದೆ ರಮಾಕಾಂತ ಹೆಗಡೆ ಮತ್ತು ತಾಯಿ ಸವಿತಾ ಇಬ್ಬರೂ ಶಿಕ್ಷಕರು. ಇವರ ಬಹು ವರ್ಷಗಳ ಬದುಕು ಮಂಚಿಕೇರಿ ಮತ್ತು ಸಿದ್ಧಾಪುರ ತಾಲ್ಲೂಕಿನ ಬಳಿ ಇರುವ ದೊಡ್ಮನೆ ಗ್ರಾಮಗಳಲ್ಲಿ ಕಳೆಯಿತು. ಹೀಗಾಗಿ ಛಾಯಾ ಅವರಿಗೆ ಕರಾವಳಿ ಮತ್ತು ಮಲೆನಾಡು ಆಪ್ತ ಮತ್ತು ಸೋಜಿಗ.  ಹಾಗೆಯೇ ಅರ್ಥಶಾಸ್ತ್ರದಲ್ಲಿ ಎಂ.ಎ. ವ್ಯಾಸಂಗದ ಸಮಯದಲ್ಲಿನ  ಧಾರವಾಡದೊಂದಿಗಿನ ಒಡನಾಟವೂ ಛಾಯಾ ಅವರಿಗೆ ಅಷ್ಟೇ ಆತ್ಮೀಯವಾದದ್ದು.

ವೈವಾಹಿಕ ಜೀವನದಲ್ಲಿ ಕುಟುಂಬದೊಡನೆ ಬೆಂಗಳೂರಿನಲ್ಲಿ ನೆಲೆಸಿರುವ  ಛಾಯಾ ಭಟ್ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಲೇ ಹೆಚ್ಚಿನ ವ್ಯಾಸಂಗ, ಬರಹ ಮತ್ತು ಕಲಾಭಿರುಚಿಗಳೊಂದಿಗೆ ಸಮನ್ವಯ ಸಾಧಿಸಿದ್ದಾರೆ.

ತಾವು ಬೆಳೆದ ಸೀಮಿತ ಸೌಕರ್ಯವಿದ್ದ ಮಧ್ಯಮ ವರ್ಗದ ಬದುಕು; ಕಾಡಿನ ವಾತಾವರಣ;  ಕರಾವಳಿ,  ಮಲೆನಾಡು ಹಾಗೂ ಓದಿನ ದಿನಗಳಲ್ಲಿನ ಧಾರವಾಡದ ವಾತಾವರಣಗಳನ್ನು ಹೃದಯದಲ್ಲಿ ತುಂಬಿಕೊಂಡು ಬೆಳೆದ ಛಾಯಾ ಭಟ್ ಆ ಬದುಕಿನಲ್ಲಿ ಕಂಡು ಬಂದ ಸಂವೇದನೆಗಳಿಗೆ ತಮ್ಮ ಕಥೆಗಳ ಮೂಲಕ ಮಾತು ಕೊಟ್ಟಿದ್ದಾರೆ.

ಓದಿನ ದಿನಗಳಲ್ಲಿಯೇ ಕವಿತೆ, ಲಘು ಬರಹಗಳ ಒಲವು ಕಂಡುಕೊಂಡ ಛಾಯಾ ಭಟ್ ಅದನ್ನು ಗಂಭೀರವಾಗಿ ತೆಗೆದುಕೊಂಡದ್ದು ಕಳೆದ ಸುಮಾರು 8 ವರ್ಷಗಳಲ್ಲಿ.

ಛಾಯಾ ಭಟ್ ಅವರ ಹಾಸ್ಯದ ಅನೇಕ ಬರಹಗಳು ಮತ್ತು ಕಥೆಗಳು ಮಯೂರ, ತರಂಗ, ತುಷಾರ ಮತ್ತು ಹಲವು ವಿಶೇಷಾಂಕಗಳಲ್ಲಿ ಮೂಡಿ ಬಂದವು.

ಛಾಯಾ ಭಟ್ ಅವರ ಹೆಸರು ಹೆಚ್ಚು ಬೆಳಕು ಕಂಡದ್ದು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದಕ್ಕೆ ಹೆಸರಾದ 'ಛಂದ ಪ್ರಕಾಶನ'ದವರು ನಡೆಸುತ್ತ ಬಂದಿರುವ ಪ್ರತಿಭಾನ್ವಿತ ಬರಹಗಾರರ ಸಂಶೋಧನೆಯಲ್ಲಿ.  ಹಿಂದಿನ ಬಾರಿ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಫೈನಲ್ ಹಂತದ ಐದು ಜನರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಛಾಯಾ ಭಟ್ 2021 ಸ್ಪರ್ಧೆಯಲ್ಲಿ ಹೊಸ ಹೊಸ ಕಥೆಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದರು. ಹೀಗೆ ಬಹುಮಾನಿತಗೊಂಡು ಪ್ರಕಟಗೊಂಡಿರುವ ಛಾಯಾ ಭಟ್ ಅವರ
'ಬಯಲರಸಿ ಹೊರಟವಳು' ಕೃತಿ ಸ್ಪರ್ಧಾ ತೀರ್ಪುಗಾರರಿಂದ ಮಾತ್ರವಲ್ಲದೆ ವಿಮರ್ಶಕರಿಂದ ಮತ್ತು ಓದುಗರಿಂದ ಸಹಾ ಅಪಾರ ಮೆಚ್ಚುಗೆ ಗಳಿಸಿದೆ.

ತಾವು ಬೆಳೆದ ವಾತಾವರಣದಲ್ಲಿ ಜನ ಅನುಭವಿಸಿದ ತಾಕಲಾಟ, ಸಂಘರ್ಷ ಮುಂತಾದ ಸೂಕ್ಷ್ಮ ಸಂವೇದನೆಗಳನ್ನು  ಯಾವುದೇ ಒಣ ಘೋಷಣೆ, ಭಾಷಣಗಳಿಗೆ ಮೊರೆಹೋಗದೆ ಸ್ವಯಂ ಪಾತ್ರಗಳೇ ಒಳಗನ್ನು ಬಿಚ್ಚಿಡುವಂತೆ ಚಿತ್ರಿಸಿದ ಜಾಣ್ಮೆ ಛಾಯಾ ಭಟ್ ಅವರ ಬರಹಗಳಲ್ಲಿದೆ. ಯಾವೊಂದು ನಿಲುವು, ವಾದ,  ಪರ, ವಿರೋಧಗಳಿಗೆ ನಿಲುಕದೆ ವಾಸ್ತವತೆಯನ್ನು ತೆರೆದಿಡುವ  ವಿಶಿಷ್ಟದಾರಿಯನ್ನು ಛಾಯಾ ಭಟ್ ನಿರ್ಮಿಸಿಕೊಂಡಿದ್ದಾರೆ ಎಂಬುದು ಅವರ ಬರಹಗಳ ಕುರಿತಾಗಿ ತಜ್ಞರ ಅಭಿಮತ.

ಕಲಾತ್ಮಕ ಆಭರಣಗಳ ವಿನ್ಯಾಸಗಳ ಸೃಜನೆಯಲ್ಲೂ ವಿಶಿಷ್ಟ ಪರಿಣತಿ ಛಾಯಾಭಟ್ ಅವರಿಗಿರುವುದು ಅವರ 'ಕಲರ್ಡ್ ಕ್ಲೇ' ಪುಟದಲ್ಲಿ ಗೋಚರಿಸುತ್ತದೆ. ಟೆರ್ರಕೊಟ್ಟ ಮತ್ತು ಪಾಲಿಮರ್ ಮಣ್ಣಿನೊಂದಿಗೆ ಅವರು ಸೃಜಿಸಿರುವ ವರ್ಣಮಯ ಆಭರಣಗಳು ಹೃನ್ಮನಗಳನ್ನು ಸೆಳೆಯುವಂತಹ ಆಕರ್ಶಕ ವಿನ್ಯಾಸಗಳನ್ನು ಬಿಂಬಿಸುತ್ತಿವೆ.  ಹಲವು ರೀತಿಯ ಅವರ ಬರಹಗಳೂ ನಿಯತಕಾಲಿಕಗಳಲ್ಲಿ ಕಂಗೊಳಿಸುತ್ತ ಸಾಗಿವೆ.

ಪ್ರತಿಭಾನ್ವಿತ ಕಥೆಗಾರರೂ,‍ ಕಲಾವಿದರೂ ಮತ್ತು ನಮ್ಮೆಲ್ಲರ ಆತ್ಮೀಯರೂ ಆದ ಛಾಯಾ ಭಟ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday to our writer and friend Chaya Bhat

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ