ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಎನ್. ಶಂಕರ್


 ಎಸ್.  ಎನ್. ಶಂಕರ್


ಇಂದು ಪ್ರೊ. ಎಸ್. ಎನ್. ಶಂಕರ್ ಅವರ ಹುಟ್ಟಿದ ಹಬ್ಬ. 

ನನಗೆ ಶಂಕರ್ ಸಾರ್ ಆಪ್ತರಾಗಿದ್ದ ಇಂಗ್ಲಿಷ್ ಮೇಷ್ಟ್ರು.  ನಾನು 1974-76 ಅವಧಿಯಲ್ಲಿ ಶಾರದಾ ವಿಲಾಸ ಕಾಲೇಜಿನಲ್ಲಿ ಪಿಯುಸಿ ಓದುವಾಗ ಶಂಕರ್ ಸಾರ್ ಇಂಗ್ಲಿಷ್ ಪಾಠ ಮಾಡಿದರು.  ಅವರಲ್ಲಿದ್ದ ತೇಜಸ್ಸು, ಸೌಂದರ್ಯ, ಗಾಂಭೀರ್ಯ ಅಸಾಧಾರಣವಾಗಿತ್ತು.  ಸಾಮಾನ್ಯವಾಗಿ ಹೈಸ್ಕೂಲು ಮುಗಿಸಿ ಪಿಯುಸಿಗೆ ಬಂದ ಮಕ್ಕಳದು ತುಂಟತನ, ತರಲೆ ಮತ್ತು ಪೊಗರುಗಳಿಗೆ ಆಸ್ಪದವಿದ್ದ ದಿನಗಳವು.  ಅಂದಿನ ನಮ್ಮ ಕಾಲದ ಹುಡುಗರಿಗೆ ಇಂಜಿನಿಯರಿಂಗ್, ಸಿಇಟಿ ಕಾಟಗಳು ಮತ್ತು ಕನಸುಗಳು ಇಲ್ಲದೆ,  ಶಾಲೆಯ ಶಿಸ್ತಿನಿಂದ ಹೊರಬಂದು, ಕಾಲೇಜೆಂದರೆ ಸ್ವಲ್ಪ ಬೋನಿನಿಂದ ಹೊರಬಿಟ್ಟ ಹಾಗೆ ಚೆಲ್ಲುಚೆಲ್ಲಾಗಿ ಆಡಲು ಆಸ್ಪದವಿದ್ದ ಕಾಲ.  ಹಾಗಾಗಿ ತರಗತಿಗಳಲ್ಲಿ ಸಾಕಷ್ಟು ಪೆದ್ದುತನದ ತರಲೆಗಳು ಸಾಮಾನ್ಯವಿರುತ್ತಿದ್ದವು.  ಆದರೆ ಶಂಕರ್ ಸಾರ್ ತರಗತಿ ಅಂದರೆ ಶಾಂತಿ ತುಂಬಿದ ವಿಶಿಷ್ಟ ವಾತಾವರಣ.  ಅವರು ನಮಗೆ ಪಾಠ ಮಾಡಿದ್ದರಲ್ಲಿ ಚಾರ್ಲ್ಸ್ ಡಿಕನ್ಸರ  'ಗ್ರೇಟ್ ಎಕ್ಸ್ಪೆಕ್ಟೇಷನ್ಸ್' ಒಂದು.  ಶಂಕರ್ ಸಾರ್ ಪಾಠವೆಂದರೆ ಕಥೆಯನ್ನು ವರ್ಣನಾತ್ಮಕವಾಗಿ ಕೇಳುವ ಸುಯೋಗದ ಕಾಲ. ಅವರು ಕನ್ನಡ ಮೀಡಿಯಂನಿಂದ ಕಾಲೇಜಿನ ಇಂಗ್ಲಿಷ್ ಮೀಡಿಯಂಗೆ ಕಾಲಿಟ್ಟಿದ್ದ ಏನೂ ಇಂಗ್ಲಿಷ್ ಅರ್ಥ ಆಗದ ನನ್ನಂತ ಮೊದ್ದಿಗೂ ಇಂದಿಗೂ ತಲೆಯಲ್ಲಿ ಉಳಿಯುವಂತೆ ರಸವತ್ತಾಗಿ ಕಥೆ ಹೇಳಿದ್ದರು ಎಂದರೆ ಅಚ್ಚರಿಯಾಗುತ್ತೆ.  ಒಂದು ಘಟನೆಯನ್ನು ವರ್ಣಿಸುವಾಗ "ಪ್ರತಿಯೊಬ್ಬರಲ್ಲೂ ಪ್ರೀತಿಯ ಒಂದು ಕನಸಿರುತ್ತೆ. ನಿಮ್ಮಲ್ಲೂ ಪ್ರತಿಯೊಬ್ಬರಲ್ಲೂ ಅಂಥ ಕನಸು ಇದ್ದೇ ಇರುತ್ತೆ" ಅಂದಾಗ ಒಳಗೊಳಗೆ ಹೃದಯದಲ್ಲಾದ ಪುಳಕ ಮರೆಯಲಾರದಂತದ್ದು.

ಶಂಕರ್ ಅವರ ಪಾಠ ಒಂದು ರೀತಿ ವಿಶಿಷ್ಟವಾಗಿ ಮನಸ್ಸಿನಲ್ಲಿ ನೆಲೆ ನಿಲ್ಲಲಿಕ್ಕೆ ನಾವು ಹೈಸ್ಕೂಲಿನಲ್ಲಿ ಕನ್ನಡ ಮೀಡಿಯಂ ಓದುವಾಗ ಎಲ್ಲವನ್ನೂ ತಾನು ಇಂಗ್ಲಿಷನಾಗಿ ಹುಟ್ಟಿಬಂದವನಂತೆ ಅರ್ಥವಾಗದ ಹಾಗೆ ಪಾಠ ಮಾಡುತ್ತಿದ್ದ ಒಬ್ಬ ಸಿಟ್ಟು ತರಿಸುತ್ತಿದ್ದ ಮೇಷ್ಟರು ನೆನಪಾಗುತ್ತಾರೆ. ಗುಣ ಎಂಬುದು ಶಿಕ್ಷಕರಲ್ಲಿ ಬಹು ಮುಖ್ಯ.  ಶಂಕರ್ ಒಬ್ಬ ಮಹಾನ್ ಗುಣವಂತ ಪ್ರೊಫೆಸರ್ ಆಗಿದ್ದರು.

ಸಾಹಿತ್ಯವನ್ನು ಓದಲು ಇನ್ನೂ ಆರಂಭಿಸದಿದ್ದ ನನಗೆ ಶಂಕರ್ ಅವರು ಆ ವೇಳೆಗಾಗಲೇ ನಿಧನರಾಗಿದ್ದ ಮಹಾನ್ ಕಾದಂಬರಿಗಾರ್ತಿ
ತ್ರಿವೇಣಿ ಅವರ ಪತಿ ಎಂದು ನಂತರದಲ್ಲಿ ತಿಳಿಯಿತು. 

ನಾನು ಪಿಯುಸಿ ಮುಗಿಸಿದ ಮೇಲೆ ಶಾರದಾ ವಿಲಾಸದಲ್ಲಿ ಬಿ. ಕಾಂ ಇಲ್ಲದ ಕಾರಣ ಬನುಮಯ್ಯ ಕಾಲೇಜಿಗೆ ಸೇರಿದೆ. ಆ ಸಮಯದಲ್ಲಿ ಪ್ರೊ. ಎಚ್. ಎಂ. ಶಂಕರನಾರಾಯಣ ರಾವ್ ಅವರು ಪ್ರಿನ್ಸಿಪಾಲರ ಹುದ್ಧೆಯಿಂದ ನಿವೃತ್ತರಾಗಿ ಶಂಕರ್ ಅವರು ಪ್ರಿನ್ಸಿಪಾಲರಾದರು.

ನಂಜನಗೂಡಿನ ಸಂಪಿಗೆ ನಾರಾಯಣ ರಾವ್ ಅವರ ಪುತ್ರರಾದ ಎಸ್. ಎನ್. ಶಂಕರ್ ಅವರು  ಶಾರದಾ ವಿಲಾಸ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿ ಅಲ್ಲಿಯೇ ಪ್ರಿನ್ಸಿಪಾಲರಾಗಿ ನಿವೃತ್ತರಾದರು. ಕ್ರೀಡಾ ಪ್ರೇಮಿಯಾಗಿದ್ದ ಶಂಕರ್ ಸಾರ್ ನಗರದ ಕಾಸ್ಮೊಪಾಲಿಟಿನ್ ಕ್ಲಬ್‌ನಲ್ಲಿ ಟೆನಿಸ್ ಆಟವಾಡುತ್ತಿದ್ದರು. ಟೆನಿಸ್ ಪಂದ್ಯ ವೀಕ್ಷಿಸಲು ವಿಂಬಲ್ಡನ್‌ಗೆ ನಾಲ್ಕು ಬಾರಿ ಹೋಗಿದ್ದರು.  ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಆಜೀವ ಸದಸ್ಯತ್ವ ಪಡೆದಿದ್ದರು. ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಪತ್ನಿ ತ್ರಿವೇಣಿ ಅವರ ಕಾದಂಬರಿಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಅದನ್ನು ಪ್ರಕಟಣೆ ಮಾಡಲು ಪ್ರಕಾಶಕರೊಂದಿಗೆ ಮಾತುಕತೆ ನಡೆಸಿದ್ದರು ಎಂದು ಪತ್ರಿಕೆಯಲ್ಲಿ ಬಂದಿತ್ತು.

ಶಂಕರ್ ಸಾರ್ 1956ರಲ್ಲಿ ಬಾಂಬೆಯಲ್ಲಿ ಐದು ರೂಪಾಯಿಗೆ ಕೊಂಡಿದ್ದ ಓಹೆನ್ರಿಯ ಇಂಗ್ಲಿಷ್ ಕಥಾ ಪುಸ್ತಕವನ್ನು ಕನ್ನಡದಲ್ಲಿ '32 ಓಹೆನ್ರಿ ಕಥೆಗಳು'  ಎಂದು ಪರಿಚಯಿಸಿದ್ದರು. ಇದಲ್ಲದೆ ಇನ್ನೂ ಹಲವಾರು ಕಥೆಗಳನ್ನು ಕನ್ನಡಕ್ಕೆ ತಂದಿದ್ದರು. ತ್ರಿವೇಣಿ ಅವರ ಬಾನು ಬೆಳಗಿತು, ಸೋತು ಗೆದ್ದವಳು, ದೂರದ ಬೆಟ್ಟ, ಮೊದಲ ಹೆಜ್ಜೆ, ವಸಂತ ಗಾನ, ಕಾಶೀಯಾತ್ರೆ ಸೇರಿ ಆರು ಕಾದಂಬರಿಗಳನ್ನು ನಾಟಕಕ್ಕೆ ಅಳವಡಿಸಿ ಪ್ರಕಟಿಸಿದ್ದರು.

2010ರ ವರ್ಷದಲ್ಲಿ ನಾನು ಮೈಸೂರಿನಲ್ಲಿದ್ದಾಗ ಚಾಮರಾಜಪುರಂನಲ್ಲಿ ಹೋಟೆಲಲ್ಲಿ ಊಟ ಮಾಡಲು ಕುಳಿತಾಗ ಒಬ್ಬರು ವಯಸ್ಸಾದ ಹಿರಿಯರು ಕುಳಿತು ಅವರೂ ನನ್ನೆದುರೇ ಕುಳಿತು ಊಟಕ್ಕೆ ಹೇಳಿ ಕಾಯುತ್ತಿದ್ದರು. ಒಂದೆರಡು ಮಾತೂ ಆಡಿ ಊಟ ಎಷ್ಟು ಹೊತ್ತಾದರೂ ಬರಲಿಲ್ಲ ಎಂದು ಹೇಳಿಕೊಂಡು ನಕ್ಕೆವು. ಇವರನ್ನು ಎಲ್ಲೊ ಬಹಳ ವರ್ಷದಿಂದ ನೋಡಿದ್ದೇನೆ ನೆನಪಾಗುತ್ತಿಲ್ಲ ಎಂದು ಅನಿಸುತ್ತಿತ್ತು.   ಹಾಗೇ ಚಿಂತಿಸುತ್ತಾ ನನ್ನ ಮನೆ ಸೇರಿದಾಗ ಓಹ್ ಅವರು ಶಂಕರ್ ಸಾರ್. ಅವರನ್ನು  ನನ್ನ ಗುರುತು ಹೇಳಿ ಮಾತನಾಡಿಸುವ ಅವಕಾಶ ಕಳೆದುಕೊಂಡೆ ಅನಿಸಿತು.  ಅವರಿಗೆ ಆಗಲೇ 85 ವಯಸ್ಸಾಗಿದ್ದರಿಂದ 35 ವರ್ಷಗಳ ನಂತರ ಅವರನ್ನು ಕಂಡ ನನಗೆ ಅವರ  ಗುರುತು ಹಿಡಿಯಲಾಗಿರಲಿಲ್ಲ.

ಮುಂದೆ ಎಸ್. ಎನ್. ಶಂಕರ್ ಸಾರ್ 2012ರ ಅಕ್ಟೋಬರ್ 19ರಂದು ಈ ಲೋಕವನ್ನಗಲಿದಾಗಲೇ ಮತ್ತೊಮ್ಮೆ ಅವರ ಸುದ್ಧಿ ಕೇಳಿದ್ದು.

ಇಂದು ಅವರನ್ನು ನೆನೆವಾಗ ಏನೋ ಸಿಕ್ಕಂತ ಭಾವ ಮೂಡಿದೆ.

On the birth anniversary of Prof. S. N. Shankar  Sir

Thanks Meera Shankar Madam


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ