ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಮರೀಶ್ ಪುರಿ


ಅಮರೀಶ್ ಪುರಿ


ಚಿತ್ರರಂಗದ ಮಹಾನ್ ಪೋಷಕ ಕಲಾವಿದ ಅಮರೀಶ್ ಪುರಿ ಈ ಲೋಕವನ್ನಗಲಿದ್ದು 2005ರ ಜನವರಿ 12ರಂದು.

ಅಮರೀಶ್ ಪುರಿ ಅವರ ಅಜಾನುಬಾಹು ಬಾಹ್ಯರೂಪ, ವಿಶಿಷ್ಟ ಧ್ವನಿ, ಗಾಂಭೀರ್ಯದ ಆಳದಲ್ಲಿ ಅರಳುತ್ತಿದ್ದ ಯಾವುದೇ ಖಳ ಇಲ್ಲವೇ ಪೋಷಕತ್ವದ ಅಭಿನಯ ಇವೆಲ್ಲವೂ ಮರೆಯಲಾರದಂತಹವು.  ಅವರ ರಂಗಭೂಮಿಯ ನಿಷ್ಠಾವಂತ ಕಾಯಕ ಅವರ ಚಿತ್ರರಂಗದ ಅಭಿನಯಕ್ಕೊಂದು ತೇಜಸ್ಸು ತಂದಿತ್ತು. ಸತ್ಯದೇವ್ ದುಬೈ ಮತ್ತು ಗಿರೀಶ್ ಕಾರ್ನಾಡರಂತಹ ರಂಗತಜ್ಞರೊಂದಿಗೆ ಅವರ ನಿರತ ಸಂಪರ್ಕವಿತ್ತು.  ಗಿರೀಶ್‌ ಕಾರ್ನಾಡರ ಯಯಾತಿ ಹಾಗೂ ಹಯವದನ ನಾಟಕಗಳಲ್ಲಿ ಅಭಿನಯಿಸಿದ್ದನ್ನು ಅವರು ಅಪ್ತವಾಗಿ ನೆನೆಸಿಕೊಳ್ಳುತ್ತಿದ್ದರು.  ಅವರಿಗೆ 1979 ವರ್ಷದಲ್ಲಿಯೇ ಸಂಗೀತ ನಾಟಕ ಆಕಾಡೆಮಿ ಗೌರವ ಸಂದಿತ್ತು. ಅವರು ಚಿತ್ರರಂಗದಲ್ಲಿ ಬದುಕಿ ನೆಲೆ ಕಂಡುಕೊಳ್ಳುವಷ್ಟರಲ್ಲಿ ಅವರಿಗೆ 40 ವರ್ಷ ವಯಸ್ಸಾಗಿತ್ತು.

ತಮ್ಮ ವೃತ್ತಿ ಜೀವನದ ಪ್ರಾರಂಭಿಕ ವರ್ಷಗಳಲ್ಲಿ ಅಮರೀಶ್ ಪುರಿ ಅವರು ಗಿರೀಶ್ ಕಾರ್ನಾಡರ 'ಕಾಡು' ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.

ಅಮರೀಶ್ ಪುರಿ ಅವರ 'ಮಿ. ಇಂಡಿಯಾ' ಚಿತ್ರದಲ್ಲಿನ 'ಮೊಗ್ಯಾಂಬೋ ಖುಷ್ ಹುವಾ' ಮಾತು ಇಂದೂ ಎಲ್ಲರ ನಡುವೆ ಹರಿಯುತ್ತಿದೆ. ಮಿಸ್ಟರ್ ಇಂಡಿಯಾದ ಮೊಗ್ಯಾಂಬೋ ಪಾತ್ರದಂತೆಯೇ, ಚಿತ್ರರಂಗದ ಅತಿಜನಪ್ರಿಯ ಚಿತ್ರವಾದ ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ ಚಿತ್ರದಲ್ಲಿ ನಾಯಕಿಯ ತಂದೆ ಚೌಧರಿ ಬಾಲ್ ದೇವ್ ಸಿಂಗ್ ಸಹಾ ಇಂದಿಗೂ ಜನರ ನೆನಪನ್ನು ಬಹಳಷ್ಟು ಆಕ್ರಮಿಸಿಕೊಂಡಿದೆ.

ಜೂನ್ 22, 1932ರಲ್ಲಿ ಪಂಜಾಬ್‌ನಲ್ಲಿ ಜನಿಸಿದ ಅಮರೀಶ್ ಪುರಿ ರಂಗಭೂಮಿ ಮತ್ತು ವಾಯ್ಸ್ ಓವರ್ ಕಲಾವಿದರಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. 1954ರಲ್ಲಿ ಚಿತ್ರವೊಂದರ ಮುಖ್ಯಪಾತ್ರಕ್ಕಾಗಿ ಆಡಿಷನ್‌‌ಗೆ ಹೋಗಿ ತಿರಸ್ಕೃತರಾಗಿದ್ದರು. 

1971ರಲ್ಲಿ 'ರೇಷ್ಮಾ ಔರ್ ಶೇರಾ' ಚಿತ್ರದಲ್ಲಿ ಅಮರೀಶ್ ಪುರಿ ಬಾಲಿವುಡ್‌ಗೆ ಅಡಿಯಿಟ್ಟರು. ಅಮರೀಶ್ ಪುರಿ ಶ್ಯಾಮ್ ಬೆನಗಲ್ ಅವರ ನಿಶಾಂತ್, ಮಂಥನ್,ಭೂಮಿಕಾ ಚಿತ್ರಗಳು, ಗೋವಿಂದ ನಿಹಲಾನಿ ಅವರ ಆಕ್ರೋಷ್ ಚಿತ್ರಗಳಲ್ಲಿ ಗಮನ ಸೆಳೆದಿದ್ದರು.  ಗಾಂಧೀ ಚಿತ್ರದಲ್ಲಿ ವಿಶೇಷ ಗಮನ ಸೆಳೆದಿದ್ದರ ಜೊತೆಗೆ ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶನದ 'ಇಂಡಿಯಾನಾ ಜೋನ್ಸ್ ಅಂಡ್ ಟೆಂಪಲ್ ಆಫ್ ಡೂಮ್' ಚಿತ್ರದ ಮೂಲಕ 1984ರಲ್ಲಿ ಹಾಲಿವುಡ್ ಚಿತ್ರದಲ್ಲೂ ಅಭಿನಯಿಸಿದ್ದರು. ಅಮರೀಶ್ ಪುರಿ ನನ್ನ ನೆಚ್ಚಿನ ಖಳನಟ ಎಂದಿದ್ದಾರೆ ಸ್ಟೀವನ್ ಸ್ಪೀಲ್‍ಬರ್ಗ್. 

ಕನ್ನಡ, ಹಿಂದಿ, ಮರಾಠಿ, ಹಾಲಿವುಡ್, ಪಂಬಾಬಿ, ಮಲಯಾಳಂ, ತೆಲುಗು ಮತ್ತು ತಮಿಳಿನ ಒಟ್ಟು ಸುಮಾರು 500 ಚಿತ್ರಗಳಲ್ಲಿ ಅಮರೀಶ್ ಪುರಿ ಅಭಿನಯಿಸಿದ್ದರು.

ಮಿಸ್ಟರ್ ಇಂಡಿಯಾ, ಹಮ್ ಪಾಂಚ್, ವಿಧಾತ, ಮೇರಿ ಜುಂಗ್, ತ್ರಿದೇವ್, ಘಾಯಲ್, ದಾಮಿನಿ, ಕರಣ್ ಅರ್ಜುನ್, ಶಕ್ತಿ,  ಹೀರೋ ಮುಂತಾದ ಚಿತ್ರಗಳ ಅಮರೀಶ್ ಪುರಿ ಅವರ ಖಳಪಾತ್ರಗಳು ಪ್ರಸಿದ್ಧ. ಚಾಚಿ 420 ಚಿತ್ರದ ಹಾಸ್ಯಾಭಿನಯವೂ ಪ್ರಸಿದ್ಧ.  ಅವರ ಪೋಷಕ ಪಾತ್ರಗಳ ಅಭಿನಯವೂ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೇ, ಫೂಲ್ ಔರ್ ಕಾಂತೆ, ಗರ್ಡಿಷ್, ಪರದೇಶ್, ವಿರಾಸತ್, ಘಟಕ್, ಮುಜೆ ಕುಚ್ ಕೆಹನಾ ಹೈ, ಚೈನಾ ಗೇಟ್, ಮೊಹಬ್ಬತೇನ್ ಚಿತ್ರಗಳಲ್ಲಿ ಅಪಾರ ಮೆಚ್ಚುಗೆ ಪಡೆದಿತ್ತು.

ಕಾಡು ಚಿತ್ರವಲ್ಲದೆ ಸಿಂಹದ ಮರಿ ಸೈನ್ಯ, ಗಂಡಭೇರುಂಡ, ಸುಬ್ಬಿ ಸುಬ್ಬಕ್ಕ ಸುವ್ವಲಾಲಿ, ಲವ್ ಮುಂತಾ ಕನ್ನಡ ಚಿತ್ರಗಳಲ್ಲಿಯೂ ಅಮರೀಶ್ ಪುರಿ ನಟಿಸಿದ್ದರು.

2005 ವರ್ಷದ ಜನವರಿ 12ರಂದು ಅಮರೀಶ್ ಪುರಿ ಈ ಲೋಕವನ್ನಗಲಿದರು.

On Remembrance Day of great actor Amrish Puri 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ