ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀನಿವಾಸ ಹಾವನೂರ


ಶ್ರೀನಿವಾಸ ಹಾವನೂರ


ಶ್ರೀನಿವಾಸ ಹಾವನೂರ ಕನ್ನಡದ ಪ್ರಸಿದ್ಧ ವಿದ್ವಾಂಸ ಮತ್ತು ಸಂಶೋಧಕರು.

ಶ್ರೀನಿವಾಸರು ಹಾವೇರಿ ಜಿಲ್ಲೆಯ ಹಾವನೂರಿನಲ್ಲಿ 1929ರ ಜನವರಿ 12ರಂದು ಜನಿಸಿದರು.

ಹಾವೇರಿ, ಧಾರವಾಡ, ಸಾಂಗ್ಲಿಯಲ್ಲಿ ಶಿಕ್ಷಣ ಮುಗಿಸಿ ಕೆಲವು ಕಾಲ ಮಾರಾಟ ತೆರಿಗೆ ವಿಭಾಗದ ಅಧಿಕಾರಿಗಳಾಗಿದ್ದ ಶ್ರೀನಿವಾಸ ಹಾವನೂರರು ನಂತರ ಮುಂಬೈನ ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ ನಲ್ಲಿ ಗ್ರಂಥಪಾಲಕರಾಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದರು.  ಕನ್ನಡ ಎಂ. ಎ ಮತ್ತು ಪಿಎಚ್.ಡಿ ಪಡೆದ ಅವರು ಕೆಲವು  ವರ್ಷಗಳ ಕಾಲ  ಮುಂಬೈ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.  ನಂತರದ ಮೂರು ವರ್ಷಗಳಲ್ಲಿ ಮಂಗಳೂರಿನ ಬಾಸಿಲ್ ಮಿಷನ್ನಿನ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನಲ್ಲಿ  ಕನ್ನಡ ನಿಘಂಟನ್ನು ಕನ್ನಡಕ್ಕೆ ಸಂಪಾದಿಸಿ ಕೊಟ್ಟ ರೆವರಂಡ್ ಕಿಟ್ಟೆಲ್ ಮುಂತಾದ ಮಹನೀಯರ ಕುರಿತು ವ್ಯಾಪಕ ಸಂಶೋಧನೆ ನಡೆಸಿದರು,  ನಿವೃತ್ತಿಯ ನಂತರ ತಮ್ಮನ್ನು ಸಂಶೋಧನಾ ಬರವಣಿಗೆಗಳಲ್ಲಿ ತೊಡಗಿಸಿಕೊಂಡರು.
         
ಕನ್ನಡ ಸಾಹಿತ್ಯ ಚರಿತ್ರೆಯ ಅರುಣೋದಯ ಕಾಲಘಟ್ಟವನ್ನು ಹೊಸ ದೃಷ್ಟಿಕೋನದಿಂದ ನೋಡುವುದಕ್ಕೆ, ಆಮೂಲಾಗ್ರವಾಗಿ ಸಂಶೋಧಿಸಿ ಅಗತ್ಯವಾದ ಆಧಾರಗಳನ್ನು ಒದಗಿಸುವುದಕ್ಕೆ ಮತ್ತು ಹೆಚ್ಚಿನ ಆಧಾರಗಳು ಬೇಕೆನಿಸಿದಾಗ ಅವುಗಳ ಬೆನ್ನುಹತ್ತಿ ದೇಶ ವಿದೇಶಗಳಿಗೆ ಸಂಚರಿಸುವುದಕ್ಕೆ ಡಾ. ಶ್ರೀನಿವಾಸ ಹಾವನೂರರಿಗೆ ಸಾಧ್ಯವಾದುದು ಅವರ ಅಸಾಧಾರಣ ತಾಳ್ಮೆ ಮತ್ತು ಚಿಕಿತ್ಸಕ ದೃಷ್ಟಿಕೋನ. ಅವರದು ದಣಿವರಿಯದ ದುಡಿಮೆ ಹಾಗೂ ಬತ್ತದ ಜ್ಞಾನದಾಹ ಎಂದು ಅನೇಕ ಕನ್ನಡ ವಿದ್ವಾಂಸರ ಅಭಿಪ್ರಾಯವಾಗಿದೆ.

ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೊಟ್ಟಮೊದಲ ಬಾರಿಗೆ ಸಮಗ್ರವಾಗಿ ರೂಪಿಸಿದ ರಂ.ಶ್ರೀ. ಮುಗಳಿ ಅವರ ಮಾರ್ಗದರ್ಶನದಲ್ಲಿ ಹಾವನೂರರು ಸಲ್ಲಿಸಿದ ಪ್ರೌಢ ಪ್ರಬಂಧ ‘ಹೊಸಗನ್ನಡ ಅರುಣೋದಯ’.  ಅದು  ಎಲ್ಲ ಕಾಲದ ಸಾಹಿತ್ಯ ವ್ಯಾಸಂಗಿಗಳಿಗೆ ಮಹತ್ವದ ಆಕರ ಗ್ರಂಥ. ‘ಹೊಸಗನ್ನಡ ಅರುಣೋದಯ’ದ ಪಿಎಚ್‌.ಡಿ ಪ್ರಬಂಧದ ಮೌಲ್ಯಮಾಪನ ನಡೆಸಿದ ಹಿರಿಯ ವಿದ್ವಾಂಸ ಹಾ.ಮಾ.ನಾಯಕರು ಸಂದರ್ಶನವನ್ನು ಮಾಡದೆಯೇ ಪಿಎಚ್.‌ಡಿ ನೀಡಬಹುದೆಂದು ಶಿಫಾರಸು ಮಾಡಿದ್ದರೆಂಬುದು ಹಾವನೂರರ ಸಂಶೋಧನಾ ವಿದ್ವತ್ತಿಗೆ ಸಾಕ್ಷಿ. 19ನೇ ಶತಮಾನದಲ್ಲಿ ಕಂಡ ಹೊಸಗನ್ನಡ ಸಾಹಿತ್ಯದ ಅರುಣೋದಯ ಕಾಲದ ಸಾಧನೆ, ಸಿದ್ಧಿ ಮತ್ತು ಲೋಪದೋಷಗಳನ್ನು ಅಭಿವ್ಯಕ್ತಿಸುವ ಈ ಕೃತಿಯ ಮೂಲಕ ದೊಡ್ಡದೊಂದು ನಿಧಿಯ ಬಾಗಿಲನ್ನು ಸಾಹಿತ್ಯಾಭ್ಯಾಸಿಗಳಿಗೆ ಹಾವನೂರರು ತೆರೆದಿಟ್ಟರು.

ಹಾವನೂರರು ‘ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ’, ‘ಗೋವಿಂದ ಪೈ ವಾಙ್ಮಯ ಸಮೀಕ್ಷೆ’, ‘ಶ್ರೀವಾದಿರಾಜರ ತೀರ್ಥಪ್ರಬಂಧ’, ‘ಪ್ರೇಕ್ಷಣೀಯ ಕರ್ನಾಟಕ’, ‘ಗಳಗನಾಥ ಮಾಸ್ತರರು’, ‘ಒಂದಿಷ್ಟು ಲಘು, ಒಂದಿಷ್ಟು ಗಂಭೀರ’, ‘ಪಾ.ವೆಂ ಆಚಾರ್ಯರ ಸಮಗ್ರ ಕೃತಿಗಳ ಸಂಪಾದನೆ’. ‘ಹಟ್ಟಿಯಂಗಡಿ ನಾರಾಯಣರಾಯರ ಸಾಹಿತ್ಯವಾಚಿಕೆ’, ‘ಎಪಿಗ್ರಾಫಿಕಲ್ ಸ್ಟಡೀಸ್’, ‘ಮ.ಪ್ರ. ಪೂಜಾರರ ಹಳಗನ್ನಡ ಕವಿ ಕಾವ್ಯ ಮಹೋನ್ನತಿ’ ಮೊದಲಾಗಿ 60ಕ್ಕೂ ಹೆಚ್ಚು ಮೌಲಿಕ ಕೃತಿಗಳ ಲೇಖಕರು.

‘ಭೈರಪ್ಪನವರ ಕಾದಂ ಕಥನಗಳು’ ಹೊಸ ರೀತಿಯ ಬರವಣಿಗೆ. 40 ವರ್ಷಗಳಿಂದ ಕಿಟೆಲರ ಜೀವನ, ಸಾಧನೆಯ ಬಗ್ಗೆ ಬರೆಯುತ್ತ ಬಂದವರು ಅವರು. ಕಿಟೆಲ್ ಕುರಿತ ಕೃತಿ ಜರ್ಮನ್ ಭಾಷೆಯಲ್ಲಿಯೂ ಪ್ರಕಟವಾಗಿದೆ. ಹಾವನೂರರು ಬಾಸೆಲ್ ಮಿಷನ್‌ನಲ್ಲಿ ಹುದುಗಿದ್ದ ಕನ್ನಡ ಸಂಬಂಧಿ ಆಕರ ಸಾಮಗ್ರಿಯ ಅಧ್ಯಯನಕ್ಕಾಗಿ ನಾಲ್ಕು ಸಲ ಇಂಗ್ಲೆಂಡ್ ಮತ್ತು ಬಾಸೆಲ್‌ಗೆ ಭೇಟಿ ನೀಡಿದ್ದರು.

ಹಾವನೂರರು ಕರ್ನಾಟಕದ ಇತಿಹಾಸ, ಸಾಹಿತ್ಯಗಳ ಸಂಶೋಧನೆಗಾಗಿ ಕಂಪ್ಯೂಟರ್‌ ಅನ್ನು ಬಳಸಿದವರಲ್ಲಿ ಮೊದಲಿಗರು, ‘ಮುದ್ದಣನ ಶಬ್ದ ಪ್ರತಿಭೆ’ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡಿದ್ದ ಸಂಶೋಧನಾ ಪ್ರಬಂಧ. ಎರಡು ಇತಿಹಾಸ ಸಮ್ಮೇಳನಗಳಿಗೆ ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರತಿಷ್ಠಿತ ಗೌರವಗಳಿಗೆ ಭಾಜನರಾಗಿದ್ದರು.  ವಿದ್ವತ್ತಿಗೆ ಸಂಬಂಧಿಸಿದಂತೆ ಎಲ್ಲ ವಯೋಮಾನದ ಲೇಖಕರೊಂದಿಗೆ ಆಪ್ತ ಸಂಬಂಧ ಇಟ್ಟುಕೊಂಡಿದ್ದರು.

ಹದಿನಾಲ್ಕು ವಿವಿಧ ಪ್ರಕಾರಗಳಿಗೆ ಅವರ ಬರಹಗಳು ವಿಸ್ತರಿಸಿವೆ.  ಸಣ್ಣ ಕತೆಗಳು, ಇತಿಹಾಸ ಸಂಶೋಧನೆ, ಸಾಮಾಜಿಕ ವಿಷಯಗಳು, ಕಾದಂ ಕಥನಗಳು, ಲಲಿತ ಪ್ರಬಂಧಗಳು, ಸಾಹಿತ್ಯಕ ವಿಶ್ಲೇಷಣೆ, ಕಂಪ್ಯೂಟರ್ ಕನ್ನಡ, ಸಂಶೋಧನಾ ಪ್ರಕ್ರಿಯೆ, ಪತ್ರಿಕೋದ್ಯಮ, ಗಣ್ಯವ್ಯಕ್ತಿಗಳು, ಧಾರ್ಮಿಕ ಹಾಗೂ ದಾಸ ಸಾಹಿತ್ಯ, ಕ್ರೈಸ್ತಸಾಹಿತ್ಯ, ಪುಸ್ತಕೋದ್ಯಮ, ಇಂಗ್ಲಿಷ್ ಬರಹಗಳು- ಹೀಗೆ ವಿಷಯ ವೈವಿಧ್ಯ ವಿಸ್ತಾರದ ಆಡುಂಬೊಲ ಅವರದು. ನಿಸ್ಸಂದೇಹವಾಗಿ ಹಾವನೂರರು ಕನ್ನಡದ ಅಪರೂಪದ ಸವ್ಯಸಾಚಿಗಳಾಗಿ ದೃಗ್ಗೋಚರವಾಗುತ್ತಾರೆ. 2010 ವರ್ಷದ ಏಪ್ರಿಲ್ 5ರಂದು ಶ್ರೀನಿವಾಸ ಹಾವನೂರರು ನಿಧನರಾದರು.  ಅವರು ತಮ್ಮ ಕಾರ್ಯದಿಂದ ಅಮರರು.  ಈ ಮಹಾನ್ ಚೇತನಕ್ಕೆ ನಮ್ಮ ನಮನಗಳು.       

ಆಧಾರ: ಪ್ರಜಾವಾಣಿಯಲ್ಲಿ ಪ್ರಕಟವಾದ  ಲಕ್ಷ್ಮಣ ಕೊಡಸೆ ಅವರ ಲೇಖನ
ಚಿತ್ರಕೃಪೆ: www.Kamat.com

On the birth anniversary of great scholar Srinivasa Havanur


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ