ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೆ. ಆರ್. ಲಕ್ಷ್ಮಣರಾವ್


 ಜೆ. ಆರ್. ಲಕ್ಷ್ಮಣರಾವ್


ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಬರೆದ ಮಹತ್ವದ ಲೇಖಕರಲ್ಲಿ ಜೆ. ಆರ್. ಲಕ್ಷಣರಾವ್ ಪ್ರಮುಖರು.

ಲಕ್ಷ್ಮಣರಾವ್‌ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ 1921ರ ಜನವರಿ 21 ರಂದು ಜನಿಸಿದರು. ತಂದೆ ರಾಘವೇಂದ್ರರಾವ್. ‌ ತಾಯಿ ನಾಗಮ್ಮ.  ಲಕ್ಷ್ಮಣರಾಯರ ಪ್ರಾರಂಭಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಾದ ಜಗಳೂರಿನಲ್ಲಿ ನಡೆಯಿತು. ಹೈಸ್ಕೂಲಿಗೆ ಸೇರಿದ್ದು ದಾವಣಗೆರೆಯಲ್ಲಿ. ಮೈಸೂರಿನ ಇಂಟರ್ ಮೀಡಿಯೆಟ್‌ ಕಾಲೇಜ್‌ (ಇಂದಿನ ಯುವರಾಜ ಕಾಲೇಜ್‌)ನಿಂದ ಇಂಟರ್ ಮೀಡಿಯೆಟ್‌ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ಎಂ.ಎಸ್ಸಿ ಪದವಿಗಳನ್ನು ಗಳಿಸಿದರು. ತುಮಕೂರಿನ ಇಂಟರ್ ಮೀಡಿಯೆಟ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ಬೆಂಗಳೂರಿನ ಸೆಂಟ್ರಲ್‌ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜು, ಯುವರಾಜ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮತ್ತು ವಿಶ್ವವಿದ್ಯಾಲಯದ ಪ್ರಸಾರಂಗದಿಂದ ಹೊರತಂದ ಇಂಗ್ಲಿಷ್‌ ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ಹೀಗೆ ವೈವಿಧ್ಯಮಯ  ಸೇವೆ ಸಲ್ಲಿಸಿದರು.

ಜೆ. ಆರ್. ಲಕ್ಷ್ಮಣರಾಯರು ವಿಜ್ಞಾನದ ಬೋಧನೆಯ ಜೊತೆಗೆ ವೈಜ್ಞಾನಿಕ ಲೇಖನಗಳನ್ನು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡು  ಬರೆದ ಮೊದಲ ಪುಸ್ತಕ ‘ಆಹಾರ’ (1944). ಎರಡನೆಯದು ಪರಮಾಣು ಚರಿತ್ರೆ (1949). ಹೀಗೆ ಬರವಣಿಗೆಯನ್ನು ಪ್ರಾರಂಭಿಸಿದ ಲಕ್ಷ್ಮಣರಾಯರು ರೂಢಿಸಿಕೊಂಡದ್ದು ಜನಸಾಮಾನ್ಯರಿಗೂ ಅರ್ಥವಾಗುವಂತಹ ಭಾಷೆ ಮತ್ತು ಶೈಲಿ. 

ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕೆಂಬ ದೃಷ್ಟಿಯಿಂದ ಪ್ರಾರಂಭವಾದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾಗಿ ಎಂಟುವರ್ಷಕಾಲ ಉಪಾಧ್ಯಕ್ಷರಾಗಿ, ಎರಡು ವರ್ಷಕಾಲ ಅಧ್ಯಕ್ಷರಾಗಿ ಮತ್ತು ವಿಜ್ಞಾನ ಪರಿಷತ್ತು ನಡೆಸುವ ವಾರ್ಷಿಕ ಜನಪ್ರಿಯ ವಿಜ್ಞಾನ ಲೇಖಕರ ಕಾರ್ಯ ಶಿಬಿರಗಳ ಸಂಘಟಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಅವರು ಅಮೂಲ್ಯ ಸೇವೆ ಸಲ್ಲಿಸಿದರು. 

ಮೈಸೂರು ವಿಶ್ವವಿದ್ಯಾಲಯದ ಪ್ರಬುದ್ಧ ಕರ್ನಾಟಕದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ (1969) ಹೊರತಂದ ವಿಜ್ಞಾನಾಂಕ ವಿಶೇಷ ಸಂಚಿಕೆಯ ಸಂಪಾದಕರಾಗಿ, ವಿಜ್ಞಾನ ಕರ್ನಾಟಕದ ತ್ರೈಮಾಸಿಕದ ಸಂಪಾದಕರಾಗಿ, ವಿಜ್ಞಾನ ಪರಿಷತ್ತು ನಡೆಸುತ್ತಿದ್ದ ಬಾಲವಿಜ್ಞಾನ ಮಾಸಪತ್ರಿಕೆಯ ಸಂಪಾದಕರಾಗಿ ಹತ್ತು ವರ್ಷಕಾಲ, ವಿಜ್ಞಾನ ಪರಿಷತ್ತು ಹೊರತಂದ ‘ಇಪ್ಪತ್ತು ವಿಜ್ಞಾನಿಗಳು’ ಸಂಕಲನಗಳ ಸಂಪಾದಕರಾಗಿ, ಇಂಗ್ಲಿಷ್‌ ಕನ್ನಡ ವಿಜ್ಞಾನ ಶಬ್ದಕೋಶದ ಸಂಪಾದಕರಲ್ಲೊಬ್ಬರಾಗಿ (ಕೃಷ್ಣಭಟ್ಟರೊಡನೆ) ಮತ್ತು ಮೈಸೂರು ವಿಶ್ವವಿದ್ಯಾಲಯದ ನಿಘಂಟು ಪರಿಷ್ಕರಣಾ ಯೋಜನೆಯಲ್ಲಿ ಹೀಗೆ ಲಕ್ಷ್ಮಣರಾಯರು ಅನೇಕ ರೀತಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು. 

ಜೆ.ಆರ್.ಲಕ್ಷ್ಮಣರಾವ್ ಅವರ ಜನಪ್ರಿಯ ವಿಜ್ಞಾನದ ಕುರಿತಾದ ಕೃತಿಗಳಲ್ಲಿ ಆಹಾರ, ಪರಮಾಣು ಚರಿತ್ರೆ, ಬೈಜಿಕ ವಿದ್ಯುತ್, ಲೂಯಿಪಾಸ್ತರ್, ವಿಜ್ಞಾನ ದೀಪಕರು ಎಂಬ ಕೃತಿಗಳಿವೆ. ವಿಜ್ಞಾನ, ವಿಚಾರ, ವಿಜ್ಞಾನಿಗಳೊಡನೆ ರಸನಿಮಿಷಗಳು, ಆಲೋಚನ, ಜನಸಾಮಾನ್ಯರಿಗೆ ಎಂಥ ವಿಜ್ಞಾನ ಬೇಕು?, ಚಕ್ರ, ವಿಜ್ಞಾನ ಚೋದ್ಯಗಳು, ಆಕಸ್ಮಿಕ ಆವಿಷ್ಕಾರ, ವೈಜ್ಞಾನಿಕತೆ, ಹಾರಾಡುವ ತಟ್ಟೆಗಳು ಮುಂತಾದ ಸಂಕಲನಗಳಿವೆ.  ಆರ್ಕಿಮೀಡೀಸ್ ಮತ್ತು ಗೆಲಿಲಿಯೊ ಮಕ್ಕಳಿಗಾಗಿ ಬರೆದದ್ದು. ಇತರರೊಡನೆ ಗೆಲಿಲಿಯೋ ಎಂಬ ನಾಟಕ ಬರೆದಿದ್ದಾರೆ. 'ನೆನಪಿನ ಅಲೆಗಳು' ಅವರ ಆತ್ಮಚರಿತ್ರೆ.  ಇಂದಿನ ವಿಜ್ಞಾನ ಮತ್ತು ನೀವು, ನಮ್ಮ ರೈಲ್ವೇಗಳು, ಜಗತ್ತನ್ನು ಬದಲಾಯಿಸಿದ ವೈಜ್ಞಾನಿಕ ಸಾಧನೆಗಳು; ಪರಮಾಣುಗಳು, ಭಾರತದ ಪರಮಾಣು ಯೋಜನೆ, ನಮ್ಮ ನೌಕಾಪಡೆ, ಎತ್ತಿನ ಗಾಡಿಗಳು ಮತ್ತು ಉಪಗ್ರಹಗಳು, ಮೇಘನಾದ್ ಸಹಾ, ವಿಜ್ಞಾನ ಮತ್ತು ತಂತ್ರಜ್ಞಾನ ಮುಂತಾದವು ಅನುವಾದಗಳು. ಕಾರ್ಲ್ ಮಾರ್ಕ್ಸ್ ಕುರಿತಾಗಿ ಪತ್ನಿ ಜೀವೂಭಾಯಿ ಅವರೊಡನೆ ಸೇರಿ ಅನುವಾದ ಮಾಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಸಂದರ್ಭದಲ್ಲಿ ಸನ್ಮಾನ, ದಿಲ್ಲಿ ಹಿಂದಿ ಸಮ್ಮೇಳನದಿಂದ ವಿಜ್ಞಾನ ಸರಸ್ವತಿ ಪ್ರಶಸ್ತಿ, ಮೂಡಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದಿಂದ ಶಿವರಾಮ ಕಾರಂತ ಪ್ರಶಸ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಲಿಯ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯಿಂದ 4 ಬಾರಿ ಪ್ರಶಸ್ತಿ, ಎನ್‌.ಸಿ.ಇ.ಆರ್.ಟಿ ಮತ್ತು ಮದರಾಸು ವಿಶ್ವವಿದ್ಯಾಲಯದಿಂದ ಪುರಸ್ಕಾರ, ಕರ್ನಾಟಕ ರಾಜ್ಯೋತ್ವವ ಪ್ರಶಸ್ತಿ  ಮುಂತಾದವು ಲಕ್ಷ್ಮಣರಾಯರಿಗೆ ಸಂದ ಪ್ರಮುಖ ಪ್ರಶಸ್ತಿ ಗೌರವಗಳು.

ಜೆ. ಆರ್. ಲಕ್ಷ್ಮಣರಾವ್ ಅವರು 2017ರ ಡಿಸೆಂಬರ್ 29 ರಂದು ನಿಧನರಾದರು.

J. R. Lakshman Rao, Prof J.R. Lakshmana Rao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ