ಚಾರುಹಾಸನ್
ಚಾರುಹಾಸನ್
ಚಾರುಹಾಸನ್ ಚಲನಚಿತ್ರ ಮತ್ತು ಕಿರುತೆರೆಯ ನಟರಾಗಿ ಹೆಸರಾದವರು. ಕನ್ನಡದಲ್ಲಿ ನಟಿಸಿ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ಗಳಿಸಿದವರು.
ಚಾರುಹಾಸನ್ 1931ರ ಜನವರಿ 5ರಂದು ತಮಿಳುನಾಡಿನ ಪರಮಕುಡಿ ಎಂಬಲ್ಲಿ ಜನಿಸಿದರು. ಇವರ ತಂದೆ ಡಿ. ಶ್ರೀನಿವಾಸನ್ ವಕೀಲರಾಗಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ಹೆಸರಾಗಿದ್ದರು. ತಾಯಿ ರಾಜಲಕ್ಷ್ಮಿ. ಈ ದಂಪತಿಗಳ ಹಿರಿಯ ಪುತ್ರರಾದ ಚಾರುಹಾಸನ್ ಅವರು ತಮ್ಮ ಕಿರಿಯ ಸಹೋದರ ಪ್ರಸಿದ್ಧ ನಟ ಕಮಲಹಾಸನ್ ಅವರಿಗಿಂತ 24 ವರ್ಷ ದೊಡ್ಡವರು.
ಚಾರುಹಾಸನ್ ಅವರಿಗೆ ಚಿಕ್ಕವಯಸ್ಸಿನಲ್ಲಿ ಅಪಘಾತ ಉಂಟಾದ ಕಾರಣ, ಎಲ್ಲ ಮಕ್ಕಳಂತೆ ಪ್ರಾಥಮಿಕ ಶಾಲೆಗೆ ಹೋಗಲಾಗದೆ ಮನೆಯಲ್ಲೇ ಉಪಾಧ್ಯಾಯರೊಬ್ಬರಿಂದ ಶಿಕ್ಷಣ ಪಡೆದರು. ಮುಂದೆ 9ನೇ ವಯಸ್ಸಿನಲ್ಲಿ ನೇರ 5ನೇ ತರಗತಿಗೆ ಪ್ರವೇಶ ಪಡೆದರು. ಬೆಳಗಾವಿಯ ರಾಜಾ ಲಕಮನಗೌಡ ಕಾನೂನು ಕಾಲೇಜಿನಿಂದ 1951ರಲ್ಲಿ ಕಾನೂನು ಪದವೀಧರರಾದರು.
ಚಾರುಹಾಸನ್ ಅವರು 1951ರಿಂದ 1981ರವರೆಗೆ ವಕೀಲಿ ವೃತ್ತಿ ನಡೆಸಿ ಅನೇಕ ಪ್ರಸಿದ್ಧ ವ್ಯಾಜ್ಯಗಳ ವಕಾಲತ್ತು ನಿರ್ವಹಿಸಿದವರಾಗಿದ್ದರು. ಪೆರಿಯಾರ್ ರಾಮಸ್ವಾಮಿ ಅವರ ತತ್ವಗಳಿಂದ ಪ್ರಭಾವಿತರಾಗಿ ಸ್ವಯಂ ಪೆರಿಯಾರ್ ಅವರಿಂದ ತಮ್ಮ ಶಿಷ್ಯ ಎಂದು ಕರೆಸಿಕೊಳ್ಳುತ್ತಿದ್ದರು. ಕೋಮಲಮ್ ಅವರನ್ನು ವರಿಸಿರುವ ಚಾರುಹಾಸನ್ ಅವರಿಗೆ ಸುಹಾಸಿನಿ ಮಣಿರತ್ನಂ ಅವರಲ್ಲದೆ ನಂದಿನಿ ಮತ್ತು ಸುಭಾಷಿಣಿ ಎಂಬ ಪುತ್ರಿಯರಿದ್ದಾರೆ.
ಚಾರುಹಾಸನ್ ಅವರಿಗೆ ಬಾಲ್ಯದಿಂದಲೂ ಚಲನಚಿತ್ರಗಳಲ್ಲಿ ಆಸಕ್ತಿಯಿತ್ತು. 1940ರ ದಶಕದಲ್ಲಿ ಅವರು ದಿನಕ್ಕೆರಡು ಇಂಗ್ಲಿಷ್ ಸಿನಿಮಾ ನೋಡುತ್ತಿದ್ದರಂತೆ. ತಮ್ಮ ಕಿರಿಯ ಸಹೋದರ ಕಮಲಹಾಸನ್ ನಟನಾದಾಗ ಚಾರುಹಾಸನ್ ಅವರ ಪೋಷಣೆಯನ್ನು ನಿರ್ವಹಿಸಿದರು.
ಚಾರುಹಾಸನ್ 1979ರಲ್ಲಿ 'ಉದಿರಿಪೂಕ್ಕಳ್' ಎಂಬ ಮಹೇಂದ್ರನ್ ನಿರ್ದೇಶನದ ಚಿತ್ರದಲ್ಲಿ ಮೊದಲು ನಟಿಸಿದರು. ಮುಂದೆ ಅವರು ಪೋಷಕ ಅಥವಾ ಖಳಪಾತ್ರಗಳ ಸುಮಾರು 120 ಚಿತ್ರಗಳಲ್ಲಿ ನಟಿಸಿದರು. ತಮಿಳಿನ 'ವೇದಂ ಪುದಿದು', 'ದಳಪತಿ'; ಕನ್ನಡದ 'ತಬರನ ಕಥೆ', 'ಕುಬಿ ಮತ್ತು ಇಯಾಲ' ಅವರ ಹೆಸರಾದ ಚಿತ್ರಗಳು. ಚಾರುಹಾಸನ್ 'ಐಪಿಸಿ 215’ ಮತ್ತು 'ಪುದಿಯ ಸಂಗಮಂ' ಚಿತ್ರಗಳನ್ನು ನಿರ್ದೇಶಿಸಿದರು.
ಚಾರುಹಾಸನ್ ಅವರಿಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ 'ತಬರನ ಕಥೆ' ಚಿತ್ರದ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಶ್ರೇಷ್ಠ ನಟ ಪುರಸ್ಕಾರ ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಶ್ರೇಷ್ಠ ನಟ ಪ್ರಶಸ್ತಿ ಸಂದಿತು. ಇದಲ್ಲದೆ ಮತ್ರೊಂದು ಕನ್ನಡ ಚಿತ್ರ 'ಕುಬಿ ಮತ್ತು ಇಯಾಲ' ನಟನೆಗೆ ಫಿಲಂಫೇರ್ ಪ್ರಶಸ್ತಿ ಸಂದಿತು.
ಚಾರುಹಾಸನ್ ಅವರು ಕನ್ನಡ, ತಮಿಳು ಮಾತ್ರವಲ್ಲದೆ ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ; 'ಚಿತ್ತಿ' ಮತ್ತು 'ಆನಂದಂ' ಎಂಬ ಕಿರುತೆರೆಯ ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು.
'ಥಿಂಕಿಂಗ್ ಆನ್ ಮೈ ಫೀಟ್' ಎಂಬುದು ಚಾರುಹಾಸನ್ ಅವರ ಪ್ರಕಟಿತ ಆತ್ಮಚರಿತ್ರೆ.
ಹಿರಿಯರಾದ ಚಾರುಹಾಸನ್ ಅವರಿಗೆ ಜನ್ಮದಿನದ ಶುಭಹಾರೈಕೆಗಳು.
On the birthday of actor Charuhasan
ಕಾಮೆಂಟ್‌ಗಳು