ಮಾಲಿನಿ ಪಿ. ರಾವ್
ಮಾಲಿನಿ ಪಿ. ರಾವ್
ಮಾಲಿನಿ ಪಿ. ರಾವ್ ಅವರು ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಕಲಾವಿದೆಯಾಗಿ ಹೆಸರಾಗಿದ್ದಾರೆ.
ಜನವರಿ 4, ಮಾಲಿನಿ ಅವರ ಜನ್ಮದಿನ. ಇವರು ಬೆಂಗಳೂರಿನವರು. ಇವರ ತಂದೆ ಮಾಧವರಾವ್ ಅವರು 'ನಾಟಕ ಶಿರೋಮಣಿ ವರದಾಚಾರ್' ಅವರ ಕಂಪನಿಯಲ್ಲಿ ಕಲಾವಿದರಾಗಿದ್ದರು. ತಾಯಿ ಜಯಮ್ಮ. ಮಾಲಿನಿ ಅವರು ಶೈಕ್ಷಣಿಕವಾಗಿ ಎಲೆಕ್ಟ್ರಾನಿಕ್ಸ್ ಡಿಪ್ಲೋಮಾ ಓದಿದರು.
ಮಾಲಿನಿ ಅವರು ಮಗುವಾಗಿದ್ದಾಗಲೇ ಅಪ್ಪನ ಅಭಿನಯ, ಹಾಡುಗಾರಿಕೆಗಳನ್ನು ನೋಡುತ್ತಾ ಕೇಳುತ್ತಾ ಬೆಳೆದರು. ಎರಡು ವರ್ಷದ ಮಗುವಿನಿಂದ ರಂಗಭೂಮಿಯ ನಂಟು ಮೂಡಿತು. ತಮ್ಮ ತಂದೆಯವರು ನಡೆಸುತ್ತಿದ್ದ “ಶ್ರೀ ಯಾಜ್ಜವಲ್ಕ್ಯ ಯುವಕ ಸಂಘ" ಸಂಘದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಕೊಡುತ್ತಾ ಬೆಳೆದರು. ಅಮ್ಮನ ಪ್ರೋತ್ಸಾಹದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಗಾಯನ ಮತ್ತು ಕೊಳಲು ವಾದನಗಳಲ್ಲಿ ಸಾಧನೆ ಮಾಡಿ ಸೀನಿಯರ್ಸ್ ಪರೀಕ್ಷೆಗಳಲ್ಲಿ ಉತ್ತೀರ್ಣತೆ ಸಾಧಿಸಿದರು.
ಮಾಲಿನಿ ಅವರು ಏಳನೇ ತರಗತಿಯಲ್ಲಿ ಓದುವಗಲೇ 'ಸಾಕ್ರಟೀಸ್', ಹತ್ತನೆ ತರಗತಿಯಲ್ಲಿ ಓದುವಾಗ 'ಬೆಳಕು ಮೊಡುವ ಮುನ್ನ', 'ದಿವ್ಯ ದರ್ಶನ' ನಾಟಕಗಳಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ್ದರು. ಮುಂದೆ ಮೈಕೋ ಲಲಿತಾ ಕಲಾಸಂಘದಿಂದ "ಕತ್ತಲಿನಿಂದ ಬೆಳಕಿನಡೆಗೆ” ನಾಟಕಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದರು. ಮುಂದೇನು, ಅಲೆಗ್ಸಾಂಡರ್ - ಪುರೂರವ, ಕೆಂಪೇಗೌಡ, ಭಗವದ್ ಅಜುಕೀಯ, ಸಿರಿಸಂಪಿಗೆ, ಕಿಂಗ್ ಲಿಯರ್, ಮರೆವಿನ ಮಹಾಪುರುಷ, ಕೃಷ್ಣ ರುಕ್ಮೀಣಿ ಸತ್ಯಭಾಮ, ಭೂತ, ದೊರೆ ಹೇಮಚಂದ್ರ ಮುಂತಾದ ಅನೇಕ ನಾಟಕಗಳಲ್ಲಿ ಇವರು ಅಭಿನಯಿಸಿದ್ದಾರೆ. ಸಾಕಷ್ಟು ನಾಟಕಗಳನ್ನು ಮಕ್ಕಳಿಗಾಗಿ ಬರೆದು ನಿರ್ದೇಶಿಸಿದ್ದಾರೆ.
ಮಾಲಿನಿ ಅವರು 'ಸಿರಿಸಂಪಿಗೆ' ನಾಟಕದಲ್ಲಿ ಅಭಿನಯಿಸುವಾಗ ಸಂಧಿಸಿದ ಪ್ರಸನ್ನರಾವ್ ಅವರ ಬಾಳಸಂಗಾತಿಯಾಗಿದ್ದಾರೆ. ಸ್ವತಃ ಕಲಾವಿದರಾದ ಪ್ರಸನ್ನರಾವ್ ಅವರ ಪ್ರೋತ್ಸಾಹ ಮಾಲಿನಿ ಅವರ ಕಲಾಪಯಣದಲ್ಲಿ ದೊಡ್ಡ ಪಾತ್ರ ನಿರ್ವಹಿಸಿದೆ.
ಮಾಲಿನಿ ಅವರು ಎಳೆಯ ವಯಸ್ಸಿನಲ್ಲೇ ಕ್ಯಾಮೆರಾ ಎದುರಿಸಿದ್ದರು. ಮುಂದೆ ಹತ್ತನೆ ತರಗತಿಯಲ್ಲಿದ್ದಾಗ ದೊಡ್ಡಮನೆ ರಾಘವೇಂದ್ರ ನಿರ್ದೇಶನದಲ್ಲಿ 'ದೊಡ್ಡಮನೆ" ಎನ್ನುವ ಧಾರವಾಹಿಯಲ್ಲಿ ಅಭಿನಯಿಸಿದರು. ಅಮರದೇವ ಅವರ 'ನಿರಂತರ'ದಲ್ಲಿ 'ಸೆರೆಮನೆಗಳು' ಎನ್ನುವ ಒಂದು ಕಂತಿನಲ್ಲಿ ಉಪಾಸನೆ ಸೀತಾರಾಂ, ಮಂಜುಳಾರಾವ್, ಶ್ರೀಶೈಲ, ಕರಿಬಸವಯ್ಯ ಮುಂತಾದ ಕಲಾವಿದರೊಂದಿಗೆ ಕೊಳಲುವಾದಕಿ, ಕಾಲೇಜು ಹುಡುಗಿಯಾಗಿ, ನಾಯಕಿಯಾಗಿ ಅಭಿನಯಿಸಿದ್ದರು.
ಮಾಲಿನಿ - ಪ್ರಸನ್ನರಾವ್ ದಂಪತಿಯ ಸುಪುತ್ರ ನಿನಾದ ಅವರು ಸಹ ಒಳ್ಳೆಯ ಕಲಾವಿದರಾಗಿ ಸಾಧನೆ ಮಾಡಿ ಹೆಸರಾಗಿದ್ದಾರೆ.
ಮಾಲಿನಿ ಅವರು ಫಣಿ ರಾಮಚಂದ್ರರ 'ಸಾಹಸ ಲಕ್ಷ್ಮಿಯರು', ಟಿ. ಎನ್. ಸೀತಾರಾಮ್ ಅವರ 'ಮುಕ್ತಾ' ಅಲ್ಲದೆ, ದೊಡ್ಡಮನೆ, ಬಣ್ಣ, ಪರೀಕ್ಷೆ, ಮಳೆಬಿಲ್ಲು, ನಿರೀಕ್ಷೆ, ಕುಬೇರಪ್ಪ ಆ್ಯಂಡ್ ಸನ್ಸ್, ಬದುಕು, ಪ್ಯಾಮಿಲಿ ನಂ. 1, ಬಿದಿಗೆ ಚಂದ್ರಮ, ಕವಲುದಾರಿ, ಪರಂಪರೆ, ಕೋಗಿಲೆ, ಟೈಮ್ ಪಾಸ್ ತೆನಾಲಿ, ಶಾಂತಂ ಪಾಪಂ, ಕನ್ನಡತಿ, ಸುಂದರಿ, ಪತ್ತೇದಾರಿ ಪ್ರತಿಭಾ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಹಾಗೂ, ಸಾಕಷ್ಟು ಕಿರು ಚಿತ್ರ, ಸಾಕ್ಷ್ಯ ಚಿತ್ರ ಹಾಗೂ ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. 'ತ್ರಿನಯನಿ' ಧಾರಾವಾಹಿಯಲ್ಲಿ ಕಂಠದಾನ ಕಲಾವಿದೆಯಾಗಿದ್ದಾರೆ. ಸಣ್ಣಸತ್ಯ, 1098-ಸೇವ್ ಚೈಲ್ಡ್, ಸೆಕೆಂಡ್ ಹಾಫ್, ಪ್ರಯಾಣಿಕರ ಗಮನಕ್ಕೆ, ಯಾದೇವಿ ಭೂತೆಷು ಇವರ ಅಭಿನಯದ ಚಿತ್ರಗಳಲ್ಲಿ ಸೇರಿವೆ.
ಮಾಲಿನಿ ಅವರು ಶ್ರೀ ನಿನಾದ ಕಲಾಸಂಗಮ ಎಂಬ ಕಲಾ ಸಂಸ್ಥೆಯ ಮೂಲಕ ಅನೇಕರಿಗೆ ರಂಗತರಬೇತಿ ಮತ್ತು ಗಾಯನ ತರಬೇತಿ ಸಹ ನೀಡುತ್ತಿದ್ದಾರೆ. ದುಬೈನಲ್ಲಿ ಸಹಾ ಬೇಸಿಗೆ ಶಿಬಿರಗಳನ್ನು ನಡೆಸಿದ್ದಾರೆ.
ಮಾಲಿನಿ ಅವರಿಗೆ ಕನ್ನಡ ನಾಡಿನ ಸಂಸ್ಥೆಗಳಿಂದ ಮಾತ್ರವಲ್ಲದೆ, ದುಬೈ, ಅಬುದಾಬಿ ಮತ್ತು ಶಾರ್ಜಾ ನಗರಗಳಲ್ಲಿ ಸಹಾ ಗೌರವ ಸಂದಿದೆ.
ಕಲಾವಿದೆ ಮಾಲಿನಿ ಪಿ. ರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Malini P Rao
ಕಾಮೆಂಟ್‌ಗಳು