ಕವಿತಾ ಕೃಷ್ಣಮೂರ್ತಿ
ಕವಿತಾ ಕೃಷ್ಣಮೂರ್ತಿ
ಪ್ರಸಿದ್ಧ ಹಿನ್ನೆಲೆಗಾಯಕಿ ಕವಿತಾ ಕೃಷ್ಣಮೂರ್ತಿ 1958ರ ಜನವರಿ 25ರಂದು ಜನಿಸಿದರು.
ಕನ್ನಡವೂ ಸೇರಿದಂತೆ 14 ಭಾಷೆಗಳಲ್ಲಿ ಚಿತ್ರಗೀತೆಗಳನ್ನು ಹಾಡಿರುವ ಕವಿತಾ ಗಝಲ್, ಪಾಪ್ ಮತ್ತು ಭಕ್ತಿಗೀತೆಗಳಲ್ಲೂ ವೈವಿಧ್ಯತೆ ಮೆರೆದಿದ್ದಾರೆ. ಇವರ ಮೂಲ ಹೆಸರು ಶಾರದಾ ಕೃಷ್ಣಮೂರ್ತಿ. ಅವರ ತಂದೆ ಟಿ. ಎಸ್. ಕೃಷ್ಣಮೂರ್ತಿ ಸಂಗೀತಪ್ರೇಮಿ. ತಾಯಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲಾವಿದೆ. ಈ ಪರಿಸರವೇ ಅವರನ್ನು ಚಲನಚಿತ್ರ ಹಿನ್ನೆಲೆ ಗಾಯನದತ್ತ ಸೆಳೆಯಿತು. ಬಾಲಕಿಯಾಗಿದ್ದಾಗಲೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ತಾಲೀಮು ನಡೆಸಿ, 1971ರಲ್ಲಿ ಬಂಗಾಲಿ ಚಿತ್ರವೊಂದರಲ್ಲಿ ಲತಾ ಮಂಗೇಷ್ಕರ್ ಅವರಿಗೆ ಜೊತೆಯಾಗಿ ಧ್ವನಿಗೂಡಿಸಿದ್ದರು. ಮುಂದೆ ಸಂಗೀತ ನಿರ್ದೇಶಕರಾದ ಹೇಮಂತ ಕುಮಾರ್, ಲಕ್ಷ್ಮೀಕಾಂತ್- ಪ್ಯಾರೇಲಾಲ್, ಆರ್.ಡಿ.ಬರ್ಮನ್, ಮನ್ನಾಡೆ ಮುಂತಾದವರ ಪ್ರೋತ್ಸಾಹದೊಂದಿಗೆ ಕ್ರಮೇಣವಾಗಿ ಮೇಲಮೇಲಕ್ಕೇರಿದರು. 1978ರ ಅವಧಿಯಲ್ಲಿ ಬಂದ ಅಂತರರಾಷ್ಟ್ರೀಯ ಪ್ರಖ್ಯಾತಿಯ ಕನ್ನಡ ಚಿತ್ರವಾದ ‘ಒಂದಾನೊಂದು ಕಾಲದಲ್ಲಿ’ ಚಿತ್ರದಲ್ಲಿ ‘ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ’ ಗೀತೆಯನ್ನು ಹಾಡಿದವರು ಕವಿತಾ ಕೃಷ್ಣಮೂರ್ತಿ.
1985ರ ವರ್ಷದಲ್ಲಿ ‘ಪ್ಯಾರ್ ಜುಕ್ತಾ ನಹಿ’ ಚಿತ್ರದ ‘ತುಮ್ಸೆ ಮಿಲ್‌ಕರ್ ನ ಜಾನೆ ಕ್ಯೋಂ’ (1985) ಹಾಡು ಕವಿತಾ ಕೃಷ್ಣಮೂರ್ತಿಯವರ ಗಾಯನ ಬದುಕಿಗೆ ವಿಶೇಷ ಬೆಳಕು ಚೆಲ್ಲಿತು. ‘ಪ್ಯಾರ್ ಹುವಾ ಚುಪ್ಕೆ ಸೆ...(ಎ ಲವ್ ಸ್ಟೋರಿ 1947), ‘ಐ ಲವ್ ಮೈ ಇಂಡಿಯಾ...’ (ಪರದೇಶ್), ‘ಡೋಲಾ ರೆ ಡೋಲಾ ರೆ ...(ದೇವದಾಸ್)’ ಮುಂತಾದ ಹಾಡುಗಳು ಅವರಿಗೆ ಅಪಾರ ಜನಪ್ರಿಯತೆಯ ಜೊತೆಗೆ ಅವಕಾಶಗಳ ಬಾಗಿಲನ್ನೇ ತೆರೆದವು. ‘ಎಚ್2ಒ’ ಕನ್ನಡ ಚಿತ್ರದಲ್ಲಿನ ‘ಹೂವೆ ಹೂವೆ ನಿನ್ನೀ ನಗುವಿನ ಕಾರಣವೇನೆ, ಸೂರ್ಯನ ನಿಯಮಾನೆ, ಚಂದ್ರನ ನೆನಪೇನೆ.’ ಹಾಡು ಕನ್ನಡಿಗರ ಹೃದಯ ಗೆದ್ದಿತು.
ಕವಿತಾ ವಿವಿಧ ಭಾಷೆಗಳ ಚಿತ್ರಗಳಲ್ಲಿ ಹಾಡುವುದರ ಜೊತೆಗೆ ದೇಶ-ವಿದೇಶಗಳಲ್ಲಿ ವೈವಿಧ್ಯಪೂರ್ಣ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಫ್ಯೂಷನ್, ಪಾಪ್, ಗಝಲ್, ಭಕ್ತಿ ಸಂಗೀತ ಹೀಗೆ ಎಲ್ಲ ರೀತಿಯ ಸಂಗೀತದಲ್ಲೂ ಕವಿತಾ ಅವರ ಸಂಗೀತ ಕಛೇರಿಗಳು ಮತ್ತು ಸಂಗೀತದ ಆಲ್ಬಂಗಳು ಪ್ರಸಿದ್ಧಿ ಪಡೆದಿವೆ. 1994,1995, 1996ರ ವರ್ಷದಲ್ಲಿ ಮೂರು ಬಾರಿ ಸತತವಾಗಿ ಅವರಿಗೆ ಫಿಲಂ ಫೇರ್ ಪ್ರಶಸ್ತಿಗಳು ಸಂದವು. ಇಂತಹ ಹಲವಾರು ಪ್ರಶಸ್ತಿಗಳಲ್ಲದೆ ಅವರಿಗೆ 2006ರ ವರ್ಷದಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದೆ.
ಕವಿತಾ ಕೃಷ್ಣಮೂರ್ತಿಯವರ ಪತಿ ಎಲ್. ಸುಬ್ರಮಣಿಯನ್ ಪ್ರಸಿದ್ಧ ವಯೋಲಿನ್ ವಾದಕರು. ಈ ದಂಪತಿಗಳು ಬೆಂಗಳೂರಿನಲ್ಲಿ ಉನ್ನತಮಟ್ಟದ ‘ಸಂಗೀತ ಶಾಲೆ’ಯನ್ನು ನಡೆಸುತ್ತಿದ್ದಾರೆ. ಈ ಶಾಲೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ, ಶಾಸ್ತ್ರೀಯ ನೃತ್ಯ ಸಂಗೀತ ಕಥೆಯಾಧಾರಿತ ಸಿನಿಮಾ ನಿರ್ಮಿಸುವ ಮತ್ತು ಭಾರತಕ್ಕೇ ಅಪರೂಪವೆನ್ನಬಹುದಾದ ‘ಮ್ಯೂಸಿಕ್ ಲೈಬ್ರರಿ’ ಮಾಡುವ ಮಹತ್ವದ ಉದ್ದೇಶಗಳು ಕವಿತಾ ಕೃಷ್ಣಮೂರ್ತಿ ಅವರಿಗಿವೆ.
ಸುಶ್ರಾವ್ಯಗಾಯಕಿ ಕವಿತಾ ಕೃಷ್ಣಮೂರ್ತಿಯವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.
On the birthday of melodious playback singer Kavitha Krishnamurthy
ಕಾಮೆಂಟ್‌ಗಳು