ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಮಾಬಾಯಿ ರಾನಡೆ


ರಮಾಬಾಯಿ ರಾನಡೆ


ಭಾರತೀಯ ಸಮಾಜದ ಮೊದ ಮೊದಲ ಮಹಿಳಾ ಹಕ್ಕುಗಳ ಹೋರಾಟಗಾರರು ಮತ್ತು ಸಮಾಜ ಸುಧಾರಕರಲ್ಲಿ ರಮಾಬಾಯಿ ರಾನಡೆ ಪ್ರಮುಖರು.

ರಮಾಬಾಯಿ ರಾನಡೆ ಅವರು 1862ರ ಜನವರಿ 25ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ದೇವರಾಷ್ಟ್ರೆ ಎಂಬಲ್ಲಿ ಜನಿಸಿದರು. ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಯಲು ಸಾಧ್ಯವಿಲ್ಲದ ಆ ಕಾಲದಲ್ಲಿ ರಮಾಬಾಯಿಯವರಿಗೆ ಹನ್ನೊಂದನೆಯ ವಯಸ್ಸಿನಲ್ಲಿದ್ದಾಗ ಜಸ್ಟಿಸ್ ಮಹಾದೇವ ಗೋವಿಂದ ರಾನಡೆ ಅವರೊಂದಿಗೆ ವಿವಾಹವಾಯಿತು.  ರಾನಡೆ ಅವರು ಭಾರತದ ಪ್ರಮುಖ ಸಮಾಜ ಸುಧಾಕರಲ್ಲೊಬ್ಬರು.

ಮಹಾದೇವ ಗೋವಿಂದ ರಾನಡೆ ಅವರು ಹೆಂಡತಿಗೆ ಅಕ್ಷರಾಭ್ಯಾಸ ಮಾಡಿಸಿದರು. ರಮಾಬಾಯಿ ಮರಾಠಿ ಭಾಷೆಯ ಜೊತೆಗೆ ಕಷ್ಟಪಟ್ಟು ಇಂಗ್ಲಿಷ್ ಮತ್ತು ಬಂಗಾಳಿ ಭಾಷೆಯನ್ನೂ ಅಭ್ಯಾಸ ಮಾಡಿದರು. ಪತಿಯ ಮಾರ್ಗದರ್ಶನದಲ್ಲಿ ಮರಾಠಿ ಸಾಹಿತ್ಯ, ಇತಿಹಾಸ, ಭೂಗೋಳ ಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್‍ನಲ್ಲಿ ಪರಿಣತರಾದರು. 

ರಮಾಬಾಯಿ ಅವರು ಮುಂದೆ ಆರ್ಯ ಮಹಿಳಾ ಸಮಾಜವನ್ನು ಸ್ಥಾಪಿಸಿದರು. ಮುಂಬೈನಲ್ಲಿ ಮೊದಲ ಹಿಂದೂ ಲೇಡೀಸ್ ಕ್ಲಬ್ ಸ್ಥಾಪಿಸಿ, ಅಲ್ಲಿ ಮಹಿಳೆಯರಿಗೆ ಶಿಕ್ಷಣ, ಟೈಲರಿಂಗ್ ತರಬೇತಿ ನೀಡಿದರು. ಮುಂಬೈ ಮತ್ತು ಪುಣೆಯಲ್ಲಿ ಸೇವಾ ಸದನವನ್ನು ಸ್ಥಾಪಿಸಿದರು. ಪುಣೆಯಲ್ಲಿ ಬಾಲಕಿಯರ ಶಾಲೆ ತೆರೆದು ಬಾಲಕಿಯರಿಗೆ ಅಕ್ಷರಾಭ್ಯಾಸ ಮಾಡಿಸಿದರು. 1886ರಲ್ಲಿ ತಮ್ನ ಪತಿ ಮತ್ತು ಇತರ ಸಮಾನ ಮನಸ್ಕರ ಬೆಂಬಲದೊಂದಿಗೆ ಪುಣೆಯಲ್ಲಿ ಭಾರತದ ಪ್ರಪ್ರಥಮ ಹೆಣ್ಣುಮಕ್ಕಳ ಹೈಸ್ಕೂಲಾದ 'ಹುಜುರ್ಪಾಗ' ಶಾಲೆಯನ್ನು ಆರಂಭಿಸಿದರು.

ರಮಾಬಾಯಿ ಅವರು 1901ರಲ್ಲಿ ಪತಿ ತೀರಿಕೊಂಡಾಗ, ಹೆಣ್ಣುಮಕ್ಕಳಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟರು. ವಿಧವೆಯರನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಿ, ಅವರಿಗೂ ಅಕ್ಷರಾಭ್ಯಾಸ ಮಾಡಿಸಿದರು. ಅವರು ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡಲು ವಿವಿಧ ತರಬೇತಿಗಳನ್ನೂ ಕೊಡಿಸಿದರು. 

1924ರ ಜನವರಿ 25ರಂದು ತಮ್ಮ 61ನೇ ವಯಸ್ಸಿನಲ್ಲಿ ನಿಧನರಾದ ರಮಾಬಾಯಿ ರಾನಡೆ ಅವರು ಕೊನೆತನಕ ಮಹಿಳೆಯರ ಹಿತಕ್ಕಾಗಿ ಕ್ರಿಯಾಶೀಲರಾಗಿ ದುಡಿದರು. ಈ ಮಹಾನ್ ಚೇತನಕ್ಕೆ ಸಾಷ್ಟಾಂಗ ನಮನ.

On the birth anniversary of Ramabai Ranade, an Indian social worker and one of the first women's rights activist




 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ