ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಲ್ಪನಾ ಚಾವ್ಲಾ


 ಕಲ್ಪನಾ ಚಾವ್ಲಾ


ಬಾಹ್ಯಾಕಾಶ ವಿಜ್ಞಾನ ಲೋಕದ ತಾರೆಯರಲ್ಲಿ ಕಲ್ಲನಾ ಚಾವ್ಲಾ ಹೆಸರು ಸದಾ ಪ್ರಕಾಶಿಸುವಂತದ್ದು.  ಇಂದು ಅವರು ಈ ಲೋಕದಿಂದ ಕಣ್ಮರೆಯಾದ ದಿನ.

2003ರ ಫೆಬ್ರವರಿ 1ರಂದು ಕೊಲಂಬಿಯಾ ಆಕಾಶನೌಕೆ ತನ್ನ ಗಗನಯಾತ್ರೆ ಮುಗಿಸಿ ಭೂಮಿಗೆ ಮರಳುವಾಗ ತಾಂತ್ರಿಕ ದೋಷದಿಂದಾಗಿ ಅದರಲ್ಲಿದ್ದ ಏಳೂ ಜನ ಗಗನಯಾತ್ರಿಗಳೂ ತಮ್ಮ ಜೀವವನ್ನು ಕಳೆದುಕೊಂಡರು.  ಅದರಲ್ಲಿ ಭಾರತದ ಅಪ್ರತಿಮ ಪ್ರತಿಭಾನ್ವಿತೆಯಾದ ಕಲ್ಪನಾ ಚಾವ್ಲಾ ಕೂಡಾ ಒಬ್ಬರಾಗಿದ್ದರು.

ಕಲ್ಪನಾ ಚಾವ್ಲಾ ಅವರು 1961ರ ಜುಲೈ 1ರಂದು ಜನಿಸಿದರು. ಹರಿಯಾಣಾದ ಕರ್ನಾಲ್ ಪಟ್ಟಣದಲ್ಲಿ ಜನಿಸಿದ ಕಲ್ಪನಾ ಚಾವ್ಲಾ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು ಅಮೆರಿಕದಲ್ಲಿ ಎರಡು  ಸ್ನಾತಕೋತ್ತರ ಪದವಿ   ಮತ್ತು ಪಿಎಚ್.ಡಿ ಪದವಿಗಳನ್ನು  ಪಡೆದರು.  ಮುಂದೆ ಕಲ್ಪನಾ ಚಾವ್ಲಾ  ನಾಸಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವದ ಕಾರ್ಯಸಾಧಕಿಯಾದರು.  ಅಮೆರಿಕದ ಪ್ರಜೆ ಜಾನ್ ಪಿಯರೆ ಹ್ಯಾರಿಸನ್ ಅವರನ್ನು ವರಿಸಿದರು.

ಮೊದಲು ನಾಸಾದ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಲ್ಪನಾ ಚಾವ್ಲಾ 1995ರಲ್ಲಿ ನಾಸಾದ  ಬಾಹ್ಯಾಕಾಶ ಸಂಶೋಧನಾ ಕೆಂದ್ರಕ್ಕೆ ಬಂದು  ಬಹುಬೇಗ ತಮ್ಮ ಸಾಮರ್ಥ್ಯಕ್ಕೆ ಹೆಸರಾದರು.  1996ರಲ್ಲಿ  ಮೊದಲ ಬಾಹ್ಯಾಕಾಶ ಯಾನಕ್ಕೆ ಆಯ್ಕೆಯಾದ ಕಲ್ಪನಾ ಅವರು ಕ್ರಮಿಸಿದ ಯಾನ 10.4 ಮಿಲಿಯನ್ ಕಿಲೋ ಮೀಟರುಗಳಷ್ಟು ವ್ಯಾಪ್ತಿಯದು.   ಅವರು  ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಬಹಳಷ್ಟು ಯೋಜನೆಗಳ ಪಾತ್ರಧಾರಿಯೂ ಆದರು.  

ಕಲ್ಪನಾ ಚಾವ್ಲಾ ಅವರ ಗೌರವಾರ್ಥ ಅನೇಕ ಬಾಹ್ಯಾಕಾಶ ಯೋಜನೆ, ಉಪಗ್ರಹ, ರಸ್ತೆ, ವಿಶ್ವವಿದ್ಯಾಲಯ ಮುಂತಾದೆಡೆಗಳಲ್ಲಿ ಅವರ ಹೆಸರನ್ನು ಅವಿಸ್ಮರಣೀಯವಾಗಿಸುವ ಕೆಲಸವನ್ನು ಭಾರತ ಮತ್ತು ಅಮೆರಿಕೆಗಳೆರಡೂ ಮಾಡಿವೆ.  ಒಂದು ವೈಜ್ಞಾನಿಕ ಸಾಧಕ ಜೀವ ಇವೆಲ್ಲಕ್ಕೂ ಮಿಗಿಲಾದುದು.  ಅಮೂಲ್ಯವಾದುದು.  ಅದು ತನ್ನ ಮಹತ್ವದ ಬೆಳವಣಿಗೆಯ ಪರ್ವ ಕಾಲದಲ್ಲೇ ಮುರುಟಿಹೋಯಿತು ಎಂಬುದು ಮರೆಯಲಾಗದ ಘಟನೆಯಾಗಿ ಇತಿಹಾಸದಲ್ಲಿ ಉಳಿದುಹೋಗಿದೆ.

ಕಲ್ಪನಾ ಚಾವ್ಲಾ ಎಂಬ ಆ ಮಹಾನ್ ಸಾಧಕ ಚೇತನಕ್ಕೆ ನಮ್ಮ ಪ್ರಣಾಮಗಳು.

On the day our great Astranaut Kalpana Chawla lost her life in Colombia Space Mission

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ