ವಿಶಾಲಾಕ್ಷಿ ದಕ್ಷಿಣಾಮೂರ್ತಿ
ವಿಶಾಲಾಕ್ಷಿ ದಕ್ಷಿಣಾಮೂರ್ತಿ
ವಿಶಾಲಾಕ್ಷಿ ದಕ್ಷಿಣಾಮೂರ್ತಿ ಕನ್ನಡದ ಪ್ರಖ್ಯಾತ ಕಾದಂಬರಿಗಾರ್ತಿಯಾಗಿ ಹೆಸರಾದವರು. ಕನ್ನಡ ಚಲನಚಿತ್ರರಂಗದ ಅಪಾರ ಜನಪ್ರಿಯ ಚಿತ್ರ 'ಜೀವನ ಚೈತ್ರ'ಕ್ಕೆ ಮೂಲವಾದ 'ವ್ಯಾಪ್ತಿ ಪ್ರಾಪ್ತಿ' ಕಾದಂಬರಿಯೂ ಸೇರಿದಂತೆ ಅವರ ಕಾದಂಬರಿಗಳು ಅನೇಕ.
ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರು 1935ರ ನವೆಂಬರ್ 18ರಂದು ಚಳ್ಳಕೆರೆಯಲ್ಲಿ ಜನಿಸಿದರು. ಅವರು ಜನಿಸಿದ್ದು ಸಾಹಿತ್ಯ, ಸಂಸ್ಕೃತಿ, ಆದರ್ಶಗಳಿಗೆ ಹೆಸರಾದ ತಳುಕು ಮನೆತನದಲ್ಲಿ. ತಂದೆ ತಳುಕಿನ ಶ್ರೀನಿವಾಸರಾಯರು ಮತ್ತು ತಾಯಿ ನಂಜಮ್ಮನವರು.
ಎಸ್.ಎಸ್.ಎಲ್.ಸಿ. ವರೆಗೆ ಓದಿದ ವಿಶಾಲಾಕ್ಷಿ ಅವರ ವಿದ್ಯಾಭ್ಯಾಸವೆಲ್ಲ ಚಳ್ಳಕೆರೆಯಲ್ಲಿ ನಡಯಿತು. ವಂಶದ ಹಿರಿಯ ಸಾಹಿತಿಗಳಾದ ಟಿ.ಎಸ್. ವೆಂಕಣ್ಣಯ್ಯ, ತ.ಸು.ಶಾಮರಾಯರು, ಜೊತೆಗೆ ಬೆಳೆಗೆರೆ ಜಾನಕಮ್ಮ, ಬೆಳಗೆರೆ ಪಾರ್ವತಮ್ಮ, ಬೆಳಗೆರೆ ಸೀತಾರಾಮಶಾಸ್ತ್ರಿಗಳು ಮತ್ತು ಬೆಳಗೆರೆ ಕೃಷ್ಣಶಾಸ್ತ್ರಿಗಳು ಮುಂತಾದವರಿಂದ ವಿಶಾಲಾಕ್ಷಿ ಅವರಿಗೆ ಚಿಕ್ಕಂದಿನಲ್ಲೇ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹುಟ್ಟಿತು.
ವಿಶಾಲಾಕ್ಷಿ ಅವರಿಗೆ 12ನೆಯ ವಯಸ್ಸಿಗೇ ಮದುವೆಯಾದದ್ದು ಸಾಹಿತಿಗಳಾಗಿದ್ದ ಬಿ.ವಿ. ದಕ್ಷಿಣಾ ಮೂರ್ತಿ ಅವರೊಂದಿಗೆ. ದಕ್ಷಿಣಾಮೂರ್ತಿ ಅವರು ನ್ಯಾಷನಲ್ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಖ್ಯಾತಿ ಪಡೆದವರು. ಸುತ್ತಲಿನ ಸಮಾಜ, ವಂಶದ ಪ್ರಭಾವ, ಪತಿಯ ಪ್ರೇರಣೆ ಎಲ್ಲವೂ ಸೇರಿ, ತಾವು ಹಳ್ಳಿಯಲ್ಲಿ ಕಂಡುಂಡ ಬದುಕಿನ ನೈಜ ಚಿತ್ರಣವನ್ನು ಅಕ್ಷರ ರೂಪಕ್ಕಿಳಿಸಿ ವಿಶಾಲಾಕ್ಷಿ ಅವರು ಬರೆದ ಮೊದಲ ಕಾದಂಬರಿ ‘ವಸುಮತಿ’ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಇದಕ್ಕೆ ಓದುಗರಿಂದ ಅಪಾರ ಮೆಚ್ಚುಗೆಗಳು ಅವರ ಮುಂದಿನ ಅನೇಕ ಕಾದಂಬರಿಗಳ ರಚನೆಗೆ ಪ್ರೇರಣೆ ನೀಡಿತು.
ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ 'ಕಲ್ಲು ಬೊಂಬೆ ಕರಗಿತು’, 'ವ್ಯಾಪ್ತಿ-ಪ್ರಾಪ್ತಿ’ ‘ಶ್ರೀವನಿತೆಯರಸನ’, ‘ಭ್ರಮೆಯ ಬದುಕಿನ ಸುತ್ತ’, ‘ವಿಮುಕ್ತಿ’, 'ಆರಾಧಕ’, ‘ಗೌರವಾನ್ವಿತ’, ‘ಅಂತರಂಗದ ಕರೆ’, 'ಸುಳಿಗೆ ಸಿಕ್ಕವರು’, 'ಮನೆಯ ಮಗ’ ಮುಂತಾದ ಕಾದಂಬರಿಗಳು ಕನ್ನಡದ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಧಾರಾವಾಹಿಗಳಾಗಿ ಜನಪ್ರಿಯತೆ ಗಳಿಸಿದ್ದವು. ಇವಲ್ಲದೆ ಪತಂಗಗಳು, ಹೆಣ್ಣೆಂಬ ಬೊಂಬೆ, ಬೆಳಗು ಬೆಳಗೆಲೆ ಚಂದ್ರ, ಪಶ್ಚಾತ್ತಾಪ, ಒಲಿದು ಒಂದಾದವರು, ಸೆಳೆತಗಳು, ದೊಡ್ಡ ಮನಸ್ಸಿನವನು, ದುಂಬಿ ಹಂಬಲ, ಋಣಫಲ, ವಿರಾಗಿಣಿ ಮುಂತಾದ ಅವರ 60ಕ್ಕೂ ಹೆಚ್ಚು ಕಾದಂಬರಿಗಳು ಪ್ರಕಟಗೊಂಡವು.
ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ’ವ್ಯಾಪ್ತಿ-ಪ್ರಾಪ್ತಿ’ ಕಾದಂಬರಿಯು ‘ಜೀವನ ಚೈತ್ರ’ ಎಂಬ ಹೆಸರಿನಿಂದ ವರನಟ ಡಾ. ರಾಜಕುಮಾರ್ ಅಭಿನಯದ ಭರ್ಜರಿ ಯಶಸ್ಸಿನ ಚಲನಚಿತ್ರವಾಗಿ ರಾಜ್ಯಾದ್ಯಂತ 3 ವರ್ಷಗಳ ಕಾಲ ಪ್ರದರ್ಶನಗೊಂಡ ಕೀರ್ತಿಗೆ ಪಾತ್ರವಾಯಿತು.
'ಜೀವನ ಚೈತ್ರ' ಚಿತ್ರವು ಕರ್ನಾಟಕ ರಾಜ್ಯ ಚಲನ ಚಿತ್ರ ಪ್ರಶಸ್ತಿ ಗಳಿಸಿದ್ದೇ ಅಲ್ಲದೆ, ಗಾಯನ ಮತ್ತು ಚಿತ್ರಕಥೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೂ ಪಾತ್ರವಾಯಿತು.
'ವ್ಯಾಪ್ತಿ-ಪ್ರಾಪ್ತಿ’ ಕಾದಂಬರಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ‘ಗೌರವಾನ್ವಿತ’ ಕಾದಂಬರಿಗೆ ವನಿತಾ ಮಾಸ ಪತ್ರಿಕೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಕಾದಂಬರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ‘ಆರ್ಯಭಟ’ ಪ್ರಶಸ್ತಿ, ಡಾ.ಬಿ. ಸರೋಜಾದೇವಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರು 2015 ವರ್ಷದ ಫೆಬ್ರವರಿ 1 ರಂದು ಈ ಲೋಕವನ್ನಗಲಿದರು. ಈ ಹಿರಿಯ ಚೇತನಕ್ಕೆ ನಮನ.
ನಮ್ಮ ಆತ್ಮೀಯರಾದ ಪ್ರಸಿದ್ಧ ಬರಹಗಾರ್ತಿ ಡಾ. ಮಂಗಳಾ ಪ್ರಿಯದರ್ಶಿನಿ DrMangala Priyadarshini ಅವರು ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ಸುಪುತ್ರಿ.
On the birth anniversary of great novelist Vishalakshi Dakshinamurthy
ಕಾಮೆಂಟ್‌ಗಳು