ಅನು ಪಾವಂಜೆ
ಅನು ಪಾವಂಜೆ
ಪಾವಂಜೆ ಕಲಾ ವಂಶದಲ್ಲಿ ಮೂಡಿಬಂದ ಅನು ಪಾವಂಜೆ ತೈಲವರ್ಣ, ಜಲವರ್ಣ, ಬೆಳಕು-ನೆರಳು ಚಿತ್ರಕಲೆಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ಅನು ಪಾವಂಜೆಯವರು 1971ರ ಫೆಬ್ರುವರಿ 19ರಂದು ಮಂಗಳೂರಿನಲ್ಲಿ ಜನಿಸಿದರು. ತಂದೆ ಪಾವಂಜೆ ಕೃಷ್ಣಮೂರ್ತಿ. ತಾಯಿ ಶಾರದಾ.
ಕಲಾವಿದರ ಕುಟುಂಬದಲ್ಲಿ ಜನಿಸಿದ ಅನು ಅವರಿಗೆ ಚಿಕ್ಕಂದಿನಿಂದಲೂ ಕಲೆಯಲ್ಲಿ ವಿಶೇಷ ಒಲವು. ಮಹಾನ್ ಕಲಾವಿದರಾದ ಇವರ ಪಿಜ್ಜ ಪಾವಂಜೆ ಗೋಪಾಲಕೃಷ್ಣಯ್ಯನವರು ರಾಜಾರವಿವರ್ಮರ ಆತ್ಮೀಯರಾಗಿದ್ದವರು. ನಾಲ್ಕು ತಲೆಮಾರಿನಿಂದಲೂ ವಂಶ ಪಾರಂಪರ್ಯವಾಗಿ ಇವರ ಕುಟುಂಬದಲ್ಲಿ ಚಿತ್ರಕಲಾ ಪರಿಣತಿ ನಿರಂತರವಾಗಿ ಹರಿದುಬಂದಿದೆ.
ಅನು ಪಾವಂಜೆ ಅವರ ಬಾಲ್ಯದ ದಿನಗಳ ಬಗ್ಗೆ ತಿಳಿಯುವುದೆಂದರೆ ಅದೊಂದು ವಿಸ್ಮಯ ವರ್ಣರಂಜಿತ ಕಲಾಲೋಕವನ್ನು ಪ್ರವೇಶಿಸಿದಂತೆ. ಅನು ಅವರು ಹುಟ್ಟಿದ ಮನೆಯಲ್ಲಿ ಸುತ್ತ ಮುತ್ತಲೆಲ್ಲಾ ಬಣ್ಣಗಳದ್ದೇ ಪ್ರಪಂಚ. ಮನೆಯ ಮೊದಲ ಕಲಾವಿದ ಪಿಜ್ಜ ಪಾವಂಜೆ ಗೋಪಾಲಕೃಷ್ಣಯ್ಯ. ದೊಡ್ಡಜ್ಜ ನರಹರಿ ಪಾವಂಜೆ ಮತ್ತು ಅಜ್ಜ ಭುಜಂಗ ರಾವ್ ಪಾವಂಜೆ ಇವರೆಲ್ಲರ ಕಲಾ ಸಂಗ್ರಹವನ್ನ ಕುತೂಹಲದಿಂದ ನೋಡುತ್ತಿದ್ದ ಅನು ಅವರಿಗೆ ಇವೇ ಸ್ಪೂರ್ತಿಗಳು.
ಮನೆಯಲ್ಲಿ ಕಲಾವಿದರಾದ ಅವರ ಚಿಕ್ಕಪ್ಪ ಮಾಧವರಾವ್ ಪಾವಂಜೆ (ಎಂ. ಆರ್. ಪಾವಂಜೆ) ಮುಂಜಾನೆಯಿಂದ ಸಂಜೆಯವರೆಗೆ ಮಹಡಿ ಮೇಲೆ ಚಿತ್ರ ರಚಿಸುತ್ತಿದ್ದರು. ಆಗ ಬಾಲಕಿ ಅನು ಸಮಯ ಕಳೆಯುತ್ತಿದ್ದುದೆಲ್ಲಾ ಅವರ ಬದಿಯಲ್ಲೇ. ಸಂಜೆಗೆ ಅವರ ಕೆಲಸ ಮುಗಿಯಿತೆಂದರೆ ಅವರ ತಟ್ಟೆಯಲ್ಲಿ ಉಳಿದ ಬಣ್ಣಗಳು ಬಾಲಕಿ ಅನು ಅವರ ಸುಪರ್ದಿಗೆ ಬರುತ್ತಿದ್ದವು. ಇದನ್ನು ಅನು ತನಗೆ ಇಷ್ಟ ಬಂದಂತೆ ಒಂದು ಕ್ಯಾನ್ವಾಸ್ ಮೇಲೆ ಹಚ್ಚಬಹುದಿತ್ತು. ಆ ಸಂಜೆಯ ಗಳಿಗೆಗಳೆಂದರೆ ಬಾಲಕಿ ಅನುವಿಗೆ ಇನ್ನಿಲ್ಲದ ಉತ್ಸಾಹ ಮತ್ತು ಕಾತರದ ನಿರೀಕ್ಷೆಗಳು. ಅದಕ್ಕಾಗಿ ಚಿಕ್ಕಪ್ಪನನ್ನು “ಆಯ್ತಾ, ಆಯ್ತಾ ಅಂತ ಪೀಡಿಸುತ್ತಿದೆ” ಎಂದು ನಗುವಿನೊಂದಿಗೆ ಅನು ನೆನಪಿಸಿಕೊಳ್ಳುತ್ತಾರೆ. ಹೀಗೆ ಅನು ಪಾವಂಜೆ ಅವರ ಬಣ್ಣದ ಲೋಕ ತೆರೆದುಕೊಂಡಿತ್ತು. ಹೀಗೇ ಮುಂದುವರೆಯುತ್ತಾ ಮುಂದುವರೆಯುತ್ತಾ ಅದು ಅನು ಅವರನ್ನು ಅನುದಿನವೂ ಎಂಬಂತೆ ಪೂರ್ತಿಯಾಗಿ ಆವರಿಸಿಕೊಂಡುಬಿಟ್ಟಿತ್ತು.
ಅನು ಪಾವಂಜೆ ಅವರಿಗೆ ಅವರ ಮುತ್ತಜ್ಜ, ದೊಡ್ಡಜ್ಜನವರಂತೆ ಜೆ.ಜೆ.ಕಲಾಶಾಲೆಯಲ್ಲಿ ಕಲಿಯಬೇಕೆಂಬ ಇದ್ದ ಆಸೆ ನೆರವೇರಲಿಲ್ಲ. ಬೇರಾವ ಕಲಾಶಾಲೆಯೂ ಅವರನ್ನು ತಟ್ಟಲಿಲ್ಲ. ಮನೆಯಲ್ಲಿದ್ದ ಅವರ ಚಿಕ್ಕಪ್ಪ ಎಂ. ಆರ್. ಪಾವಂಜೆಯವರೇ ಅವರ ಗುರುಗಳಾದರು. ಎಂ. ಆರ್. ಪಾವಂಜೆಯವರು ಶಿಸ್ತಿನಿಂದ ಯಾವುದೇ ಸಲಿಗೆಯಿಲ್ಲದೆ ನಿರ್ದಾಕ್ಷಿಣ್ಯವಾಗಿ ಹಂತಹಂತವಾಗಿ ಎಲ್ಲ ಪ್ರಕಾರಗಳನ್ನೂ ಕಲಿಸಿದರು. ಪೆನ್ಸಿಲ್ ಶೇಡಿಂಗ್, ಚಾರ್ಕೋಲ್ ವರ್ಕ್, ಪೆನ್ ವರ್ಕ್, ಪೇಸ್ಟಲ್ಸ್, ವಾಟರ್ ಕಲರ್, ಆಯಿಲ್ ಕಲರ್ ಹೀಗೆ ಬೇರೆ ಬೇರೆ ಮಾಧ್ಯಮಗಳನ್ನೂ ಮನದಟ್ಟಾಗಿಸಿದರು. “ಕಲಿಯುವಾಗ ಎಲ್ಲವನ್ನೂ ಕಲಿಯಬೇಕು, ಎಲ್ಲವೂ ಗೊತ್ತಿರಬೇಕು, ನಂತರ ಮಾತ್ರವೇ, ನೀನು ನಿನಗೆ ಇಷ್ಟ ಬಂದಿದ್ದನ್ನ ಆಯ್ಕೆ ಮಾಡಬಹುದು” ಎಂದು ಸ್ಪಷ್ಟವಾಗಿ ಖಡಾಖಂಡಿತವಾಗಿ ನುಡಿಯುತ್ತಿದ್ದರು. ಹೀಗೆ ಅನು ಪಾವಂಜೆ ಹಂತಹಂತವಾಗಿ ಬೆಳೆದರು. ಬೆಳೆಯುತ್ತಲೇ ಇದ್ದಾರೆ.
ಹೀಗೆ ಎಲ್ಲ ರೀತಿಯಲ್ಲೂ ಕಲಿತ ಅನು ಪಾವಂಜೆ ಅವರ ಮೆಚ್ಚುಗೆಯ ಮಾಧ್ಯಮ ಜಲವರ್ಣ. ಅದರ ವಿವಿಧ ಮನಮೋಹಕ ಬಣ್ಣಗಳು, ಅದರ ಪಾರದರ್ಶಕತೆ ಕುರಿತಂತೆ ಅನು ಅವರಿಗೆ ಅಪಾರ ಸೆಳೆತ. ಜೊತೆಜೊತೆಗೆ ಚಾರ್ಕೋಲಿನಲ್ಲಿ ಕಪ್ಪು ಬಿಳುಪಿನ ಚಿತ್ರಗಳು ಅವರನ್ನು ಆಕರ್ಷಿಸುತ್ತಿದ್ದವು. ಹೀಗಾಗಿ ಒಂದು ಹಂತದಲ್ಲಿ ಅವರು ಜಲವರ್ಣವನ್ನು ಆಯ್ಕೆ ಮಾಡಿಕೊಂಡರು. ಅವರಲ್ಲಿ ಸದಾ ಕುತೂಹಲ ಹುಟ್ಟಿಸಿ ಇನ್ನಿಲ್ಲದಷ್ಟು ಮೋಹಗೊಳಿಸುತ್ತಿದ್ದುದು ಫಿಗರೆಟಿವ್ ಡ್ರಾಯಿಂಗ್ ಮತ್ತು ಅದರ ಜೊತೆ ಜೊತೆಗೆ ಪಾರಂಪರಿಕ ವಸ್ತ್ರವಿನ್ಯಾಸಗಳು, ಪಾರಂಪರಿಕ ಸಾಂಪ್ರದಾಯಿಕ ಆಭರಣಗಳು ಮತ್ತು ಅಲಂಕಾರಿಕ ಕುಸುರಿ ಕೆಲಸಗಳು. ಹೀಗಾಗಿ ಅನು ಅವರ ಮನಸ್ಸು ಸಾಂಪ್ರದಾಯಿಕ ಕಲೆಯತ್ತ ಮೆಲ್ಲನೆ ವಾಲತೊಡಗಿತು. ಈ ಪಯಣ ಅವರನ್ನೆಲ್ಲಿಗೆ ತಂದಿತು ಎಂಬುದನ್ನು ಅವರ ಮಾತುಗಳಲ್ಲೇ ಕೇಳುವುದು ಚೆನ್ನ. “ಮೊದಮೊದಲು ಸುಮ್ಮನೇ ಕಂಡಕಂಡ ಚಿತ್ರಗಳನ್ನ ಕಾಪಿ ಮಾಡತೊಡಗಿದೆ. ಬೇರೆ ಬೇರೆ ಶೈಲಿಯ ಚಿತ್ರಗಳನ್ನ ಕಲಿಯತೊಡಗಿದೆ. ಈ ಹಾದಿಯಲ್ಲಿ ಮುಂದೆ ಮುಂದೆ ಹೋದಂತೆ ಯಾಕೋ ಇವೆಲ್ಲಾ ಏಕತಾನತೆಯಿಂದ ಕೂಡಿದೆ ಅನ್ನಿಸತೊಡಗಿತು. ಪೂರ್ತಿಯಾಗಿ ಯಾವ ಶೈಲಿಯೂ ಸಮಾಧಾನ ತರುತ್ತಿರಲಿಲ್ಲ. ಹೀಗಾಗಿ ನನ್ನೊಳಗೇ ಅಸಮಧಾನ, ತಳಮಳಗಳುಂಟಾಗಿ, ನನ್ನಷ್ಟಕ್ಕೇ ಸಾಂಪ್ರದಾಯಿಕ ಚೌಕಟ್ಟನ್ನ ಮೀರಿ ಯೋಚಿಸಬೇಕು ಅನ್ನಿಸತೊಡಗಿತು. ಸುಮ್ಮನೇ ನನ್ನಷ್ಟಕ್ಕೇ ಪ್ರಯೋಗ ನಡೆಸತೊಡಗಿದೆ. ಇನ್ನೂ ನಡೆಸುತ್ತಲೇ ಇದ್ದೇನೆ. ಸಾಮಾನ್ಯವಾಗಿ ಎಲ್ಲರೂ ಸಾಂಪ್ರದಾಯಿಕ ಚಿತ್ರಗಳು ಅಂದರೆ ಹಿಂದೆ ಯಾರೋ ಮಾಡಿದ್ದನ್ನೇ ಕಾಪಿ ಮಾಡುತ್ತಿದ್ದುದನ್ನು ಬಿಟ್ಟರೆ ಬೇರೆ ಹೊಸತನ, ಅವರ ಸ್ವಂತಿಕೆ ಏನೂ ಅಲ್ಲಿರಲಿಲ್ಲ. ನಾ ಅವನ್ನೆಲ್ಲಾ ಬಿಟ್ಟು ನನ್ನ ಕಲ್ಪನೆಯ ವಿಷಯಗಳನ್ನು ಆರಿಸತೊಡಗಿದೆ. ನಿರ್ದಿಷ್ಟ ಯಾವ ಶೈಲಿಗೂ ಜೋತುಬೀಳಲಿಲ್ಲ. ಆದರೆ ಎಲ್ಲ ಶೈಲಿಯ ನನಿಗಿಷ್ಟವಾದ ಸಂಗತಿಗಳೂ ನನಗೇ ಗೊತ್ತಿಲ್ಲದಂತೆ ಅಲ್ಲಿದ್ದವು. ಈ ದೃಷ್ಟಿ ನನಗೊಂದು ಹೊಸ ಲೋಕವನ್ನೇ ತೆರೆಸಿತು, ಹೊಸ ಯೋಚನೆಗಳಿಗೆ ದಾರಿ ಮಾಡಿಕೊಟ್ಟಿತು. ಮನಸ್ಸಿನಲ್ಲಿದ್ದ ತಳಮಳ ಕಮ್ಮಿಯಾಗತೊಡಗಿ, ನನಗೇನು ಬೇಕು, ನಾ ಏನು ಮಾಡಬೇಕು, ನನ್ನ ಹಾದಿ ಯಾವುದು ಎನ್ನುವುದು ಸ್ಪಷ್ಟವಾಗತೊಡಗಿತು. ಇಲ್ಲಿನ ನನ್ನ ಪ್ರಪಂಚದಲ್ಲಿ ನಾನೇ ಸರ್ವಾಧಿಕಾರಿ. ಯಾವುದೇ, ಯಾರದೇ ಕಟ್ಟುಕಟ್ಟಳೆ ಇಲ್ಲಿಲ್ಲ. ಈ ನನ್ನ ಲೋಕ ಬಣ್ಣಗಳಿಂದ ತುಂಬಿ ಹೋಯಿತು. ಮನಸ್ಸಿಗೆ ಸುಖ ಕೊಡುವ, ಮನಸ್ಸನ್ನ ಖುಷಿ ಖುಷಿಯಾಗಿಡುವ ಬಣ್ನಗಳು ನನ್ನನ್ನು ಆಕರ್ಷಿಸತೊಡಗಿದವು. ಮೂಲ ಬಣ್ಣಗಳೇ ಅಲ್ಲದೆ ಇನ್ನೂ ಅನೇಕಾನೇಕ ವಿಸ್ಮಯಕಾರೀ ಬಣ್ಣಗಳು ನನ್ನ ಪ್ಯಾಲೆಟ್ನಲ್ಲಿ ಕಾಣಿಸಿಕೊಳ್ಳತೊಡಗಿದವು. ನನಗೆ ಬ್ರೈಟ್ ಆದ, ಢಾಳಾಗಿ ಕಾಣುವ ಆದರೂ ಮನಸ್ಸಿಗೆ ಹಿತವನ್ನೇ ಕೊಡುವ ಮೋಹಕ ಬಣ್ನಗಳು ತುಂಬಾ ಇಷ್ಟವಾಗುತ್ತವೆ. ಬೇರೆಬೇರೆ ಬಣ್ಣಗಳನ್ನ ಮಿಕ್ಸ್ ಮಾಡಿ ಪಡೆದ ಹೊಸ ಹೊಸ ಬಣ್ಣಗಳು ಸದಾ ನನ್ನ ಚಿತ್ರದಲ್ಲಿರುತ್ತವೆ. ಆ ಬಣ್ಣಗಳನ್ನ ಉಪಯೋಗಿಸುವಾಗ ಆ ಚಿತ್ರದಲ್ಲಿರುವ ವಿಷಯಗಳೂ, ಪಾತ್ರಗಳೂ, ಜೊತೆಗೆ ನನ್ನ ಭಾವನೆಗಳೂ ಸ್ಪಂದಿಸಬೇಕು. ಆಗಷ್ಟೇ ಆ ಕೃತಿ ನನಗೆ ಖುಷಿಯನ್ನೂ ಸಮಾಧಾನವನ್ನೂ ಕೊಡಬಲ್ಲುದು.” ಹೀಗೆ ತಮ್ಮ ವರ್ಣಲೋಕದಲ್ಲಿನ ಸಂಚಾರವನ್ನು ಆಪ್ತವಾಗಿ ಅನು ಪಾವಂಜೆ ತೆರೆದಿಡುತ್ತಾರೆ. ಹೀಗೆ ಆಧ್ಯಾತ್ಮಿಕ ತಪ್ಪಸ್ಸಿನಂತೆ ತಮ್ಮ ಕಲಾಲೋಕದಲ್ಲಿ ತೊಡಗಿಕೊಂಡಿರುವ ಅನು ಪಾವಂಜೆ ಅವರು ಅಪಾರ ಸಾಧನೆ ಮಾಡಿ ತಮ್ಮ ಅಗಾಧ ಪ್ರತಿಭೆಯನ್ನು ಹೊರಸೂಸಿದ್ದಾರೆ.
ಅನು ಪಾವಂಜೆ ಅವರು ಹಲವಾರು ಏಕವ್ಯಕ್ತಿ ಪ್ರದರ್ಶನಗಳನ್ನು ಮೂಡಿಸಿದ್ದಾರೆ. ಇವುಗಳಲ್ಲಿ ಕರ್ನಾಟಕ ಲಲಿತಕಲಾ ಅಕಾಡಮಿ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಏರ್ಪಡಿಸಿದ ರಾಷ್ಟ್ರಮಟ್ಟದ ಕಲಾಪ್ರದರ್ಶನಗಳು ಮುಖ್ಯವಾದುವುಗಳೆನಿಸಿವೆ. ಇದಲ್ಲದೆ ಸಾಂಘಿಕ ಪ್ರದರ್ಶನಗಳಾದ ಬೆಳಗಾಂ, ಮಂಗಳೂರು, ಬೆಂಗಳೂರಿನ ರಾಷ್ಟ್ರೀಯ ಕಲಾಮೇಳ, ವೆಂಕಟಪ್ಪ ಆರ್ಟ್ ಗ್ಯಾಲರಿ, ಚಿತ್ರಸಂತೆ, ಉಡುಪಿ, ಮೈಸೂರು, ಮಂಗಳೂರಿನಲ್ಲಿ ಗಣೇಶನ ಗಣ-ರೂಪ ಪ್ರದರ್ಶನ, ಮುಂಬಯಿಯ ಮಾನ್‌ಸೂನ್ ಮೇಳ ಮುಂತಾದುವುಗಳಲ್ಲಿ ಇವರ ಕಲಾಪ್ರದರ್ಶನಗಳು ಕಲಾ ರಸಿಕರ ಮನಸೆಳೆದಿವೆ. ಇವೆಲ್ಲವುಗಳ ಜೊತೆಗೆ ಅನು ಪಾವಂಜೆಯವರು ಹಲವಾರು ಕಲಾ ಶಿಬಿರಗಳಲ್ಲಿ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಕಳೆದ ವರ್ಷಗಳಲ್ಲಿ ಅವರು ಬಾಳಸಂಗಾತಿ ಚಿತ್ರಮಿತ್ರ Chithra Mitra ಅವರೊಡನೆ ಜಂಟಿಯಾಗಿ ವಿಶ್ವದ ಹಲವೆಡೆಗಳಲ್ಲಿ ನೀಡಿರುವ ಕಲಾಪ್ರದರ್ಶನಗಳು ಕಲಾರಸಿಕರು ಹಾಗೂ ಕಲಾವಿದ್ವಾಂಸ ವಿಮರ್ಶಕರ ಮೆಚ್ಚುಗೆ ಗಳಿಸಿವೆ. ಸಾಹಿತಿ ಲಕ್ಷ್ಮೀಶ ತೋಳ್ಪಾಡಿಯವರ ಪ್ರಸಿದ್ಧ ಕೃತಿ ‘ಸಂಪಿಗೆ ಭಾಗವತ’ದ ತುಂಬಾ ಅನು ಪಾವಂಜೆಯವರ ಸುಂದರ ಕಲಾಕೃತಿಗಳು ಭಾಗವತದ ಕಥಾನಕಕ್ಕೆ ಮೆರುಗನ್ನು ತಂದಿವೆ.
ಹುಬ್ಬಳ್ಳಿಯಲ್ಲಿ ನಡೆದ ಕಲಾಮೇಳದಲ್ಲಿ ವಿಶೇಷ ಬಹುಮಾನ, ಮಂಗಳೂರಿನ ಜಾಯ್ಸಿ ಕ್ಲಬ್‌ನಿಂದ ವಿಶೇಷ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಮುಂತಾದ ಹಲವಾರು ಗೌರವಗಳು ಅನು ಪಾವಂಜೆ ಅವರಿಗೆ ಸಂದಿವೆ. ಅನು ಅವರು ರಚಿಸಿದ ಮದರ್ ತೆರೆಸಾ, ಅಬ್ದುಲ್ ಕಲಾಂ ಚಿತ್ರಗಳು ಮಂಗಳೂರಿನಲ್ಲಿ, ಗಣೇಶನ ಚಿತ್ರ ನೇಪಾಳದ ರಾಜ ಬೀರೇಂದ್ರರಲ್ಲಿ, ಮುದ್ಗಲ ಪುರಾಣ ಆಧಾರಿತ 32 ಗಣೇಶನ ಚಿತ್ರಗಳು ಅಮೆರಿಕದ ಸುನಂದಾ ಜೈನ್ ಮುಂತಾದವರ ಪ್ರಮುಖ ಸಂಗ್ರಹಾಲಯಗಳಲ್ಲಿವೆ.
ಕಲಾವಿದರಷ್ಟೇ ಅಲ್ಲದೆ ಕವಯತ್ರಿಯಾಗಿ, ಬರಹಗಾರ್ತಿಯಾಗಿ, ಪ್ರವಾಸಿಗರಾಗಿ, ಛಾಯಾಗ್ರಾಹಕರಾಗಿ, ಕಲಾರಸಿಕರಾಗಿ, ಪ್ರಕೃತಿ ಪ್ರಿಯರಾಗಿ, ಸಾಮಾಜಿಕ ಕಾಳಜಿಯುಳ್ಳವರಾಗಿ ಮತ್ತು ಇವೆಲ್ಲಕ್ಕೂ ಮಿಗಿಲಾಗಿ ತಮ್ಮ ಸರಳ ಸಜ್ಜನಿಕೆಯಿಂದ ನಮ್ಮೆಲ್ಲರ ಆತ್ಮೀಯರಾಗಿ ಅನು ಪಾವಂಜೆಯವರು ಎಲ್ಲರ ಮನಗೆದ್ದವರಾಗಿದ್ದಾರೆ. ಕಲೆಯಲ್ಲಷ್ಟೇ ಅಲ್ಲದೆ ಸಾಹಿತ್ಯ, ಸಂಗೀತ, ಇತ್ಯಾದಿ ಪ್ರತಿ ವಿಚಾರದಲ್ಲೂ ಅನುಪಮ ಜೋಡಿ ಅನು ಪಾವಂಜೆ ಮತ್ತು ಚಿತ್ರಮಿತ್ರರ ಆಸಕ್ತಿಗಳು ನನಗೆ ಸದಾ ಆಪ್ತವೆನಿಸಿದೆ. ಈ ಜೋಡಿ ಚಿತ್ರವನ್ನೇ ಬರೆಯಲಿ, ನಗು ನಗುತ್ತಾ ಗಾದೆಗಳನ್ನು ರಸವತ್ತಾಗಿ ವಿಡಿಯೋ ಮುಖೇನ ಪ್ರೀತಿ ಲವಲವಿಕೆಗಳಿಂದ ಹೇಳುವುದೇ ಇರಲಿ, ಒಟ್ಟಿಗೆ ನಸು ನಗುತ್ತಾ ನಲಿವಿನ ದೀಪ ಬೆಳಗುತ್ತಾ ನಿಲ್ಲುವುದೇ ಆಗಲಿ ಎಲ್ಲವೂ ಅನುಪಮ.
ಆತ್ಮೀಯರಾದ ಅನು ಪಾವಂಜೆಯವರಿಗೆ ಅನುಗಾಲದ ಸಂತಸವನ್ನು ಬಯಸುತ್ತಾ ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ಸಲ್ಲಿಸೋಣ.
Happy birthday to my affectionate friend, an artiste we are proud of and multi talented Anu Pavanje
ಕಾಮೆಂಟ್‌ಗಳು