ವಿಜಯ ಪ್ರಕಾಶ್
ವಿಜಯ ಪ್ರಕಾಶ್
ಹಿನ್ನೆಲೆ ಗಾಯನ ಲೋಕದಲ್ಲಿ, ಕನ್ನಡದ ಮಣ್ಣಿನಲ್ಲಿ ಜನಿಸಿದ ವಿಜಯ ಪ್ರಕಾಶ್ ಬೆಳೆದಿರುವ ಎತ್ತರ ಮತ್ತು ಅದಕ್ಕಾಗಿ ಅವರು ಸವೆಸಿರುವ ಹಾದಿ ಬಲು ದೊಡ್ಡದು.
1976ರ ಫೆಬ್ರುವರಿ 21ರಂದು ಮೈಸೂರಿನಲ್ಲಿ ಜನಿಸಿದ ವಿಜಯ ಪ್ರಕಾಶ್ ತಮ್ಮ ತಂದೆಯವರಿಂದಲೇ ಶಾಸ್ತ್ರೀಯ ಸಂಗೀತವನ್ನು ಕಲಿತರು. ಅವರ ತಾಯಿ ತಂದೆಯರಾದ ಲೋಪಾಮುದ್ರ ಮತ್ತು ಎಲ್. ರಾಮಶೇಷ ಸಂಗೀತ ಕಲಾವಿದರು.
ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಕಾಲಿಟ್ಟರಾದರೂ ಸಂಗೀತದ ನಿನಾದ ಹರಿಯುತ್ತಿದ್ದ ವಿಜಯ ಪ್ರಕಾಶರ ಮನ ಯಾವುದೋ ಒಂದು ಕ್ಷೀಣ ಗುರಿಯ ಸುಭದ್ರತೆ ಎಂಬ ಅಂಶಕ್ಕೆ ಕಟ್ಟು ಹಾಕಿಕೊಳ್ಳದೆ, ನಿರ್ಭಯತೆಯಿಂದ ವಿಶ್ವವಿಶಾಲತೆಯತ್ತ ದುಮುಖಿತು. ಕೈಯಲ್ಲಿ ಕೇವಲ 700 ರೂಪಾಯಿ ಮತ್ತು ಒಂದು ಜೊತೆ ಬಟ್ಟೆಯಲ್ಲಿ ಮನೆ ಬಿಟ್ಟು ಗೊತ್ತು ಗುರಿಯಿಲ್ಲದಂತೆ ಹೊರಟ ವಿಜಯ ಪ್ರಕಾಶ್ ಅವರನ್ನು, ಅಂದು ಕರೆದ ಮೋಹನ ಮುರಳಿ ಯಾವುದಿರಬಹುದು ಎಂಬುದಕ್ಕೆ ಬಹುಶಃ ಅವರು ಕೂಡಾ ಇಂದು ಉತ್ತರ ಹೇಳಲಾರರೇನೋ. ಅವರು ಇಂದು ಏರಿರುವ ಎತ್ತರ ಎಂಬ ಫಲಿತಾಂಶ, ಅಂದಿನ ಅವರ ಮನಃಸ್ಥಿತಿಯ ಉತ್ತರವಾಗಿರಲಿಕ್ಕಿಲ್ಲ!
ಮನೆಯಿಂದ ತಿರುಪತಿಗೆ, ತಿರುಪತಿಯಿಂದ ಮುಂಬೈಗೆ ಹೀಗೆ ಸಾಗಿದ ಅವರ ಮುಂದಿನ ಪಯಣದಲ್ಲಿ ಅವರು ತಿಂದದ್ದೇನೋ, ಮಲಗಿದ್ದೆಲ್ಲೋ. ಮುಂದೆ 1996ರಲ್ಲಿ ಅವರಿಗೆ ಪ್ರಸಿದ್ಧ ಗಾಯಕರಾದ ಸುರೇಶ್ ವಾಡ್ಕರ್ ಅವರಲ್ಲಿ ಶಿಷ್ಯತ್ವ ಲಭಿಸಿತು. ಸೋನು ನಿಗಮ್ ಅವರು ಜೀ ಟಿ.ವಿಯಲ್ಲಿ ನಡೆಸಿಕೊಡುತ್ತಿದ್ದ ಪ್ರತಿಷ್ಟಿತ ‘ಸರಿಗಮಪ’ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಫೈನಲ್ ತಲುಪಿದರು. ಅಂದು ಆ ಸ್ಪರ್ಧೆ ಕೇವಲ ಚಿತ್ರಗೀತೆಗಳ ಗಾಯನಸ್ಪರ್ಧೆಯಾಗಿರದೆ ಶ್ರೇಷ್ಠ ಸಂಗೀತಗಾರರ ಎದುರು ನಡೆಯುತ್ತಿದ್ದ ಸಾಮರ್ಥ್ಯದ ಅಗ್ನಿಪರೀಕ್ಷೆಯೇ ಆಗಿರುತ್ತಿತ್ತು. ಇಂದು ಕೂಡಾ ಅಂದು ವಿಜಯ ಪ್ರಕಾಶ್ ಹಾಡಿದ ಗೀತೆಗಳು ಅಂತರ್ಜಾಲದಲ್ಲಿದ್ದು ಮೋಹಕತೆ ಹುಟ್ಟಿಸುವಂತಿವೆ.
2002ರ ವರ್ಷದಲ್ಲಿ ‘ಬಾಜ್’ ಚಿತ್ರದಲ್ಲಿ ಹಿನ್ನೆಲೆ ಗಾಯನಕ್ಕೆ ಪ್ರವೇಶ ಪಡೆದ ವಿಜಯ್ ಪ್ರಕಾಶ್ ಮುಂದೆ ತಮಿಳು ಚಿತ್ರರಂಗ ಪ್ರವೇಶಿಸಿದರು. ಖ್ಯಾತರಾದ ಎ.ಅರ್. ರಹಮಾನ್ ಅವರ ‘ಸ್ವದೇಶ್’ ಚಿತ್ರಕ್ಕೆ ಹಾಡಿದರು. ‘ಗಾಳಿಪಟ’ ಚಿತ್ರದ ಮೂಲಕ ಕನ್ನಡದಲ್ಲೂ ಹಾಡಿದ ವಿಜಯ್ ಪ್ರಕಾಶ್, ಸಂಸ್ಕೃತದ ಸುಶ್ರಾವ್ಯ ‘ಶಿವೋಹಂ’ ಗೀತೆಯನ್ನೂ ಸೇರಿ ಭಾರತದ ಮತ್ತು ವಿಶ್ವದ ಅನೇಕ ಭಾಷೆಗಳ ಗೀತೆಗಳಿಗೆ ತಮ್ಮ ಧ್ವನಿ ನೀಡಿದ್ದಾರೆ. ಆಸ್ಕರ್ ಗಳಿಸಿದ ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರದ ‘ಜೈಹೋ’ ಗೀತೆಯ ಜೈಹೋ ಎಂಬ ಉಚ್ಛಾರದ ಎತ್ತರದ ಧ್ವನಿ “ವಿಜಯ ಪ್ರಕಾಶರ - ವಿಜಯ ಪತಾಕೆಯ - ವಿಜಯ ಪ್ರಕಾಶ"ದಂತಿದೆ. ಶಾಸ್ತ್ರೀಯ ಗಾಯನದ ಅಭ್ಯಾಸದ ಆಳದಲ್ಲಿ ಹೊರಹೊಮ್ಮುವ ಅವರ ಧ್ವನಿಗಿರುವ ಸಾಧ್ಯತೆಗಳೂ ಅಪಾರವಾದದ್ದು.
ಅಂದು ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಗೊತ್ತಿರದಿದ್ದ ಹುಡುಗ, ಒಮ್ಮೆ ‘ಕೆಲ್ಲಾಗ್ಸ್’, ‘ನಿರ್ಮಾ’ ಮುಂತಾದ ಜಾಹೀರಾತುಗಳಿಗೆ ಧ್ವನಿ ನೀಡಿದ್ದ ಈ ಹುಡುಗ ಇಂದು ವಿಶ್ವದಾದ್ಯಂತ ಬೇಡಿಕೆ ಹೊಂದಿದ್ದಾರೆ. ಕನ್ನಡ ಚಿತ್ರದಲ್ಲಿನ ಹಾಡಿಗೆ ಕರ್ನಾಟಕ ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿಗಳನ್ನೂ ಗಳಿಸಿರುವ ವಿಜಯ ಪ್ರಕಾಶ್ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ವಿಶ್ವದ ಅನೇಕ ಶ್ರೇಷ್ಠ ವೇದಿಕೆಗಳಲ್ಲಿ ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಾ ಬಂದಿದ್ದಾರೆ. ಇವರ ವಿಜಯದ ಪ್ರಕಾಶ ಬಹುಕಾಲದವರೆಗೆ ಮುಂದೆ ಮುಂದೆ ಸಾಗುತ್ತಿರಲಿ, ನಮಗೆ ಅವರ ಗಾನ ಮಾಧುರ್ಯದಲ್ಲಿ ಶ್ರೇಷ್ಠ ಸಂಗೀತ ಮತ್ತು ಸಾಹಿತ್ಯಗಳನ್ನು ಆಲಿಸುವ ಸೌಭಾಗ್ಯ ನಿರಂತರ ದೊರಕುತ್ತಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.
On the birth day of our great singing talent Vijay Prakash Vijaya Prakash
ಕಾಮೆಂಟ್‌ಗಳು