ಅಂಬಾತನಯ ಮುದ್ರಾಡಿ
ಅಂಬಾತನಯ ಮುದ್ರಾಡಿ
ಅಂಬಾತನಯ ಮುದ್ರಾಡಿ ಮಹಾನ್ ವಿದ್ವಾಂಸರು, ಹಿರಿಯ ಯಕ್ಷಗಾನ ಕವಿ, ಪ್ರಸಿದ್ಧ ಅರ್ಥದಾರಿ ಮತ್ತು ಮಹತ್ವದ ಬರಹಗಾರರು. ಅವರ ಮೂಲ ಹೆಸರು ಕೇಶವ ಶೆಟ್ಟಿಗಾರ್. "ಜಗದಂಬೆ ವರದೆ ಶುಭವಿಭವೆ ಸುಖದೆ ತಾಯಾಗಿ ಎನ್ನ ಪೊರೆದೆ" ಎಂದು ಕಾರ್ಕಳ ತಾಲೂಕು ಮುದ್ರಾಡಿ ಸಮೀಪದ ಭಕ್ರೆ ಮಠದ ಶ್ರೀ ಭದ್ರಕಾಳಿ ದೇವಿಯನ್ನು ಭಕ್ತಿಯಿಂದ ಸ್ತುತಿಸಿದ "ಅಂಬಾತನಯ"ರು ಆ ದೇವಿಯ ಮಗ ತಾನೆಂದು ಈ ಕಾವ್ಯನಾಮವನ್ನು ತಾವೇ ಇರಿಸಿಕೊಂಡವರು.
ಅಂಬಾತನಯ ಅವರ ಮೂಲ ಹೆಸರು ಕೇಶವ ಶೆಟ್ಟಿಗಾರ್. "ಜಗದಂಬೆ ವರದೆ ಶುಭವಿಭವೆ ಸುಖದೆ ತಾಯಾಗಿ ಎನ್ನ ಪೊರೆದೆ" ಎಂದು ಕಾರ್ಕಳ ತಾಲೂಕು ಮುದ್ರಾಡಿ ಸಮೀಪದ ಭಕ್ರೆ ಮಠದ ಶ್ರೀ ಭದ್ರಕಾಳಿ ದೇವಿಯನ್ನು ಭಕ್ತಿಯಿಂದ ಸ್ತುತಿಸಿದ "ಅಂಬಾತನಯ"ರು ಆ ದೇವಿಯ ಮಗ ತಾನೆಂದು ಈ ಕಾವ್ಯನಾಮವನ್ನು ತಾವೇ ಇರಿಸಿಕೊಂಡವರು.
ಅಂಬಾತನಯ ಮುದ್ರಾಡಿ ಅವರು 1935ರ ಜೂನ್ 4ರಂದು ಜನಿಸಿದರು. ಅವರ ಶಾಲಾ ವಿದ್ಯಾಭ್ಯಾಸ ಎಂಟನೆಯ ತರಗತಿಯವರೆಗೆ ಆದರೂ ಅವರ ಲೋಕಜ್ಞಾನ ವಿಶೇಷವಾದುದು. ಸ್ವಂತ ಆಸಕ್ತಿಯಿಂದ ಅಧ್ಯಯನ ಮಾಡಿ ಬೆಳೆದ ವ್ಯಕ್ತಿತ್ವ ಅಂಬಾತನಯರದು. ದನ ಮೇಯಿಸುತ್ತಿದ್ದ ಹುಡುಗನನ್ನು ಶಾಲೆಗೆ ಕರೆತಂದು ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಿದ ಗುರು ಮುದ್ರಾಡಿಯ ಮರಿಯಪ್ಪ ಕಲ್ಕೂರರನ್ನು ಅವರು ಸದಾ ನೆನೆಯುತ್ತಿದ್ದರು. ಸಾಹಿತ್ಯ ಪ್ರೇರಣೆಯನ್ನು ಅಂಬಾತನಯರಲ್ಲಿ ಬಿತ್ತಿದ ಗುರುವೆಂದರೆ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟರು.
ಅಂಬಾತನಯ ಮುದ್ರಾಡಿ ಅವರು ಕವಿ, ನಾಟಕಕಾರ, ವಚನಕಾರ, ಯಕ್ಷಗಾನ ಪ್ರಸಂಗಕರ್ತ, ಯಕ್ಷಗಾನ ಅರ್ಥಧಾರಿ, ಹರಿದಾಸ, ಜಿನದಾಸ, ವಿಡಂಬನಕಾರ, ವಾಗ್ಮಿ, ಚಿಂತನ ಅಂಕಣಕಾರ, ಶಿಕ್ಷಕರ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿ, ಹೀಗೆ ಸಾಹಿತ್ಯದ ವಿವಿಧ ಮಗ್ಗುಲುಗಳಲ್ಲಿ ಪರಿಶ್ರಮ ವಹಿಸಿದವರು, ಕೃಷಿ ಮಾಡಿದವರು.
ಅಂಬಾತನಯ ಮುದ್ರಾಡಿ ಅವರು ಸತತ ಮೂವತ್ತಾರು ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ದುಡಿದು 1993ರಲ್ಲಿ ನಿವೃತ್ತಿ ಪಡೆದರು.
ತಮ್ಮ ಯಕ್ಷಗಾನದ ಪಯಣದ ಬಗ್ಗೆ ಹೇಳುತ್ತಿದ್ದ ಅವರು "ನಾನು ಯಕ್ಷಗಾನ ವೇಷಧಾರಿಯಲ್ಲ; ಚಿಕ್ಕವನಿರುವಾಗ ತಂದೆ ಬೂಬ ಶೆಟ್ಟಿಗಾರ್ ಅವರ ಜತೆ ತಾಳಮದ್ದಳೆಗೆ ಹೋಗುತ್ತಿದ್ದೆ. ಅವರು ಹೇಳುತ್ತಿದ್ದ ಕಥೆಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದೆ. ನಂತರ ತಾಳಮದ್ದಳೆಯಲ್ಲಿ ಆಸಕ್ತಿ ಬಂದು ಅಮೃತೇಶ್ವರಿ ಇಡುಗುಂಜಿ ಮೇಳದಲ್ಲಿ ಮೂರೂವರೆ ವರ್ಷ ಮಾತುಗಾರನಾಗಿದ್ದೆ. ಬಳಿಕ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿದೆ" ಎನ್ನುತ್ತಿದ್ದರು
ಅಂಬಾತನಯ ಮುದ್ರಾಡಿ ಅವರ ವಿಹಾರವಾಚಿಕೆ 1960ರಲ್ಲಿ ಪ್ರಕಟಗೊಂಡಿತು. ಇದು ಚತುರ್ದಶ ಪಥಗಳ (ಸಾನೆಟ್‌ಗಳ) ಸಂಕಲನ. ಇದು ಇವರ ಮೊತ್ತಮೊದಲ ಪ್ರಕಟಿತ ಕೃತಿ. ಇದಕ್ಕೆ ಮುನ್ನುಡಿ ಬರೆದವರು ರಾಷ್ಟ್ರಕವಿ ಎಂ. ಗೋವಿಂದ ಪೈಗಳು. ಇವರ ಪರಿತ್ಯಕ್ತ ನಾಟಕಕ್ಕೆ (1992) ಮುನ್ನುಡಿ ಬರೆದವರು ಸೇಡಿಯಾಪು ಕೃಷ್ಣಭಟ್ಟರು, ದರ್ಶನ ಧ್ವನಿ ಕವನ ಸಂಕಲನಕ್ಕೆ ಬರೆದವರು ಪ್ರೊ| ಎಸ್.ವಿ. ಪರಮೇಶ್ವರ ಭಟ್ಟರು, ಪ್ರಜಾಪ್ರಭುತೇಶ್ವರ ವಚನ ಶತಕ ವಿಡಂಬನ ವಚನಕೃತಿಗೆ ಮುನ್ನುಡಿಕಾರರು ಪ್ರೊ| ಕು.ಶಿ. ಹರಿದಾಸ ಭಟ್ಟರು, ಹೆಸರಿಲ್ಲದವನ ಹೆಸರು ವಿಷ್ಣು ಸಹಸ್ರನಾಮದ 108 ನಾಮಗಳ ಕವನರೂಪ ಮತ್ತು ಧೂರ್ತ ರಾಜಕೀಯ ನಾಯಕಾಷ್ಟೋತ್ತರ ಶತನಾಮಾವಳಿ ವಿಡಂಬನ ನಾಮಾವಳಿ ಕೃತಿಗಳಿಗೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು, ಒರತೆ ಚಿಂತನಬರಹಗಳ ಸಂಕಲನದ ಮುನ್ನುಡಿ ಕಾರರು ಪ್ರೊ| ಅಮೃತ ಸೋಮೇಶ್ವರರು, ಗುರು ಗೀತಾಮೃತ ಭಕ್ತಿಗೀತಗಳ ಸಂಕಲನಕ್ಕೆ ಮುನ್ನುಡಿ ಬರೆದವರು ಶತಾವಧಾನಿ ಡಾ| ಆರ್. ಗಣೇಶರು, ಶ್ರೀ ದುರ್ಗಾಭಜನೆಗೆ ಮುನ್ನುಡಿ ಬರೆದವರು ಡಾ| ಕಬ್ಬಿನಾಲೆ ವಸಂತ ಭಾರದ್ವಾಜರು. ಹೀಗೆ ಕನ್ನಡದ ಎಲ್ಲ ತಲೆಮಾರಿನ ಶ್ರೇಷ್ಠ ವಿದ್ವಾಂಸರ ಸಂಪರ್ಕ ಅಂಬಾತನಯರ ಜೊತೆಗಿತ್ತು.
ಅಂಬಾತನಯ ಮುದ್ರಾಡಿ ಅವರು ಕರ್ಣನ ಕುರಿತು ರಚಿಸಿದ ಪರಿತ್ಯಕ್ತ ನಾಟಕ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪಠ್ಯ ವಾಗಿತ್ತು. ರಾಜಕೀಯದ ವ್ಯಂಗ್ಯ ನೋಟವಿರುವ ಅವರ ‘ದೂರ್ತ ರಾಜಕೀಯ ನಾಯಕಾಷ್ಟೋತ್ತರ ಶತನಾಮಾವಲೀ’ ಸಾಹಿತ್ಯ ಸಂದರ್ಭದ ವಿಶೇಷ ಕೃತಿ, ವಿಭಿನ್ನ ಹಾದಿಯ ದರ್ಶನ ಕೃತಿ. ಅವರು ಯಕ್ಷಗಾನ ಪ್ರಸಂಗ ಸಹಿತ 200ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದು, ಅವುಗಳಲ್ಲಿ ಅರ್ಧದಷ್ಟೇ ಪ್ರಕಟಣೆಗೊಂಡಿವೆ.
ಸಾಮಾನ್ಯವಾಗಿ ಯೌವನದಲ್ಲಿ ಶೃಂಗಾರ ಸಂಬಂಧಿಯಾದ ಕೃತಿಗಳನ್ನು, ಪಕ್ವ ವಯಸ್ಸಿ ನಲ್ಲಿ ಅಧ್ಯಾತ್ಮ ಸಂಬಂಧಿಯಾದ ಕೃತಿಗಳನ್ನು ಬರೆಯುತ್ತಾರೆಂದು ತಿಳಿಯಲಾಗಿದೆ. ಆದರೆ ಅಂಬಾತನಯರು ಕಿನ್ನರ - ಕಿನ್ನರಿ ಎಂಬ ಪ್ರೇಮಗೀತೆಗಳ ಸಂಕಲನವನ್ನು ಹೊರ ತಂದುದು ಅವರ ಎಪ್ಪತ್ತೈದರ ಮಾಗಿದ ವಯಸ್ಸಿನ ಅನಂತರ. ಕನ್ನಡ ಸಾಹಿತ್ಯದ ದೃಷ್ಟಿಯಿಂದ ನೋಡುವುದಾದರೆ, ಅದು ನವ್ಯೋತ್ತರ - ದಲಿತ ಬಂಡಾಯ ಕಾಲದಲ್ಲಿ ಬಂದುದು. ಪ್ರೇಮಗೀತೆಗಳಿಗೆ ಈ ಚಳುವಳಿಗಳ ಹಂಗಿಲ್ಲವೆಂಬುದನ್ನು ಪ್ರತಿಪಾದಿಸಿದವರು.
ಅಂಬಾತನಯರದು ಭಾವಪ್ರಧಾನವಾದ ಅರ್ಥಗಾರಿಕೆಯೆಂದು ಪ್ರಸಿದ್ಧಿ ಇದೆ. ಕರ್ಣ, ರುಕ್ಮಾಂಗದ, ಧರ್ಮರಾಯ, ವಿದುರ, ಭರತ, ಅತಿಕಾಯ, ಸಂಜಯ ಮೊದಲಾದ ಅವರ ನಿರೂಪಣೆಗಳು ವಿಶಿಷ್ಟವಾದ ರೀತಿಯಲ್ಲಿ ಹೊರಹೊಮ್ಮುವಂತಹವು. ಹೊಸಕಾಲದ ಯಕ್ಷಗಾನ ಪ್ರಸಂಗಕರ್ತರಾಗಿಯೂ ಅವರದು ಗಮನಾರ್ಹವಾದ ಹೆಸರು. ಮಹಾಸತಿ ಅನಸೂಯಾ, ಭಕ್ತ ಪ್ರಹ್ಲಾದ ಎರಡು ಕೃತಿಗಳು ಮಾತ್ರವೇ ಪ್ರಕಟಗೊಂಡಿವೆ. ಪಾಂಡುಚರಿತ್ರೆ, ಹನುಮದ್ವಿಲಾಸ, ರಾಜಾ ಚಿತ್ರಕೇತು, ಆನಂದಲೇಖಾ, ಚಿತ್ರಲೇಖಾ, ಸತೀ ರೂಪಮತಿ ಮೊದಲಾದ ಕೃತಿಗಳು ಪ್ರಕಟಗೊಂಡಿಲ್ಲ. ಕ್ರಿಸ್ತ ಕಾರುಣ್ಯದಂತಹ ವಿಭಿನ್ನ ವಸ್ತುವನ್ನಿರಿಸಿಕೊಂಡು ಪ್ರಸಂಗ ಬರೆದ ಹಿರಿಮೆ ಅವರದು. ಹಿರಿಯ ಅರ್ಥಧಾರಿಗಳಾದ ಮಲ್ಪೆ ಶಂಕರನಾರಾಯಣ ಸಾಮಗ, ರಾಮದಾಸ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್ಟ, ಪೆರ್ಲ ಕೃಷ್ಣ ಭಟ್ಟ, ಪೊಲ್ಯ ದೇಜಪ್ಪ ಶೆಟ್ಟಿ, ಕುಂಬಳೆ ಸುಂದರ ರಾವ್, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಎಂ. ಪ್ರಭಾಕರ ಜೋಶಿ ಮೊದಲಾದ ಹಿರಿಯ ಅರ್ಥಧಾರಿಗಳೊಡನೆ ತಾಳೆಮದ್ದಳೆಗಳಲ್ಲಿ ಭಾಗವಹಿಸಿದ ಅನುಭವಿ ಅಂಬಾತನಯರು.
ಕುಂಬಳೆ ಸುಂದರ ರಾವ್ ಅವರು ಒಂದೆಡೆ ಅಂಬಾತನಯರ ಬಗೆಗೆ ಹೇಳಿದ ಮಾತು: "ಅಂಬಾತನಯರಿಗೆ ಭಾಷಾ ಶುದ್ಧಿಯಿದೆ; ಸಿದ್ಧಿಯಿದೆ. ಅಪೂರ್ವವಾದ ಶ್ರುತಿ ಮೇಲಿನ ಧ್ವನಿಶಕ್ತಿಯಿದೆ. ಅವರೊಂದಿಗೆ ಅನೇಕ ಸಲ ಅರ್ಥ ಹೇಳಿದ್ದೇನೆ; ಸಂತೋಷ ತಾಳಿದ್ದೇನೆ. ಅವರು ಸಂವಾದಕ್ಕೆ ಹತ್ತಿರ ಬರುತ್ತಾರೆ; ವಾದಕ್ಕೆ ದೂರ ಸರಿಯುತ್ತಾರೆ." ನಿಜ ಜೀವನದಲ್ಲೂ ಅವರು ಸಂವಾದ - ಮಾತುಕತೆಗಳಿಗೆ ಹತ್ತಿರ; ವಾದ ವಿವಾದಗಳಿಗೆ ದೂರ.
ಒರತೆ ಎಂಬುದು ಅಂಬಾತನಯರ ಆಕಾಶವಾಣಿ ಚಿಂತನೆಗಳ ಸಂಕಲನ. ಆ ಚಿಂತನ ಲೇಖನಗಳೊಳಗೆ ಹಲವಾರು ಕವಿತೆಗಳಿವೆ. ತಮ್ಮ ಆಶುಕವಿತಾ ಸಾಮರ್ಥ್ಯದಿಂದ ಅವರು ಎಷ್ಟೋ ಅಷ್ಟಾವಧಾನ ಕಾರ್ಯಕ್ರಮಗಳಿಗೆ ಪೃಚ್ಛಕರಾಗಿ ಆಮಂತ್ರಿತರಾದವರು. ಡಾ. ಆರ್. ಗಣೇಶ್ ಮತ್ತು ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಹಲವಾರು ಅಷ್ಟಾವಧಾನಗಳಲ್ಲಿ ಭಾಗವಹಿಸಿದ ಅನುಭವ ಅವರಿಗಿದೆ. ದತ್ತಪದಿ, ಸಮಸ್ಯಾಪೂರಣ ಇತ್ಯಾದಿಗಳ ಪೃಚ್ಛಕರಾಗಿ ಸೇವೆ ನಿರ್ವಹಿಸಿದ್ದಾರೆ. "ನೀನು ಸೈಕಲು ಮೆಟ್ಟಿ ನಾರಿಯ ನೆಲೆಗೆ ಸೇರಿಸಿದೆ" ಎಂಬ ವಾಕ್ಯ ಕೊಟ್ಟು ರಾಮಾಯಣದ ಘಟನೆಗೆ ಅನ್ವಯಿಸಿ ಪದ್ಯ ರಚನೆಗೆ ಅವರು ಕರೆಕೊಟ್ಟರು ಒಂದೆಡೆ.
ಅಂಬಾತನಯ ಮುದ್ರಾಡಿ ಅವರಿಗೆ ಯಾದವರಾವ್ ಪ್ರಶಸ್ತಿ, ಪೊಲ್ಯ ದೇಜಪ್ಪ ಶೆಟ್ಟಿ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ, ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ, ನಿಂಜೂರು ಪ್ರಶಸ್ತಿ, ಮಟ್ಟು ಗೋವರ್ಧನ ರಾವ್ ಪ್ರಶಸ್ತಿ, ಮುಂಬಯಿ ಪದವೀಧರ ಯಕ್ಷಗಾನ ಪ್ರಶಸ್ತಿ, ಪೊಳಲಿ ಶಾಸ್ತ್ರೀ ಪ್ರಶಸ್ತಿ, ಕುಕ್ಕಿಲ ಕೃಷ್ಣಭಟ್ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ರಾಮ ವಿಠಲ ಪ್ರಶಸ್ತಿ, ಪಲಿಮಾರು ಶ್ರೀಗಳಿಂದ ಸಾಹಿತ್ಯ ಸಿರಿ ಪ್ರಶಸ್ತಿ, ಸಾಹಿತ್ಯ ಕಲಾ ವಾಚಸ್ಪತಿ ಪ್ರಶಸ್ತಿ, ಪತ್ರಿಕಾ ದಿನದ ಗೌರವ, ಅಖಿಲ ಭಾರತ 74ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಶ್ರೀ ಪ್ರಶಸ್ತಿ, 2019ನೇ ಸಾಲಿನ ಯಕ್ಷಗಾನ ಅಕಾಡಮಿಯ ಪ್ರತಿಷ್ಠಿತ ಪಾರ್ಥಿಸುಬ್ಬ ಪ್ರಶಸ್ತಿ, 7ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 2008ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ, ಗೌರವಗಳು ಅವರನ್ನು ಅರಸಿ ಬಂದಿದ್ದವು. ಅವರ 75ರ ಅಭಿನಂದನೆಯೊಡನೆ ಅವರ ಸಾಹಿತ್ಯದ ಬಗೆಗೆ ಒಂದು ದಿನದ ವಿಚಾರಗೋಷ್ಠಿ ನಡೆಸಿ "ಸುಮನಸ" ಎಂಬ ಅಭಿನಂದನ ಗ್ರಂಥವನ್ನು ಮುಂಬಯಿಯಲ್ಲಿ ಸಮರ್ಪಿಸಲಾಯಿತು.
ನಾಡಿನ ಮಹಾನ್ ಹಿರಿಯ ವಿದ್ವಾಂಸರಾದ ಅಂಬಾತನಯ ಮುದ್ರಾಡಿ ಅವರು 2023ರ ಫೆಬ್ರುವರಿ 21ರಂದು ಈ ಲೋಕವನ್ನಗಲಿದರು.
great scholar Ambatanaya Mudradi
ಕಾಮೆಂಟ್‌ಗಳು