ಅನುರಾಧಾ ಸಾಮಗ
ಅನುರಾಧಾ ಪಿ ಸಾಮಗ
ಕಾವ್ಯವೆಂದರೆ ನನಗೆ ಸುಲಭವಾಗಿ ದಕ್ಕದ್ದು ಎನಿಸಿ ಸ್ವಲ್ಪ ದೂರವಿರುವಂತಾದರೂ, ಆಗಾಗ ಕೆಲವೊಬ್ಬರ ಕವಿತೆಗಳನ್ನು ಕಂಡೊಡನೆ ಓದದೆ ಬಿಡಲು ಕಣ್ಗಳು ಆಚೀಚೆ ಓಡುವುದಿಲ್ಲ. ಅನುರಾಧಾ ಪಿ ಸಾಮಗ ಅವರ ಕವಿತೆಗಳು ಫೇಸ್ಬುಕ್ ಗೋಡೆಯ ಮೇಲೆ ಕಂಡೊಡನೆ ಕೂಡಾ ಹೀಗೆಯೇ..... ಅದನ್ನು ಪೂರ್ತಿ ಓದುವ ತನಕ ಸುಮ್ಮನಿರಲಾಗುವುದಿಲ್ಲ. ಇದೋ ಅಂತದ್ದೊಂದು ಅನುರಾಧಾ ಕವಿತೆ:
ಇದ್ದಕ್ಕಿದ್ದಂತೆ ನವಿಲಾಗುತ್ತದೆ ಅಂಗಳ
ತೊಟ್ಟು ಕಳಚಿದ ಹೂವೊಂದು ಕಚಗುಳಿಯಿಡುತ
ಷೋಡಶಿಯ ಮುಂಗುರುಳಂತೆ
ಬಲುಚುರುಕು ಎಳೆಮುಗುಳಂತೆ
ಸುಖವೊಂದು ಸುಮ್ಮಸುಮ್ಮನಾಗ ಸಾಂಕ್ರಾಮಿಕ!
ಹೆಣ್ಣು ಹೂವಾಗುವ
ಹೂವು ಹೆಣ್ಣಾಗುವ
ವಿಸ್ಮಯಕೆ ಮೌನ ಸಾಕ್ಷಿಯಾಗುವಾಗ
ಬುಳುಬುಳು ಒಸರುವ ಒರತೆ
ಎದೆಗೆ ಹೊಸಲಯದ ಪಾಠ ಹೇಳುವುದು
ನುಗ್ಗಿ ಮೂಲೆಮೂಲೆಗು ಕೆಂಪು
ಲೋಕ ನಗೆಯ ಗುಲಾಬಿಯೆನುವುದು
ಹಳದಿಯ ಹೊನ್ನೆನುವುದು
ನೀಲಿಯ ನಲಿವೆನುವುದು
ಅಲ್ಲೆಲ್ಲೋ ಯಾರೋ ಬರುವ ಕನಸು
ಹೊರಳಿರಬೇಕು
ಅರೆ!!!
ಏನೆಲ್ಲ ಆಗಿಹೋಯಿತು!
ಅರೆನಿಮೀಲಿತವದರ ಕಣ್ಣಲಿ ಇನ್ಯಾರೋ ಇಣುಕಿ ತಪ್ಪಾಯಿತು...
ಹೊರಳಿಯಾಕಳಿಸಿ ನಿದ್ದೆಹೋಗಿದೆ ಕನಸು
ಮುಖದ ದಿಕ್ಕಷ್ಟೇ ಈಗ ಬದಲು..
ಇನ್ನೇನು ಸಂಜೆ ಬರುವ ಹೊತ್ತು
ಎಲ್ಲ ಮರಳುವ ಹೊತ್ತು
ಕಳಚಿಡುತಿದೆ ಅಂಗಳ
ನವಿಲೀಗ ಬರಿದೆ ಹುಡುಕುತದೆ ಮೋಡ
ಲೋಕದ್ದೊಂದೇ ಪ್ರಶ್ನೆ
ಬಂದದ್ದಾದರೂ ಯಾಕೆ
ಹೋದವರು ಹೋದದ್ದೆಲ್ಲಿಗೆ
ಮುಗುಳುನಗುವುದು ಹೆಣ್ಣೋ ಹೂವೋ...
ಅಯೋಮಯವೊಂದು ಕಣ್ಕೂಡಿಸುತದೆ
'ನಿನ್ನೆ ಹೋದಲ್ಲಿಂದಲೇ ಬಂದದ್ದು
ಮತ್ತೆ ನಾಳೆ ಬರಲೆಂದೇ ಹೋದದ್ದು''
ಸುಮ್ಮನೊಪ್ಪುತದೆ ಲೋಕ
ಅವಳೂ ನೆಚ್ಚಿಕೊಳುತಾಳೆ
ಹೆಣ್ಣಿಗೆ ಹೂವಿನೊಳಗೊಂದು ನೆಲೆಯುಂಟು
ಹೂವಿಗೂ ಹೆಣ್ಣಿನದೆ ನೂರು ಹೆಸರುಂಟು....
ಫೆಬ್ರವರಿ 17, ಈ ಕವಯತ್ರಿ ಮತ್ತು ಸುಗಮ ಸಂಗೀತಗಾರ್ತಿ ಅನುರಾಧಾ ಪಿ ಸಾಮಗರ ಜನ್ಮದಿನ. ಉಡುಪಿಯಿಂದ ಸುಮಾರು ಹನ್ನೆರಡು ಮೈಲಿ ದೂರದಲ್ಲಿ ಕಾಪು ಅನ್ನುವ ಕಡಲತಡಿಯ ಚಂದದ ಊರಾದ ಉಳಿಯಾರು ಅನ್ನುವ ಗ್ರಾಮ ಇವರು ಹುಟ್ಟಿ ಬೆಳೆದ ಊರು. ಓದು, ಹಾಡು, ಹರಿಕಥೆ, ನಾಟಕಗಳಲ್ಲೆಲ್ಲ ಮುಂಚೂಣಿಯಲ್ಲಿದ್ದ ಇವರು ಊರಿನ, ಶಾಲೆಯ, ಕುಟುಂಬದ ಕಣ್ಮಣಿಯೆಂಬಂತೆ ಬೆಳೆದರು.
ಬಾಲಕಿ ಅನುರಾಧಾ ಅವರಿಗೆ ಇಡೀದಿನ ಮನೆಯಲ್ಲಿದ್ದ ಭಜನೆ, ಮಂತ್ರ, ಸುಪ್ರಭಾತ, ಪೂಜೆಯ ಹಾಡು, ಆರತಿಯ ಹಾಡುಗಳ ಮೂಲಕ ಕಾವ್ಯವೆಂಬ ಸೊಗಸಿನ ಪರಿಚಯವಾದರೆ, ಶಾಲೆಯಲ್ಲಿ ಪೌರಾಣಿಕ ನಾಟಕಗಳಲ್ಲಿ ಭಾಗವಹಿಸಿ ಪುಟಗಟ್ಟಲೆ ಕಾವ್ಯಾತ್ಮಕ ಸಂಭಾಷಣೆಗಳನ್ನು ಕಲಿಯುತ್ತಿದ್ದದರಿಂದ ಮತ್ತು ಪಠ್ಯದಲ್ಲಿನ ಪದ್ಯಪಾಠಗಳನ್ನು ರಾಗವಾಗಿ ಹಾಡಿ ಅದರ ಸವಿಯುಣಿಸುತ್ತಿದ್ದ ಅಧ್ಯಾಪಕರುಗಳ ದೆಸೆಯಿಂದಾಗಿ, ಹಾಡು ಕಟ್ಟುವುದು ಅನ್ನುವುದು ಸದಾ ಪ್ರಿಯವಾಗಿತ್ತು. ಐದನೇ ತರಗತಿಯಲ್ಲಿ ಅಜ್ಜನಗಡ್ಡ ಅನ್ನುವ ಗಾಳಿಯಲ್ಲಿ ಹಾರಿಹೋಗುವ ಬೀಜವೊಂದರ ಮೇಲೆ ಪದ್ಯ ಬರೆದಿದ್ದು ಅದು ಆಗಷ್ಟೇ ಆರಂಭವಾಗಿದ್ದ ತರಂಗ ವಾರಪತ್ರಿಕೆಯಲ್ಲಿ ಪ್ರಕಟವೂ ಆಗಿತ್ತು. ಮುಂದೆ ಹಾಗೇ ತನ್ನ ಪಾಡಿಗೆ ಇವರು ಬರೆಯುತ್ತಿದ್ದ ಅನೇಕ ಪದ್ಯಗಳು, ಬರೆಯುವ ಸುಖವಷ್ಟೇ ಸಾಕು ಅನ್ನುವ ಅವರ (ಇಂದಿಗೂ ಬದಲಾಗಿಲ್ಲದ) ನಿಲುವಿನಿಂದಾಗಿ ಎಲ್ಲೆಲ್ಲೋ ಕಳೆದುಹೋದವು. ಆದರೆ ಆ ಹೆಜ್ಜೆಗಳು ಅವರೊಳಗೆ ಭಾಷೆಯೆಂಬ ಸೊಗಸು ಸುಂದರವಾಗಿ ಗರಿಗೆದರುವಂತೆ ಮಾಡಿದವು.
ಗ್ರಾಮದ ವಾತಾವರಣದಲ್ಲಿ ನಲಿ ನಲಿಯತ್ತಾ 9ನೇ ತರಗತಿಯವರೆಗೆ ಓದಿ ಬೆಳೆದ ಅನುರಾಧಾ ಅವರಿಗೆ ಇದ್ದಕ್ಕಿದ್ದ ಹಾಗೆ ಪಟ್ಟಣದ ಕಾನ್ವೆಂಟ್ ಆವರಣ ಬೆಚ್ಚು ಬೀಳಿಸಿತಾದರು ಛಲವೊಂದು ಮೂಡಿ ಎಲ್ಲರನ್ನೂ ಮೀರಿಸಿ ಅತಿ ಹೆಚ್ಚು ಅಂಕಗಳಿಸಿ ಮೊದಲ ಸ್ಥಾನದಲ್ಲಿ ಎಸ್‍ಎಸ್ಎಲ್‍ಸಿಯಲ್ಲಿ ಉತ್ತೀರ್ಣರಾಗಿ ಊರಿಗೆ ಊರೇ ಸಂಭ್ರಮಿಸುವಂತೆ ಮಾಡಿದರು.
ಕಾಲೇಜಿನಲ್ಲಿ ಅನುರಾಧಾ ಅವರಿಗೆ ಕಲಾವಿಭಾಗದಲ್ಲಿ ಓದಬೇಕು ಎಂಬ ಆಸಕ್ತಿ ಇತ್ತು. ಆದರೆ ಅರ್ಜಿಕೊಡಲು ಹೋದಾಗ ಕಾಲೇಜಿನಲ್ಲಿ ಕುಟುಂಬಕ್ಕೆ ತಿಳಿದ ಅಧ್ಯಾಪಕರೊಬ್ಬರು, ಇಷ್ಟು ಚೆನ್ನಾಗಿ ಮಾರ್ಕು ಪಡೆದಿರುವ ವಿದ್ಯಾರ್ಥಿ ವಿಜ್ಞಾನ ಓದದಿದ್ದರೆ ಹೇಗೆ, ಎಂದು ಅವರೇ ಅರ್ಜಿಯನ್ನು ತಮ್ಮ ತೀರ್ಮಾನಕ್ಕೆ ಬದಲಿಸಿದ ಕಾರಣ ಅನುರಾಧಾ ವಿಜ್ಞಾನದ ವಿದ್ಯಾರ್ಥಿನಿಯಾದರು. ಹಾಗೆ, ಬಿ.ಎಸ್ಸಿ ಪದವಿಯನ್ನು ಡಿಸ್ಟಿಂಕ್ಷನ್ ಅಲ್ಲಿ ಪಡೆದರು. ಊರ ಹಿರಿಯರ ಒತ್ತಾಸೆಯಿಂದ ಡಿಪಾರ್ಟ್ಮೆಂಟ್ ಆಫಾ ಟೆಲಿಕಾಂನಲ್ಲಿನ ಜಾಹೀರಾತಿಗೆ ಅರ್ಜಿ ಹಾಕಿ, ಆಯ್ಕೆ ಪರೀಕ್ಷೆಯಲ್ಲಿ ಬರೆದಾಗ ಅಭಿಯಂತರರಾಗಿ ಕೆಲಸ ಮನೆಗೇ ಹುಡುಕಿಕೊಂಡು ಬಂತು.
ಮುಂದೆ ಅನುರಾಧಾ ಅವರು ಪ್ರಶಾಂತ ಸಾಮಗ ಅವರನ್ನು ವರಿಸಿ ಅನುರಾಧಾ ಪಿ ಸಾಮಗ ಆದರು. ಬಿಎಸ್‍ಎನ್‍ಎಲ್‍ನಲ್ಲಿ ಹನ್ನೆರಡು ವರ್ಷ ಆಧಿಕಾರಿಗಳಾಗಿ ಸೇವೆ ಸಲ್ಲಿಸಿದ ಅವರಿಗೆ, ತಮಗೆ ತಮ್ಮ ಮಗಳು, ಕುಟುಂಬ ಮತ್ತು ಅಂತರಂಗದ ಆಸಕ್ತಿಗಳು ಮುಖ್ಯ ಎನಿಸಿದಾಗ ವೃತ್ತಿಜೀವನದಿಂದ ಹೊರಬಂದರು.
ಅನುರಾಧಾ ಪಿ ಸಾಮಗ ಅವರಿಗೆ ಸುಗಮ ಸಂಗೀತ ಮತ್ತು ಕಥೆ, ಕವನ ರಚನೆ ಆಪ್ತ ಹವ್ಯಾಸಗಳು. 'ಮೊಗ್ಗು ಮಾತಾಡಿತು' ಮತ್ತು 'ಮುಚ್ಚಿದೆವೆಯಡಿ ಕಣ್ಣ ಕನ್ನಡಿ' ಎಂಬ ಎರಡು ಕವನ ಸಂಕಲನಗಳು ಪ್ರಕಟವಾಗಿವೆ. ಶ್ರೀ ಉದ್ಯಾವರ ಮಾಧವ ಆಚಾರ್ಯರ ಜೀವನದ ಬಗೆಗಿನ ಇವರ ಬರಹ ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ' ಮೂಡಿಬಂದಿದೆ. ಅನೇಕ ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಇವರ ಬರಹಗಳು ಮೂಡಿವೆ. ಬಿಡುವಿನ ವೇಳೆಯಲ್ಲಿ ಸುಗಮ ಸಂಗೀತವನ್ನು ಮತ್ತು ಯೋಗಾಭ್ಯಾಸವನ್ನು ಆಸಕ್ತರಿಗೆ ಕಲಿಸುತ್ತಲೂ ಇದ್ದಾರೆ. ವಿಮರ್ಶೆ ಬರೆಯುತ್ತಾರೆ. ಸಮೂಹ ಮಾಧ್ಯಮಗಳಲ್ಲಿ ಇಷ್ಟವಾದ ಕವಿತೆ ವಾಚಿಸುತ್ತಾರೆ.
ಒಮ್ಮೆ ಅನುರಾಧಾ ಸಾಮಗರು ಮಹಾನ್ ಕವಿ ವಿಲಿಯಂ ಬ್ಲೇಕನ ಕವಿತೆಯೊಂದರ ಆಂತರ್ಯವನ್ನು ಹಿಡಿದಿಟ್ಟ "ಅಮಿತವನ್ನು ಅಂಗೈಯಲ್ಲಿ ಹೊಂದುವುದೇ ಅಲ್ಲವೇ ಕಾವ್ಯವೆಂದರೆ!!” ಎಂಬ ಮಾತನ್ನು ಓದುತ್ತಿದ್ದೆ. ಹೀಗೆ ಕಾವ್ಯದ ನಾಡಿಯನ್ನು ಹಿತವಾಗಿ
ಹಿಡಿದು ಸಾಗುತ್ತಿರುವವರು ಈ ಕವಯತ್ರಿ.
ಈ ಹಾದಿಯಲ್ಲಿ ಸಾಗುತ್ತಿರುವ ಅನುರಾಧಾ ಸಾಮಗರಿಗೆ ಸಿಗುತ್ತಿರುವ ಹೊಳಹುಗಳೂ ಅನೇಕವಿರಬೇಕು ಎಂದು ಅವರ ಇಂಥ ಕವಿತೆಗಳ ಸಾಲುಗಳು ಆಗಾಗ ಹೇಳುತ್ತಲಿವೆ:
ಯಾರೋ ಇತ್ತದ್ದಲ್ಲ, ಹುಡುಕಿ ಹೆಕ್ಕಿಕೊಟ್ಟದ್ದಲ್ಲ; ಭಯದುರ್ಗಮದ ಹಾದಿ ನಡು ನಾನೇ ಕಂಡುಕೊಂಡು ಜತನವಿರಿಸಿದ ನವಿಲಗರಿ.....
ನೋಡು ಲೋಕವೇ,
ಇಂದು ಮರಿಯಿಡುವ ಮಾತಾಡುತಿದೆ,
ಬದುಕೀಗ ನಿಚ್ಚಳವಾಗುತಿದೆ...
ಆತ್ಮೀಯರೂ, ಪ್ರತಿಭಾನ್ವಿತರೂ, ಉತ್ತಮ ಬರಹಗಾರ್ತಿಯೂ ಅನುರಾಧಾ ಸಾಮಗ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Anuradha Anuradha P Samaga
ಕಾಮೆಂಟ್‌ಗಳು