ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸೋರಟ್ ಅಶ್ವಥ್


 ಸೋರಟ್ ಅಶ್ವಥ್


ಕನ್ನಡ ಚಿತ್ರರಂಗ ಕಂಡ ಮಹಾನ್ ಸಾಹಿತಿಗಳಲ್ಲಿ ಸೋರಟ್ ಅಶ್ವಥ್ ಒಬ್ಬರು.  ‘ಗಾಳಿ ಗೋಪುರ’, ‘ನಾಡಿನಂದ ಈ ದೀಪಾವಳಿ ಬಂತು ಸಂತೋಷ ತಾಳಿ’, ‘ಬಾ ಬಾ ಬಾ ರಾಗವಾಗಿ’, ‘ತೂಕಡಿಸಿ ತೂಕಡಿಸಿ ಬೀಳದಿರೋ ತಮ್ಮ’,  ‘ಹಾಡುವ ಮುರಳಿಯ ನಲಿಯುವ ಗೆಜ್ಜೆಯ ಎದೆಯಲಿ ಒಂದೇ ರಾಗ .... ಅದು ಆನಂದ ಭೈರವಿ ರಾಗ’, ‘ಚೈತ್ರದ ಕುಸುಮಾಂಜಲಿ’, ‘ಕರೆಯೇ ಕೋಗಿಲೆ ಮಾಧವನ’, ‘ಪ್ರೀತಿ ಹೊನಲೇ ಹಾಯಾಗಿರಲಿ’, ‘ಲೀಲಾಮಯ ಹೇ ದೇವ ನೀ ತೋರು ದಯಾ ಭಾವ’, ‘ಇದೇ ಇದೇ ಸವಿ ಬಾಳ ದಿನ’, ‘ಹಾಡೊಂದ ಹಾಡುವೆನು’, ‘ಕಣ್ಣು ಮುಚ್ಚಿ ಕುಳಿತರೆ ಕಾಣುವೆ ನೀನೊಬ್ಬನೇ’  ಮುಂತಾದ ಶ್ರೇಷ್ಠ ಗೀತೆಗಳನ್ನು ಕನ್ನಡಕ್ಕೆ ಕೊಟ್ಟವರು ಸೋರಟ್ ಅಶ್ವಥ್.  ಇಂಥಹ ಶ್ರೇಷ್ಠ ಗೀತೆಗಳನ್ನು ಕೊಟ್ಟು ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಈ ಮಹಾನ್ ಸಾಹಿತಿ ತಾವು ಮಾತ್ರ ಬಡತನದ ಬವಣೆಯಲ್ಲೇ ಬದುಕನ್ನು ಸವೆಸಿದರು.

ನಂಜನಗೂಡಿನ ವೈದಿಕ ಮನೆತನದ ಅಗ್ನಿಹೋತ್ರಿ ಲಕ್ಷ್ಮೀನರಸಿಂಹ ಶಾಸ್ತ್ರಿಗಳ ಜ್ಯೇಷ್ಠ ಪುತ್ರನಾಗಿ ಸೋರಟ್ ಅಶ್ವಥ್ 1915ರ ಫೆಬ್ರವರಿ 15ರಂದು ಜನಿಸಿದರು. ಇವರ ಬಾಲ್ಯದ ಹೆಸರು ಅಶ್ವಥ್ ನಾರಾಯಣ ಶಾಸ್ತ್ರಿ. ಮೈಸೂರಿನ ವೆಸ್ಲಿ ಮಿಷನರಿ ಸ್ಕೂಲಿನಲ್ಲಿ ಓದಿದ ಇವರು ಸಂಸ್ಕೃತ ಶಾಲೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದರು.  ಎಸ್ಎಸ್ಎಲ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ತಂದೆ ನಂಜನಗೂಡಿನ ದೇವಾಲಯದಲ್ಲಿ ಮೇಲ್ವಿಚಾರಕರಾಗಿ ಸೇವೆಸಲ್ಲಿಸಿದ ಕಾರಣದಿಂದ ಸೋರಟ್ ಅಶ್ವಥ್ ಅವರಿಗೆ ಗಣೇಶ ದೇವಾಲಯದ ಅರ್ಚಕನ ಹುದ್ದೆ ನೀಡಲಾಯಿತು.  ಆದರೆ ಯಾವಾಗಲೂ ರಂಗಭೂಮಿಯ ಕನಸು ಹೊತ್ತು ತಿರುಗುತ್ತಿದ್ದ ಈತ ಮನೆಬಿಟ್ಟು ವರದಾಚಾರ್ಯರ ಚಾಮುಂಡೇಶ್ವರಿ ನಾಟಕ ಸಭಾ ಸೇರಬಯಸಿದರು.  ಆದರೆ ತಂದೆಯ ನಿಧನದ ವಾರ್ತೆ ತಿಳಿದು ಬಂದ ದಾರಿಯಲ್ಲೇ ಹಿಂದಿರುಗಿದರು.  ಮನೆಯ ಜವಾಬ್ಧಾರಿ ಹೊರಲು ಅಂಗಡಿಯೊಂದರಲ್ಲಿ ಕೆಲಸ ಮಾಡತೊಡಗಿದರು.  ಅವರ ತಾಯಿಯವರು ಸಹಾ ಮನೆಯ ಖರ್ಚು ಹೊಂದಿಸಲು ಅಡುಗೆ ಕೆಲಸ ಮಾಡತೊಡಗಿದರು.

ನಟ ಭಯಂಕರ ಗಂಗಾಧರರಾಯರು ಇವರ ಪ್ರತಿಭೆಯನ್ನು ಗುರುತಿಸಿ ರಂಗಪ್ರವೇಶ ಮಾಡಿಸಿದರು. ಮಹಮ್ಮದ್ ಪೀರ್ ಅವರ ನಾಟಕ ಮಂಡಳಿ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಮಹಮ್ಮದ್ ಪೀರ್ ಅವರ ಚಂದ್ರಕಲಾ ನಾಟಕ ಕಂಪೆನಿಯಲ್ಲಿ ಅವರು ಡಿಕ್ಕಿ ಮಾಧವರಾವ್, ಎಚ್. ಎಲ್. ಎನ್ ಸಿಂಹ, ಬಿ. ಆರ್. ಪಂತುಲು ಅಂತಹವರ ಜೊತೆಗಾರರಾಗಿ ದುಡಿದರು.  ತಂಗಿಯ ಮದುವೆಗಾಗಿ ಹಣಕ್ಕಾಗಿ ನಾಟಕ ಸಂಸ್ಥೆಯಿಂದ ಹೊರಬಂದು ಇದ್ದಿಲು ಮಾರಾಟದ ಸಂಸ್ಥೆಗೆ ಸೇರಿದರಾದರೂ ಮಹಮದ್ ಪೀರ್ ಅವರು ಇವರನ್ನು ನಾಟಕಕ್ಕೆ ಪುನಃ ಕರೆತಂದರು.  ಆದರೆ ಮಹಮದ್ ಪೀರ್ ಅವರ ಮರಣದಿಂದಾಗಿ ಸೋರಟ್ ಅಶ್ವಥ್ ಪುನಃ ಒಂಟಿಯಾದರು.

1940ರಲ್ಲಿ ಎಂ.ವಿ.ರಾಜಮ್ಮನವರ ‘ರಾಧಾರಮಣ’ ಚಿತ್ರಕ್ಕೆ ಚಿತ್ರಕಥೆ ರಚಿಸುವುದರ ಜೊತೆಗೆ, ಬಾಲ ನಾಗಮ್ಮ, ಭಕ್ತ ಪ್ರಹ್ಲಾದ ಮುಂತಾದ ಚಿತ್ರಗಳಲ್ಲಿ  ಕಿರು ಪಾತ್ರ ವಹಿಸುವ ಮೂಲಕ ಬೆಳ್ಳಿತೆರೆಯ ನಂಟಿಗೆ ಬಂದರು.  ಎಚ್ ಎಲ್ ಎನ್ ಸಿಂಹ ಅವರ ‘ಪ್ರೇಮಲೀಲಾ’ ಚಿತ್ರದಲ್ಲಿ ಅವರು ನಿರ್ವಹಿಸಿದ ‘ಸೋರಟ್ ರಾಮನಾಥ್’ ಪಾತ್ರ ಎಷ್ಟೊಂದು ಪರಿಣಾಮಕಾರಿಯಾಗಿತ್ತೆಂದರೆ ಅವರ ಹೆಸರು ಅಶ್ವಥ್ ನಾರಾಯಣ ಶಾಸ್ತ್ರಿ ಎಂದಿದ್ದದು, ಸೋರಟ್ ಅಶ್ವಥ್ ಎಂದೇ ಜನಪ್ರಿಯವಾಯಿತು.   ಮಹಾನಂದ ಚಿತ್ರಕ್ಕೆ ಅವರು ಸಹ ನಿರ್ದೇಶಕರಾಗಿದ್ದರು.

ಚಿತ್ರರಂಗದಲ್ಲಿ ಪೂರ್ಣಪ್ರಮಾಣದ ಕೆಲಸವಿಲ್ಲದೆ ಮತ್ತೆ ರಂಗಭೂಮಿಗೆ ಮರಳಿದ ಅಶ್ವಥ್ 1949ರಲ್ಲಿ ಜ್ಯೋತಿ ಕಲಾ ಸಂಘ ಎಂಬ ನಾಟಕ ಸಂಸ್ಥೆ ಆರಂಭಿಸಿದರು. ಅದರಲ್ಲಿ ಅವರಿಗೆ ಯಶಸ್ಸು ಕಾಣಲಿಲ್ಲ.  ಆದರೆ ನಟರಾಗಿ ಅವರು  ಅಭಿನಯಿಸಿದ ಸಂಸಾರ ನೌಖ, ಪ್ರೇಮ ಲೀಲಾ, ಕೃಷ್ಣಲೀಲಾ ನಾಟಕಗಳು ಅವರನ್ನು ಉಳಿಸಿದವು.  1953-54ರಲ್ಲಿ ಅವರು ‘ವಿಚಿತ್ರ ಪ್ರಪಂಚ’ ಮತ್ತು ‘ರೇಣುಕಾ ಮಹಾತ್ಮೆ’ ಚಿತ್ರಗಳ ಸಹಾಯಕ ನಿರ್ದೇಶಕರಾದರು.  ನಂತರದಲ್ಲಿ ರಣಧೀರ ಕಂಠೀರವ, ರಾಜಾ ಸತ್ಯವ್ರತ, ಶ್ರೀಶೈಲ ಮಹಾತ್ಮೆ, ಧರ್ಮಸ್ಥಳ ಮಹಾತ್ಮೆ, ಭಕ್ತ ಕನಕದಾಸ ಮುಂತಾದ ಚಿತ್ರಗಳಲ್ಲಿ ನಟಿಸಿದರು.  1962ರ ವರ್ಷದಲ್ಲಿ ಅವರು ರತ್ನಮಂಜರಿ, ಸ್ವರ್ಣ ಗೌರಿ ಮತ್ತು ಲವಕುಶ ಚಿತ್ರಗಳಿಗೆ ಗೀತರಚನೆ ಮಾಡಿದರು.

1963ರ ವರ್ಷದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ‘ನಂದಾದೀಪ’ವೇ ಅಲ್ಲದೆ, ವೀರಕೇಸರಿ, ಜೇನುಗೂಡು ಚಿತ್ರಗಳಿಗೆ ಸೋರಟ್ ಅಶ್ವಥ್ ಹಾಡುಗಳನ್ನು ಬರೆದರು.  ‘ಗಾಳಿಗೋಪುರ’ ಗೀತೆಯ ಪ್ರಖ್ಯಾತಿ ಅವರನ್ನು ಕನ್ನಡ ಚಿತ್ರರಂಗದ ಪ್ರತಿಷ್ಠಿತ ಗೀತರಚನಕಾರರನ್ನಾಗಿ ಪ್ರತಿಷ್ಠಾಪಿಸಿತು.  1972ರ ವರ್ಷದಲ್ಲಿ ವೈ. ಆರ್. ಸ್ವಾಮಿ ಮತ್ತು ಮಧುಕರ್ ಅವರ ಜೊತೆಗೂಡಿ ಬಾಂಧವ್ಯ ಎಂಬ ಚಿತ್ರ ನಿರ್ಮಿಸಿ ಕೈಸುಟ್ಟುಕೊಂಡರು.  ಮುಂದೆ ನಿರ್ಮಿಸಿದ ‘ಶನಿಪ್ರಭಾವ’ ಅವರ ದುರ್ದೆಸೆಯ ಮೇಲೆ ತನ್ನ ಪ್ರಭಾವವನ್ನು ಮತ್ತಷ್ಟು ವ್ಯಾಪಿಸಿತು.

ಪುಟ್ಟಣ್ಣ ಕಣಗಾಲರಿಗೆ ಸೋರಟ್ ಅಶ್ವಥ್ ಅವರ ಕುರಿತು ಗುರುವಿನ ಮೇಲಿನಂತಹ ಪ್ರೀತಿ. ಹೀಗಾಗಿ ಅವರು  ಪಡುವಾರಳ್ಳಿ ಪಾಂಡವರು ಚಿತ್ರದಲ್ಲಿ ಗೀತರಚನೆಯ ಅವಕಾಶ ಮಾಡಿಕೊಟ್ಟರು.  ತೂಕಡಿಸಿ ತೂಕಡಿಸಿ ಬೀಳದಿರೋ ತಮ್ಮ, ಕಣ್ಣುಮುಚ್ಚಿ ಕುಳಿತರೆ ಕಾಣುವೆ ನೀನೊಬ್ಬನೇ ಮುಂತಾದ ಹಾಡುಗಳು ಮತ್ತೊಮ್ಮೆ ಕನ್ನಡ ರಸಿಕರ ನಾಲಿಗೆಯ ಮೇಲೆ ಕುಣಿದಾಡಿದವು.  ಅವರು ಧರ್ಮಸೆರೆ, ರಂಗನಾಯಕಿ ಚಿತ್ರಗಳಿಗಾಗಿ ಸಹಾ ಒಂದಷ್ಟು ದುಡಿದರು.  ‘ಆನಂದ ಭೈರವಿ’, ‘ಶ್ರುತಿ’ ಚಿತ್ರಗಳಲ್ಲಿ ಅವರು ರಚಿಸಿದ ಹಾಡುಗಳೂ ಕನ್ನಡಿಗರ ಹೃದಯ ಸೆಳೆದವು.   ನಾಗತಿ ಹಳ್ಳಿ ಚಂದ್ರಶೇಖರರು ಸೋರಟ್ ಅಶ್ವಥ್ ಅವರನ್ನು ‘ಹೂಮಳೆ’ ಚಿತ್ರಕ್ಕಾಗಿ ಆಹ್ವಾನಿಸಿದ್ದರು.

ಹೀಗೆ 60 ಚಿತ್ರಗಳಿಗೆ ಸಂಭಾಷಣೆ, ಸುಮಾರು 160 ಚಿತ್ರಗೀತೆಗಳನ್ನು ಸೋರಟ್ ಅಶ್ವಥ್ ರಚಿಸಿದರು.  1998ರ ಫೆಬ್ರವರಿ 5ರಂದು ಸೋರಟ್ ಅಶ್ವಥ್ ಅವರು ನಿಧನ ಹೊಂದಿದರು. 1994ರ ವರ್ಷದಲ್ಲಿ ಅವರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಗೌರವ ನೀಡಿ ಗೌರವಿಸಿತ್ತು.   ಇತ್ತೀಚಿನ ವರ್ಷದಲ್ಲಿ  ನಿಧನರಾದ ಅವರ ಪುತ್ರಿ ಜ್ಯೋತಿ ಅವರು ಹಿನ್ನಲೆ ಗಾಯಕಿಯಾಗಿ, ವಾದ್ಯವೃಂದ ಮತ್ತು ಸಂಗೀತ ಶಾಲೆ ನಡೆಸಿ ಖ್ಯಾತಿ ಗಳಿಸಿದ್ದರು.    ಬನಶಂಕರಿ ಮೂರನೇ ಹಂತದಲ್ಲಿರುವ ಉದ್ಯಾನವನಕ್ಕೆ ಸೋರಟ್ ಅಶ್ವಥ್ ಅವರ ಹೆಸರನ್ನು ಇರಿಸಲಾಗಿದೆ.

ಚಿತ್ರ ವಿವರ: ಸೋರಟ್ ಅಶ್ವಥ್ (ಎಡಭಾಗದಲ್ಲಿರುವವರು), ವೈ.ಆರ್. ಸ್ವಾಮಿ,  ಕೆ.ಎಸ್. ಅಶ್ವಥ್ ಮತ್ತು ಪಿ. ಬಿ. ಶ್ರೀನಿವಾಸ್ ಅವರೊಂದಿಗೆ

On the birth anniversary of playwright, lyricist and actor Sorat Ashwath 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ