ರೋಹನ್ ಬೋಪಣ್ಣ
ರೋಹನ್ ಬೋಪಣ್ಣ
ಭಾರತೀಯ ಟೆನ್ನಿಸ್ ಕ್ರೀಡೆಯ ತಾರೆ ನಮ್ಮ ಕೊಡಗಿನ ರೋಹನ್ ಬೋಪಣ್ಣ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ ಬನ್ನಿ. 2024 ವರ್ಷದಲ್ಲಿ ತಮ್ಮ 43ನೇ ವಯಸ್ಸಿನಲ್ಲಿ ಅದ್ಭುತವಾಗಿ ಆಡಿ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಗೆದ್ದ ಇವರು, ವಿಶ್ವದ ನಂಬರ್ ಒನ್ ಸ್ಥಾನ ತಲುಪಿದ ಅತ್ಯಂತ ಹಿರಿಯ ಆಟಗಾರನೆಂಬ ದಾಖಲೆ ಬರೆದಿದ್ದಾರೆ.
ರೋಹನ್ ಬೋಪಣ್ಣ ಹುಟ್ಟಿದ್ದು 1980ರ ಮಾರ್ಚ್ 4ರಂದು.
ನಮ್ಮ ಬೋಪಣ್ಣ ಪಾಕಿಸ್ಥಾನದ ತನ್ನ ಗೆಳೆಯ ಆಯಿಸಂ ಉಲ್ ಹಕ್ ಖುರೇಷಿ ಜೊತೆಗೂಡಿ ವಿಶ್ವ ಟೆನ್ನಿಸ್ ಡಬಲ್ಸ್ ಕ್ರೀಡೆಯಲ್ಲಿ ಪ್ರತಿಷ್ಟಿತ ಸಾಧನೆ ಮಾಡಿದವರು. ಈ ಮೂಲಕ ಈ ಭಾರತ ಪಾಕ್ ಅಪೂರ್ವ ಜೋಡಿ 'ಇಂಡೋ ಪಾಕ್ ಎಕ್ಸ್ ಪ್ರೆಸ್' ಎಂದು ಹೆಸರು ಮಾಡಿದರು.
ನಮ್ಮ ಬೋಪಣ್ಣ ಮತ್ತು ಆಯಿಸಂ ಜೋಡಿ ನಾಲ್ಕು ಬಾರಿ ಚಾಲೆಂಜರ್ ಟ್ರೋಫಿ ಗೆದ್ದಿದ್ದಲ್ಲದೆ, 2010 ವರ್ಷದ ಯು ಎಸ್ ಓಪನ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶ, 2010 ವಿಂಬಲ್ಡನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ, 2011 ಫ್ರೆಂಚ್ ಓಪನ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ, ಹಲವಾರು ವಿಶ್ವ ಎ.ಟಿ.ಪಿ ಪ್ರತಿಷ್ಟಿತ ಫೈನಲ್ ಪ್ರವೇಶಗಳಲ್ಲಿ ಜೋಹಾನ್ಸ್ ಬರ್ಗ್ ಟ್ರೋಫಿ, ಸ್ಟಾಕ್ ಹೋಂ ಪ್ರಶಸ್ತಿ , ವೆನಿಸ್ ಪ್ರಶಸ್ತಿ ಮುಂತಾದ ವಿಜಯದ ಸಾಧನೆಗಳನ್ನೂ ಮಾಡಿದ್ದರು. ದುಬೈ ಓಪನ್ ಟೂರ್ನಿ ಪ್ರಶಸ್ತಿಯನ್ನು ಸಹಾ ಈ ಜೋಡಿ ಗೆದ್ದು ಕೊಂಡಿತ್ತು. 2013ರ ಒಲಿಂಪಿಕ್ಸ್ನಲ್ಲಿ ಬೋಪಣ್ಣ ಎಡ್ವರ್ಡ್ ರೋಜರ್ ವ್ಯಾಸೆಲಿನ್ ಅವರೊಂದಿಗೆ ಸೆಮಿಫೈನಲ್ ಡಬ್ಬಲ್ಸ್ ಸಾಧನೆ ಮಾಡಿದರು. 2017ರಲ್ಲಿ ಗಾಬ್ರಿಲಾ ದಬ್ರೋವ್ಸ್ಕಿ ಅವರೊಂದಿಗೆ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದು ಗ್ರ್ಯಾಂಡ್ ಸ್ಲಾಮ್ ಗೆಲುವು ಸಾಧಿಸಿದ ನಾಲ್ಕನೇ ಭಾರತೀಯ ಟೆನಿಸ್ ಪಟುವಾದ ಕೀರ್ತಿಗೆ ಪಾತ್ರರಾದರು. 2018, 2023ರಲ್ಲಿ ಆಸ್ಟ್ರೇಲಿಯನ್ ಓಪನ್, ಯುಎಸ್ ಓಪನ್ ಫೈನಲ್ಸ್ ತಲುಪಿದ್ದರು. ಇಂಡಿಯನ್ ಮಾಸ್ಟರ್ಸ್ ಗೆದ್ದರು. ಈ ಎಲ್ಲಾ ಸಾಧನೆಗಳಿಂದ ಅವರು ವಿಶ್ವದ ಡಬಲ್ಸ್ ಆಟಗಾರರ ಶ್ರೇಯಾಂಕ ಪಟ್ಟಿಯಲ್ಲಿ ಈ ಹಿಂದೆ 12ನೇ ಸ್ಥಾನವನ್ನು ಅಲಂಕರಿಸಿದ್ದರು. 2024ರಲ್ಲಿ ತಮ್ಮ 43ನೆಯ ವಯಸ್ಸಿನಲ್ಲಿ ಅದ್ಭುತವಾಗಿ ಆಡಿ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಗೆದ್ದ ಇವರು, ವಿಶ್ವದ ನಂಬರ್ ಒನ್ ಸ್ಥಾನ ತಲುಪಿದ ಅತ್ಯಂತ ಹಿರಿಯ ಆಟಗಾರನೆಂಬ ದಾಖಲೆ ಬರೆದಿದ್ದಾರೆ. ಬೋಪಣ್ಣ ಭಾರತ ತಂಡದ ಡೇವಿಸ್ ಕಪ್ ಸಾಧನೆಯಲ್ಲೂ ತಮ್ಮ ಮಹತ್ವದ ಕೊಡುಗೆ ನೀಡಿದ್ದಾರೆ.
ನಮ್ಮ ಬೋಪಣ್ಣನಿಗೆ ಪ್ರಖ್ಯಾತ ಆಟಗಾರ ಆರ್ಥರ್ ಐಶ್ ಹೆಸರಿನಲ್ಲಿ ನೀಡಲಾಗುವ 'ಆರ್ಥರ್ ಐಶ್ ಮಾನವತಾ ಪ್ರಶಸ್ತಿ' ಕೂಡಾ ಲಭಿಸಿದೆ. ಪದ್ಮಶ್ರೀ ಗೌರವ ಸಂದಿದೆ. ಬೋಪಣ್ಣ ಪ್ರತಿಷ್ಟಿತ ಹೋಟೆಲ್ ಒಂದರ ಒಡೆಯ ಕೂಡ. ಕೊಡಗಿನ ಅಂಗವಿಕಲ ಮಕ್ಕಳಿಗಾಗಿ ನಿರ್ಮಿತವಾಗಿರುವ ಆಪರ್ಚುನಿಟಿ ಶಾಲೆಗಾಗಿ ಧನ ಸಂಗ್ರಹದ ಕೆಲಸ ಸಹಾ ಮಾಡಿಕೊಟ್ಟ ಹೃದಯವಂತ.
ನಮ್ಮ ರೋಹನ್ ಬೋಪಣ್ಣ ಟೆನ್ನಿಸ್ ಕ್ರೀಡೆಯ ಮತ್ತು ಬದುಕಿನ ಎಲ್ಲಾ ಸಾಧನೆಗಳನ್ನೂ ಮಾಡಿ ಸುಖವಾಗಿ ಬದುಕುವಂತಾಗಲಿ ಎಂದು ಹಾರೈಸುತ್ತಾ ನಮ್ಮ ಈ ಹುಡುಗ ನಮ್ಮೆಲ್ಲರ ಹೆಮ್ಮೆ ಎಂದು ಭಾವಿಸುತ್ತಾ, ಈ ಹುಡುಗನಿಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ.
On the birthday of our Tennis Star Rohan Bopanna
ಕಾಮೆಂಟ್ಗಳು