ಆಲಿಯಾ ಭಟ್
ಆಲಿಯಾ ಭಟ್
ಪುಟ್ಟ ಹುಡುಗಿಯಂತೆ ಕಳೆ ಕಳೆಯಾಗಿ ನಗು ಹೊರ ಸೂಸುವ ಆಲಿಯಾ ಭಟ್ ಜನಿಸಿದ್ದು 1993 ವರ್ಷದ ಮಾರ್ಚ್ 15 ರಂದು. ಅಪ್ಪ ಪ್ರಖ್ಯಾತ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಮಹೇಶ್ ಭಟ್ ಮತ್ತು ಅಮ್ಮ ನಟಿಯಾಗಿ ಹೆಸರು ಮಾಡಿದ್ದ ಸೋನಿ ರಜ್ದಾನ್.
1999 ವರ್ಷದಲ್ಲಿ 'ಸಂಘರ್ಷ' ಎಂಬ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ ಆಲಿಯಾ ಮುಂದೆ 2012 ವರ್ಷದಲ್ಲಿ ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್'ನಲ್ಲಿ ಮೊದಲ ಪ್ರಮುಖ ಪಾತ್ರ ನಿರ್ವಹಿಸಿದರು. ಟು ಸ್ಟೇಟ್ಸ್, ಹಂಪ್ಟಿ ಶರ್ಮಾ ಕಿ ದುಲ್ಹನಿಯಾ, ಬದ್ರಿನಾಥ್ ಕಿ ದುಲ್ಹನಿಯಾ, ಡಿಯರ್ ಜಿಂದಗಿ ಸೇರಿದಂತೆ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಹಲವಾರು ಚಿತ್ರಗಳಲ್ಲಿ ಮಿಂಚಿದರು.
2014ರಲ್ಲಿ, 'ಹೈವೇ' ಚಿತ್ರದಲ್ಲಿ ಅಪಹರಣಕ್ಕೊಳಗಾದ ಹುಡುಗಿ ಪಾತ್ರದಲ್ಲಿ ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ವಿಮರ್ಶಕರ ಪ್ರಶಸ್ತಿ ಪಡೆದ ಆಲಿಯಾ, 2016ರಲ್ಲಿ 'ಉಡ್ತಾ ಪಂಜಾಬ್', 2018 ರಲ್ಲಿ 'ರಾಜಿ಼' ಮತ್ತು 2019 ರಲ್ಲಿ 'ಗಲೀ ಬಾಯ್', 2022 ರ 'ಗಂಗೂಬಾಯಿ ಕಥಿಯಾವಾಡಿ' ಚಿತ್ರಗಳಿಗಾಗಿ ಫಿಲಂಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸುವುದರೊಂದಿಗೆ ಪ್ರಶಸ್ತಿಗಳ ಹಿರಿಮೆ, ಜನಪ್ರಿಯತೆ ಮತ್ತು ಸಂಭಾವನೆ ಗಳಿಕೆಗಳ ಏಣಿಯಲ್ಲಿ ಎತ್ತರಕ್ಕೇರಿದ್ದಾರೆ. 'ಗಂಗೂಬಾಯಿ ಕಥಿಯಾವಾಡಿ' ಚಿತ್ರದಲ್ಲಿನ ಪಾತ್ರ ನಿರ್ವಹಣೆಗೆ ಅವರಿಗೆ ರಾಷ್ಟ್ರೀಯ ಚಲನಚಿತ್ರ ಶ್ರೇಷ್ಠನಟಿ ಪುರಸ್ಕಾರವೂ ಸಂದಿದೆ.
ಅಭಿನಯದ ಜೊತೆಗೆ ಗಾಯನದಲ್ಲೂ ಪರಿಶ್ರಮ ಹೊಂದಿರುವ ಈ ಹುಡುಗಿ ತಮ್ಮ ಹಲವಾರು ಚಲನಚಿತ್ರಗಳಿಗೆ ಗಾಯಕಿಯೂ ಆಗಿದ್ದಾರೆ.
ತಮ್ಮದೇ ಆದ ನಿರ್ಮಾಣ ಸಂಸ್ಥೆ, ವಸ್ತ್ರ ವಿನ್ಯಾಸ ವ್ಯವಹಾರ, ಜನಪ್ರಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಪ್ರಾಣಿದಯಾ ಸಂಸ್ಥೆಗಳ ಪ್ರೀತಿ ಮುಂತಾದ ಜನಪ್ರಿಯತೆ ಜೊತೆಗೂಡಿದ ಚಟುವಟಿಕೆಗಳೂ ಇವರಿಗಿವೆ. ಪ್ರಖ್ಯಾತ ನಟ ರಣಭೀರ್ ಕಫೂರ್ ಅವರನ್ನು ವಿವಾಹವಾಗಿದ್ದಾರೆ.
On the birth day of Alia Bhatt
ಕಾಮೆಂಟ್ಗಳು