ಪ್ರಗತಿ ಅಶ್ವತ್ಥ ನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ ಎಂದೇ ಖ್ಯಾತರಾದವರು ಚಲನಚಿತ್ರ ಸ್ಥಿರಚಿತ್ರ ಛಾಯಾಗ್ರಹಣ ವೃತ್ತಿಗೆ ಗೌರವ ತಂದುಕೊಟ್ಟ ಅಶ್ವತ್ಥ ನಾರಾಯಣರು. ಅವರು 1946 ವರ್ಷದ ಮಾರ್ಚ್ 30 ರಂದು ಜನಿಸಿದರು.
ಅಶ್ವತ್ಥ ನಾರಾಯಣ ಅವರು ತಮ್ಮ ಅಣ್ಣ ನಾಗೇಶ್ ಬಾಬು ಅವರು ಮದರಾಸಿನಲ್ಲಿ ಆರಂಭಿಸಿದ ‘3 ಸ್ಟಾರ್’ ಸ್ಟುಡಿಯೋದಲ್ಲಿ ತಮ್ಮ ವೃತ್ತಿ ಬದುಕು ಆರಂಭಿಸಿದರು. ಈ ಸಹೋದರರು ಮದರಾಸಿನ ಚಿತ್ರರಂಗದಲ್ಲಿ ದುಡಿಯುತ್ತಿದ್ದರು.
60ರ ದಶಕದಿಂದ ಕನ್ನಡ ಚಿತ್ರರಂಗ ಕರ್ನಾಟಕಕ್ಕೆ ಸ್ಥಳಾಂತರವಾಗಲು ಪ್ರಾರಂಭಗೊಂಡಿತು. ಆದರೆ, ಕನ್ನಡ ಚಿತ್ರರಂಗದಲ್ಲಿ ಕೆಲಸಮಾಡಲು ನುರಿತ ತಂತ್ರಜ್ಞರುಗಳನ್ನು ಮದರಾಸಿನಿಂದಲೇ ಕರೆಸಬೇಕಾಗದ ಪರಿಸ್ಥಿತಿ ಇತ್ತು. ಇದರ ಬಗ್ಗೆ ಕಾರ್ಯಪ್ರವೃತ್ತರಾದ ಅಶ್ವತ್ಥ ನಾರಾಯಣ ಮತ್ತು ನಾಗೇಶ್ ಬಾಬು ಸಹೋದರರು ತಮ್ಮ ಮದರಾಸಿನ ಅನುಭವದಿಂದ 1972ರಲ್ಲಿ ಚಲನಚಿತ್ರ ಸ್ಥಿರಚಿತ್ರಗಳಿಗೆ ಮಿಸಲಾದ ಪ್ರಗತಿ ಸ್ಟುಡಿಯೋವನ್ನು ಗಾಂಧಿನಗರದಲ್ಲಿ ಪ್ರಾರಂಭಿಸಿ, ಸ್ಥಳೀಯ ಛಾಯಾಗ್ರಾಹಕರಿಗೆ ತರಬೇತಿ ನೀಡುವ ಮೂಲಕ ಸ್ಥಿರಚಿತ್ರ ಛಾಯಾಗ್ರಾಹಕ ವೃತ್ತಿಯನ್ನು ಕರ್ನಾಟಕದಲ್ಲೆ ಬೆಳೆಸಿ ಮದರಾಸಿನ ಅವಲಂಬನೆ ತಪ್ಪಿಸಿದರು.
ಈ ಪ್ರಗತಿ ಸ್ಟುಡಿಯೋ 1972 ರಿಂದ 2005 ರವರೆಗೆ ಕಾರ್ಯನಿರ್ವಹಿಸಿತು. ಈ ಕಾಲಘಟ್ಟದ 99% ಚಿತ್ರೋದ್ಯಮಿಗಳು, ಎಲ್ಲ ಹಿರಿಯ-ಕಿರಿಯ ನಟ, ನಟಿ, ತಂತ್ರಜ್ಞರು ಚಲನಚಿತ್ರ ಪತ್ರಕರ್ತರು, ಪ್ರಗತಿ ಸ್ಟುಡಿಯೋಗೆ ಭೇಟಿ ನೀಡಿ ನಾನಾ ಕಾರಣಗಳಿಗಾಗಿ ಅಲ್ಲಿ ಪೋಟೋ ತೆಗೆಸಿಕೊಂಡಿದ್ದಾರೆ.
ಪ್ರಗತಿ ಸ್ಟುಡಿಯೋ ಚಿತ್ರರಂಗದ ಮಂದಿಗೆ ಒಂದು 'ಮೀಟಿಂಗ್ ಪಾಯಿಂಟ್' ಎಂಬ ಹೆಸರು ಪಡೆದಿತ್ತು. ಅದು ಚಿತ್ರರಂಗದ ಸೃಜನಶೀಲರು ತಮ್ಮ ಬಿಡುವಿನ ವೇಳೆಯಲ್ಲಿ ಆರೋಗ್ಯಕರ ಚರ್ಚೆ ನಡೆಸುವ ಪ್ರಸಿದ್ಧ ತಾಣವೆನಿಸಿತ್ತು. ಬಹಳ ವರ್ಷ ಇದು ನಿರ್ದೇಶಕರ ಸಂಘದ ಕಛೇರಿಯೂ ಆಗಿತ್ತು.
ಅಶ್ವತ್ಥ ನಾರಾಯಣ ಅವರು ಬೆಂಗಳೂರಿಗೆ ಹಿಂತಿರುಗಿ ಗಾಂಧಿನಗರದಲ್ಲಿ ‘ಪ್ರಗತಿ’ (1972) ಸ್ಟುಡಿಯೋ ಆರಂಭಿಸಿದ ನಂತರ ‘ಪ್ರಗತಿ ಅಶ್ವತ್ಥ ನಾರಾಯಣ’ ಎಂದೇ ಕರೆಸಿಕೊಂಡರು. ನಾಲ್ಕು ದಶಕಗಳ ಕಾಲ ಸುಮಾರು ಮುನ್ನೂರು ಚಿತ್ರಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಅನುಭವ ಅಶ್ವತ್ಥ ನಾರಾಯಣ ಅವರದು. ಮೈಲುಗಲ್ಲು ಎನಿಸಿದ ಮಹತ್ವದ ಕನ್ನಡ ಚಿತ್ರಗಳಿಗೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಅಶ್ವತ್ಥ ನಾರಾಯಣ ಅವರು ಪುಟ್ಟಣ್ಣನವರ 10 ಮತ್ತು ಸಿದ್ದಲಿಂಗಯ್ಯನವರ 14 ಚಿತ್ರಗಳಿಗೆ ಸಹಾ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಅಶ್ವತ್ಥರ ಸಂಗ್ರಹದಲ್ಲಿ ಸುಮಾರು ಮೂರು ಲಕ್ಷ ಫೋಟೋ ನೆಗೆಟಿವ್ ಇವೆ. ಸಿನಿಮಾ ಸ್ಥಿರಚಿತ್ರ, ಸಿನಿಮಾಗೆ ಸಂಬಂಧಿಸಿದ ಇತರೆ ಫೋಟೋ, ಸ್ಟುಡಿಯೋ ಹಾಗೂ ಚಿತ್ರೀಕರಣದ ಸಂದರ್ಭದ ಕ್ಲಿಪಿಂಗ್, ಚಿತ್ರೋದ್ಯಮದ ಕಾರ್ಯಕ್ರಮ, ನಟ - ನಟಿಯರ ಭಾವ ಚಿತ್ರ, ಅವರ ಕುಟುಂಬಗಳ ವೈಯಕ್ತಿಕ ಸಮಾರಂಭಗಳು, ಹೀಗೆ ಅವರ ಸಂಗ್ರಹದಲ್ಲಿರುವ ಅಸಂಖ್ಯಾತ ಛಾಯಾಚಿತ್ರಗಳು ಕನ್ನಡ ಚಿತ್ರರಂಗದ ಇತಿಹಾಸವನ್ನೇ ದಾಖಲಿಸಿವೆ. ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಅವರ ‘ಪ್ರಗತಿ’ ಸ್ಟುಡಿಯೋವಿನದ್ದು ಗಮನಾರ್ಹ ಕೊಡುಗೆ.
ಅಶ್ವತ್ಥ ನಾರಾಯಣ ಅವರ ಬಳಿ ಇರುವ ಕನ್ನಡ ಚಿತ್ರಗಳ ಸ್ಥಿರಚಿತ್ರಗಳು, 2000 ಇಸವಿಗೆ ಹಿಂದಿನ 50 ವರ್ಷಗಳ ಚಿತ್ರರಂಗದ ಸಮಾರಂಭಗಳು, ಹಾಗೂ ಚಿತ್ರರಂಗದ ಗಣ್ಯರ 3 ಲಕ್ಷಕ್ಕೂ ಹೆಚ್ಚಿನ ಮೂಲ ನೆಗೆಟಿವ್ ಚಿತ್ರಗಳನ್ನು ಜೋಪಾನ ಮಾಡುವುದು ಎಷ್ಟು ಕಷ್ಟದ ಕೆಲಸ ಎಂಬುದು ನಮಗೆ ಊಹೆ ಮಾಡಲಿಕ್ಕೂ ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅಶ್ವತ್ಥ ನಾರಾಯಣ ಅವರು ಜಿರಲೆ, ನುಸಿ, ಇವುಗಳಿಂದ ತಮ್ಮಲ್ಲಿರುವ ಚಿತ್ರಗಳನ್ನು ರಕ್ಷಿಸಲು ಅಗ್ಗಾಗೆ ನೆಗೆಟಿವ್ ಶೇಖರಣೆ ಮಾಡಿರುವ ಸುಮಾರು ಒಂದು ಸಾವಿರದಷ್ಟು ನೆಗೆಟಿವ್ ಆಲ್ಬಂಗಳನ್ನು ಪರಿಶೀಲಿಸಿ ಅದರಲ್ಲಿನ ಆಯ್ದ ಸುಮಾರು 70-80 ಸಾವಿರ ಅಮೂಲ್ಯ ಛಾಯಾಚಿತ್ರಗಳನ್ನು ಡಿಜಿಟಲ್ ಮಾದ್ಯಮಕ್ಕೆ ಪರಿವರ್ತಿಸಿ ಕಂಪ್ಯೂಟರಿನಲ್ಲಿ ಶೇಖರಣೆ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಚರಿತ್ರೆಯ ದೃಷ್ಟಿಯಿಂದ ಇವುಗಳಿಗೆ ಬಹಳಷ್ಟು ಮಹತ್ವವಿದೆ.
2015 ವರ್ಷದಲ್ಲಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಅಪರೂಪದ ಛಾಯಾಚಿತ್ರಗಳ ಕಥನರೂಪದ ‘ಚಿತ್ರಪಥ’ ಎಂಬ ಕೃತಿಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿದೆ. ಇದು ಸ್ಥಿರಚಿತ್ರ ಛಾಯಾಗ್ರಾಹಕರೊಬ್ಬರ ಕ್ಯಾಮರಾ ಕಣ್ಣಲ್ಲಿ ಕನ್ನಡ ಸಿನಿಮಾ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮಹತ್ವದ ಪ್ರಯತ್ನವೆಂದೆನಿಸಿದೆ. (ಈ ಕೃತಿಯ ಹಿಂದೆ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಅಗಿ ಕಾರ್ಯನಿರ್ವಹಿಸಿದ ಖ್ಯಾತ ಲೇಖಕ ಜಗನ್ನಾಥ ಪ್ರಕಾಶ್ ಅವರ ಪರಿಶ್ರಮವಿದ್ದು, ಶಶಿಧರ ಚಿತ್ರದುರ್ಗ Shashidhara Chitradurga
ಅವರ ನಿರೂಪಣೆ ಇದೆ. ಈ ಕೃತಿಗೆ ಮುಖಪುಟ ಮತ್ತು ಒಳಪುಟಗಳ ವಿನ್ಯಾಸವನ್ನು ಅಪಾರ ಅವರು ಮಾಡಿದ್ದಾರೆ.)
ಅಶ್ವತ್ಥ ನಾರಾಯಣ ಅವರ ಮಹತ್ಕಾರ್ಯದ ಸದುಪಯೋಗವಾಗಲಿ, ಅವರ ಸೇವೆಗೆ ಸೂಕ್ತ ಗೌರವಗಳು ಸಲ್ಲಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಸಲ್ಲಿಸೋಣ.
On the birth day of custodian of great moments of film industry Pragathi Ashwatha Narayan Sir
How to contact Pragati studios for buying pictures?
ಪ್ರತ್ಯುತ್ತರಅಳಿಸಿ