ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭವಾನಿ ಲೋಕೇಶ್




 ಭವಾನಿ ಲೋಕೇಶ್


ಭವಾನಿ ಲೋಕೇಶ್ ಉತ್ಸಾಹಿ ಕನ್ನಡ ಕಾರ್ಯಕರ್ತೆ.  ಮಾಧುರ್ಯಪೂರ್ಣ ಕನ್ನಡದ ಇನಿದನಿಯ ನಿರೂಪಕಿಯಾಗಿ, ಲೇಖಕಿಯಾಗಿ, ಕವಯತ್ರಿಯಾಗಿ, ಸ್ತ್ರೀಶಕ್ತಿ ಒಕ್ಕೂಟದ ಸಂಘಟಕರಾಗಿ, ಫೇಸ್ಬುಕ್ ನಲ್ಲಿ ಡಿವಿಜಿ ಕಗ್ಗ ಬಳಗದ ಸಂಸ್ಥಾಪಕರಾಗಿ ಹೀಗೆ ಹತ್ತು ಹಲವು ರೀತಿಯಲ್ಲಿ ಅವರು ಸಕ್ರಿಯರು.

ಭವಾನಿ ಲೋಕೇಶ್ 1978ರ ಮಾರ್ಚ್ 3ರಂದು ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಜನಿಸಿದರು.  ಅವರ ತಂದೆ ಕೆ.ಎಂ. ಮಹದೇವಸ್ವಾಮಿಯವರು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದಾರೆ. ತಾಯಿ ಕಮಲ. ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಬಿ. ಎಸ್‍ಸಿ ಪದವಿ ಪಡೆದ ಭವಾನಿ ಮುಂದೆ, ಕನ್ನಡ ಎಂ.ಎ., ಮನಃಶಾಸ್ತ್ರದಲ್ಲಿ ಎಂ. ಎಸ್ಸಿ, ಯುಜಿಸಿ ಶಿಕ್ಷಣ ತರಬೇತಿ, ಟಿಸಿಎಚ್ ಶಿಕ್ಷಕ ತರಬೇತಿ, ಕಂಪ್ಯೂಟರ್ ಡಿಪ್ಲೊಮೊ, ಚೈಲ್ಡ್‌ ಸೈಕಾಲಜಿಯಲ್ಲಿ ಡಿಪ್ಲೊಮಾ ಮುಂತಾದ ಹಲವು ವಿದ್ಯಾರ್ಹತೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ
ಹಲವು ವರ್ಷಗಳ ಕಾಲ ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಿರಿಯ ಅಧಿಕಾರಿಗಳ ಸಹಾಯಕ ಮೇಲ್ವಿಚಾರಕರಾಗಿ ಹುದ್ದೆಯನ್ನು ನಿರ್ವಹಿಸಿದ ಭವಾನಿ ಲೋಕೇಶ್‌ ಅವರು ಪ್ರಸ್ತುತ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭವಾನಿ ಹದಿಮೂರನೆಯ ವಯಸ್ಸಿನಿಂದಲೆ ಕವಿತೆ ಬರೆದು ಅಧ್ಯಾಪಕರಿಂದ ಮೆಚ್ಚುಗೆಗಳಿಸಿಕೊಂಡವರು. ಬಾಲ್ಯಾವಸ್ಥೆಯಲ್ಲಿನ ಆಸಕ್ತಿಗೆ ನೀರೆರೆದದ್ದು ಸಮೀಪದ ಗ್ರಂಥಾಲಯ. 

ಭಾವಯಾನ, ಬದುಕು ಭಾವದ ಕಡಲು, ಭಾವಲಹರಿ, ಭಾವಬಿಂಬ, ನವ ಸಾಕ್ಷರರಿಗಾಗಿ-ಕರ್ನಾಟಕ ಗೆಜೆಟ್, ಸರಳ ವಿವಾಹ, ಇವೆ ಮೊದಲಾದ ಕೃತಿಗಳನ್ನು ರಚಿಸಿರುವ ಭವಾನಿ ದಿವ್ಯಾನುಭೂತಿಯ ಯುಗಾವತಾರಿ ಎಂಬ ಬಸವಣ್ಣನವರ ಕುರಿತಾದ ಕೃತಿಯನ್ನು ಸಂಪಾದಿಸಿದ್ದಾರೆ. ರಾಯಪುರದ ಶ್ರೀ ಆರ್. ಎಸ್. ನಿಂಗೇಗೌಡರ ಕುರಿತಾದ ಕೃತಿ ʼಅಯ್ಯನ ನೆನಪುʼ ಮಾರ್ಚ್‌ ಎಂಟರಂದು ಹಾಸನದಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ.

ಭವಾನಿ ಲೋಕೇಶ್ ಅವರು ತಮ್ಮ ಸುತ್ತಮುತ್ತಲಿನ ನಗರ ಮತ್ತು ಗ್ರಾಮಗಳ ಮಹಿಳಾ ಸಂಘಗಳ ಸ್ತ್ರೀ ಸಂಘಗಳನ್ನು ಒಂದುಗೂಡಿಸಿ 'ಸ್ತ್ರೀ ಶಕ್ತಿ ಒಕ್ಕೂಟ'ದ ನಿರ್ವಾಹಕಿಯಾಗಿಯೂ ಅನುಭವವುಳ್ಳವರು. 

ಭವಾನಿ ಲೋಕೇಶ್ ಅವರು ಮೈಸೂರು ದಸರಾ ಉತ್ಸವ, ಶ್ರೀರಂಗಪಟ್ಟಣದ ದಸರಾ ಉತ್ಸವ, ಹಂಪಿ ಉತ್ಸವ, ಚಾಲುಕ್ಯ ಉತ್ಸವ, ರಾಯಚೂರು ಉತ್ಸವ, ಗಗನಚುಕ್ಕಿ ಜಲಪಾತೋತ್ಸವ, ಸಾಹಿತ್ಯ ಸಮ್ಮೇಳನಗಳು ಹೀಗೆ ಅನೇಕ ರಾಜ್ಯಮಟ್ಟದ, ಜಿಲ್ಲಾಮಟ್ಟದ ಸಭೆ ಸಮಾರಂಭಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ ಹೆಸರಾಗಿದ್ದಾರೆ. ಮಂಡ್ಯ ಜಿಲ್ಲೆಯ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡು ನಿರಂತರ ಜೊತೆಗಿದ್ದಾರೆ.

ಭವಾನಿ ಲೋಕೇಶ್ ಅವರು ಫೇಸ್ಬುಕ್ಕಿನ 'ಡಿವಿಜಿ-ಕಗ್ಗ ಬಳಗ'ಕ್ಕೆ ಚಾಲನೆ ನೀಡಿ, ಆ ಮುಖೇನ ಮನೆಯಂಗಳದಲ್ಲಿ ಕಗ್ಗ ಕಾರ್ಯಕ್ರಮ, ಮಕ್ಕಳಿಗಾಗಿ ವಿವಿಧ ಪ್ರತಿಭಾ ಕಾರ್ಯಕ್ರಮ ಮುಂತಾದ ರೀತಿಯ ಚಟುವಟಿಕೆಗಳನ್ನೂ ಹಮ್ಮಿಕೊಂಡಿದ್ದಾರೆ.

ಭವಾನಿ ಲೋಕೇಶ್ ಅವರ ಕಾರ್ಯಕ್ರಮಗಳು ದೂರದರ್ಶನದ ಚಂದನದಲ್ಲಿ ಅವರು ಪ್ರಸ್ತುತಪಡಿಸಿದ 'ನಮ್ಮ ಹೋಮಿಯೋಪಥಿ' ಪ್ರಸಾರಗೊಂಡಿದೆ. ಅನೇಕ ಸ್ಥಳೀಯ ಕಿರುತೆರೆಯ ವಾಹಿನಿಗಳಾದ ಎಂಟಿಎನ್‌, ಷುಗರ್‌ ಮಂಡ್ಯ, ಟೆನ್‌ ಟಿವಿ, ಶ್ರೀಗಂಧ, ಕರ್ನಾಟಕ ನ್ಯೂಸ್‌ ಮುಂತಾದ ವಾಹಿನಿಗಳಲ್ಲಿ ಡಾಕ್ಟರ್ಸ್‌ ಡೈರಿ, ನಿಮಗಾಗಿ ಕಾನೂನು, ಹಾಡುಹಬ್ಬ, ಕೃಷಿ ಸಂಪದ, ವಿಶೇಷ ಸಂದರ್ಶನಗಳು ಪ್ರಸಾರವಾಗಿವೆ. 

ಕವಿತಾ ವಾಚನ, ಕಥಾವಾಚನದಲ್ಲಿ ಹೆಸರಾದ ಇವರು ಲೇಸರ್‌ ಷೋಗಳಿಗೆ, ಅನೇಕ ಕಾರ್ಯಕ್ರಮಗಳಿಗೆ ಧ್ವನಿ ನೀಡಿದ್ದಾರೆ. ವ್ಯಕ್ತಿಪರಿಚಯ ಮುಂತಾದವುಗಳುಳ್ಳ ಕಿರು ವಿಡಿಯೋಗಳನ್ನು ಸಂಯೋಜಿಸಿ ಯೂಟ್ಯೂಬ್ ಮತ್ತು ಇತರ ಸಾಮೂಹಿಕ ಜಾಲತಾಣಗಳಲ್ಲಿ ಪ್ರಸ್ತುತಪಡಿಸುತ್ತಲೂ ಬಂದಿದ್ದಾರೆ.

ಭವಾನಿ ಅವರಿಗೆ ಕರ್ನಾಟಕ ಕರಾವಳಿ ಒಕ್ಕೂಟದ ಪ್ರತಿಭಾ ಪುರಸ್ಕಾರ, ಕರ್ನಾಟಕ ಲೇಕಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಚೈತನ್ಯ ಬಳಗ ಇವರಿಂದ ʼಚೈತನ್ಯ ರತ್ನ ಪ್ರಶಸ್ತಿ, ಸಂಸ್ಕೃತಿ ಸಂಘಟನೆ ಮಂಡ್ಯ ಇವರಿಂದ ಸಂಸ್ಕೃತಿ ಸಂಜೀವಿನಿ , ಶರಣ ಸಾಹಿತ್ಯ ಪರಿಷತ್ತಿನಿಂದ ಸಾಹಿತ್ಯ ಸನ್ಮಾನ, ಕಾವೇರಿ ಮಹಿಳಾ ಮಂಡಳಿಯಿಂದ ಕಾವೇರಿ ಸಾಹಿತ್ಯ ಪುರಸ್ಕಾರ, ಲಯನೆಸ್‌ ಮಂಡ್ಯ ಮಧುರ ಸಂಸ್ಥೆ ಮತ್ತು ಲಯನೆಸ್‌ ಕ್ಲಬ್‌ ಸಾರಕ್ಕಿ ಬೆಂಗಳೂರು ಇವರಿಂದ ʼಕನ್ನಡ ಸೌರಭʼ ಪ್ರಶಸ್ತಿ, ಕರ್ನಾಟಕ ಸಂಘ ಮಂಡ್ಯ ಇವರಿಂದ ʼಕನ್ನಡ ರಾಜ್ಯೋತ್ಸವʼ ಪ್ರಶಸ್ತಿ, ಕಾವ್ಯಶ್ರೀ, ಯುವಸಿರಿ, ಕವಿರತ್ನ, ಕನ್ನಡ ಕಾಯಕ, ಬಸವ ಪ್ರಶಸ್ತಿ ಇವೆ ಮೊದಲಾದ  ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಭವಾನಿ ಲೋಕೇಶ್‌ ಅವರ ಅನೇಕ ಗೀತೆಗಳಿಗೆ ನಾಡಿನ ಹೆಸರಾಂತ ಸಂಗೀತ ಸಂಯೋಜಕರಾದ ಶ್ರೀಮತಿ ಮಾಧವಿ ರಾಜಾ, ಶ್ರೀ ಪುತ್ತೂರು ನರಸಿಂಹನಾಯಕ್‌, ಶ್ರೀ ರಘುನಂದನ್‌ ರಾಮಕೃಷ್ಣ, ಶ್ರೀ ಪ್ರಮೋದ್‌ ಸಪ್ರೆ, ಶ್ರೀಮತಿ ರಾಧಿಕಾ ರಾವ್‌, ಸ್ವಾಮಿ ಗಾಮನಹಳ್ಳಿ, ಶ್ರೀ ಪ್ರಶಾಂತ್‌ ಆತ್ರೇಯ ಮುಂತಾದವರು ಸ್ವರ ಸಂಯೋಜನೆ ಮಾಡಿದ್ದಾರೆ. ಅನೇಕ ಖ್ಯಾತ ಗಾಯಕರು ಇವರ ಗೀತೆಗಳನ್ನು ಹಾಡಿದ್ದಾರೆ. 

ಸ್ನೇಹವಲಯದಲ್ಲಿ ಬಾನಿ ಎಂದೇ ಪರಿಚಿತರಾದ ನಿತ್ಯಹಸನ್ಮುಖಿ, ನಿರಂತರ ಕ್ರಿಯಾಶೀಲೆ ಭವಾನಿ ಲೋಕೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆ.


Happy birthday Bhavani Lokesh

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ