ಮನೋಹರ್ ಐಚ್
ಮನೋಹರ್ ಐಚ್
'ಮಿಸ್ಟರ್ ಯುನಿವರ್ಸ್’ ಪ್ರಶಸ್ತಿ ವಿಜೇತರಾಗಿದ್ದ ಮನೋಹರ್ ಐಚ್ 103 ವರ್ಷ ಮೀರಿ ಈ ಲೋಕದಲ್ಲಿ ಬಾಳಿದವರು.
ಮನೋಹರ್ ಐಚ್ ಅವರು 1913ರ ಮಾರ್ಚ್ 17ರಂದು ಈಗಿನ ಬಾಂಗ್ಲಾದೇಶದ ಭಾಗವಾಗಿರುವ ಕೊಮಿಲ್ಲಾ ಎಂಬ ಗ್ರಾಮದಲ್ಲಿ ಜನಿಸಿದರು. ಕಷ್ಟಗಳ ಹಾದಿ ಅವರ ಬದುಕಾಗಿತ್ತು. ಕೇವಲ 4.11 ಅಡಿ ಎತ್ತರವಿದ್ದರೂ ಅವರು ವಿಶ್ವಮಟ್ಟದ ದೇಹ ದಾರ್ಢ್ಯಪಟುವಾಗಿ ಬೆಳೆದದ್ದು ಯಶೋಗಾಥೆ.
ದೈಹಿಕವಾಗಿ ಬಲಶಾಲಿಯಾಗಬೇಕು, ಎತ್ತರವಾಗಿ ಬೆಳೆಯಬೇಕು ಎಂದು ಹಂಬಲಿಸುತ್ತಿದ್ದ ಮನೋಹರ್ ಐಚ್ ಅವರಿಗೆ ಬ್ರಿಟಿಷ್ ಅಧಿಕಾರಿ ರಿಯಾಬ್ ಮಾರ್ಟಿನ್ ಅವರು ದೇಹದಾರ್ಢ್ಯ ಪಟುವಾಗಲು ಸಲಹೆ ನೀಡಿದರು. ರಾಯಲ್ ಏರ್‌ಫೋರ್ಸ್ ನಲ್ಲಿ ಅವರು ತಮ್ಮ ಅಭ್ಯಾಸ ಆರಂಭಿಸಿದರು. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಅವರು ಜೈಲು ಸೇರಿದರು. ಆದಾಗ್ಯೂ ದೇಹದಾರ್ಢ್ಯ ಕ್ರೀಡೆಯ ಅಭ್ಯಾಸದಿಂದ ಹಿಂದೆ ಸರಿಯಲಿಲ್ಲ. ಜೈಲಿನಲ್ಲಿ ಇದ್ದಾಗ ಅವರು ಪ್ರತಿದಿನ 12 ತಾಸು ವ್ಯಾಯಾಮ ಮಾಡುತ್ತಿದ್ದರಂತೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಜೈಲಿನಿಂದ ಬಿಡುಗಡೆಗೊಂಡ ಅವರು ತಮ್ಮ ಹವ್ಯಾಸವನ್ನು ಗಂಭೀರವಾಗಿ ತೆಗೆದುಕೊಂಡರು.
ಮನೋಹರ್ ಐಚ್ ಅವರು 1950ರಲ್ಲಿ ಮಿಸ್ಟರ್ ಹರ್ಕ್ಯುಲಸ್ ಚಾಂಪಿಯನ್‌ಷಿಪ್ ಗೆದ್ದು 'ಪಾಕೆಟ್ ಹರ್ಕ್ಯುಲಸ್’ ಎಂದು ಜನಪ್ರಿಯರಾದರು. 1952ರಲ್ಲಿ ಲಂಡನ್‌ನಲ್ಲಿ 'ಮಿಸ್ಟರ್ ಯುನಿವರ್ಸ್’ ಆದಾಗ ಅವರಿಗೆ 39 ವರ್ಷ ವಯಸ್ಸಾಗಿತ್ತು. ಅದೇ ವರ್ಷ ಸ್ಕಾಟ್ಲೆಂಡ್‌ನಲ್ಲಿ ವಿಶ್ವ ಸ್ಪ್ರಿಂಗ್ ಪುಲ್ಲಿಂಗ್ (ಸ್ಪ್ರಿಂಗ್‌ನಿಂದ ಮಾಡಿದ ವ್ಯಾಯಾಮ ಸಲಕರಣೆ) ಚಾಂಪಿಯನ್ ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಯುರೋಪ್ ದೇಶಗಳ ಕ್ರೀಡಾಪಟುಗಳದ್ದೇ ಪ್ರಾಬಲ್ಯವಿದ್ದ ಕ್ರೀಡೆಯಲ್ಲಿ ಈ ಪ್ರಚಂಡ ಕುಳ್ಳ ಭಾರತದ ಹೆಜ್ಜೆಗುರುತು ಮೂಡಿಸಿದ್ದರು.
ಮನೋಹರ್ ಐಚ್ ಅವರು ಒಟ್ಟು ನಾಲ್ಕು ಬಾರಿ ಮಿಸ್ಟರ್ ಯುನಿವರ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಏಷ್ಯನ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. 1960ರಲ್ಲಿ ಇಂಡಿಯನ್ ಕ್ಲಾಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಜೀವನದುದ್ದುಕ್ಕೂ ಹಲವು ಯುವಕರಿಗೆ ತರಬೇತಿ ನೀಡಿದರು.
"ಪ್ರತಿದಿನ ವ್ಯಾಯಾಮ ಮಾಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ಸರಳತೆ ಮತ್ತು ಆರೋಗ್ಯವಂತ ಜೀವನ ರೂಪಿಸಿಕೊಳ್ಳುವುದೇ ಗುರಿಯಾಗಬೇಕು. ಆದ್ದರಿಂದ ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಮತ್ತು ಉತ್ತಮವಾದ ಆಹಾರವನ್ನು ಸೇವಿಸಿ" ಎಂದು ಮನೋಹರ್ ಐಚ್ ತಮ್ಮ ಬದುಕಿನ ನಡೆಯನ್ನೇ ಇತರರಿಗೂ ಹೇಳುತ್ತಿದ್ದರು.
ಮನೋಹರ್ ಐಚ್ ಅವರು 2016 ವರ್ಷದ ಜೂನ್ 5 ರಂದು ಈ ಲೋಕವನ್ನಗಲಿದರು.
On the birth anniversary of great body builder Manohara Aich
ಕಾಮೆಂಟ್‌ಗಳು