ಫ್ರಾನ್ಸಿಸ್ ಎಲ್ಲಿಸ್
ಫ್ರಾನ್ಸಿಸ್ ವೈಟ್ ಎಲ್ಲಿಸ್
ಫ್ರಾನ್ಸಿಸ್ ವೈಟ್ ಎಲ್ಲಿಸ್ ಕಂದಾಯ ಇಲಾಖೆಯ ಅಧಿಕಾರಿಯಾಗಿ ಭಾರತಕ್ಕೆ ಬಂದು ದಕ್ಷಿಣ ಭಾರತದ ಭಾಷೆ, ಚರಿತ್ರೆ, ಪ್ರಾಚೀನತೆ, ಸಂಸ್ಕೃತಿ ಮುಂತಾದವನ್ನು ಅರಿಯುವುದರಲ್ಲಿ ಉಳಿದ ಜೀವಮಾನವನ್ನೇ ಕಳೆದ ವ್ಯಕ್ತಿ. ಈತ ಜನಿಸಿದ್ದು 1777 ವರ್ಷದಲ್ಲಿ.
ತನ್ನ 20 ವರ್ಷಗಳ ಅಧಿಕಾರದ ಅವಧಿಯಲ್ಲಿ ತನ್ನ ಬಿಡುವಿನ ಸಮಯವನ್ನು ಈತ ಸಂಸ್ಕೃತ ಮತ್ತು ದಕ್ಷಿಣ ಭಾರತದ ವಿವಿಧ ಭಾಷೆಗಳ ವೈಚಿತ್ರ್ಯಗಳನ್ನು ವೈಶಿಷ್ಟ್ಯಗಳನ್ನು ಕಲಿತು ಅರ್ಥಮಾಡಿಕೊಳ್ಳುವುದರಲ್ಲಿಯೇ ಕಳೆದರು. ಆ ಬಗ್ಗೆ ದೊರೆಯುವ ಎಲ್ಲ ಸಾಮಗ್ರಿಯನ್ನೂ ಸಂಗ್ರಹಿಸಿದ. ಪರಿಶೋಧನೆ, ಪರಿಶೀಲನೆ ಸಮರ್ಪಕವಾದಾಗ ಹೊರತು ಏನನ್ನೂ ಪ್ರಕಟಿಸಬಾರದೆಂದು ತಡೆಹಿಡಿದರಾದರೂ ಅವರು ಸಂಗ್ರಹಿಸಿದ ವಿಷಯ ಅಗಾಧ, ಅಮೂಲ್ಯ.
ಅಡಕ್ಕಿ ಸುಬ್ಬರಾವು ಎಂಬ ವಿದ್ವಾಂಸರು ತಾವು ಬರೆದ ಸೆಲೆಕ್ಷನ್ ಆಫ್ ಸ್ಟೋರೀಸ್ ಅಂಡ್ ರೆವೆನ್ಯೂ ಪೇಪರ್ಸ್ ಇನ್ ದಿ ಕರ್ಣಾಟಕ ಲ್ಯಾಂಗ್ವೇಜ್ ಎಂಬ ಪುಸ್ತಕವನ್ನು ಎಲ್ಲಿಸ್ ಜ್ಞಾಪಕಾರ್ಥಕವಾಗಿ ಅವರಿಗೆ ಅರ್ಪಿಸಿದ್ದಾರೆ. ಆತ ಸತ್ತಾಗ ಆತನಲ್ಲಿದ್ದ ಚರ ಆಸ್ತಿಯನ್ನೆಲ್ಲ ಮಧುರೆ ಮತ್ತು ಚೆನ್ನೈಗಳಲ್ಲಿ ಹರಾಜಿನ ಮೂಲಕ ಮಾರಲಾಯಿತು. ಹೀಗಾಗುವಾಗ ಆತ ಬರೆದಿಟ್ಟಿದ್ದ ಅನೇಕ ಲೇಖನಗಳು ಕಳೆದುಹೋದವು, ಇಲ್ಲವೆ ನಾಶವಾದವು. (ತಿಂಗಳುಗಟ್ಟಲೆ ಪೀಟರನ ಮನೆಯಲ್ಲಿ ಒಲೆ ಹಚ್ಚಲಿಕ್ಕೆ ಅವನ್ನು ಬಳಸಲಾಯಿತೆಂದು ತಿಳಿದುಬಂದಿದೆ).
ಎಲ್ಲಿಸ್ ಅತ್ಯಂತ ಸಮರ್ಥರು; ದಕ್ಷಿಣ ಭಾರತದ ಅಧ್ಯಯನ ಅದರ ಚರಿತ್ರೆ ಮತ್ತು ಭಾಷೆಗಳ ವಿಷಯದಲ್ಲಿ ಬಳಲದೆ, ಬೇಸರಪಡದೆ, ಸತತವಾಗಿ ಸಂಶೋಧನೆಯನ್ನು ನಡೆಸಿದವರು; ಪ್ರಾಚೀನ-ಅರ್ವಾಚೀನ, ದೇಶೀಯ-ಐರೋಪ್ಯ ವಿಷಯಗಳ ಬಗ್ಗೆ ವಿಸ್ತೃತವಾದ ಜ್ಞಾನವನ್ನು ಪಡೆದವರು; ನಿಖರವಾದ ನ್ಯಾಯತೀರ್ಮಾನ ಮತ್ತು ಉತ್ತಮ ಅಭಿರುಚಿಯ ಸಂಕೇತದಂತಿದ್ದವರು-ಎಂದು ಮದ್ರಾಸ್ ಲಿಟರರಿ ಸೊಸೈಟಿ ಪತ್ರಿಕೆ ಅವರನ್ನು ಕೊಂಡಾಡಿದೆ.
ಬಂಗಾಲದ ಮುಖ್ಯ ನ್ಯಾಯಾಧೀಶರಾಗಿದ್ದ ಸರ್ ಚಾರ್ಲ್ಸ್ ಗ್ರೇ ಹಿಂದೂ ನ್ಯಾಯದ ಬಗ್ಗೆ ಲಿಟರರಿ ಸೊಸೈಟಿ ಸಭೆಯಲ್ಲಿ ಓದಿದ ಲೇಖನಗಳು 500 ಪುಟಗಳಷ್ಟಾಗುತ್ತವೆ. ಆದರೆ ಅದೆಲ್ಲವೂ ಕೊನೆಯವರೆಗೂ ಕರಡುಪ್ರತಿಯಾಗಿಯೇ ಉಳಿಯಿತು. ಮಲಬಾರ್ ಮತ್ತು ಕೆನರ ಜಿಲ್ಲೆಗಳಲ್ಲಿ ಮಿರಾಸಿ ಹಕ್ಕಿನ ಬಗ್ಗೆ ಅವರು ಬರೆದ ವಿವರಗಳು ಪ್ರಮಾಣಗ್ರಂಥವೆಂದು ಪರಿಗಣಿಸಲ್ಪಟ್ಟಿದೆ.
ತಮಿಳಿನಲ್ಲಿ ನೈತಿಕಗ್ರಂಥವೆಂದು ಪ್ರಸಿದ್ಧವಾಗಿರುವ ಕುರಳ್ ಗ್ರಂಥದ ಅರ್ಥ ವಿವರಣೆ ಎಲ್ಲಿಸ್ ಅವರ ಇನ್ನೊಂದು ಶ್ರೇಷ್ಠವಾದ ಕೆಲಸ. ಅವರು ಕುರಳ್ ಗ್ರಂಥದ ಮೊದಲ ಭಾಗದ ದ್ವಿಪದಿಗಳನ್ನು ಸರಳರಗಳೆಯ ಛಂದಸ್ಸಿನಲ್ಲಿ ಅನುವಾದ ಮಾಡಿರುವುದಲ್ಲದೆ, ವಿಮರ್ಶಾತ್ಮಕವಾದ ವಿವರಣೆಯನ್ನೂ ನೀಡಿದ್ದಾರೆ. ಹೀಗೆ ಮಾಡುವಾಗ ತಮ್ಮ ವಿವರಣೆಗಾಗಿ ಶ್ರೇಷ್ಠರೆನಿಸಿದ ದೇಶೀಯ ವಿದ್ವಾಂಸರ ಪುಸ್ತಕಗಳಿಂದ ಅನೇಕ ದೃಷ್ಟಾಂತಗಳನ್ನು ಕೊಟ್ಟಿದ್ದಾರೆ. ಇದರಿಂದಾಗಿ ಅದರಲ್ಲಿ ಅಮೂಲ್ಯವಾದ ವಿವರಣೆಗಳು, ದಂತಕಥೆಗಳು, ಆಗಿನ ತಾತ್ತ್ವಿಕ ಪದ್ಧತಿಗಳು, ಜನತೆಯ ವಿವಿಧ ರೀತಿ-ನೀತಿಗಳು ವೇದ್ಯವಾಗುತ್ತವೆ. ಅವರು ಮದ್ರಾಸನ್ನು ಬಿಡುವ ವೇಳೆಗೆ ಕುರಳ್ ಗ್ರಂಥದ ಮೊದಲ ಭಾಗದ ಹದಿನೆಂಟು ಅಧ್ಯಾಯಗಳಿಗೆ ಸರಳಾನುವಾದ, ಟೀಕೆ-ಟಿಪ್ಪಣಿಗಳನ್ನು ಬರೆದಿದ್ದರು.
ಫ್ರಾನ್ಸಿಸ್ ವೈಟ್ ಎಲ್ಲಿಸ್ ಇನ್ನೂ ಕೆಲವು ಸಣ್ಣ ಪುಟ್ಟ ಲೇಖನಗಳನ್ನು ಬಿಟ್ಟು ಹೋಗಿದ್ದಾರೆ. ಪೋರ್ಟ್ ಸೇಂಟ್ ಜಾರ್ಜ್ ಕಾಲೇಜಿನ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ತಮಿಳು, ತೆಲುಗು, ಮಲೆಯಾಳಂ ಮತ್ತು ಪ್ರಾಯಶಃ ಕನ್ನಡ ಭಾಷೆಗಳ ಮೇಲೆ ಲೇಖನಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಮಲೆಯಾಳಂ ಭಾಷೆಯ ಬಗ್ಗೆ ಬರೆದ ಲೇಖನದ ಕೆಲವು ಪ್ರತಿಗಳು ಸಿಕ್ಕುತ್ತವೆ. ಡೇಸರ್ಟೇಷನ್ ಆನ್ ಮಲಯಾಳಂ ಲ್ಯಾಂಗ್ವೇಜ್ ಎಂಬುದು ಇಂಡಿಯನ್ ಆಂಟಿಕ್ಟೆರಿಯಲ್ಲಿ ಅಚ್ಚಾಗಿದೆ. ತೆಲುಗಿನ ಬಗ್ಗೆ ಈತ ಬರೆದ ಒಂದು ಲೇಖನವನ್ನು ಎ. ಡಿ. ಕ್ಯಾಂಪ್ಬೆಲ್ ತಮ್ಮ ತೆಲುಗು ವ್ಯಾಕರಣದ (1816) ಮುನ್ನುಡಿಯಾಗಿ ಸೇರಿಸಿಕೊಂಡು ಅಚ್ಚುಹಾಕಿಸಿದ್ದಾರೆ. ಆ ಕಾಲೇಜಿನ ಅನುಪಯುಕ್ತ
ಕಾಗದಗಳ ರಾಶಿಯ ಮಧ್ಯೆ ದೊರೆತ ಕೊಚ್ಚಿನ್ನಿನ ಜ್ಯೂಯಿಷ್ ಕಾಪರ್ ಪ್ಲೇಟಿನ ಅನುವಾದ ಮದ್ರಾಸ್ ಲಿಟರರಿ ಜರ್ನಲ್ಲಿನಲ್ಲಿ ಅಚ್ಚಾಗಿದೆ. ಅದೇ ಕಾಗದದ ರಾಶಿಯ ಮಧ್ಯದಲ್ಲಿ ದಕ್ಷಿಣಭಾರತದ ಕವಿಗಳ ಗ್ರಂಥಗಳಿಂದ ಆಯ್ದ ಲಕ್ಷ್ಯ ಪದ್ಯಗಳನ್ನು ಒಳಗೊಂಡಿದ್ದು ತಮಿಳು ಛಂದಸ್ಸಿಗೆ ಸಂಬಂಧಪಟ್ಟ ಎರಡು ಗ್ರಂಥಗಳ ಕರಡು ಪ್ರತಿಗಳು ವಾಲ್ಟರ್ ಎಲಿಯಟ್ಟರಿಗೆ ದೊರೆತಿವೆ. ರೆವರೆಂಡ್ ಟಿ. ಬ್ರದರ್ಟನ್ನಂಥ ವಿದ್ವಾಂಸರು ಈ ಗ್ರಂಥಪ್ರತಿಗಳನ್ನು ನೋಡಿ ಶ್ಲಾಘಿಸಿದ್ದಾರೆ. ಸುಮಾರು ನೂರು ಪುಟಗಳನ್ನೊಳಗೊಂಡ ಈ ಕರಡು ಪ್ರತಿಗಳು ಸಹಜವಾಗಿಯೇ ಅಪೂರ್ಣವಾಗಿವೆ. ಮಾಡರ್ನ್ ಇಮಿಟೇಷನ್ ಆಫ್ ವೇದಾಸ್ ಎಂಬ ಎಲ್ಲಿಸ್ ಅವರ ಇನ್ನೊಂದು ಲೇಖನ ಏಷ್ಯಾಟಿಕ್ ರಿಸರ್ಚಸ್ನಲ್ಲಿ ಪ್ರಕಟವಾಗಿದೆ. ಒಟ್ಟಿನಲ್ಲಿ ತಾವು ಕೈಕೊಂಡ ಕಾರ್ಯಕ್ಷೇತ್ರದಲ್ಲಿ, ಸರ್ಕಾರಿ ಕೆಲಸದ ಜೊತೆಗೆ, ಇಷ್ಟು ನಿಷ್ಠೆ, ಶ್ರದ್ಧೆ, ತಲ್ಲೀನತೆಯಿಂದ ದುಡಿದು ತಮ್ಮ ಬಹುಮುಖ ಪ್ರತಿಭೆಯನ್ನು ಮೆರೆದ ಎಲ್ಲಿಸ್ ಪ್ರಪ್ರಥಮವಾಗಿ ದ್ರಾವಿಡಭಾಷೆಗಳು ಸಂಸ್ಕೃತಜನ್ಯವಲ್ಲವೆಂದೂ ಸ್ವತಂತ್ರವರ್ಗಕ್ಕೆ ಸೇರಿದ ಭಾಷೆಗಳೆಂದೂ ಸಾರಿ ಅವುಗಳ ಸ್ವತಂತ್ರ ಅಸ್ತಿತ್ವವನ್ನು ರೂಪಿಸಿ ದ್ರಾವಿಡ ಭಾಷಾವಿಜ್ಞಾನದ ಆದ್ಯಪ್ರವರ್ತಕನೆನಿಸಿದ್ದಾರೆ.
ತಮ್ಮ ಸಂಶೋಧನಾ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ತಿಳಿಯಬೇಕೆಂದು, ಮಧುರೆಗೆ ಬಂದು ಆ ಜಿಲ್ಲೆಯಲ್ಲಿ ಆಗ ಕಲೆಕ್ಟರ್ ಆಗಿದ್ದ ರೌಸ್ ಪೀಟರನ ಜೊತೆಯಲ್ಲಿ ತಂಗಿದ್ದವರು ಒಂದು ದಿನ ಅದೇ ಪ್ರಾಂತ್ಯದಲ್ಲಿರುವ ರಾಮನಾಡಿಗೆ ಸಂತೋಷ ಪ್ರವಾಸಕ್ಕೆ ಹೋಗಿದ್ದಾಗ ಅಕಸ್ಮಾತ್ತಾಗಿ ವಿಷವನ್ನು ಸೇವಿಸಿ 1819ರ ಮಾರ್ಚ್ 10 ರಂದು ಅಸುನೀಗಿದರು. ಹೀಗೆ ಎಲ್ಲಿಸ್ ಅಕಾಲಮೃತ್ಯುವಿಗೆ ಈಡಾದದ್ದು ದ್ರಾವಿಡ ಭಾಷೆ ಮತ್ತು ಸಾಹಿತ್ಯಕ್ಕೆ ತುಂಬಲಾಗದ ಹಾನಿ.
Great scholar in Indian languages Francis Whyte Ellis
ಕಾಮೆಂಟ್‌ಗಳು