ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹರಿಹರೇಶ್ವರ


 ಶಿಕಾರಿಪುರ ಹರಿಹರೇಶ್ವರ


ಶಿಕಾರಿಪುರ ಹರಿಹರೇಶ್ವರ ಅವರು ಕನ್ನಡ ಭಾಷೆ  ಕಂಡ ಅತ್ಯಮೂಲ್ಯ ಪರಿಚಾರಕರಲ್ಲೊಬ್ಬರು. ಸುಮಾರು 3 ದಶಕಗಳ ಹಿಂದೆಯೇ ಅಮೆರಿಕದಲ್ಲಿ ಭಾರತೀಯರೆನ್ನುವರೇ ಅಲ್ಪಸ್ವಲ್ಪ ಎನ್ನಿಸುವ ಸಂಖ್ಯೆಯಲ್ಲಿದ್ದಾಗ ಆ ಪೈಕಿ ಇರುವ ಅಲ್ಪಸಂಖ್ಯೆಯ  ಕನ್ನಡಿಗರನ್ನು ಒಟ್ಟು ಹಾಕಿ ಕನ್ನಡದ ತೇರನ್ನೆಳೆಯುವಲ್ಲಿ ಎಲ್ಲ ಆಸಕ್ತ, ಪ್ರೀತಿಯ ಅನಿವಾಸಿ ಕನ್ನಡಿಗರ ಕೊಡುಗೆ ಅನನ್ಯ. ಆ ಪೈಕಿ ಎಸ್. ಕೆ. ಹರಿಹರೇಶ್ವರ ಅವರು ಮುಂಚೂಣಿಯಲ್ಲಿದ್ದರು. ಇಂದು ಅಕ್ಕ, ನಾವಿಕದಂಥ ವೇದಿಕೆಗಳು ಅಮೆರಿಕದಲ್ಲಿ ಕನ್ನಡದ ಕಂಪನ್ನು ಸೂಸುತ್ತಿದ್ದರೆ, ಆ ಕಂಪಿನ ಹಿಂದೆ ಹರಿಹರೇಶ್ವರಂಥವರು ಮಾಡಿರುವಂತಹ ಸೇವೆ ಗಣನೀಯವಾದದ್ದು.  

ಶಿಕಾರಿಪುರ ಹರಿಹರೇಶ್ವರ ಅವರು ಮಲೆನಾಡಿನ ’ಶಿಕಾರಿಪುರ’ ದಲ್ಲಿ 1930ರ ಮಾರ್ಚ್ 11ರಂದು
 ಜನಿಸಿದರು.   ಅವರು ವೃತ್ತಿಪರರಾಗಿ  ಬೆಳೆದದ್ದು ಜಾಗತಿಕವಾಗಿ, ರಸ್ತೆ, ಸೇತುವೆಗಳ ವಿನ್ಯಾಸದಲ್ಲಿ.  ಅಷ್ಟೇ ಮುತುವರ್ಜಿಯಿಂದ ಕನ್ನಡವನ್ನು ಕಟ್ಟುವ ಕೆಲಸವನ್ನೂ ಕೈಗೆತ್ತಿಕೊಂಡಿದ್ದರು. ಅವರು ಬೆಂಗಳೂರಿನಲ್ಲಿ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಮದ್ರಾಸಿನ ನೈವೇಲಿಯಲ್ಲಿ ತಮ್ಮ ಪ್ರಥಮ-ನೌಕರಿಯನ್ನು ಹಿಡಿದರು. ಪುನಃ ಬೆಂಗಳೂರಿಗೆ ಬಂದು, ಉಪನ್ಯಾಸಕರಾಗಿ ಕೆಲಸಮಾಡಿದರು. ಅದೇ ಸಮಯದಲ್ಲಿ, ಬೆಂಗಳೂರಿನ ಛಾಯಾರವಿ ಕಲಾವಿದರ ಜೊತೆ ಸಂಪರ್ಕ ಬೆಳೆಯಿತು. ಹರಿಯವರ ಬಾಳಗೆಳತಿ, ನಾಗಲಕ್ಷ್ಮಿಯವರ ಜತೆಯಾದದ್ದೂ ಆಗಲೇ. ಸತಿ-ಪತಿಯರಿಬ್ಬರೂ ರಂಗಭೂಮಿಯ ಬಗ್ಗೆ ವಿಶೇಷ ಕಾಳಜಿವಹಿಸಿದರು.

ಹರಿಹರೇಶ್ವರರವರು ಮುಂದೆ ನೌಕರಿಗಾಗಿ ಇರಾನ್ ದೇಶಕ್ಕೆ ಹೋದರು. ಅಲ್ಲಿಂದ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಹೊರಟರು. ಅಲ್ಲಿ ‘ಅಕ್ಕ’ ಎಂಬ ಕನ್ನಡ ಸಮ್ಮೇಳನದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು.  ‘ಅಮೆರಿಕನ್ನಡ’ ಪತ್ರಿಕೆಯನ್ನು ನಡೆಸಿದರು. ಅಮೆರಿಕನ್ನಡಿಗರು ಮತ್ತು ಮೂಲ ನೆಲದ ಕನ್ನಡಿಗರ ಮಧ್ಯೆ ಸೇತುವೆಯಂತಾದರು. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ತೊಡಗಿದ ಯಾವುದೇ ಸಂಘ ಸಂಸ್ಥೆಗಳಿಗೆ ಅವರ ಅಭಯಹಸ್ತ ಸದಾ ಇರುತ್ತಿತ್ತು. ಪ್ರಥಮ ವಿಶ್ವಕನ್ನಡ ಸಮ್ಮೇಳನದ ವಿಜಯಪತಾಕೆಯಂತಿರುವ ‘ದರ್ಶನ’ ಎಂಬ ಉದ್ಗ್ರಂಥವನ್ನು ರೂಪಿಸಿದವರು ಹರಿಹರೇಶ್ವರರು.  ಭಾರತೀಯ ಸಂಸ್ಕೃತ ಕನ್ನಡ ಸಾಹಿತ್ಯಗಳ ಬಗ್ಗೆ, ಭಾರತೀಯ ದರ್ಶನ ಶಾಸ್ತ್ರದ ಬಗ್ಗೆ ಅಮೆರಿಕದಲ್ಲಿರುವ ಕನ್ನಡಿಗರಿಗೆ ಏನೇ ಮಾಹಿತಿ ಬೇಕಾದರೂ ಅವರುಗಳು ಸಂಪರ್ಕಿಸುತ್ತಿದ್ದುದು ಹರಿಹರೇಶ್ವರ ಅವರನ್ನೇ.  ಕನ್ನಡ ಭಾಷೆಯನ್ನು ಕುರಿತು ಬರೆಯುವುದು, ಮಾತಾಡುವುದು ಅವರಿಗೆ ವಿಶೇಷ ಹವ್ಯಾಸಗಳಲ್ಲೊಂದಾಗಿತ್ತು.

ಶಿಕಾರಿಪುರ ಹರಿಹರೇಶ್ವರರ ಬರಹಗಳು ಅನೇಕ ವಿಧದಲ್ಲಿ ವ್ಯಾಪಿಸಿಕೊಂಡಿವೆ. ವಿದೇಶಕ್ಕೆ ಬಂದವರು, ಮಾತಿನ ಮಂಟಪ, ರಾಂಟ್ ಜನ್, ಕನ್ನಡ ಉಳಿಸಿ ಬೆಳೆಸುವ ಬಗೆ, ಮಾತಿನ ಚಪ್ಪರ, ಮಾತಿನ ಚಪಲ, ಕನ್ನಡದಲ್ಲಿ ಸತ್ಯನಾರಾಯಣ ಪೂಜೆ, ಮಾತೇ ಮುತ್ತು, ಮಾತಿನ ಚಾವಡಿ, ಮುಕ್ತಕನ್ನಡ, ಗೀತಗುಚ್ಛ, ಗುಬ್ಬಿ, ಗುಬ್ಬಚ್ಚಿ – ಒಂದು ವಿವೇಚನೆ, ಮನೆಗೆ ಮರಳಿದ ಮೇಲೆ, ಸತ್ಯನಾರಾಯಣ ಮಂತ್ರ ಮಂಜರಿ, ಜಾನ್ ಬರೆದ ಬೈಬಲ್ ಸುವಾರ್ತೆ, ನಮ್ಮ ಕಾಶ್ಮೀರ, ತಿರುಗಾಟ, ವಾಸ್ತು ಪ್ರಕರಣ, ಮೊದಲ ಹೆಜ್ಜೆಗಳು ಇನ್ನೂ ಮುಂತಾದ ಅನೇಕ ಪುಸ್ತಕಗಳನ್ನು ಅವರು ಬರೆದಿದ್ದರು.  ಅನೇಕ ಪುಸ್ತಕಗಳ ಸಂಪಾದಕರಾಗಿಯೂ ದುಡಿದಿದ್ದರು.  

ಅಮೆರಿಕದಲ್ಲಿದ್ದರೂ ಕನ್ನಡನಾಡಿನ ಬಗ್ಗೆ ಅವರ ಮನಸ್ಸು ತುಡಿಯುತ್ತಿತ್ತು.  ರಾಮಕೃಷ್ಣ ಹೆಗ್ಗಡೆಯವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಕನ್ನಡ ನಾಡು ಭೀಕರ ಬರಗಾಲದಿಂದ ಇಲ್ಲಿನ ಜನ ತತ್ತರಿಸುತ್ತಿದ್ದರು.  ಆಗ ಹರಿಹರೇಶ್ವರರು ಅಮೆರಿಕದ ಕನ್ನಡಿಗರಿಂದ ಹಣ ಸಂಗ್ರಹಿಸಿ, ಕರ್ನಾಟಕಕ್ಕೆ ಬಂದು ರಾಮಕೃಷ್ಣ ಹೆಗ್ಗಡೆಯವರಿಗೆ ಪರಿಹಾರ ಧನವನ್ನು ನೀಡಿದರು.  ಕೆ. ಎಸ್. ಅಶ್ವಥ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಅಮೆರಿಕನ್ನಡ ಜನರಿಂದ ಹಣ ಸಂಗ್ರಹಿಸಿ ನೀಡಿದ್ದರು. ಉತ್ತರ ಕರ್ಣಾಟಕದಲ್ಲಿ ಜನರು ಸೂರು ಕಳೆದುಕೊಂಡಾಗ ಅವರಿಗೆ ಸಹಾಯ ತಲುಪಿಸಿದರು. ಅನೇಕ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಸೌಕರ್ಯ ಒದಗಿಸಿಕೊಟ್ಟರು.   ಇಂತಹ ಅನೇಕ ಕೆಲಸಗಳನ್ನು ಅವರು ಮಾಡಿದ್ದರು.  ಇವೆಲ್ಲಾ ಅವರ ನಿಧನಾನಂತರ ಅವರ ಸಹೃದಯರು ಬೆಳಕು ಚೆಲ್ಲಿರುವ ವಿಚಾರಗಳು.  ಈ ಕೆಲಸಗಳಿಗಾಗಿ ಶಿಕಾರಿಪುರ ಹರಿಹರೇಶ್ವರರು ಎಂದೂ ಪ್ರಚಾರ ಪಡೆಯಲಿಚ್ಚಿಸಿದವರೇ ಅಲ್ಲ. ತಾವು ನಿಧನರಾದಾಗಲೂ ತಮ್ಮ ದೇಹವು ವ್ಯರ್ಥವಾಗಿ ಹೋಗದಂತೆ ಜೆ ಎಸ್ ಎಸ್ ಮೆಡಿಕಲ್ ಕಾಲೇಜಿಗೆ ಕೊಟ್ಟುಕೊಂಡಂತಹ ಜೀವವದು.  

ಅಮೆರಿಕದಿಂದ ವಾಪಸ್ಸಾದ ಮೇಲೆ ಹರಿಹರೇಶ್ವರರವರು ನೆಲೆಸಿದ್ದು, ಮೈಸೂರಿನ ಸರಸ್ವತಿಪುರದಲ್ಲಿ. ಸಾಹಿತ್ಯದ ಕಾರ್ಯಕ್ರಮಗಳನ್ನು ನಡೆಸುವುದು ಅವರ ಅತ್ಯಂತ ಪ್ರಿಯವಾದ ಹವ್ಯಾಸಗಳಲ್ಲೊಂದಾಗಿತ್ತು. ಹಲವಾರು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದರು.  ಸಾಂಸ್ಕೃತಿಕವಾಗಿ ತಮ್ಮನ್ನು ಹಲವೆಡೆ ತೊಡಗಿಸಿಕೊಂಡರು.  ತಮ್ಮ ಮನೆಯ ಬಾಗಿಲನ್ನು ಸದಾ ತೆರೆದಿದ್ದರು.  ಆ ಬಾಗಿಲಲ್ಲಿ ಬಂದು ನಿಂತ ಸಹೃದಯರಿಗೆ ಆತಿಥ್ಯ ಮತ್ತು ದೀನರಿಗೆ ಸಹಾಯ ನಿತ್ಯಶಾಶ್ವತವಿತ್ತು.

ಕನ್ನಡದ ಈ ಮಹಾನ್ ಕಾರ್ಯಕರ್ತರು  2010ರ ಜುಲೈ 22ರಂದು ಈ ಲೋಕವನ್ನಗಲಿದರು. ಶಿಕಾರಿಪುರ ಹರಿಹರೇಶ್ವರ ಸ್ಮರಣಾರ್ಥವಾಗಿ ‘ಸ್ನೇಹದಲ್ಲಿ ನಿಮ್ಮ ಹರಿ’ ಎಂಬ ಗ್ರಂಥ ಪ್ರಕಟಗೊಂಡಿದೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ವೆಬ್ ಮೂಲಕ ಕೆಲಸ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ ಅಥವಾ ಅಲ್ಪಸ್ವಲ್ಪ ಗೊತ್ತಿದ್ದ ನಮಗೆ ಅಂದಿನ ಅಂತರ್ಜಾಲವೆಂಬ ಸಾಗರದಲ್ಲಿ ಈಜುವುದು ಸರಿಯಾಗಿ ಗೊತ್ತಿರಲಿಲ್ಲ.   ಆ ಸಂದರ್ಭದಲ್ಲಿ ಎಚ್‍ಎಮ್‍ಟಿ ಯಲ್ಲಿನ ಕನ್ನಡ ಸಂಪದಕ್ಕಾಗಿ ಕನ್ನಡದ ಕುರಿತಾದ ಮಾಹಿತಿಗಳನ್ನು ನೀಡುವ ಒಂದು ವೆಬ್ ಸೈಟ್ ಅನ್ನು ನನಗೆ ತಿಳಿದಮಟ್ಟಿಗೆ ಹುಟ್ಟು ಹಾಕಿದ್ದೆ.  ಅದು ಅಮೆರಿಕದಲ್ಲಿದ್ದ ಹರಿಹರೇಶ್ವರರಿಗೆ ನಮ್ಮ ಗೆಳೆಯರಿಂದ ತಿಳಿದು ಬಂದು ಅದಕ್ಕೆ ಅಮೆರಿಕದಲ್ಲಿ ವ್ಯಾಪಕ ಪ್ರಚಾರ ನೀಡಿಬಿಟ್ಟಿದ್ದರು.  ಅವರು ನಮ್ಮ ಕೆಲಸವನ್ನು ಮೆಚ್ಚಿ ಬರೆದ ಲೇಖನ ಇಂದೂ ಅಂತರಜಾಲದಲ್ಲಿದೆ. ಆದರೆ ನಾವು ಮಾಡಿದ ಕೆಲಸದಲ್ಲಿ ತುಂಬಾ ಮಿತಿಗಳು, ತಪ್ಪುಗಳು ಇರುತ್ತಿದ್ದವು. ಅದನ್ನು ಸುಲಭವಾಗಿ ಸರಿಪಡಿಸುವುದು ನಮಗೆ ಕಷ್ಟಸಾಧ್ಯವಿತ್ತು.  ನಾವು ಆ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿಲ್ಲ ಎಂಬ ಅನಿಸಿಕೆ ಹರಿಹರೇಶ್ವರರಿಗೆ ಇರುಸು ಮುರಿಸುಂಟುಮಾಡಿತ್ತು.    ಹಲವಾರು ಬಾರಿ ನನ್ನನ್ನು ಸಂಪರ್ಕ ಕೂಡಾ ಮಾಡಿದ್ದರು. ನಮ್ಮ ಮಿತಿಗಳಿಂದ ಹೊರಬಂದು ಅದರಲ್ಲಿ ಅದಕ್ಕಾಗಿ ಬಹಳಷ್ಟು ಸಲಹೆಗಳನ್ನು ನೀಡಿ ಆ ಕಾಯಕವನ್ನು ವ್ಯಾಪಕಗೊಳಿಸುವ ಇಚ್ಛೆ ವ್ಯಕ್ತಪಡಿಸಿದ್ದರು.   ಆದರೆ ವೆಬ್ ಸೈಟ್ ಮಾಡುವ ಸಮಯದಲ್ಲಿ ಅದನ್ನು ಅಂತರರಾಷ್ಟ್ರೀಯಮಟ್ಟದ ನಿರೀಕ್ಷೆಗಳಿರುವ ವ್ಯವಸ್ಥೆಯನ್ನಾಗಿ ಸುಸೂತ್ರವಾಗಿ ರೂಪಿಸುವ ಸಮರ್ಥತೆ ನನ್ನಲ್ಲಿ ಆಗ ಇರಲಿಲ್ಲ.   ಅವರು ನನ್ನನ್ನು ಈ ಕುರಿತು ಈಮೈಲ್ ಮೂಲಕ ಸಂಪರ್ಕಿಸಿದ್ದರು.  ಮುಂದಿನ ವರ್ಷದಲ್ಲಿ ಮೈಸೂರಿಗೆ ಬಂದು ವಿರಮಿಸುತ್ತಿದ್ದೇನೆ.  ಆಗ ತಮ್ಮ ಮಾರ್ಗದರ್ಶನದಲ್ಲಿ ಬಂದು ಈ ಕೆಲಸವನ್ನು ಕೈಗೆತ್ತಿಕೊಳ್ಳುತ್ತೇನೆ  ಎಂದು ಉತ್ತರ ತಿಳಿಸಿದ್ದೆ.  ಆದರೆ ನಾನು ಇಲ್ಲಿ ಬರುವವರೆಗೆ ಅವರು ಈ ಲೋಕದಲ್ಲಿರಲಿಲ್ಲ.  ಇಂತಹ ಕನ್ನಡದ ಶ್ರೇಷ್ಠ ಪರಿಚಾರಕನನ್ನು ಕಾಣುವ ಸೌಭಾಗ್ಯ ನನಗೆ  ದೊರಕಲೇ ಇಲ್ಲ.   

ಇಂದು ಕನ್ನಡ ಸಂಪದ ಮಾಡುತ್ತಿರುವ ಕೆಲಸ ಅವರಿಗೆ ತುಂಬಾ ಇಷ್ಟವಾಗುತ್ತಿತ್ತು ಎಂದು ಭಾವಿಸಿದ್ದೇನೆ.     ನಾವು ಮಾಡುವ ಇಂತಹ ಒಂದಿಲ್ಲೊಂದು ಕನ್ನಡದ ಕೆಲಸಗಳಷ್ಟೇ ಶಿಕಾರಿಪುರ ಹರಿಹರೇಶ್ವರರಂತಹ ಸಹೃದಯ ಜೀವಿಗಳಿಗೆ ನಾವು ಸಲ್ಲಿಸಬಹುದಾದ ಗೌರವವಾದೀತೇನೋ.

On the birth anniversary of Shikaripura Harihareshwara 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ