ಎಸ್. ಎಂ. ಪಂಡಿತ್
ಎಸ್. ಎಂ. ಪಂಡಿತ್
ಮಹಾನ್ ಕಲಾವಿದರಾದ ಎಸ್. ಎಂ. ಪಂಡಿತ್ ರೊಮ್ಯಾಂಟಿಕ ಕಲೆಯ ರಸಋಷಿ ಎನಿಸಿದವರು.
ಎಸ್. ಎಂ. ಪಂಡಿತ್ 1916ರ ಮಾರ್ಚ್ 25ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ ಮೋನಪ್ಪ. ತಾಯಿ ಕಲ್ಲಮ್ಮ. ಇವರು ವೃತ್ತಿಯಲ್ಲಿ ಕಂಚುಗಾರ ಕುಟುಂಬದವರು. ಪ್ರಾರಂಭಿಕ ಶಿಕ್ಷಣ ಪಡೆದದ್ದು ಬೀದರಿನ ಭಾಸ್ಕರರಾವ್ ಹಾಗೂ ಗುಲಬರ್ಗಾದ ಪ್ರಸಿದ್ಧ ಕಲಾವಿದರಾದ ಶಂಕರರಾವ್ ಆಳಂದಕರ್‌ರವರಲ್ಲಿ.
1936ರಲ್ಲಿ ಮದರಾಸಿನ ಕಲಾಶಾಲೆಯಿಂದ ಡಿಪ್ಲೊಮಾ ಪಡೆದ ಪಂಡಿತ್ ಅವರು ಮುಂಬಯಿಯ ಜೆ.ಜೆ. ಕಲಾಶಾಲೆಯಲ್ಲಿ ಗ್ಲಾಡ್‌ಸ್ಟನ್, ಭೋಂಸ್ಲೆ, ಚೂಡೇಕರ್, ದುರಂಧರ್ ಮುಂತಾದವರಿಂದ ಉಚ್ಛ ಶಿಕ್ಷಣ ಪಡೆದರು.
ಓದಿನ ನಂತರದ ದಿನಗಳಲ್ಲಿ ಪಂಡಿತ್ ಅವರು ಮುಂಬಯಿಯಲ್ಲಿ ಪೋಸ್ಟರ್ ಬರೆದುಕೊಂಡು ವೃತ್ತಿ ಜೀವನವನ್ನು ಆರಂಭಿಸಿದರು. ಜಲವರ್ಣ ಬಳಸಿ ಪೋಸ್ಟರ್ ಕಲೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ ಪಂಡಿತ್, ಹಾಲಿವುಡ್‌ನ ಖ್ಯಾತ ಮೆಟ್ರೋ ಸಂಸ್ಥೆಗೆ ಚಿತ್ರ ರಚಿಸಿಕೊಟ್ಟ ಮೊದಲ ಭಾರತೀಯರೆಂಬ ಹೆಗ್ಗಳಿಕೆ ಪಡೆದರು.
1976ರಲ್ಲಿ ಲಂಡನ್‌ನಲ್ಲಿ ಪಂಡಿತ್ ಅವರ ಪ್ರಥಮ ಪ್ರದರ್ಶನ ಏರ್ಪಟ್ಟಿತು. ಈ ಪ್ರದರ್ಶನವು ಭಾರತದ ಕಲಾವಿದರ ಬಗ್ಗೆ ವಿದೇಶೀ ನೆಲದಲ್ಲಿ ಮೂಡಿಸಿದ ಗೌರವ ಮಹತ್ವಪೂರ್ಣವಾದದ್ದು. ಪೌರಾಣಿಕ ದೇವ ದೇವತೆಗಳ, ಇತಿಹಾಸ ಸನ್ನಿವೇಶಗಳಿಗೆ ರಮ್ಯತೆ (Romantic) ಜೀವಾಳವಾಗಿರಿಸಿ ಭಾವುಕತೆ ರಂಜಕತೆಯನ್ನು ಧಾರಾಳವಾಗಿ ಬಳಸಿ ಚಿತ್ರಿಸಿದ ಖ್ಯಾತಿ ಪಂಡಿತ್ ಅವರದು. ನಳದಮಯಂತಿ, ಶಕುಂತಲೆಯ ಪತ್ರಲೇಖನ, ವಿಶ್ವಾಮಿತ್ರ-ಮೇನಕೆ, ರಾಧಾಕೃಷ್ಣ ಸಲ್ಲಾಪ ಮುಂತಾದ ಪಂಡಿತ್ ಅವರ ಚಿತ್ರಗಳು ಸಾರ್ವಜನಿಕರನ್ನು ಸಂಮ್ಮೋಹಗೊಳಿಸಿದುವು. ಕರ್ಣಾರ್ಜುನ ಕಾಳಗದ ದೃಶ್ಯದಲ್ಲಿ ಜೀವಂತಿಕೆಯನ್ನು ತುಂಬಿ ಕಣ್ಣೆದುರಿಗೆ ಮಹಾಭಾರತ ಯುದ್ಧವನ್ನು ತೆರೆದಿಟ್ಟ ಮಹಾನ್ ಕಲಾವಿದ ಎಸ್. ಎಂ ಪಂಡಿತ್. ಕ್ಯಾಲೆಂಡರುಗಳಲ್ಲಿ ಪಂಡಿತ್ ಅವರ ಪೌರಾಣಿಕ ಚಿತ್ರಗಳು ಅಪಾರ ಬೇಡಿಕೆಯನ್ನು ಹೊಂದಿದ್ದವು.
ನಟನಟಿಯರ ಚಿತ್ರಗಳನ್ನು ಅತ್ಯಂತ ನೈಜತೆಯಿಂದ ಚಿತ್ರಿಸುತ್ತಿದ್ದುದರಿಂದ ಹಲವಾರು ಸಿನಿಮಾ ಕಲಾವಿದರು ಪಂಡಿತ್ ಅವರ ಮೊರೆಹೋಗುತ್ತಿದ್ದರು. ಪುಣೆಯ ಪ್ರಭಾತ್, ಮುಂಬಯಿಯ ರಾಜ್ ಕಪೂರರ ಆರ್.ಕೆ. ಸ್ಟುಡಿಯೊಗಳು ಈ ನಿಟ್ಟಿನಲ್ಲಿ ಪ್ರಮುಖವಾದವು. ಬರಸಾತ್ ಚಿತ್ರಕ್ಕೆ ಅವರು ರೂಪಿಸಿದ್ದ ಚಿತ್ರಗಳು ಅತ್ಯಂತ ಪ್ರಶಂಸೆ ಪಡೆದಿದ್ದವು. ನರ್ಗಿಸ್ ಅವರನ್ನು ಪಂಡಿತ್ ಅವರು ಚಿತ್ರಿಸಿದ ರೀತಿ ಅತ್ಯಂತ ಕಳೆಯಿಂದ ಕೂಡಿತ್ತೆಂಬುದು ಭಾರತೀಯ ಚಿತ್ರರಂಗದಲ್ಲಿ ಅತೀವ ಖ್ಯಾತಿಗಳಿಸಿತ್ತು. ಹೀಗೆ ಪಂಡಿತ್ ಅವರ ಪ್ರಖ್ಯಾತಿ ಹಲವಾರು ಪ್ರಸಿದ್ಧ ಚಲನಚಿತ್ರಗಳವರೆಗೆ ವ್ಯಾಪಿಸಿದೆ. ಚಲನಚಿತ್ರ ಮಾಸ ಪತ್ರಿಕೆಗಳಿಗಂತೂ ಆಗಿನ ದಿನಗಳಲ್ಲಿ ಪಂಡಿತರದ್ದೇ ವಿನ್ಯಾಸ. ಮುಂಬಯಿಯ ಫಿಲ್ಮ್ ಇಂಡಿಯಾ ಮಾಸ ಪತ್ರಿಕೆಗೆ ಇವರು ಬರೆದ ಚಿತ್ರ ಅಂತಾರಾಷ್ಟ್ರೀಯ ಪ್ರಖ್ಯಾತಿ ಗಳಿಸಿತು. ಇದೇ ಚಿತ್ರಕ್ಕೆ 1946ರಲ್ಲಿ ಟೊರೆಂಟೋ ಪ್ರದರ್ಶನದಲ್ಲಿ ಬಹುಮಾನ ಲಭಿಸಿತು.
ಪಂಡಿತ್ ಅವರಿಗೆ ಲಂಡನ್ನಿನ ರಾಯಲ್ ಸೊಸೈಟಿ ಫೆಲೋಷಿಪ್, ಕರ್ನಾಟಕ ರಾಜ್ಯ ಲಲಿತಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಹಲವಾರು ಗೌರವಗಳು ಸಂದವು.
ಪಂಡಿತ್ ಅವರು ರಚಿಸಿದ ಗಾಂಧೀಜಿಯವರ ಭಾವಚಿತ್ರ ನ್ಯೂ ಕೌನ್ಸಿಲ್ ಹಾಲಿನಲ್ಲಿಯೂ; ಇಂದಿರಾಗಾಂಧಿ, ಮಾರ್ಗರೆಟ್ ಥ್ಯಾಚರ್ ಮುಂತಾದವರ ಚಿತ್ರಗಳು ಕಾಮನ್‌ವೆಲ್ತ್ ಸಂಸ್ಥೆ ಆವರಣದಲ್ಲಿಯೂ ಸ್ಥಾಪಿತಗೊಂಡವು. ಪಂಡಿತ್ ಅವರ ಹಲವಾರು ಚಿತ್ರಗಳು ರೋಮನ್ ಆರ್ಟ್ ಗ್ಯಾಲರಿ, ಇಂಡೋ ಬ್ರಿಟಿಷ್ ಅಸೋಸಿಯೇಷನ್ ಹಾಲ್ ಮುಂತಾದೆಡೆ ಸಂಗ್ರಹಗೊಂಡಿವೆ.
ಮಹಾನ್ ಕಲಾವಿದ ಪಂಡಿತ್ ಅವರು 1993ರ ಮಾರ್ಚ್ 30ರಂದು ಈ ಲೋಕವನ್ನಗಲಿದರು.
ಕಾಮೆಂಟ್‌ಗಳು