ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲೀಲಾವತಿ ದೇವದಾಸ್


ಲೀಲಾವತಿ ದೇವದಾಸ್


ಡಾ. ಲೀಲಾವತಿ ದೇವದಾಸ್ ಜನಪ್ರಿಯ ವೈದ್ಯೆಯಾಗಿ, ಶಸ್ತ್ರಚಿಕಿತ್ಸಾ ಪರಿಣಿತೆಯಾಗಿ, ವೈದ್ಯಕೀಯ ಕಾಲೇಜು ಪ್ರಾಧ್ಯಾಪಕಿಯಾಗಿ, ವೈದ್ಯಕೀಯ ಆಡಳಿತಗಾರ್ತಿಯಾಗಿ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ರಚಿಸಿದವರಾಗಿ ಹೆಸರಾಗಿದ್ದಾರೆ. 

ಲೀಲಾವತಿ 1930ರ ಮಾರ್ಚ್ 30ರಂದು  ಬೆಂಗಳೂರಿನಲ್ಲಿ ಜನಿಸಿದರು. ತಂದೆ ಡಬ್ಲೂ.ಡಿ. ಪಿಚ್ಚುಮುತ್ತು.  ತಾಯಿ ರತ್ನ. ತಂದೆ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದರೆ ತಾತಾ ಕೂಡಾ ಯುನೈಟೆಡ್ ಮಿಷಿನ್ ಶಾಲೆಯ ಶಿಕ್ಷಕರಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದವರು. ಅವರು ಸ್ವತ: ಕವಿಗಳಾಗಿದ್ದು ಇಂಗ್ಲಿಷ್ ಮತ್ತು ತಮಿಳು ಭಾಷಾ ವಿದ್ವಾಂಸರಾಗಿದ್ದರು. 

ಲೀಲಾವತಿ ಅವರು ಹುಟ್ಟಿದ್ದು ತಮಿಳು ಕುಟುಂಬದಲ್ಲಾದರೂ ಕಲಿತಿದ್ದೆಲ್ಲ ಕನ್ನಡ. ಆರಂಭಿಕ ಶಿಕ್ಷಣ ಗ್ರಾಮೀಣ ಪರಿಸರದ ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಶಾಲೆಯಲ್ಲಿ ನಡೆಯಿತು. ಮಾಧ್ಯಮಿಕ ಶಾಲೆಗೆ ಸೇರಿದ್ದು ಮಹಾರಾಣಿ ಮಿಡ್ಲಿಸ್ಕೂಲು. ಮಹಾರಾಣಿ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಸೋದರತ್ತೆ ಶ್ರೀಮತಿ ಗ್ರೇಸ್‌ರವರೇ ಇವರ ವಿದ್ಯೆ ಹಾಗೂ ಬೌದ್ಧಿಕ ವಿಕಾಸದ ಮಾರ್ಗದರ್ಶಕರಾದರು. ಹೈಸ್ಕೂಲು ಸೇರಿದಾಗ ಅಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಪ್ಪದೆ ವೀಕ್ಷಿಸುತ್ತಾ ಬಂದರು.  ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ದೇಶದ ತುಂಬೆಲ್ಲ ತುಂಬಿದ್ದ ಕ್ವಿಟ್ ಇಂಡಿಯಾ ಚಳುವಳಿಯಿಂದ ಪ್ರಭಾವಿತರಾದರು.  ಆದರೆ ಶಿಕ್ಷಕಿ ಸೋದರತ್ತೆ, ಹೈಸ್ಕೂಲು ಮುಖ್ಯೋಪಾಧ್ಯಾರಾಗಿದ್ದ ತಂದೆ, ಸೆಂಟ್ರಲ್ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದ ದೊಡ್ಡಪ್ಪನವರು,  ಇವರುಗಳ ಕಣ್ಣು ತಪ್ಪಿಸಿ ಶಾಲೆಗೆ ಚಕ್ಕರ್ ಹೊಡೆಯಲಾರದೆ. - ಈ ಚಞಳವಳಿ ಸಂದರ್ಭದಲ್ಲಿ ಏನೂ ಮಾಡಲಾಗುತ್ತಿಲ್ಲವಲ್ಲ ಎಂದು ಒಳಗೊಳಗೆ, ಹೃದಯ ತಲ್ಲಣಗೊಂಡು ರೊಚ್ಚಿಗೇಳುತ್ತಿತ್ತು. 

ಲೀಲಾವತಿ ಅವರಿಗೆ ಹೈಸ್ಕೂಲಿನಲ್ಲಿ ಸಹಪಾಠಿಯಾಗಿದ್ದವರು ಪ್ರಸಿದ್ಧ ಕಾದಂಬರಿಕಾರ್ತಿ ವಾಣಿಯವರ ಮಕ್ಕಳು ಹಾಗೂ ತ್ರಿವೇಣಿಯವರ ಅಣ್ಣನ ಮಗಳು. ಇದರಿಂದ ವಾಣಿ ಹಾಗೂ ತ್ರಿವೇಣಿಯವರ ಕಾದಂಬರಿಗಳನ್ನೋದುವ ಅವಕಾಶ ದೊರೆಯಿತು.  ಹೀಗೆ  ಕನ್ನಡದ ಕಾದಂಬರಿಗಳ ಓದಿನಲ್ಲಿ ಆಸಕ್ತಿ ಮೊಳೆತು ಬರವಣಿಗೆಯನ್ನೂ ರೂಡಿಸಿಕೊಂಡರು. 

ಲೀಲಾವತಿ ಅವರು ಹೈಸ್ಕೂಲಿನಲ್ಲಿದ್ದಾಗಲೇ ಬರೆದ ಮೊದಲ ಕವನ ಮಾಸ್ತಿಯವರ ‘ಜೀವನ’ ಪತ್ರಿಕೆಯಲ್ಲಿ ಪ್ರಕಟವಾಯಿತು. ನಂತರ ವಿಶ್ವಕರ್ನಾಟಕ, ಜಯಕರ್ನಾಟಕ, ಪೌರವಾಣಿ, ತಾಯಿನಾಡು ಮುಂತಾದವುಗಳಲ್ಲೂ ಇವರ ಬರಹಗಳು ಪ್ರಕಟಗೊಂಡವು. ಇವರು ಗೆಳತಿಯರೊಡನೆ ಪ್ರಾರಂಭಿಸಿದ್ದು ಜ್ಯೋತ್ಸ್ನಾ ಎಂಬ ಕೈಬರಹ ಪತ್ರಿಕೆ. 

ಲೀಲಾವತಿ ಅವರು ಇಂಟರ್‌ಮೀಡಿಯಟ್ನಲ್ಲಿ ಪ್ರಥಮ ದರ್ಜೆಗಳಿಸಿದ ನಂತರ ಮೈಸೂರಿನ ಮೆಡಿಕಲ್ ಕಾಲೇಜು ಸೇರಿದರು. ಕಾಲೇಜಿನಲ್ಲಿಯೂ ಇವರ ಸಾಹಿತ್ಯ – ಸಾಂಸ್ಕೃತಿಕ ಚಟುವಟಿಕೆಗಳು ಮುಂದುವರೆದವು. 

ಲೀಲಾವತಿ ಅವರು ಎಂ.ಬಿ.ಬಿ.ಎಸ್. ಪದವಿ ಪಡೆದ ನಂತರ ಸೇವಾಮನೋಭಾವದಿಂದ ‘ಗಾಂಧಿ ಸ್ಮಾರಕ ಕುಷ್ಠರೋಗ ನಿವಾರಣಾ ಸಂಸ್ಥೆ’ಗೆ ಸೇರಿದರು.  ಗಾಂಧೀಜಿಯವರ ಆಶ್ರಮದ ಸುತ್ತಮುತ್ತಲ ಗ್ರಾಮಗಳಲ್ಲಿ ಕಾರ್ಯನಿರ್ವಹಣೆ ಮಾಡಿದರು. ಮುಂಬೈನಲ್ಲಿ ಹೆಚ್ಚಿನ ತರಬೇತಿ ಪಡೆದು ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಸೇವಾಮನೋಭಾವದಿಂದ ಕುಷ್ಠರೋಗ ನಿವಾರಣಾ ಕೇಂದ್ರ ತೆರೆದರು. ಮುಂದೆ ಲೀಲಾವತಿ ಅವರು ರಾಜ್ಯ ಸರಕಾರದ ಆರೋಗ್ಯ ಇಲಾಖೆ ಸೇರಿದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಇವರ ಸರಕಾರಿ ಉದ್ಯೋಗ ಆರಂಭವಾಯಿತು. ಮುಂದೆ ದಾವಣಗೆರೆ, ಬಳ್ಳಾರಿಗಳಲ್ಲಿ ಅಸಿಸ್ಟೆಂಟ್ ಸರ್ಜನ್ ಆಗಿ, ಬಳ್ಳಾರಿ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ, ಲಕ್ನೋದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ, ಅಸಿಸ್ಟೆಂಟ್ ಪ್ರೊಫೆಸರಾಗಿ, ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಸರ್ಜನ್ ಆಗಿ, ಗುಲಬರ್ಗದ ಆಸ್ಪತ್ರೆಯಲ್ಲಿ ಸರ್ಜನ್ ಆಗಿ, ಇವಲ್ಲದೆ ಮಂಗಳೂರಿನ ಲೇಡಿ ಗೋಷನ್ ಆಸ್ಪತ್ರೆ, ಎಂ.ಆರ್. ಮೆಡಿಕಲ್ ಕಾಲೇಜು, ಬೆಂಗಳೂರಿನ ಅಂಬೇಡ್ಕರ್ ಕಾಲೇಜು, ತುಮಕೂರಿನ ಸಿದ್ಧಗಂಗಾ ಮೆಡಿಕಲ್ ಕಾಲೇಜು,  ಹೀಗೆ ರಾಜ್ಯದ ಹಲವಾರು ಕಾಲೇಜುಗಳಲ್ಲಿ ಪ್ರಾಧ್ಯಾಪಕಿಯಾಗಿ, ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿಯಾಗಿ, ಆಡಳಿತಾತ್ಮಕ ಹಾಗೂ ವೈದ್ಯಕೀಯ ರಂಗಗಳಲ್ಲಿ ಕಾರ್ಯನಿರ್ವಹಿಸಿ 1988ರಲ್ಲಿ ನಿವೃತ್ತರಾದರು. 

ಲೀಲಾವತಿ ಅವರು ಗ್ರಾಮೀಣ ಪ್ರದೇಶದಲ್ಲಿ ವೈದ್ಯೆಯಾಗಿ ದುಡಿಯಲು ಪ್ರಾರಂಭಿಸಿದ ನಂತರ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದರು. ಆಕಾಶವಾಣಿ ಭಾಷಣಗಳ ಮೂಲಕ, ಆರೋಗ್ಯ ಶಿಬಿರಗಳ ಮೂಲಕ, ಸಂಜೆ ತರಗತಿಗಳ ಮೂಲಕ ಆರೋಗ್ಯ ಶಿಕ್ಷಣ ಕಾರ್ಯ ಕೈಗೊಂಡರು. ಕುಟುಂಬ ಯೋಜನೆಯ ಮಹತ್ವವನ್ನು ವಿವರಿಸಿ ಗ್ರಾಮೀಣ ಪ್ರದೇಶದಲ್ಲಿ ಕುಟುಂಬ ಯೋಜನೆ ಶಿಬಿರಗಳನ್ನೇರ್ಪಡಿಸಿ ಜನಪ್ರಿಯಗೊಳಿಸಿದರು.  ಉದರ ದರ್ಶಕ ಚಿಕಿತ್ಸೆಗೆ ಜನರ ಮನವೊಲಿಸಿದರು.  

ಡಾ. ಲೀಲಾವತಿ ದೇವದಾಸ್ ಅವರು ಮೈಸೂರು ವಿಭಾಗದ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿಯಾಗಿದ್ದಾಗ ಸಾಹಿತ್ಯ ಪರಂಪರೆಯ ಪರಿಚಯ ಪಡೆಯಲು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಚಂದ್ರಶೇಖರ ಕಂಬಾರರ ಪ್ರೇರಣೆಯಿಂದ ಡಾ.ಪಿ.ಎಸ್. ಶಂಕರ್‌ರವರ ನೇತೃತ್ವದಲ್ಲಿ ‘ಕನ್ನಡ ವೈದ್ಯ ವಿಶ್ವಕೋಶ’ದ ಸ್ತ್ರೀವಿಭಾಗದ ಸಂಪಾದಕಿಯಾಗಿ ಜವಾಬ್ದಾರಿಯುತ ಕಾರ್ಯ ನಿರ್ವಹಿಸಿದರು. 

ಲೀಲಾವತಿ ಅವರು ಯೂರೋಪ್, ಇಂಗ್ಲೆಂಡ್, ಅಮೆರಿಕ, ಇಸ್ರೆಲ್ ಮುಂತಾದ ದೇಶಗಳಲ್ಲಿ ಪ್ರವಾಸ ಕೈಗೊಂಡು ವ್ಯಾಪಕ ಅನುಭವ ಗಳಿಸಿದರು. ಇಸ್ರೆಲ್ ಪ್ರವಾಸದ ನಂತರ ರಚಿಸಿದ ಕೃತಿ ‘ಪವಿತ್ರನಾಡಿನಲ್ಲಿ ಪ್ರವಾಸ’. ಆರೋಗ್ಯದ ಕುರಿತಾಗಿ ಅದರಲ್ಲೂ ಸ್ತ್ರೀಯರ ಆರೋಗ್ಯದ ವಿಷಯದಲ್ಲಿ ಅತಿ ಕಾಳಜಿವಹಿಸಿ ವೈದ್ಯಕೀಯ ವಿಶ್ಲೇಷಣೆಗಳನ್ನು ಸರಳವಾಗಿ ವಿವರಿಸಿ, ಜನಸಾಮಾನ್ಯರಿಗೂ ತಿಳಿಯುವಂತೆ ಬರೆದ ಕೃತಿ ‘ನಾನು ಗೌರಿಯ ಗರ್ಭಕೋಶ’. ಇದು ತುಮಕೂರಿನ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ನಂತರ ಬರೆದ ಕೃತಿ ‘ಹೆಣ್ಣೇ ನಿನ್ನ ಆರೋಗ್ಯ ಕಾಪಾಡಿಕೊ’. ಆಸ್ಪತ್ರೆಗಳಲ್ಲಿ ರೋಗಿಗಳೊಡನೆ ಬೆರೆತಾಗ ಅನುಭವಿಸಿದ ಹಾಸ್ಯ ಪ್ರಸಂಗಗಳನ್ನು ರೋಚಕವಾಗಿ ವಿವರಿಸಿ ಬರೆದ ಕೃತಿ ‘ಆಸ್ಪತ್ರೆಯಲ್ಲಿ ಹಾಸ್ಯ’. ಹೀಗೆ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಮತ್ತು ಇತರ ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದರು. ಇವರ ಇತರ ಕೃತಿಗಳಲ್ಲಿ ‘ಮುಸುಕಿನಲ್ಲಿ ಗುದ್ದು’ (ಕವನ ಸಂಕಲನ), ‘ಸ್ತ್ರೀ ಆರೋಗ್ಯ ರಕ್ಷಣೆ ಹೇಗೆ?’, ‘ಹೆರಿಗೆ’, 'ಹಳಿ ತಪ್ಪಿದ ಹೆರಿಗೆ’, 'ಬೈಬಲಿನ ಅನಾಮಿಕ ಸ್ತ್ರೀಯರು’, ‘ನಿಮ್ಮ ದೇಹದ ಪರಿಚಯ ಮಾಡಿಕೊಳ್ಳಿ’, ‘ಸುಖ ಸಂಸಾರಕ್ಕೆ ಸೂತ್ರಗಳು’, ‘ಅಪೋಸ್ತಲರ ಕೃತ್ಯಗಳು’, ‘ಗಲೇತ್ಯದವರೆಗೆ’, ‘ಶಿಶುಪಾಲನೆ’, ‘ಮಕ್ಕಳ ಆಹಾರ’, ‘ಏಡ್ಸ್ ತಡೆಗಟ್ಟಲು ಶಿಕ್ಷಕರಿಗೆ ಶಿಕ್ಷಣ’, ‘ಶಿಶು ಆರೈಕೆ’, ‘ವ್ಯಕ್ತಿತ್ವ ವಿಕಸನ’ ಮುಂತಾದವು ಸೇರಿವೆ. 

ಈ ರೀತಿಯಾಗಿ ವೈದ್ಯಕೀಯ ಜ್ಞಾನವನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ನಿಷ್ಠೆಯಿಂದ ದುಡಿದ ಡಾ. ಲೀಲಾವತಿ ದೇವದಾಸ್‌ರವರಿಗೆ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಸದ್ಯೋದಿತ ಶಾಶ್ವತಿ ಪ್ರಶಸ್ತಿ, ಬೈಬಲ್ ಸೊಸೈಟಿಯಿಂದ ಜಾನ ಹ್ಯಾಂಡ್ಸ್ ‌ಪ್ರಶಸ್ತಿ, ಪವಿತ್ರ ನಾಡಿನಲ್ಲಿ ಪ್ರವಾಸ ಕೃತಿಗೆ ವಿಶ್ವೇಶ್ವರಯ್ಯ ಮತ್ತು ನವರತ್ನ ಪ್ರಶಸ್ತಿಗಳು, ವೈದ್ಯಕೀಯ ಸಾಹಿತ್ಯಕ್ಕಾಗಿ ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಬಿಜಾಪುರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ವಿಜ್ಞಾನ ಸಾಹಿತ್ಯ ಪ್ರಶಸ್ತಿ, ಪುಸ್ತಕ ಪ್ರಾಧಿಕಾರದಿಂದ ವೈದ್ಯ ವಿಜ್ಞಾನ ಪ್ರಶಸ್ತಿ, ರಾಜ್ಯ ಆರೋಗ್ಯ ಇಲಾಖೆಯಿಂದ ಮೂರು ಬಾರಿ ರಾಜ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಸೂತಿ ತಜ್ಞರ ಸಮ್ಮೇಳನದಲ್ಲಿ ಸನ್ಮಾನ ಹೀಗೆ ಹಲವಾರು ಪ್ರಶಸ್ತಿ ಗೌರವಗಳು  ಸಂದಿದ್ದವು.

ಡಾ. ಲೀಲಾವತಿ ದೇವದಾಸ್ ಅವರು 2018 ಡಿಸೆಂಬರ್ 17ರಂದು ನಿಧನರಾದರು.

On the birth anniversary of popular Doctor and writer Dr. Leelavathi Devadass 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ