ಶ್ರೇಯಾ ಘೋಷಾಲ್
ಶ್ರೇಯಾ ಘೋಷಾಲ್
ಅಂದು ಭಾರತದ ದೂರದರ್ಶನ ಕಕ್ಷೆಯಲ್ಲಿ ಸಂಗೀತದ ಸುಂದರ ತಂಗಾಳಿಯಂತಿದ್ದ ‘ಸ ರಿ ಗ ಮ ಪ’ ಕಾರ್ಯಕ್ರಮ ಹಲವಾರು ಕಾರಣಗಳಿಗೆ ನೆನಪಾಗುತ್ತದೆ. ಅಂದಿನ ಆ ತಂಗಾಳಿಯಲ್ಲಿ ಹಾಯ್ದು ಬಂದು ಚಿತ್ರರಂಗದಲ್ಲಿ ನೆಲೆ ನಿಂತವರಲ್ಲಿ ಒಬ್ಬರು ಆ ಸ್ಪರ್ಧೆಯ ಸೂತ್ರಧಾರಿಯಾಗಿದ್ದ ಸೋನು ನಿಗಂ. ಮತ್ತೊಬ್ಬರು ಬಾಲಕಿಯಾಗಿ ಹಾಡಿ ಎಲ್ಲರ ಮನಸ್ಸನ್ನೂ ತನ್ನ ಮುಗ್ಧತೆ, ಸುಶ್ರಾವ್ಯ ಗಾಯನ ಮತ್ತು ಸುಂದರತೆಯಿಂದ ಇನ್ನಿಲ್ಲದಂತೆ ಸೆಳೆದ ಶ್ರೇಯಾ ಘೋಷಾಲ್.
ಶ್ರೇಯಾ ಘೋಷಾಲ್ ಹುಟ್ಟಿದ್ದು 1984ರ ಮಾರ್ಚ್ 12ರಂದು. ಇಂದು ಆಕೆ ತನ್ನ ಮಾತ್ರಭಾಷೆಯಾದ ಬೆಂಗಾಳಿಯೂ ಸೇರಿದಂತೆ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಮರಾಠಿ, ಅಸ್ಸಾಮಿ, ಪಂಜಾಬಿ, ಇಂಗ್ಲಿಷ್ ಹೀಗೆ ಸಕಲಭಾಷಾ ಗಾಯಕಿ. ಬಂಗಾಳದಲ್ಲಿ ಹುಟ್ಟಿ ರಾಜಸ್ಥಾನದ ಕೋಟಾದಲ್ಲಿ ಬೆಳೆದ ಹುಡುಗಿ ಶ್ರೇಯಾ ಘೋಷಾಲ್. ಅವರ ತಂದೆ ಪರಮಾಣು ವಿಜ್ಞಾನಿ. ತಾಯಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ತಾನು ಹಾಡಿದ ಪ್ರಥಮ ಚಿತ್ರ ‘ದೇವಾದಾಸ್’ ಚಿತ್ರದಲ್ಲೇ ರಾಷ್ಟ್ರಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿಗಳಂತಹ ಪ್ರಶಸ್ತಿಗಳು ಆಕೆಯನ್ನು ಸುಸ್ವಾಗತಿಸಿದವು. ಇಂದಿನ ದಿನ ಆಕೆ ಹಾಡಿರುವ ಚಿತ್ರಗಳ ಸಂಖ್ಯೆಯೇ ಹಲವುನೂರುಗಳನ್ನು ಮೀರಿವೆ. ಹಾಡುಗಳು ಲೆಕ್ಕಕ್ಕೆ ಮೀರಿದ್ದು. ಅದಕ್ಕೂ ಮೀರಿದ್ದು ಆಕೆ ಗಳಿಸಿದ ಪ್ರಶಸ್ತಿಗಳು.
ತನ್ನ ನಾಲ್ಕನೆಯ ವಯಸ್ಸಿನಲ್ಲೇ ತನ್ನ ತಾಯಿಗೆ ಹಾರ್ಮೋನಿಯಂ ನುಡಿಸುತ್ತಾ ಜೊತೆ ನೀಡುತ್ತಿದ್ದಳು ಬಾಲೆ ಶ್ರೇಯಾ ಘೋಷಾಲ್. ಮುಂದೆ ಈ ಬಾಲೆಯ ಹಿಂದೂಸ್ಥಾನಿ ಸಂಗೀತ ತರಗತಿಗಳು ಕೋಟಾದ ಮಹೇಶ್ಚಂದ್ರ ಶರ್ಮರ ಬಳಿ ನಡೆದವು. ಬಾಲ ಪ್ರತಿಭೆಯಾಗಿ ಶ್ರೇಯಾ ಘೋಷಾಲ್ ‘ಸ ರಿ ಗ ಮ ಪ’ ಪ್ರಶಸ್ತಿ ಪಡೆದಾಗ ಆ ಪ್ರಶಸ್ತಿಯ ತೀರ್ಪುಗಾರರಲ್ಲೊಬ್ಬರಾಗಿದ್ದ ಕಲ್ಯಾಣ್ಜಿ ಆನಂದ್ಜಿ ಅವರು ಶ್ರೇಯಾ ಅವರ ತಂದೆ ತಾಯಿಗಳಲ್ಲಿ, ಆಕೆಗೆ ಹೆಚ್ಚಿನ ಸಂಗೀತ ಕಲಿಕೆಗಾಗಿ ಮುಂಬೈನಲ್ಲಿ ವಾಸ್ತವ್ಯ ಒದಗಿಸಲು ಮನವೊಲಿಸಿದರು. ಸ್ವಯಂ ಕಲ್ಯಾಣ್ಜೀ ಅವರೇ ಹದಿನೆಂಟು ತಿಂಗಳುಗಳ ಕಾಲ ಶ್ರೇಯಾ ಘೋಷಾಲ್ಗೆ ತರಬೇತಿ ನೀಡಿದರು. ಜೊತೆ ಜೊತೆಗೆ ಶ್ರೇಯಾ ಮುಂಬೈನಲ್ಲಿ ಮುಕ್ತಾ ಭಿಡೆ ಅವರಲ್ಲಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು. ಸಂಗೀತದ ನಡುವೆ ಓದನ್ನೂ ಕಡೆಗಾಣಿಸದೆ ಆಟೋಮಿಕ್ ಎನರ್ಜಿ ಸಿಬ್ಬಂಧಿ ವರ್ಗದ ಮಕ್ಕಳಿಗಾಗಿರುವ ಶಾಲೆಗಳಲ್ಲಿ ಓದುತ್ತಾ ಪದವೀಧರೆಯೂ ಆದರು.
ಒಮ್ಮೆ ಬಾಲಕಿಯಾಗಿ ‘ಸ ರಿ ಗ ಮ ಪ’ ಪ್ರಶಸ್ತಿ ಗೆದ್ದಿದ್ದ ಶ್ರೇಯಾ ಘೋಷಾಲ್ ಎರಡನೆಯ ಬಾರಿಗೆ ಪ್ರೌಢ ಗಾಯಕಿಯಾಗಿ ‘ಸ ರಿ ಗ ಮ ಪ’ ವೇದಿಕೆಯಲ್ಲಿ ಸ್ಪರ್ಧಿಸಲು ಬಂದಾಗ ಪ್ರಸಿದ್ಧ ಚಿತ್ರ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿ ಆಕೆಯ ಪ್ರತಿಭೆಗೆ ಮಾರುಹೋದರು. ಅವರ ಚಿತ್ರ ‘ದೇವದಾಸ್’ನಲ್ಲಿ ಐಶ್ವರ್ಯ ರಾಯ್ ನಟಿಸಿದ ಪಾರು ಪಾತ್ರಕ್ಕೆ ಐದು ಹಾಡುಗಳಿಗೆ ಧ್ವನಿಯಾದ ಶ್ರೇಯಾ ಘೋಷಾಲ್ ಮುಂದೆ ಹಿಂದಿರುಗಿ ನೋಡಲಿಲ್ಲ.
ಚಿತ್ರರಂಗದಲ್ಲಿ ಎಲ್ಲ ಭಾಷೆಗಳಲ್ಲಿ ಹಾಗೂ ಎ. ಆರ್. ರೆಹಮಾನ್, ಇಳಯರಾಜಾ ಆವರನ್ನೊಳಗೊಂಡಂತೆ ಎಲ್ಲ ಚಿತ್ರ ನಿರ್ದೇಶಕರನ್ನೂ ಎಲ್ಲಾ ಭಾಷಿಗರನ್ನೂ ತಮ್ಮ ಪ್ರತಿಭೆಯಿಂದ ಆಕರ್ಷಿಸಿದ ಘೋಷಾಲ್, ಕನ್ನಡದಲ್ಲೂ ‘ಏನೋ ಒಂಥರಾ ಏನೋ ಒಂಥರಾ ಈ ಪ್ರೀತಿಯು ಈ ರೀತಿಯು ಶುರುವಾದ ಅನಂತರ’, ’ಓ ಗುಣವಂತ! ನೀನೆಂದು ನನ ಸ್ವಂತ’, ‘ಆಹಾ ಎಂಥ ಆ ಕ್ಷಣ’, ‘ಉಲ್ಲಾಸ ಹೂ ಮಳೆ’, ‘ನಿನ್ನ ನೋಡಲೆಂತೋ ಮಾತನಾಡಲೆಂತೊ’, ‘ತನ್ಮಯಳಾದೆನು ತಿಳಿಯುವ ಮುನ್ನವೆ’, ‘ಹೇ ಹೂವೆ ನೀ ಅರಳೋ ಮುಂಜಾನೆ’, ‘ಸವಿಯೋ, ಸವಿಯೋ ಒಲವಿನ ನೆನಪು’ , ‘ದೂರದಿಂದ ನೋಡ್ತಾರೋ’ ಹೀಗೆ ಶ್ರೇಯಾ ಘೋಷಾಲ್ ಹಾಡಿದ ಹಾಡುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ.
ದೇವದಾಸ್ ಚಿತ್ರದ ‘ಬೈರಿ ಪಿಯಾ’, ಪಹೇಲಿ ಚಿತ್ರದ ‘ಧೀರೇ ಜೈನಾ’, ಜಬ್ ವಿ ಮೆಟ್ ಚಿತ್ರದ ‘ಯೇ ಇಷ್ಕ್ ಹೈ’ ಅಲ್ಲದೆ. ಬಂಗಾಳಿ ಮತ್ತು ಮರಾಠಿ ಚಿತ್ರಗಳ ಗಾಯನಕ್ಕಾಗಿ ಈಗಾಗಲೇ ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಶ್ರೇಯಾ ಘೋಷಾಲ್ ಉಳಿದಂತೆ ವಿವಿಧ ಭಾಷೆಗಳಿಗಾಗಿ ಪಡೆದಿರುವ ಪ್ರಶಸ್ತಿಗಳಂತೂ ಲೆಕ್ಕವಿಲ್ಲದಷ್ಟು. ಕೇರಳ, ತಮಿಳುನಾಡು ರಾಜ್ಯಗಳೂ ಅನೇಕ ಬಾರಿ ಪ್ರಶಸ್ತಿ ನೀಡಿವೆ. ಅಮೆರಿಕದ ಓಹಿಯೋ ಪಟ್ಟಣದಲ್ಲಿ ಈಕೆಯ ಗೌರವಕ್ಕಾಗಿ ಏರ್ಪಾಡಾಗಿದ್ದ ಸಮಾರಂಭದಲ್ಲಿ ಆ ಪ್ರಾಂತ್ಯದ ರಾಜ್ಯಪಾಲರಾದ ಟೆಡ್ ಸ್ಟ್ರಿಕ್ ಲ್ಯಾಂಡ್ ಅವರು ಜೂನ್ 26ರ ದಿನವನ್ನು ಶ್ರೇಯಾ ಘೋಷಾಲ್ ದಿನ’ ಎಂದು ಘೋಷಿಸಿದ್ದಂತೂ ಅಂತರರಾಷ್ಟ್ರೀಯ ಮಟ್ಟದ ದಂತಕಥೆಯಂತಾಗಿದೆ. ಈ ಎಲ್ಲಾ ಸಾಧನೆಗಳನ್ನೂ ಅವರು ತಮ್ಮ ಮೂವತ್ತರ ಹರಯದಲ್ಲೇ ಮಾಡಿದ್ದರು ಎಂಬುದು ಅತ್ಯಂತ ಮಹತ್ವದ ಸಂಗತಿ. ಇವೆಲ್ಲಕ್ಕೂ ಮಿಗಿಲಾದದ್ದು ಇವರು ಎಲ್ಲಾ ಭಾಷೆಗಳ ಚಿತ್ರಗೀತೆಗಳನ್ನೂ ಸುಶ್ರಾವ್ಯವಾಗಿ ಹಾಡುತ್ತಾ ಸರ್ವಭಾಷಿಗರೂ ತಾವು ಹಾಡಿರುವ ಸುಶ್ರಾವ್ಯ ಹಾಡುಗಳನ್ನು ಗುನುಗುವಂತೆ ಮಾಡುತ್ತಿದ್ದಾರೆ ಎನ್ನುವುದು.
ಸಿನಿಮಾಗಳಲ್ಲಿ, ಧ್ವನಿಮುದ್ರಿಕೆಗಳಲ್ಲಿ ಹಾಡುವುದರ ಜೊತೆಗೆ ವಿವಿಧ ಪ್ರತಿಭಾಪ್ರಧರ್ಶನ ಕಾರ್ಯಕ್ರಮಗಳಲ್ಲೂ ಶ್ರದ್ಧೆಯಿಂದ ಜೊತೆಗೆ ಸಾಕಷ್ಟು ಗಾಂಭೀರ್ಯದಿಂದ ಕಾಣಿಸಿಕೊಳ್ಳುವ ಶ್ರೇಯಾ ತಮ್ಮ ಮುಗ್ಧತೆ ಬೆರೆತ ಸುಂದರತೆ ಹಾಗೂ ಎಲ್ಲೇ ಹಾಡಲಿ ಅದಕ್ಕೆ ನೀಡುವ ತನ್ಮಯತೆ ಮತ್ತು ಸಂಗೀತದ ಅರ್ಥೈಕೆಯ ಜೊತೆಗಿನ ಸುಶ್ರಾವ್ಯತೆಗಳಿಂದ ಆಪ್ತವಾಗಿಬಿಡುತ್ತಾರೆ. ಈ ಹುಡುಗಿ ಮತ್ತಷ್ಟು ಸಾಧಿಸಲಿ. ಆಕೆಯಿಂದ ನಿರಂತರವಾಗಿ ಉತ್ತಮ ಸಂಗೀತ ಕೇಳುವಂತಾಗಲಿ. ಇಂತಹ ಶ್ರದ್ಧಾವಂತ ಪ್ರತಿಭೆಗಳು ನಮ್ಮ ನಾಡಿನಲ್ಲಿ ನಿತ್ಯ ಪ್ರವಹಿಸುತ್ತಿರಲಿ ಮತ್ತು ಆ ಪ್ರತಿಭೆಗಳ ಸದುಪಯೋಗವಾಗುತ್ತಿರಲಿ ಎಂದು ಆಶಿಸೋಣ. ಈ ಹಿತ ಭಾವನೆಗಳೊಂದಿಗೆ ಈ ಯುವ ಪ್ರತಿಭಾನ್ವಿತೆಗೆ ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ಹೇಳುತ್ತಾ ಈ ಹುಡುಗಿಯ ಬದುಕು ಸುಖ ಸೌಖ್ಯ. ಸದ್ಭಾವಗಳಿಂದ ತುಂಬಿರಲಿ ಎಂದು ಹಾರೈಸೋಣ.
On the birth day of pleasant voice and face of Indian Cinema Shreya Ghoshal
ಕಾಮೆಂಟ್‌ಗಳು