ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾಕಿನ


 ಬಾಕಿನ ಸಂಸ್ಮರಣೆ

ಇಂದು ಬಾಕಿನ ಅವರ ಸಂಸ್ಮರಣೆ ದಿನ.  2024 ವರ್ಷ ಬಾಕಿನ ಹೋಗಿಬಿಟ್ರು ಅಂತ,  ಅವರು ಅವರು ಹೋದ ಐದಾರು ದಿನಗಳ ನಂತರ ಎಲ್ಲೆಡೆ ಸುದ್ದಿ  ಕಾಣಬಂದಿತ್ತು.  ಎಷ್ಟೊಂದು ಕೆಲಸ ಮಾಡಿದವರು ಹೇಗೆ ಸದ್ದುಗದ್ದಲವಿಲ್ಲದೆ ಇದ್ದರು! ಹೋದಾಗ ಕೂಡ ಸುದ್ದಿ ಮಾಡದೆ ಹೊರಟುಬಿಟ್ಟರು! 

ನವ್ಯ ಸಾಹಿತ್ಯದ ಪ್ರಮುಖ ಪ್ರವರ್ತಕರಲ್ಲಿ ಒಬ್ಬರಾದ ಬಾಲಕೃಷ್ಣ ಕಿಳಿಂಗಾರು ನಡುಮನೆ (ಬಾಕಿನ) ಕಾಸರಗೋಡಿನಲ್ಲಿ ಹುಟ್ಟಿ, ಮಂಗಳೂರಿನಲ್ಲಿ ಪ್ರಾಥಮಿಕ ಶಾಲೆ ಓದಿ, ಬೆಂಗಳೂರಿನಲ್ಲಿ ಮುದ್ರಣ ತಂತ್ರಜ್ಞಾನದಲ್ಲಿ ಡಿಪ್ಲೊಮೊ ಪದವಿ ಗಳಿಸಿ, ಮುದ್ರಣ ಹಾಗೂ ಪ್ರಕಾಶನವನ್ನು ಉದ್ಯೋಗವಾಗಿಸಿಕೊಂಡು, ಸಾರಸ್ವತ ಲೋಕದಲ್ಲಿ ಮಹತ್ವದ ಕೊಡುಗೆಯನ್ನು ಸಲ್ಲಿಸಿದವರು. 

ಹೆಗ್ಗೋಡಿನ ನೀಲಕಂಠೇಶ್ವರ ನಾಟಕ ಸಂಘ (ನೀನಾಸಂ)ದ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಅವರ 'ಅಕ್ಷರ ಪ್ರಕಾಶನ'ದಲ್ಲಿ ಮುದ್ರಣಾಲಯ ಸ್ಥಾಪನೆಯ ಕಾರ್ಯದಲ್ಲಿ ಮೊದಲಿಗೆ ತಮ್ಮನ್ನು ತೊಡಗಿಸಿಕೊಂಡ ಬಾಕಿನ, ನಂತರದಲ್ಲಿ ಬೆಂಗಳೂರಿನ ಗಾಂಧೀ ಬಜಾರಿನ ಬೂಗಲ್ ರಾಕ್ ಪಾರ್ಕ್ ರಸ್ತೆಯಲ್ಲಿ 'ಲಿಪಿ ಪ್ರಕಾಶನ' ಆರಂಭಿಸಿದರು. 

ಬಾಕಿನ ತಮ್ಮ ಸಣ್ಣ ಮುದ್ರಣಾಲಯದ ಮೂಲಕ ನವ್ಯದ ಬರಹಗಾರರನೇಕರನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದರು.  ಅಂದಿನ ದಿನದಲ್ಲಿ ಬೇರೆ ಬೇರೆ ಊರುಗಳಿಂದ ಬಂದಿದ್ದ ಬಾಕಿನ,  ಸುಬ್ರಾಯ ಚೊಕ್ಕಾಡಿ Subraya Chokkady, ಕಿರಣ ನಾಗಪ್ಪಗೌಡ, ಪರಂಜ್ಯೋತಿ, ಘನಶ್ಯಾಮ ಕಾವ್ಯನಾಮದ ಶಾಮ ಭಟ್ಟ Shama Bhat, ರಮಾತನಯ ಕಾವ್ಯನಾಮದ ಕೋಟ ಸೀತಾರಾಮ ಪ್ರಭು, ಎನ್. ರಾಮಾನುಜ Ramanuja Narayanaswamy ಮತ್ತು ಹಲವರು ಸೇರಿ 'ಗೆಳೆಯರ ಬಳಗ' ಆರಂಭಿಸಿದರು. ಆ ವೇದಿಕೆ ಅನೇಕ ಸಾಹಿತಿಗಳ ವೇದಿಕೆಯಾಗಿ ರೂಪುಗೊಂಡು ಬಾಕಿನ ನೇತೃತ್ವದಲ್ಲಿ ಶಾಮಭಟ್ಟರ ಸಂಪಾದಕೀಯದಲ್ಲಿ 'ಕವಿತಾ' ಸಾಹಿತ್ಯ ಪತ್ರಿಕೆ 1963-65 ಅವಧಿಯಲ್ಲಿ ಎರಡು ವರ್ಷಗಳ ಕಾಲ ನಡೆಯಿತು. ಮುಂದೆ ಖ್ಯಾತ ಪತ್ರಕರ್ತರಾದ  ವೈ.ಎನ್‌.ಕೆ ಸಂಪಾದಿಸುತ್ತಿದ್ದ "ಗಾಂಧಿ ಬಜಾರ್‌' ಪತ್ರಿಕೆಯ ಮುದ್ರಣ ಕಾರ್ಯವನ್ನು 25 ವರ್ಷಗಳ ಕಾಲ ಬಾಕಿನ ನಡೆಸಿದರು. ಅವರು ಅದರ ಪ್ರಕಾಶಕರೂ ಆಗಿದ್ದರು. ಲಿಪಿ ಮುದ್ರಣದ ಸಣ್ಣ ಆವರಣ ವೈ ಎನ್ ಕೆ, ಲಂಕೇಶ್, ನಿಸಾರ್ ಅಹಮದ್, ಕೆ ಎಸ್ ನ , ಅಡಿಗ, ಎಂ ಎನ್ ವ್ಯಾಸರಾವ್, ಸುಮತಿಂದ್ರ ನಾಡಿಗ, ದೊಡ್ಡರಂಗೇಗೌಡ, ಮುಂತಾದ ಅನೇಕ ಕವಿ, ವಿಮರ್ಶಕರ ನಿತ್ಯದ ಭೇಟಿಯ ತಾಣವಾಗಿತ್ತು. ಅಂದಿನ ದಿನಗಳಲ್ಲಿ ಈ ಎಲ್ಲ ಹಿರಿ ಕಿರಿಯ ಸಾಹಿತಿಗಳ ಹೊಸ ಕಾವ್ಯ, ವಿಮರ್ಶೆಗಳ ವಿನಿಮಯದ ನಂತರ ಎಲ್ಲರೂ ಹಿಂದಿನ ರಸ್ತೆಯಲ್ಲಿದ್ದ ಸನ್ಮಾನ್ ಹೋಟೆಲಿನತ್ತ ಬೈ ಟೂ ಕಾಫಿಗೆ ಹೊರಡುತ್ತಿದ್ದರಂತೆ.

ಮುದ್ರಣದಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದ ಬಾಕಿನ, ಮಾಹಿತಿ ತಂತ್ರಜ್ಞಾನ ಇನ್ನೂ ಕಣ್ಣು ಬಿಡುತ್ರಿದ್ದ ಕಾಲದಲ್ಲೇ, ಗುಣಮಟ್ಟದ ಕಾಗದ, ಅಚ್ಚುಕಟ್ಟಾದ ಮುದ್ರಣ, ಆಕರ್ಷಕ ಮುಖಪುಟ, ಹೊಸ ಬಗೆಯ ವಿನ್ಯಾಸ, ತಾಳಿಕೆಯ ಬೈಂಡಿಂಗ್‌ಗಳ ಮೂಲಕ ಪುಸ್ತಕ ಪ್ರಕಾಶನ ಲೋಕದಲ್ಲಿ ಕ್ರಾಂತಿ ಮಾಡಿದ್ದರು. ಪರಿಣಾಮ
ವಾಗಿ 'ಲಿಪಿ ಮುದ್ರಣ' ಓದುಗರ, ಲೇಖಕರ ಮನೆಮಾತಾಯಿತು. ಇಲ್ಲಿ ಪುಸ್ತಕ ಮುದ್ರಣಗೊಳ್ಳುವುದು ಒಂದು ಪ್ರತಿಷ್ಠೆಯಾಗಿತ್ತು. 

ನವ್ಯ ಕಾವ್ಯದತ್ತ ಒಲ ವಿದ್ದ ಬಾಕಿನ, ಖ್ಯಾತ ಕವಿ ಗೋಪಾಲ ಕೃಷ್ಣ ಅಡಿಗರ ಸಮಗ್ಯ ಕಾವ್ಯ, ಕೆ.ಎಸ್‌.ನರಸಿಂಹಸ್ವಾಮಿ ಅವರ ಸಮಗ್ರ ಕಾವ್ಯ ‘ಮಲ್ಲಿಗೆಯ ಮಾಲೆ', ಪು.ತಿ. ನರಸಿಂಹಾಚಾರ್ಯರ (ಪುತಿನ) ‘ಸಮಗ್ರ ಕಾವ್ಯ' ಪ್ರಕಟಿಸಿದ್ದರಲ್ಲದೆ ಕನ್ನಡದ ಬಹುತೇಕ ಎಲ್ಲ ಖ್ಯಾತ ಬರೆಹಗಾರರ ಕೃತಿಗಳ ಪ್ರಕಾಶಕರಾಗಿದ್ದರು. ಖ್ಯಾತ ನಾಮರದ್ದಷ್ಟೇ ಅಲ್ಲದೆ ಹೊಸ ಪ್ರತಿಭೆಗಳ ಕೃತಿಗಳನ್ನೂ ಪ್ರಕಟಿಸುವ ಮೂಲಕ ಪ್ರೋತ್ಸಾಹಿಸುತ್ತಿದ್ದರು. ಪುಸ್ತಕ ಬಿಡುಗಡೆಯಾದ ತಕ್ಷಣ ರಾಯಧನದ ಚೆಕ್ ಅನ್ನು ಮನೆಗೇ ತಂದು ನೀಡುತ್ತಿದ್ದ ಪ್ರಾಮಾಣಿಕ ವ್ಯವಹಾರಸ್ಥರಾಗಿದ್ದರು.  

ರಂಗಭೂಮಿ ಚಟುವಟಿಕೆಗಳು, ಹೊಸ ಅಲೆಯ ಸಿನಿಮಾಗಳ ನಂಟೂ ಬಾಕಿನ ಅವರಿಗೆ ಇತ್ತು.  ನಾಟಕಗಳ ಪೋಸ್ಟರ್‌ಗಳನ್ನು ಮುದ್ರಿಸಿ ಕೊಡುವಷ್ಟು ರಂಗಭೂಮಿ ಆಸಕ್ತಿ ಅಕ್ಕರೆಗಳು ಅವರಿಗಿತ್ತು.  ಬಾಕಿನ ಅವರಿಗೆ ತುಂಬಾ ಓದುವ ಹವ್ಯಾಸವಿತ್ತು. ಹೊಸ ಅಲೆಯ ಸಾಹಿತ್ಯ ಪ್ರಕಾರಗಳನ್ನು ಅವರು ಮೆಚ್ಚಿಕೊಂಡಿದ್ದರು. 

ಪ್ರಶಸ್ತಿಗಳ ವಿಚಾರ ಬಂದಾಗ ಮಂಗಳೂರಿನ ಸಂಸ್ಥೆಯೊಂದು ನೀಡುವ 'ಸಂದೇಶ ಪ್ರಶಸ್ತಿ' ಬಾಕಿನ ಅವರಿಗೆ ಸಂದಿತ್ತು ಎಂದು ಕಂಡಿತು. ಅನೇಕ ಮಹತ್ವದ ಪ್ರಶಸ್ತಿಗಳಿಗೆ ಇಂತಹ ಮಹನೀಯರನ್ನು ಕಾಣುವಲ್ಲಿ ಕುರುಡುತನ ಆವರಿಸಿರುತ್ತದೆ.  

ಬಾಕಿನ ಅವರು 2024ರ ಮಾರ್ಚ್ 12ರಂದು ತಮ್ಮ 81ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು.  ಸಾರ್ ಮನ್ನಣೆಯ ದಾಹವಿಲ್ಲದೆ ಶ್ರೇಷ್ಠವಾಗಿ ಬದುಕುವ ವಿವೇಕ ಭಾಗ್ಯವನ್ನು  ಮೇಲಿಂದಲೇ ನಮಗೂ ಆಶೀರ್ವದಿಸಿ 🌷🙏🌷

On Rememberance Day of Balakrishna Kilingaru Nadumane (Bakina) 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ