ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನುಪಮ್ ಖೇರ್


 ಅನುಪಮ್ ಖೇರ್ 


ಕೆಲವು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಹೀಗೊಂದು ವರದಿ ಬಂದಿತ್ತು.  “ಏಷ್ಯಾದ 5 ಅತ್ಯುತ್ತಮ ನಟರ ಪಟ್ಟಿಯಲ್ಲಿ ಭಾರತೀಯ ಚಿತ್ರರಂಗದ  ಖ್ಯಾತ ನಟ ಅನುಪಮ್‌ ಖೇರ್‌ ಸ್ಥಾನ ಪಡೆದುಕೊಂಡಿದ್ದಾರೆ. ಹೀಗೆ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಅವರು. 'ದ ಹಾಲಿವುಡ್‌ ರಿಪೋರ್ಟರ್‌' ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಅನುಪಮ್‌ ಖೇರ್‌, ಚೀನಾದ ಲಿ ಬಿಂಗ್‌ಬಿಂಗ್‌, ದಕ್ಷಿಣ ಕೊರಿಯಾದ ಲೀ ಬ್ಯುಂಗ್‌-ಹನ್‌, ಥಾಯ್ಲೆಂಡ್‌ನ‌ ಇಕೋ ಉವಾಯಿಸ್‌ ಮತ್ತು ಹಾಂಗ್‌ಕಾಂಗ್‌ನ ಅರೋನ್‌ ವೋಕ್‌ ಸ್ಥಾನ ಪಡೆದಿದ್ದಾರೆ" ಅಂತ.  

ಅನುಪಮ್ ಖೇರ್ 1955ರ ಮಾರ್ಚ್ 7ರಂದು ಜನಸಿದರು.  ಅನುಪಮ್ ಖೇರ್ ಅವರಲ್ಲಿ ಕಾಣುವ ಮಂದಸ್ಮಿತ ತೇಜಸ್ಸು ಅನುಪಮವಾದದ್ದು.

ಮೂಲತಃ ರಂಗಭೂಮಿ ನಟರಾದ ಅನುಪಮ್ ಖೇರ್ ಹಿಮಾಚಲ ಪ್ರದೇಶದ ರಂಗಭೂಮಿಯಲ್ಲಿ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.  ಅತ್ಯುತ್ತಮ ನಟನೆಗಾಗಿ 2 ಬಾರಿ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗಿರುವ ಖೇರ್‌ 1982ರಲ್ಲಿ 'ಸಾರಾಂಶ್‌' ಚಿತ್ರದ ಮೂಲಕ ಹಿಂದೀ ಚಿತ್ರರಂಗವನ್ನು  ಪ್ರವೇಶಿಸಿದ್ದರು.  ಭಾರತೀಯ ಚಿತ್ರಗಳೇ ಅಲ್ಲದೆ,  ಹಾಲಿವುಡ್, ಕೊರಿಯಾದಂತಹ ಹಲವಾರು ಪ್ರಸಿದ್ಧ ಸಿನಿಮಾ ಕ್ಷೇತ್ರಗಳಲ್ಲಿ ಸಹಾ ಅವರು ಪ್ರಸಿದ್ಧಿ ಪಡೆದಿದ್ದಾರೆ.  2013ರಲ್ಲಿ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿದ್ದ ‘ಸಿಲ್ವರ್ ಲೈನಿಂಗ್ಸ್ ಪ್ಲೇಬುಕ್’ವರೆಗೆ ಅವರು ಹಲವಾರು ಪ್ರತಿಷ್ಟಿತ ಅಂತರರಾಷ್ಟ್ರೀಯ ಚಿತ್ರಗಳಲ್ಲಿ ನಟಿಸಿದ್ದಾರೆ.  ಹೀಗೆ  ಕಳೆದ ಮೂವತ್ತು ವರ್ಷಗಳಲ್ಲಿ ಖೇರ್ ಸುಮಾರು 500ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಚಿತ್ರಗಳಿಗೆ ನಿರ್ದೇಶನವನ್ನೂ, ಹಿನ್ನಲೆ ಗಾಯನವನ್ನೂ ಮಾಡಿದ್ದಾರೆ.  ಎಂಟು ಬಾರಿ ಫಿಲಂಫೇರ್ ಪ್ರಶಸ್ತಿ ಗಳಿಸಿದ್ದು 5 ಬಾರಿ ಹಾಸ್ಯಾಭಿನಯಕ್ಕೇ ಆ ಪ್ರಶಸ್ತಿ ಗಳಿಸಿ ದಾಖಲೆ ಮಾಡಿದ್ದಾರೆ.

ಅನುಪಮ್ ಖೇರ್ ಚಿತ್ರರಂಗಕ್ಕೆ ಬಂದದ್ದು 1982ರ ವರ್ಷದಲ್ಲಿ.  1984ರಲ್ಲಿ ತೆರೆಕಂಡ ‘ಸಾರಾಂಶ್’ದಲ್ಲಿ ಕೇವಲ 29 ವಯಸ್ಸಿನ ಅನುಪಮ್ ಖೇರ್,   ಒಬ್ಬ 65 ವರ್ಷ ಹಿರಿಯ ವಯಸ್ಸಿನ  ನಿವೃತ್ತ ವ್ಯಕ್ತಿಯಾಗಿ ನೀಡಿದ ಅದ್ಭುತ ಅಭಿನಯ ಮರೆಯಲಾಗದಂತದ್ದು.  ಇಂದಿನ ದಿನದ  ಚಿತ್ರಗಳಲ್ಲೂ ಅದೇ ತೆರನಾದ ಶ್ರೇಷ್ಠ ಮಟ್ಟದ ಅಭಿನಯ ನೀಡಿರುವ ಅನುಪಮ್ ಖೇರ್ ಅವರನ್ನು ನೋಡಿ ಇಷ್ಟು ವರ್ಷಗಳ ನಂತರವೂ ಎಷ್ಟೊಂದು ವಿಭಿನ್ನ ಪಾತ್ರಗಳ ನಡುವೆಯೂ ಇಂತದ್ದೊಂದು ಗಾಂಭೀರ್ಯ, ಹಾಸ್ಯ ಮತ್ತು ಭಾವನಾತ್ಮಕ ಮಿಶ್ರಿತ ಭಾವಗಳನ್ನು ಹೊರಹೊಮ್ಮಿಸುವ ಅವರ ಸಾಮರ್ಥ್ಯ ಮೆಚ್ಚುಗೆ ಹುಟ್ಟಿಸುತ್ತದೆ.

ಕಿರುತೆರೆಯ  'ಸೇ ನಾ ಸಮ್ತಿಂಗ್ ಟು ಅನುಪಮ್ ಅಂಕಲ್', 'ಸವಾಲ್ ದಸ್ ಕ್ರೊರ ಕಾ', 'ಲೀಡ್ ಇಂಡಿಯಾ', 'ಕುಚ್ ಬಿ ಹೋ ಸಕ್ತಾ ಹೈ' ಮುಂತಾದ ಕಾರ್ಯಕ್ರಮಗಳ ನಿರೂಪಕರಾಗಿ ಸಹಾ ಅವರು ಕೆಲಸಮಾಡಿದ್ದಾರೆ.  ಅಮೆರಿಕದ 'ನ್ಯೂ ಆಮಸ್ಟರ್ಡೆಮ್' ಮತ್ತು ಬಿಬಿಸಿಯ 'ಮಿಸಸ್ ವಿಲ್ಸನ್' ಸರಣಿಯಲ್ಲಿ ಪಾತ್ರವಹಿಸಿದ್ದಾರೆ.

ಒಂದು ರೀತಿಯಲ್ಲಿ ಅನುಪಮ್ ಖೇರ್ ಅವರದ್ದು ಸಾಹಸಮಯ ಬದುಕೂ ಹೌದು.  ಇನ್ನೂ ಏನಾದರೂ ಸಾಧಿಸಬೇಕು ಎಂಬ ತವಕದ ಈತ, ಅಮಿತಾಬ್ ಬಚ್ಚನ್ ‘ಕೌನ್ ಬನೇಗಾ ಕ್ರೋರ್ ಪತಿ’ ಮಾಡಿ ಅಷ್ಟೊಂದು ಯಶಸ್ವೀ ಆದಾಗ ನಾನು ಅದರ ಹತ್ತು ಪಟ್ಟು ಮಾಡುತ್ತೇನೆ ಎಂಬ ದುಸ್ಸಾಹಸಕ್ಕೆ ಕೈ ಹಾಕಿ  ‘ಸವಾಲ್ ದಸ್ ಕ್ರೋರ್ ಕಾ’ ಎಂಬ ಕಾರ್ಯಕ್ರಮ ಮಾಡಿ ತಮ್ಮಲ್ಲಿರುವುದನ್ನೆಲ್ಲಾ ಕಳೆದುಕೊಂಡುಬಿಟ್ಟಿದ್ದರು.  ಮಾತ್ರವಲ್ಲ, ಅವರಿಗೆ ತೀವ್ರ ಅನಾರೋಗ್ಯವುಂಟಾಗಿ ನಟಿಸಲು ಸಹಾ ಸಾಧ್ಯವಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು.  ತಮ್ಮ ಎಲ್ಲಾ  ಸೋಲುಗಳಲ್ಲಿದ್ದ ತಪ್ಪುಗಳನ್ನು ಅರ್ಥ ಮಾಡಿಕೊಂಡು ಪುನಃ ಕ್ರಿಯಾಶೀಲನಾಗಿ ಮೇಲೇರಿ ನಿಂತ ಅನುಪಮ್ ಖೇರ್ ತಾವು ಜೀವನದಲ್ಲಿ ಕಲಿತ ಪಾಠಗಳನ್ನು ತಮ್ಮ ಉತ್ತೇಜನಕಾರಿ ಭಾಷಣ, ಬರಹಗಳ ಮೂಲಕವಲ್ಲದೆ ತಮ್ಮದೇ ಆದ ಶೈಕ್ಷಣಿಕ ಶಾಲೆಯ ಮೂಲಕ ಯುವ ಜನತೆಯಲ್ಲಿ  ಪಸರಿಸುತ್ತಿದ್ದಾರೆ.  ಖೇರ್ ಅವರು, ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ಆಂದೋಲನದಲ್ಲಿ ಕಂಡ ಪ್ರಮುಖ ಪಾತ್ರಧಾರಿ ಕೂಡಾ ಹೌದು.   ಭಾರತೀಯ ಸೆನ್ಸಾರ್ ಮಂಡಳಿಯ ಅಧ್ಯಕ್ಷತೆ, ರಾಷ್ಟ್ರೀಯ ನಾಟಕ ಶಾಲೆಯ ಪ್ರಾಚಾರ್ಯತೆ, ಭಾರತೀಯ ಚಲನಚಿತ್ರ ಮತ್ತು ಕಿರುತೆರೆಯ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಮುಂತಾದ ಅನೇಕ ಜವಾಬ್ಧಾರಿಗಳನ್ನು ಸಹಾ ಅವರು ನಿರ್ವಹಿಸಿದ್ದಾರೆ.

ಸಾರಾಂಶ್, ರಾಮ್ ಲಖನ್, ಲಮ್ಹೆ, ಖೇಲ್, ಡರ್ರ್, ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೇ, ಡ್ಯಾಡಿ, ಮೈನೇ ಗಾಂಧೀ ಕೋ ನಹೀ ಮಾರಾ, ವಿಜಯ್ ಮುಂತಾದ ಚಲನಚಿತ್ರಗಳ ಅಭಿನಯಕ್ಕೆ ಅನುಪಮ್ ಖೇರ್ ಅವರಿಗೆ ಪ್ರಶಸ್ತಿಗಳು ಸಂದಿವೆ.‍ ಪದ್ಮಶ್ರೀ ಪ್ರಶಸ್ತಿಯೂ ಸಂದಿದೆ. ಎ ವೆಡ್ನೆಸ್ ಡೇ ಚಿತ್ರದಲ್ಲಿ ಪೋಲೀಸ್ ಕಮಿಷನರ್ ಆಗಿ ಪಾತ್ರ ನಿರ್ವಹಿಸಿದ್ದ ಅವರು ಮಲಯಾಳದ 'ಪ್ರಣಯಂ' ಚಿತ್ರ ತಮ್ಮ ಚಿತ್ರಜೀವನದ ಅತ್ಯುತ್ತಮ ಚಿತ್ರಗಳಲ್ಲೊಂದು ಎನ್ನುತ್ತಾರೆ. ಡರ್ಟಿ ಪಾಲಿಟಿಕ್ಸ್, ದ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಮುಂತಾದ ಚಿತ್ರಗಳು, ಕೆಲವು ಮರಾಠಿ, ಪಂಜಾಬಿ ಚಿತ್ರಗಳಲ್ಲೂ ನಟಿಸಿದ್ದಾರೆ. 

ಅನುಪಮ್ ಖೇರ್ ಅವರು ನಟಿಸಿರುವ ವಿದೇಶಿ ಚಿತ್ರಗಳಲ್ಲಿ ಬೆಂಡ್ ಇಟ್ ಲೈಕ್ ಬೆಕ್ಹಾಮ್; ಲಸ್ಟ್, ಕಾಷನ್; ಸಿಲ್ವರ್ ಲೈನಿಂಗ್ಸ್ ಪ್ಲೇ ಬುಕ್, ದ ಬಾಯ್ ವಿಥ್ ದ ಟಾಪ್ ನಾಟ್ ಮುಂತಾದ ಪ್ರತಿಷ್ಠಿತ ಚಿತ್ರಗಳೂ ಇವೆ. ಸ್ವತಃ ಚಿತ್ರ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ.

ಅನಪಮ್ ಖೇರ್ ಅವರ ಪತ್ನಿ ಕಿರಣ್ ಖೇರ್ ಅವರು ಸಹಾ ಉತ್ತಮ ಕಲಾವಿದರಾಗಿ ಹೆಸರು ಮಾಡಿದ್ದಾರೆ.

ಈ ಪ್ರತಿಭಾವಂತರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

On the birthday of excellent actor Anupam Kher

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ