ಶಿವಕುಮಾರ ಸ್ವಾಮೀಜಿ
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ
ಶ್ರೀಗಳ ಜನ್ಮದಿನವಿದು. ಬೆಂಗಳೂರಿನಿಂದ ಮುಂಬೈವರೆಗೆ ಸಂಪರ್ಕ ಕಲ್ಪಿಸುವ ತುಮಕೂರಿನ ಕ್ಯಾತಸಂದ್ರದ ಸಮೀಪವಿರುವ ಈ ಸಿದ್ಧಗಂಗೆಯ ಮುಂದೆ ನಾವು ಅದೆಷ್ಟು ಬಾರಿ ಹಾದುಹೋಗಿದ್ದೇವೋ ಲೆಕ್ಕವಿಲ್ಲ. ಅದೇನೋ ಅದೆಂತದ್ದೇ ರಾತ್ರಿಯ ಪಯಣವಿರಲಿ 'ಸಿದ್ಧಗಂಗೆ' ಬಂತೆಂದರೆ ಓ ಇನ್ನೇನು ನಮ್ಮ ನೆಲೆ ಬಂತು ಎಂಬ ಸಮಾಧಾನ ಮೂಡುತ್ತಿತ್ತು.
ನಾವು ತುಮಕೂರಿಗೆ ಹೋಗಿ ಆ ರಸ್ತೆಗಳ ಆ ಹೈವೇಗಳ ಧೂಳಿನಲ್ಲಿ ಕಳೆದು ಹೋಗಿದ್ದೇವೆ ಎಂದು ಬೇಸರಿಸುವಾಗ ಸಿದ್ಧಗಂಗೆಯ ಸ್ಮರಣೆ ತಟ್ಟನೆ ಸಾಂತ್ವನದ ಫುಳಕ ಹುಟ್ಟಿಸುತ್ತಿತ್ತು. ಅಲ್ಲಿ ನಗರಗಳಲ್ಲಿನ ಹೋಟೆಲ್ಲು, ಸೌಧ ಇವೆಲ್ಲಾ ಯಾವುದೂ ಇಲ್ಲ. ಅಲ್ಲಿ ಅತ್ಯಂತ ಸಾಧಾರಣ ಸಹಜತೆಯ ಸೌಂದರ್ಯವಿದೆ. ಒಬ್ಬ ಆಧ್ಯಾತ್ಮ ಪುರುಷ ತನ್ನ ಪರಿಸರದಲ್ಲಿ ಹಬ್ಬಿಸುವ ತನ್ನಾತ್ಮ ಸೌಂದರ್ಯ ಎಲ್ಲ ಸೌಂದರ್ಯಗಳನ್ನೂ ಮೀರಿಸುವಂತದ್ದು.
ಸಿದ್ಧಗಂಗೆಯ ಆವರಣದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಟ್ಟ ಗೂಡಿನ ಮುಂದೆ ಒಂದು ಫಲಕ ಇತ್ತು. ಸ್ವಾಮೀಜಿಯವರು ಎಷ್ಟು ಘಂಟೆಗೆ ಏಳುತ್ತಾರೆ, ಅವರ ಸಣ್ಣ ಸಣ್ಣ ಪ್ರಾತಃವಿಧಿಗಳು ನಡೆಯುವ ಸಮಯವೆಷ್ಟು, ಆಹಾರ ಸೇವನೆ, ಧ್ಯಾನ, ಭೋಧನೆ, ದಿನ ನಿತ್ಯದ ವಿಧಿಗಳು, ಮಲಗುವ ಸಮಯ ಹೀಗೆ ಎಲ್ಲವನ್ನೂ ಆ ಫಲಕ ತೆರೆದಿಟ್ಟುಕೊಂಡಿತ್ತು. ಹೀಗೆ ತಮ್ಮನ್ನು ತೆರೆದುಕೊಟ್ಟುಕೊಳ್ಳುವುದು ಲೋಕದ ಜಂಜಡಗಳಿಂದ ತಮ್ಮನ್ನು ಮುಕ್ತಿಗೊಳಿಸಿಕೊಂಡಿರುವವರಿಗೆ ಮಾತ್ರ ಸಾಧ್ಯ.
ಸ್ವಾಮೀಜಿಯವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಪಾರಂಗತರಾಗಿದ್ದರು. ಸ್ವಾಮೀಜಿಯವರು ವಿರಕ್ತಾಶ್ರಮಕ್ಕೆ ಬಂದದ್ದು 1930ರಲ್ಲಿ. ಇಂದು ಬೆಳೆದು ನಿಂತಿರುವ ಸಿದ್ಧಗಂಗಾ ವಿದ್ಯಾಸಂಸ್ಥೆ ಸ್ವಾಮೀಜಿಯವರ ಶ್ರಮದ ಪ್ರತಿಫಲ. ಇದಲ್ಲದೆ ಸ್ವಾಮೀಜಿಯವರ ನಿವಾಸವಾದ ಸಿದ್ಧಗಂಗಾಮಠದ ಗುರುಕುಲದಲ್ಲಿ 5ವರ್ಷದಿಂದ 16ರ ವರ್ಷದ ವರೆಗಿನ ಸುಮಾರು 10,000 ಮಕ್ಕಳು ನಿರಂತರವಾಗಿ ಆಶ್ರಯಪಡೆದಿದ್ದಾರೆ. ಇಲ್ಲಿ ಯಾವದೇ ಮತಧರ್ಮಗಳ ಭೇಧಭಾವಗಳ ಸೋಂಕಿಲ್ಲ. ಈ ಎಲ್ಲ ಮಕ್ಕಳೂ ಯಾವುದೇ ಹಣ ಕೊಟ್ಟು ಇಲ್ಲಿ ಉಳಿದಿಲ್ಲ. ಇಲ್ಲಿ ಎಲ್ಲವೂ ಆಶ್ರಮದ ಕೃಪಾಶ್ರಯವೇ. ವಿದ್ಯಾಭ್ಯಾಸ ಎಂಬುದು ಬರೀ ಹಣದ ಕಾರ್ಖಾನೆಗಳಾಗಿ ಪರಿವರ್ತಿತವಾಗುತ್ತಿರುವಾಗ ಇಂತದ್ದೊಂದು ಸತ್ಕಾರ್ಯ ಅಲ್ಲಿ ನಡೆದಿತ್ತು ಎನ್ನುವುದೇ ಮನಸ್ಸು ತುಂಬುವಂತೆ ಮಾಡುತ್ತದೆ. ಇಲ್ಲಿಂದ ಆರೈಕೆ ಪಡೆದ ಅನೇಕ ಮಕ್ಕಳು ಇಂದು ನಾಡಿನ ಮಹತ್ವದ ಕೊಡುಗೆಗಳಾಗಿ ಪರಿವರ್ತಿತರಾಗಿದ್ದಾರೆ.
ಲೋಕದ ಜಂಜಡಗಳಿಂದ ಮುಕ್ತಿ ಅಂದರೇನು. ಬದುಕಿನಿಂದ ದೂರವಿರುವುದೆ? ಹಾಗೆ ನೋಡಿದರೆ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರಷ್ಟು ಬದುಕಿಗೆ ಹತ್ತಿರವಾಗಿದ್ದವರು ಅತಿ ವಿರಳ. ತುಮಕೂರಿನಲ್ಲಿ ನಡೆಯುತ್ತಿದ್ದ ಒಂದು ಅಂಗಡಿ ಉದ್ಘಾಟನೆ ಇರಲಿ, ಒಂದು ಸಾಹಿತ್ಯ ಸಮಾರಂಭ ಇರಲಿ, ಯಾರಿಗೋ ಒಂದು ಸನ್ಮಾನವಿರಲಿ ಅಲ್ಲೆಲ್ಲಾ ಈ ಆಚಾರ್ಯರನ್ನು ನಾವು ಕಂಡಿರುವುದು ಅನೇಕ ಬಾರಿ. ಹಲವಾರು ಬಾರಿ ಅನ್ನಿಸಿದೆ, ನಮ್ಮ ಮನೆಯಲ್ಲಿ ಮಗುವಿನ ಹುಟ್ಟಿದ ಹಬ್ಬ ಇದೆ ಬನ್ನಿ ಅಂದರೆ ಯಾವುದೇ ಬೇಸರಿಕೆಯಿಲ್ಲದೆ ಕುಣಿ ಕುಣಿದು ಬರುವ ಮಗುವಿನಂತೆ ಈ ಹಿರಿಯ ಆಚಾರ್ಯರ ಒಳಗಿರುವ ಮಗು ಪುಟಿದು ಬರುತ್ತಿತ್ತು ಎಂದು. ಅಷ್ಟು ವಿರಳ ಸಾಧು ಸಹಜ ಶಿಶು ಸ್ವಭಾವದವರಾಗಿದ್ದರು ಈ ನಮ್ಮ ಆಚಾರ್ಯರು. ಇಲ್ಲಿ ತತ್ವಜ್ಞಾನಿ ಮೆನ್ಸಿಯಸ್ ಹೇಳುವ ಮಾತು ನೆನೆಪಾಗುತ್ತದೆ. "ಯಾರು ತನ್ನ ಹಿರಿಯವಯಸ್ಸಿನಲ್ಲಿ ಕೂಡ ತನ್ನ ಶಿಶು ಸಹಜ ಸ್ವಭಾವವನ್ನು ಉಳಿಸಿಕೊಂಡಿರುತ್ತಾರೆಯೋ ಅವರೇ ನೈತಿಕವಾಗಿ ಹಿರಿಯರೆನಿಸಿಕೊಳ್ಳುತ್ತಾರೆ.". ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳಿಗಿಂತ ಈ ನಿಟ್ಟಿನಲ್ಲಿ ಹಿರಿಯರು ಉಂಟೆ? ಇದು ಇನ್ನೆಲ್ಲಿ
ಈ ಪರಮಪೂಜ್ಯರು ಜನಿಸಿದ್ದು 1907ರ ಏಪ್ರಿಲ್ 1ರಂದು ಮಾಗಡಿ ತಾಲ್ಲೂಕಿನ ವೀರಪುರದಲ್ಲಿ. ನಮ್ಮ ನಡುವೆ ಇಂತಹ ಸಂತರು ಬದುಕಿದ್ದರು ಎಂದು ಕಂಡುಕೊಂಡದ್ದಕ್ಕಿಂತ ಈ ಬದುಕಿನಲ್ಲಿ ನಮಗೆ ಇನ್ನೇನಾದರೂ ದೊಡ್ಡ ಭಾಗ್ಯ ಉಳಿದಿದೆಯೇ ಎನಿಸುತ್ತದೆ. ಅನ್ನ, ಅಕ್ಷರ, ಜ್ಞಾನ ದಾಸೋಹಿಗಳಾದ ಶ್ರೀಗಳ ಬೆನ್ನು ಇಳಿವಯಸ್ಸಿನಲ್ಲಿ ಸಾಕಷ್ಟು ಬಾಗಿತ್ತು. ಅವರ ವಿನಯ, ಸಜ್ಜನಿಕೆಗಳಾದರೂ ಅದಕ್ಕೂ ಮಿಗಿಲಾಗಿ ತಗ್ಗಿ ನಡೆಯುತ್ತಿತ್ತು. 'ಕಾಯಕವೇ ಕೈಲಾಸ' ಎಂಬ ಅವರ ಸಕ್ರಿಯತೆ ಎಂದೂ ಕುಗ್ಗಿರಲಿಲ್ಲ. ಇಂತಹವರೇ ಪರಮಾತ್ಮನಿಗೆ ಸನಿಹರು. ಅವರ ಸಿದ್ಧಗಂಗಾ ಮಠದ ಕೊಡುಗೆಗಳು ಅನೇಕ ಎಂಬುದು ತಿಳಿದಿರುವ ವಿಚಾರ. ಇವೆಲ್ಲವನ್ನೂ ಮೀರಿಸುವಂತದ್ದಾಗಿತ್ತು ಈ ಆಧ್ಯಾತ್ಮ ಸಂತರ ಅಂತರಂಗದ ಚೇತನ.
ರಾಷ್ಟ್ರಕವಿ ಡಾ. ಶಿವರುದ್ರಪ್ಪನವರು ಸಿದ್ಧಗಂಗೆಯ ಶ್ರೀಚರಣಕ್ಕೆ ಎಂದು ಬರೆದಿದ್ದ ಕವನ ನಮ್ಮ ಮಾತುಗಳನ್ನೆಲ್ಲಾ ಮೂಕವಾಗಿಸಿ ಶ್ರೀಗಳ ಚರಣಕ್ಕೆ ಅಭಿವಂದಿಸುವ ಭಾವ ಹೊಮ್ಮಿಸುವಂತದ್ದು.
ಹರನ ಕರುಣೋದಯದ ತೆರದಲಿ
ಬೆಳಗು ತೆರೆಯುವ ಹೊತ್ತಿಗೆ
ವೇದಘೋಷದ ದಿವ್ಯಲಹರಿಯು ಮನವ ತೊಳೆಯಲು ಮೆಲ್ಲಗೆ
ಬರುವ ಶ್ರೀಗುರುಪಾದುಕೆಯ ದನಿ
ಅನುರಣಿತವಾಗಲು ಮೌನಕೆ
ಸಿದ್ಧಗಂಗೆಯ ನೆಲವು ಜಲವು
ನಮಿಸಿ ನಿಲುವುದು ಸುಮ್ಮಗೆ
ಬೆಟ್ಟ-ಬಂಡೆಯ ನಡುವೆ ಗಿಡಮರ
ಹೂವನೆತ್ತಿರೆ ಪೂಜೆಗೆ
ದೇಗುಲದ ಪೂಜಾರತಿಯ ಗಂಟೆಯ
ಮೊಳಗು ಮುಟ್ಟಲು ಬಾನಿಗೆ
ಧೂಪಗಂಧವು ಮಂದ ಮಂದಾನಿಲದ ಮನಸಿಗೆ
ಸಂಭ್ರಮವನುಕ್ಕಿಸೆ
ಬೆಳಗು ಇಳಿವುದು ಸಿದ್ಧಗಂಗೆಯ ಕ್ಷೇತ್ರಕೆ
ಇಲ್ಲಿ ಇಲ್ಲ ಪವಾಡದದ್ಭುತ
ಅಥವಾ ಉತ್ಸವದಬ್ಬರ
ಮುಡಿಯನೆತ್ತಿದ ಸರಳ ಸಾಧಾರಣದ ಬದುಕಿನ ಗೋಪು
ಅದರ ಮೇಲಿದೆ ತ್ಯಾಗಧ್ವಜ ಕೈಬೀಸಿ ಕರೆವುದು ಪಥಿಕರ
ಪರಮ ನಿರಪೇಕ್ಷೆಯಲಿ ದಿನವು ಸೇವೆಗಾಗಿದೆ ಸರ್ವರ
ಭಿಕ್ಷೆ ಹೊರಟಿದೆ ಜಂಗಮದ ಜೋಳಿಗೆ
ಲಕ್ಷ ಜನಗಳ ಪೊರೆದಿದೆ
ತೀರ್ಥವಾಗಿದೆ ಭಕ್ತರಿಗೆ, ಚಿರಸ್ಫೂರ್ತಿಯಾಗಿದೆ ಬುದ್ಧಿಗೆ
ಬಂದ ಹಣತೆಗೆ
ಎಣ್ಣೆ ಬತ್ತಿಯ ದೀಪ್ತಿದಾನವ ಮಾಡಿದೆ
ರಕ್ಷೆಯಾಗಿದೆ ಮುಗಿಲನೇರಿದ ಎಷ್ಟೊ ರೆಕ್ಕೆಯ ಹಾದಿಗೆ
ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆ ಏರಿದೆ
ಕಾಯಕವೆ ಕೈಲಾಸ ಎನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿ ಉಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ
ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ.
(ಸಿದ್ಧಗಂಗೆಯ ಶ್ರೀಚರಣಕ್ಕೆ)
ಪೂಜ್ಯ ಸ್ವಾಮೀಜಿ ಅವರು 2019ರ ಜನವರಿ 21 ರಂದು ಈ ಲೋಕವನ್ನಗಲಿದರು. 111 ವರ್ಷ ಇಂದಿನ ಲೋಕದಲ್ಲಿದ್ದು, ಇಂದಿನ ಯುಗದಲ್ಲೂ, ಇನ್ನೂ, ಶ್ರೇಷ್ಠ ಬಾಳು ಬಾಳಲಿಕ್ಕೆ ಸಾಧ್ಯ ಎಂದು ಸಿದ್ಧಿಸಿ ನಿರೂಪಿಸಿದ ಪೂಜ್ಯ ಸ್ವಾಮೀಜಿಗಳ ಚೇತನದ ಅಡಿದಾವರೆಗಳಲ್ಲಿ ಶಿರವಿಟ್ಟು ನಮಿಸಿ, ನಮ್ಮ ಬದುಕಿಗೆ ಬೇಕಿರುವ ಅನ್ನ, ಅಕ್ಷರ, ಜ್ಞಾನದ ದಾಸೋಹಕ್ಕೆ ಮತ್ತು ಲೋಕದ ಒಳಿತಿಗಾಗಿ, ತಮ್ಮ ಕೃಪೆಯ ಆಶೀರ್ವಾದ ಕರುಣಿಸೋಣವಾಗಲಿ ಎಂದು ಹೃದಯ ತೆರೆದು ನಮಿಸೋಣ.
On the birth anniversary of Sri Shivakimara Swamiji
ಕಾಮೆಂಟ್‌ಗಳು