ಮಮತಾ ಶಂಕರ
ಮಮತಾ ಶಂಕರ
ಮಮತಾ ಶಂಕರ ಸಮಾಜ ಮುಖಿಯಾದ ಸಂವೇದನಾಶೀಲ ಬರಹಗಳಿಂದ ಗಮನ ಸೆಳೆದಿರುವ ಪ್ರತಿಭಾನ್ವಿತರು.
ಏಪ್ತಿಲ್ 1, ಮಮತಾ ಅವರ ಜನ್ಮದಿನ. ತಂದೆ ವೈದ್ಯರೂ, ಪ್ರಸಿದ್ಧ ಕಥೆಗಾರರೂ ಆದ ಡಾ. ಸಿ. ಆರ್. ಪಾರ್ಥಸಾರಥಿ ಚಿತ್ರದುರ್ಗದವರು. ತಾಯಿ ಪದ್ಮಜಾ ಮಂಡ್ಯದ ಮದ್ದೂರಿನವರು. ಮಮತಾ ಅವರೇ ಮನೆಯ ಹಿರಿಯ ಮಗಳು. ಇವರಿಗೆ ಇಬ್ಬರು ಕಿರಿಯ ಸಹೋದರಿಯರು, ಮತ್ತು ಒಬ್ಬ ಕಿರಿಯ ಸಹೋದರ. ಇವರ ತಂದೆಯವರಿಗೆ ತಮ್ಮಂತೆಯೇ ಮಕ್ಕಳೂ ವೈದ್ಯರಾಗಲಿ ಎಂಬ ಆಸೆಯಿತ್ತು. ಯಾರೂ ವೈದ್ಯರಾಗದಿದ್ದರೂ ಎಲ್ಲ ನಾಲ್ಕು ಮಕ್ಕಳೂ ಸ್ನಾತಕೋತ್ತರ ಪದವಿ ಸಾಧನೆ ಮಾಡಿದರು. ಜೊತೆಗೆ ತಂದೆ ತಾಯಿಯವರ ಸಂಸ್ಕಾರ, ಸಹೃದಯತೆ, ಪ್ರಾಮಾಣಿಕತೆ ಮತ್ತು ಮತ್ತೊಬ್ಬರ ಕಷ್ಟಕ್ಕೆ ಆಗುವುದೇ ಮನುಷ್ಯ ಜನ್ಮದ ಸಾರ್ಥಕತೆ ಎಂಬ ಭಾವ ಮಾನವೀಯ ಅಂತಃಕರಣಗಳು, ಈ ಮಕ್ಕಳ ಬಾಳನ್ನೂ ನಿರ್ದೇಶಿಸಿತು. ತಂದೆಯವರು ಯಾವುದೇ ಪ್ರಾಕೃತಿಕ ವಿಕೋಪದಿಂದ ನೊಂದವರಿಗೆ ಸಹಾಯ ಮಾಡಲು ತಮ್ಮ ಕೈಲಾದ ಹಣ ಕಳಿಸುವುದು ತಪ್ಪಿಸುತ್ತಿರಲಿಲ್ಲ. ಇದನ್ನೇ ಮಂಗಳಾ ಅವರೂ ಪಾಲಿಸುತ್ತ ಬಂದಿದ್ದಾರೆ.
ಮಮತಾ ಅವರ ತಂದೆ ಸರಕಾರೀ ವೈದ್ಯರಾಗಿದ್ದು, ಅವರಿಗೆ ವರ್ಗ ಆದ ಕಡೆಗಳಲ್ಲಿ ಇವರ ವಿದ್ಯಾಭ್ಯಾಸವು ನಡೆಯಿತು. ಹತ್ತನೇ ತರಗತಿಯ ವರೆಗೂ ಮಮತಾ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದರು. ಮುಂದೆ ಮಮತಾ ಅವರು ಸಮಾಜ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂ ಎಸ್ ಡಬ್ಲ್ಯೂ ) ಗಳಿಸಿದರು.
ಮಮತಾ ಅವರು ಬೆಳಗಾವಿಯ ಕಾರ್ಮಿಕ ವಿಮಾ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚಕಿಯಾಗಿ ವೃತ್ತಿ ನಿರ್ವಹಿಸುತ್ತಿದ್ದು, ಪತಿ ಮತ್ತು ಮಗಳೊಂದಿಗೆ ಬೆಳಗಾವಿಯಲ್ಲಿ ನೆಲೆಸಿದ್ದಾರೆ.
ಮಮತಾ ಅವರಿಗೆ ಸಾಹಿತ್ಯ, ಚಿತ್ರಕಲೆ, ಸಂಗೀತ, ಪ್ರವಾಸ, ತೋಟಗಾರಿಕೆ ಮುಂತಾದ ಬಹುಮುಖಿ ಆಸಕ್ತಿಗಳು ಇದ್ದರೂ, ಮನಸು ನೆಲೆ ನಿಂತದ್ದು ಸಾಹಿತ್ಯದಲ್ಲಿ. ತಂದೆಯವರ ಬರವಣಿಗೆ, ಮತ್ತು ಬಾಲ್ಯದಲ್ಲಿ ದಕ್ಕಿದ ಓದು ಇವರಿಗೆ ಪ್ರೇರಣೆಯಾಯಿತು. ಇವರು ಚಿಕ್ಕವರಿದ್ದಾಗ ಸುಧಾ, ಕಸ್ತೂರಿ, ವನಿತಾ, ಮಯೂರ, ರಾಗಸಂಗಮ ಮುಂತಾದ ಪತ್ರಿಕೆಗಳ ಜೊತೆಗೆ ಚಂದಮಾಮ, ಪುಟಾಣಿ, ಬಾಲಮಿತ್ರ ಮುಂತಾದ ಮಕ್ಕಳ ಪತ್ರಿಕೆಗಳು ಮನೆಗೆ ಬರುತ್ತಿದ್ದವು. ಜೊತೆಗೆ ಯಾವುದೇ ಪುಸ್ತಕ ಪ್ರದರ್ಶನ ಇದ್ದರೂ ಮಕ್ಕಳ ಚಿತ್ರದ ಮೂಲಕ ತಿಳಿಯಬಹುದಾದ ರಷ್ಯನ್ ಪುಸ್ತಕಗಳು ಮುಂತಾದವು ಇವರಿಗೆ ತಪ್ಪದೇ ಸಿಗುತ್ತಿದ್ದವು. ಮತ್ತೊಂದು ಮುಖ್ಯ ವಿಷಯವೆಂದರೆ ತಾಯಿಯವರು ವಿಪರೀತ ಓದಿನ ಆಸ್ಥೆ ಉಳ್ಳವರಾಗಿದ್ದರು. ಅವರು ಗ್ರಂಥಾಲಯದಿಂದ ತಂದು ಓದಿದ ಎಲ್ಲಾ ಕಾದಂಬರಿಗಳನ್ನೂ ಇವರೂ ಓದಿ ಮುಗಿಸಿಬಿಡುತ್ತಿದ್ದರು. ಹೀಗೆ ಭೈರಪ್ಪ, ಕಾರಂತರು, ಅನುಪಮ ನಿರಂಜನ, ಟಿ ಕೆ ರಾಮರಾವ್, ಅನಕೃ, ವಾಣಿ, ಎಂ. ಕೆ. ಇಂದಿರಾ, ಉಷಾ ನವರತ್ನಾ ರಾಮ್, ತರಾಸು, ಕೃಷ್ಣಮೂರ್ತಿ ಪುರಾಣಿಕ ಹೀಗೆ ಬಹುತೇಕ ಪ್ರಸಿದ್ಧ ಸಾಹಿತಿಗಳ ಅನೇಕ ಕಾದಂಬರಿಗಳನ್ನು ಓದಿದ್ದರು. ಅಮ್ಮನ ಓದು ಮತ್ತು ಅಪ್ಪನ ಬರವಣಿಗೆಗಳು, ಮಮತಾ ಅವರಲ್ಲಿ, ಅವರಿಗರಿವಿಲ್ಲದಂತೆಯೇ ಅಭಿರುಚಿಯಾಗಿ ಹರಿದಿತ್ತು. ಮುಂದೆ ಪತಿ ಶಂಕರ್ ಅವರ ಪ್ರೋತ್ಸಾಹವೂ ದೊರಕಿ ಮಮತಾ ಅವರು ಬರವಣಿಗೆಯ ಹಾದಿಯಲ್ಲಿ ಸಾಗಿದರು.
ಮಮತಾ ಅವರು ಬರೆದ ಕವಿತೆ , ಲೇಖನ, ಪ್ರಬಂಧ, ವಿಮರ್ಶೆಗಳು ಮಯೂರ, ತುಷಾರ, ವಿಜಯ ಕರ್ನಾಟಕ, ಪ್ರಿಯಾಂಕ, ಹೊಸತು ಮುಂತಾದ ಪತ್ರಿಕೆಗಳು ಹಾಗೂ ಸಂಗಾತಿ ಇ ಮ್ಯಾಗಜೀನ್ಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಮೂಡಿಬರುತ್ತಿವೆ. ಸಮಾಜಮುಖಿಯಾದ ಸಂವೇದನಶೀಲತೆಗಳು ಮಮತಾ ಅವರ ಬರೆಹಗಳ ವೈಶಿಷ್ಟ್ಯ.
ಮಮತಾ ಅವರ 'ನದಿಯ ವೃತ್ತಾಂತ' ಎಂಬ ಮೊದಲ ಕವನ ಸಂಕಲನ ಪ್ರಕಟಗೊಂಡಿದೆ. ಈ ಸಂಕಲನಕ್ಕೆ ಹೊಂಬೆಳಕು ಸಾಂಸ್ಕೃತಿಕ ಸಂಘದ ಪ್ರಶಸ್ತಿ, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ, ಹಾಗೂ ಹಾಸನದ ಮಾಣಿಕ್ಯ ಪ್ರಕಾಶನದ ಕಾವ್ಯ ಮಾಣಿಕ್ಯ ಪ್ರಶಸ್ತಿಗಳು ಸಂದಿವೆ.
ಮಂದಹಾಸಯುಕ್ತ, ಸರಳ, ಸಹೃದಯತೆಯಳ್ಳ ಆತ್ಮೀಯರಾದ ಮಮತಾ ಶಂಕರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Mamatha Shankar 🌷🌷🌷
ಕಾಮೆಂಟ್‌ಗಳು