ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇರ್ಫಾನ್ ಖಾನ್


 ಇರ್ಫಾನ್ ಖಾನ್


ಈ ಯುಗದ ನಟರಲ್ಲಿ ಪ್ರತಿಭೆ ಮತ್ತು ಜನಪ್ರಿಯತೆಗಳಲ್ಲಿ ಪ್ರಮುಖರಾಗಿದ್ದ ಇರ್ಫಾನ್ ಖಾನ್ ಸಂಸ್ಮರಣಾ ದಿನವಿದು. ಅವರು 2020ರ ಏಪ್ರಿಲ್ 29ರಂದು ನಿಧನರಾದರು.  ಅವರು ಕ್ಯಾನ್ಸರ್ ಇಂದ ಬಳಲುತ್ತಿದ್ದರು ಎಂಬ ಸುದ್ಧಿ ಅದಕ್ಕೆ ಎರಡು ವರ್ಷಗಳ ಹಿಂದಿನಿಂದ ಅವರ ಅಭಿಮಾನಿಗಳಾದ ನಮ್ಮಲ್ಲಿ ಕಾಡುತ್ತಿದ್ದ ನೋವಾಗಿತ್ತು. 

ಇರ್ಫಾನ್ ಖಾನ್ ರಾಜಾಸ್ಥಾನದ ಕುಟುಂಬವೊಂದರಲ್ಲಿ 1967ರ ಜನವರಿ 7 ರಂದು ಜನಿಸಿದರು. ಅವರ ಕುಟುಂಬ ಟೋಂಕ್ ಜಿಲ್ಲೆಯ ಖಜುರಿಯಾ ಎಂಬಲ್ಲಿ ಟೈರ್ ವ್ಯಾಪಾರದಲ್ಲಿತ್ತು.  ಓದುವ ದಿನಗಳಲ್ಲಿ ಒಳ್ಳೆಯ ಕ್ರಿಕೆಟ್ ಪಟುವಾಗಿದ್ದ ಅವರಿಗೆ ಸಿ.ಕೆ. ನಾಯ್ಡು ಟ್ರೋಫಿಯಲ್ಲಿ ಆಯ್ಕೆಗೆ ಕರೆ ಬಂದರೂ ಹಣಕಾಸಿನ ಪರಿಸ್ಥಿತಿಯಿಂದ ಪಾಲ್ಗೊಳ್ಳಲಾಗಲಿಲ್ಲ.  ಕಲಾಲೋಕಕ್ಕೆ ಅದರ ಲಾಭ ಕಾದಿತ್ತು!

ಎಂ.ಎ ಓದುವ ದಿನಗಳಲ್ಲಿ ದೊರೆತ ವಿದ್ಯಾರ್ಥಿ ವೇತನದ ದೆಸೆಯಿಂದ ಇರ್ಫಾನ್ ಖಾನ್ 1984ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿದರು.  ಮುಂದೆ ಮುಂಬೈಗೆ ಬಂದ ಅವರಿಗೆ ಕಿರುತೆರೆಯ ಲೋಕ ಅನೇಕ ಅವಕಾಶಗಳನ್ನು ತೆರೆಯಿತು.  ಚಾಣಕ್ಯ, ಭಾರತ್ ಏಕ್ ಖೋಜ್, ಚಂದ್ರಕಾಂತ್ ಧಾರಾವಾಹಿಗಳಲ್ಲದೆ ವಿವಿಧ ವಾಣಿಜ್ಯ ವಾಹಿನಿಗಳ ಅನೇಕ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು.

1988ರಲ್ಲಿ ಇರ್ಫಾನ್ ಖಾನ್ ಸಲಾಂ ಬಾಂಬೆ ಚಿತ್ರದ ಪುಟ್ಟ ಪಾತ್ರದಲ್ಲಿ ನಟಿಸಿದರು. 2001 ವರ್ಷದಲ್ಲಿ ಬ್ರಿಟಿಷ್ ಚಿತ್ರ ವಾರಿಯರ್ ನಟಿಸಿ ಬಂದ ಮೇಲೆ ಹಾಸಿಲ್, ಮಕ್ಬೂಲ್ ಹಾಗೂ ಅವರಿಗೆ ಹೆಸರು ಮತ್ತು ಪ್ರಶಸ್ತಿ ತಂದು ಕೊಟ್ಟ  ನೇಮ್ಸೇಕ್, ಲೈಫ್ ಇನ್ ಎ ಮೆಟ್ರೋ, ಪಾನ್ ಸಿಂಗ್ ತೋಮರ್ ಚಿತ್ರಗಳಲ್ಲಿ ನಟಿಸಿದರು. ಹೀಗೆ ಅಭಿಮಾನಿಗಳು ಮತ್ತು ವಿಮರ್ಶಕರನ್ನು ಸೆಳೆದ ಇರ್ಫಾನ್ ಖಾನ್ ಸಾಮರ್ಥ್ಯ ದಿ ಲಂಚ್ ಬಾಕ್ಸ್, ಪೀಕು, ತಲ್ವರ್ ಮತ್ತು ನೋ ಬೆಡ್ ಆಫ್ ರೋಸಸ್ ಚಿತ್ರಗಳಿಂದ ವ್ಯಾಪಿಸಿತು.  ಹಿಂದೀ ಮೀಡಿಯಂ ಚಿತ್ರ ಯಶಸ್ಸು ಮತ್ತು ಫಿಲಂಫೇರ್ ಪ್ರಶಸ್ತಿಗಳನ್ನು ಅವರಿಗೆ ತಂದಿತು. ಕಾಹಿಲೆಯಿಂದ ಸ್ವಲ್ಪ ಚೇತರಿಸಿಕೊಂಡಂತಿದ್ದ ಅವರ 'ಅಂಗ್ರೇಸಿ ಮೀಡಿಯಮ್'  ಅವರು ನಿಧನಕ್ಕೆ ಸ್ವಲ್ಪ ದಿನದ ಹಿಂದೆ ಬಿಡುಗಡೆಯಾದ ಚಿತ್ರವಾಗಿತ್ತು.

ಇರ್ಫಾನ್ ಖಾನ್ ಅವರನ್ನ ಹಾಲಿವುಡ್ ಚಿತ್ರರಂಗದ ಅನೇಕ ಚಿತ್ರಗಳಲ್ಲಿ ಬಳಸಿಕೊಂಡಿತ್ತು. ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್, ಲೈಫ್ ಆಫ್ ಪೈ, ಜುರಾಸ್ಸಿಕ್ ವರ್ಲ್ಡ್  ಮತ್ತು ಇನ್ಪೆರ್ನೋ ಚಿತ್ರಗಳಲ್ಲಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಇರ್ಫಾನ್ ಖಾನ್ ನಟಿಸಿದ್ದರು

ಎಲ್ಲರಿಗೂ ಪ್ರಿಯ ವ್ಯಕ್ತಿತ್ವ ಮತ್ತು ಉತ್ತಮ ಕಲಾವಿದರಾಗಿದ್ದ ಇರ್ಫಾನ್ ಖಾನ್ 2018 ವರ್ಷದಲ್ಲಿ ನ್ಯೂರಾನ್‍ಡೊಕ್ರೈನ್ ಟ್ಯೂಮರ್ಗೆ ಸಿಲುಕಿದ್ದೇನೆ ಎಂದು ಸ್ವತಃ ಬಹಿರಂಗಪಡಿಸಿದ್ದರು.

ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರೀಯ ಶ್ರೇಷ್ಠ ನಟ ಪ್ರಶಸ್ತಿ, ಅಂತರರಾಷ್ಟ್ರೀಯ ಮಟ್ಟದ ಬೇಡಿಕೆ ಮತ್ತು ಮಹಾನ್ ಪ್ರತಿಭೆಯ ಸಂಪತ್ತಿಯಿದ್ದ  ಇರ್ಫಾನ್ ಖಾನ್ ಬೇಗ ಕಾಹಿಲೆಗೆ ತುತ್ತಾಗಿ ಬೇಗ ನಿರ್ಗಮಿಸಬೇಕಾಗಿ ಬಂದದ್ದಕ್ಕೆ ಏನೆನ್ನಬೇಕು ಗೊತ್ತಿಲ್ಲ.  2021ರಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಅವರಿಗೆ ಮರಣೋತ್ತರವಾಗಿ ಗೌರವರೂಪದ ಪ್ರಶಸ್ತಿ ಸಲ್ಲಿಸಲಾಯಿತು.

On the death anniversary of Irfan Khan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ