ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜ್ಯೋತಿಬಾ ಫುಲೆ


 ಜ್ಯೋತಿಬಾ ಫುಲೆ


ಜ್ಯೋತಿಬಾ ಗೋವಿಂದ್‌ರಾವ್ ಫುಲೆ 19 ನೇ ಶತಮಾನ ಕಂಡ ಮಹಾನ್ ಸಮಾಜ ಸುಧಾರಕ, ಕ್ರಾಂತಿಕಾರಿ ಚಿಂತಕ ಮತ್ತು ಬರಹಗಾರ. ಅಸ್ಪೃಶ್ಯತಾ ನಿವಾರಣೆ, ಮೂಢನಂಬಿಕೆಗಳ ವಿರುದ್ಧ ಜಾಗೃತಿ, ಶಿಕ್ಷಣ, ಕೃಷಿ, ಜಾತಿವಿನಾಶದಂತಹ ಸಾಮಾಜಿಕ ಸುಧಾರಣಾ ಚಳುವಳಿಯಲ್ಲಿ ಜ್ಯೋತಿರಾವ್ ಫುಲೆ ಮತ್ತವರ ಪತ್ನಿ ಸಾವಿತ್ರಿಬಾಯಿ ಅವರ ಹೆಸರು ಪ್ರಮುಖವಾದದ್ದು.

ಮಹಾರಾಷ್ಟ್ರದ ಸತಾರ ಜಿಲ್ಲೆಯ ಕಟ್ಗುನ್ ಎಂಬಲ್ಲಿ 1827ರ ಏಪ್ರಿಲ್ 11 ರಂದು  ಜನಿಸಿ ಜ್ಯೋತಿಬಾ ಎಂದು ಹೆಚ್ಚು ಪರಿಚಿತರವರು ಜ್ಯೋತಿರಾವ್ ಫುಲೆ. ಅವರ ತಂದೆ ಗೋವಿಂದರಾವ್ ತರಕಾರಿ ಮಾರಾಟ ಮಾಡುತ್ತಿದ್ದರು. 9 ತಿಂಗಳಿರುವಾಗಲೇ ತಾಯಿಯನ್ನು ಕಳೆದುಕೊಂಡ ಫುಲೆ, ತಂದೆಗೆ ಕೃಷಿ ಕೆಲಸದಲ್ಲಿ ಸಹಾಯ ಮಾಡಿಕೊಂಡಿದ್ದರು. ಅವರನ್ನು ಚಿಕ್ಕಂದಿನಿಂದ ಸಾಕಿ ಬೆಳೆಸಿದ ಸೋದರ ಸಂಬಂಧಿ ಅಕ್ಕ ಸಗುಣ ಬ್ರಿಟಿಷ್ ಆಫೀಸರನೊಬ್ಬನ ಮಗನಿಗೆ ನ್ಯಾನಿ ಆಗಿ ಕೆಲಸ ಮಾಡುತ್ತಿದ್ದಾಕೆ. ಇಂಗ್ಲಿಷ್ ಬರುತ್ತಿದ್ದ ಆಕೆ ಜ್ಯೋತಿರಾವ್ ಅವರನ್ನು ಶಿಕ್ಷಣದೆಡೆಗೆ ಸೆಳೆದಳು. ಬಾಲಕ ಫುಲೆ ಸ್ಕಾಟಿಷ್ ಮಿಷನ್ ಹೈಸ್ಕೂಲಿಗೆ ಸೇರಿದರು. ಜ್ಯೋತಿಬಾ ಅವರು 12 ವರ್ಷದವರಾಗಿದ್ದಾಗ 9 ವರ್ಷದ ಸಾವಿತ್ರಿ ಬಾಯಿ ಜೊತೆ ಮದುವೆಯಾಯಿತು. 

ಮುಂದೆ ಜ್ಯೋತಿಬಾ ಫುಲೆ ಅಧ್ಯಾಪಕರಾದರು. ಸತತ ಓದುವ ಹವ್ಯಾಸ ಉಳ್ಳ ಅವರು ಶಿವಾಜಿ ಮತ್ತು ಜಾರ್ಜ್ ವಾಶಿಂಗ್‌ಟನ್ ಜೀವನ ಚರಿತ್ರೆ ಓದಿ ಪ್ರಭಾವಿತರಾದವರು. ಶಿವಾಜಿ ಬಗ್ಗೆ ಪುಸ್ತಕ ಬರೆದರು. ಅಮೆರಿಕದ ಲೇಖಕ ಥಾಮಸ್ ಪೇನ್‌ನ 'ರೈಟ್ಸ್ ಆಫ್ ಮ್ಯಾನ್’ ಓದಿ ಮಾನವನ ಹಕ್ಕು ಸ್ವಾತಂತ್ರ್ಯಗಳ ವಿಚಾರ ತಿಳಿದುಕೊಂಡಿದ್ದರು.

ಜಾತಿಗಳ ಮೇಲು-ಕೀಳು ಭಾವನೆ, ಶೂದ್ರ-ಅತಿ ಶೂದ್ರರ ದೀನ ಸ್ಥಿತಿಗೆ ಕಾರಣವಾದ ಸಾಮಾಜಿಕ ಚೌಕಟ್ಟನ್ನು ತೀವ್ರ ಪೂರ್ತಿ ಬದಲಾಯಿಸಲು ಅವರು ನಿರ್ಧರಿಸಿ 1873ರಲ್ಲಿ ಸತ್ಯಶೋಧಕ ಸಮಾಜ ಸ್ಥಾಪಿಸಿದರು. ಅದರ ಶಾಖೋಪಶಾಖೆಗಳನ್ನು ಬೆಳೆಸಿದರು.

ಕೆಳಜಾತಿಯ ಮಹಿಳೆಯರಿಂದಲೇ ಆರಂಭಿಸಿ ಶಿಕ್ಷಣ ವ್ಯಾಪಕವಾಗಬೇಕೆಂದು ಅವರೇ ಪುಣೆಯಯಲ್ಲಿ ತಳಹದಿಯಾಗಿ ಮಹಿಳೆಯರಿಗೆ ಒಂದು ಶಾಲೆ ಆರಂಭಿಸಿ (1851) ತಮ್ಮ ಪತ್ನಿಯನ್ನೇ (ಸಾವಿತ್ರಿ ಬಾಯಿ) ಅಧ್ಯಾಪಕಿಯಾಗಿ ಮಾಡಿದರು. ಈ ಬಗ್ಗೆ ಸಮಾಜದ ಹಲವರು ಜ್ಯೋತಿಬಾರ ತಂದೆಯ ಕಿವಿಹಿಂಡಲು ಜ್ಯೋತಿಬಾ ತಂದೆಯ ಮನೆ ತ್ಯಜಿಸಿ ಪ್ರತ್ಯೇಕ ಸಂಸಾರ ಮಾಡಿದರು. ಮುಂದೆ ರಾಸ್ತಾಪೇಟ್, ವಿಠಲಪೇಟೆಗಳಲ್ಲೂ ಇಂಥ ಮಹಿಳೆಯರ ಶಾಲೆ ತೆರೆದರು. ರೈತರಿಗೂ ಮಹಿಳೆಯರಿಗೂ ತಮ್ಮ ಮನೆಯಲ್ಲೇ ರಾತ್ರಿ ಶಾಲೆ ತೆರೆದರು. ಇಂಗ್ಲಿಷ್ ಶಿಕ್ಷಣ, ತಾಂತ್ರಿಕ ಶಿಕ್ಷಣ ವಿಸ್ತರಣೆ ಆಗಬೇಕೆಂದು ಬಲವಾಗಿ ಪ್ರತಿಪಾದಿಸಿದರು. ಅಸ್ಪೃಶ್ಯತೆ, ಜಾತಿಭೇದ, ಬಾಲ್ಯವಿವಾಹಗಳ ವಿರುದ್ಧ ಬಲವಾಗಿ ಪ್ರತಿಪಾದಿಸಿದರು. ಆಗಿನ ಸಮಾಜ ಸುಧಾರಕರಾದ ರಾನಡೆ, ಪ್ರೊ. ಭಂಡಾರಕರ್, ವಿಷ್ಣು ಶಾಸ್ತ್ರಿ ಚಿಪಳೋಣ್‌ಕರ್ ಇವರೆಲ್ಲ ಅವರ ವಿಚಾರಗಳಿಗೆ ಬೆಂಬಲ ಸೂಚಿಸಿದರು. ಭೋಕಾರ್‌ವಾಡಿ (ಪುಣೆಯ ಒಂದು ಬಡಾವಣೆ) ಎಂಬಲ್ಲಿ ಸರಕಾರ ಇವರಿಗೆ ಒಂದು ವಿಶಾಲ ನಿವೇಶನ ನೀಡಲು ಅಲ್ಲಿ ಅಸ್ಪೃಶ್ಯರಿಗಾಗಿ ಒಂದು ಶಾಲೆ ಆರಂಭಿಸಿದರು. ಬೆಳಗಾವಿಯಲ್ಲಿ ಹಾಗೂ ಚಿಕ್ಕೋಡಿ (1911) ನಿಪ್ಪಾಣಿ ಇಲ್ಲೆಲ್ಲ ಸತ್ಯಶೋಧಕ ಸಮಾಜದ ಶಾಖೆಗಳಾದವು.

'ವಿದ್ಯೆ ಹೀನನಿಗೆ ಮತಿಯಿಲ್ಲ; ಮತಿಯಿಲ್ಲದೆ ನೀತಿಯಿಲ್ಲ; ನೀತಿಯಿಲ್ಲದೆ ಗತಿಯಿಲ್ಲ; ಗತಿಯಿಲ್ಲದೆ ಹಣವಿಲ್ಲ; ಹಣವಿಲ್ಲದೆ ಶೂದ್ರ ಕೀಳಾದ; ಇಷ್ಟೆಲ್ಲ ಅನರ್ಥವನ್ನು ಅವಿದ್ಯೆ ಒಂದೇ ಉಂಟುಮಾಡಿದೆ' ಎಂದು ಹೇಳಿದ ಫುಲೆಯವರು ಶಿಕ್ಷಣದ ಮಹತ್ವವನ್ನು ತಳಸಮುದಾಯಗಳಿಗೆ ತಿಳಿಸಿಕೊಡುವತ್ತ ಆಸಕ್ತಿ ವಹಿಸಿದರು.

ಫುಲೆಯವರ ಕೆಲಸಗಳಲ್ಲಿ ಅವರ ಪತ್ನಿಯ ಸಹಭಾಗಿತ್ವವಿತ್ತು. ಮಹಿಳೆಯರಿಗೆ ಶಾಲೆ ತೆರೆದಿದ್ದೇ ಅಲ್ಲದೆ ವಿಧವಾ ಮರುವಿವಾಹ ಶುರುಮಾಡಿದರು. 1854 ರಲ್ಲಿ ವಿಧವೆಯರಿಗೆ ಆಶ್ರಯಸದನ ತೆರೆದರು. ಹೆಣ್ಣು ಶಿಶು ಹತ್ಯೆ ತಡೆಯಲು ನವಜಾತ ಶಿಶುಗಳನ್ನು ಸಾಕಬಹುದಾದ ಶಿಶುಭವನ ತೆರೆದರು. ಸಮಾಜದ ಕೆಳವರ್ಗದ ಜನರ ವಿರುದ್ಧ ತಾರತಮ್ಯ ತೊಡೆದುಹಾಕಲು ತಮ್ಮ ಮನೆಯನ್ನು ಎಲ್ಲರಿಗೂ ಮುಕ್ತವಾಗಿ ತೆರೆದಿದ್ದೇ ಅಲ್ಲದೆ ತಮ್ಮ ಬಾವಿಯಿಂದ ನೀರು ಸೇದುವ ಅವಕಾಶವನ್ನು ಮುಕ್ತವಾಗಿ ಎಲ್ಲರಿಗೂ ನೀಡಿದರು. ಫುಲೆ 1876 ರಿಂದ 1882 ವರೆಗೆ  ಪುಣೆ ಮುನಿಸಿಪಾಲಿಟಿ ಸದಸ್ಯರಾಗಿದ್ದರು.

ಸ್ವಾತಂತ್ರ್ಯ, ಸಮಾನತೆ, ಸೋದರತೆ, ಮಾನವ ಘನತೆ, ಆರ್ಥಿಕ ನ್ಯಾಯದ ಆಧಾರದ ಮೇಲೆ ಹೊಸ ಸಮಾಜ ಕಟ್ಟಬಯಸುವುದಾದರೆ ಶೋಷಣೆ ಮತ್ತು ಅಸಮಾನತೆಯೇ ಮೂಲತತ್ವವಾದ ಹಳೆಯ ವ್ಯವಸ್ಥೆಯನ್ನು ಛಿದ್ರಗೊಳಿಸಲೇಬೇಕೆನ್ನುವುದು ಅವರ 
ಅಭಿಮತವಾಗಿತ್ತು.

1873 ರಲ್ಲಿ ಫುಲೆ ತಮ್ಮ ಬೆಂಬಲಿಗರೊಂದಿಗೆ ಸತ್ಯಶೋಧಕ ಸಮಾಜವನ್ನು ಕಟ್ಟಿದಾಗ ಸಾವಿತ್ರಿ ಬಾಯಿ ಅದರ ಮುಖ್ಯಸ್ಥರಾದರು. ಅಷ್ಟೇ ಅಲ್ಲ, ಅದರಲ್ಲಿ 90 ಜನ ಸದಸ್ಯೆಯರೂ ಇದ್ದರು. ಶಾಲೆಯ ಉಪಾಧ್ಯಾಯಿನಿಯಾಗಿ ಆಕೆ ಅವಿಶ್ರಾಂತವಾಗಿ ದುಡಿದರು. ಸತ್ಯಶೋಧಕ ಚಳುವಳಿಯ ಮುಖವಾಣಿಯಾಗಿ 'ದೀನಬಂಧು ಪ್ರಕಾಶನ ಶುರುವಾಯಿತು. 1873 ರಲ್ಲಿ ಪ್ರಕಟವಾದ ಅವರ ‘ಗುಲಾಮಗಿರಿ' ಎಂಬ ಪುಸ್ತಕವನ್ನು ಗುಲಾಮಗಿರಿಯನ್ನು ತೊಡೆದುಹಾಕಲು ಪ್ರಯತ್ನಿಸಿದ ಅಮೆರಿಕದ ಜನತೆಗೆ ಅರ್ಪಿಸಿದ್ದರು.

ಹೀಗೆ ಫುಲೆಯವರಿಂದ ಶುರುವಾದ ಚಳುವಳಿಯಲ್ಲಿ ಅನೇಕರು ಭಾಗವಹಿಸಿ ನೇರವಾಗಿ ಪ್ರಭಾವಿತರಾದರೆ ಪರೋಕ್ಷವಾಗಿ ಇನ್ನೆಷ್ಟೋ ಮಂದಿ ಅವರ ಅನುಯಾಯಿಗಳಾದರು. 

ಜ್ಯೋತಿಬಾ ಫುಲೆ ಅವರು 1890 ವರ್ಷದ ನವೆಂಬರ್ 28 ರಂದು ನಿಧನರಾದರು.

ಫುಲೆಯವರು ಹುಟ್ಟುಹಾಕಿದ ಚಳುವಳಿ ಬಿರುಸಿನಿಂದ ಮುಂದುವರೆದು ಫುಲೆಯವರ ಮರಣದ ನಂತರವೂ ಮುಂದುವರೆಯಿತು.

On the birth anniversary of educationist and reformer Jyothirao Phule

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ