ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾಪು ನಾಡಕರ್ಣಿ


 ಬಾಪು ನಾಡಕರ್ಣಿ


ಕ್ರಿಕೆಟ್ ಲೋಕದಲ್ಲಿ ಯಾರಾದರೂ ಬೌಲಿಂಗ್ ಮಾಡುವಾಗ ರನ್ ಕೊಡದಿದ್ರೆ ತಕ್ಷಣವೇ ಬಾಪು ನಾಡಕರ್ಣಿಯಂತೆ ಎನ್ನುವ ಮಾತು ಬರುತ್ತೆ.

ರಮೇಶಚಂದ್ರ ಗಂಗಾರಾಮ್ 'ಬಾಪು' ನಾಡಕರ್ಣಿ ಅವರು 1933ರ ಏಪ್ರಿಲ್ 4ರಂದು ಮಹಾರಾಷ್ಟ್ರದ ನಾಸಿಕ್ ಪಟ್ಟಣದಲ್ಲಿ ಜನಿಸಿದರು.

ಎಡಗೈ ಬ್ಯಾಟ್ಸ್‌ಮನ್‌ ಮತ್ತು ಎಡಗೈ ಸ್ಪಿನ್ನರ್‌ ಆಗಿದ್ದ ಬಾಪು ನಾಡಕರ್ಣಿ 41 ಟೆಸ್ಟ್‌ ಪಂದ್ಯಗಳನ್ನು ಆಡಿ ಒಂದು ಶತಕ, ಏಳು ಅರ್ಧ ಶತಕ ಸೇರಿ 1,414 ರನ್‌ಗಳನ್ನು ಗಳಿಸಿದ್ದರಲ್ಲದೆ 88 ವಿಕೆಟ್‌ಗಳನ್ನೂ ಪಡೆದಿದ್ದರು. 43 ರನ್ನಿಗೆ 6 ವಿಕೆಟ್‌ ಪಡೆದಿದ್ದು ಅವರ ಶ್ರೇಷ್ಠ ಸಾಧನೆ.

ಇಂಗ್ಲೆಂಡ್‌ ವಿರುದ್ಧ 1964ರ ಸರಣಿಯ ಮದರಾಸು (ಈಗಿನ ಚೆನ್ನೈ) ಟೆಸ್ಟ್‌ ಪಂದ್ಯದಲ್ಲಿ ಜನವರಿ 12 ರಂದು ಅವರು ವಿಶ್ವದಲ್ಲಿ ಬಹುಶಃ ಎಂದೂ ಅಳಿಸಲು ಸಾಧ್ಯವಿಲ್ಲದ ದಾಖಲೆಯನ್ನು ನಿರ್ಮಿಸಿದರು.  ಸತತ 21 ಮೇಡನ್‌ ಓವರ್‌ಗಳನ್ನು ಮಾಡಿದ ಅಪೂರ್ವ ಸಾಧನೆಯದು.‍‍ ಆ ಇನಿಂಗ್ಸ್‌ನಲ್ಲಿ ಅವರು 32 ಓವರುಗಳಲ್ಲಿ 27 ಮೇಡನ್ ಓವರ್ ಮಾಡಿ ಕೇವಲ 5 ರನ್ ನೀಡಿದ್ದರು. ಇಂದಿನ ಜೆಟ್ ಯುಗದ ಕ್ರಿಕೆಟ್ನಲ್ಲಂತೂ ಇದು ಊಹಿಸಲಾಗದ ಮಾತು. ಯಾವುದೇ ಕಾಲಕ್ಕೂ ಇಂತಹದ್ದು ಅಮರ ಸಾಧನಯೇ ಸರಿ.

ಪಾಕಿಸ್ತಾನ ವಿರುದ್ದ 1960–61ರ ಸರಣಿಯಲ್ಲೂ ಅವರ ಮಿತವ್ಯಯದ ಬೌಲಿಂಗ್‌ (ಕಾನ್ಪುರ ಟೆಸ್ಟ್‌ನಲ್ಲಿ 34–24–23–0, ದೆಹಲಿಯಲ್ಲಿ 34–24–24–1) ಗಮನ ಸೆಳೆದಿತ್ತು.

ಬಾಪು ನಾಡಕರ್ಣಿ 1955ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ದೆಹಲಿಯಲ್ಲಿ ಮೊದಲ ಟೆಸ್ಟ್ ಆಡಿದ್ದರು. 1968ರಲ್ಲಿ ಆಕ್ಲೆಂಡ್‌ನಲ್ಲಿ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿದ್ದರು.

ನಾವು ರೇಡಿಯೋ ಕಾಮೆಂಟರಿ ಕೇಳುವ ದಿನಗಳಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಈ ಮಹನೀಯರುಗಳಾದ ಬಾಪು (ನಾಡಕರ್ಣಿ), ಲಾಲಾ (ಅಮರನಾಥ್) ಮುಂತಾದವರುಗಳನ್ನು ಕುರಿತು  ಓವರ್ ಟು ಯು ಬಾಪು, ಓವರ್ ಟು ಯು ಲಾಲಾ ಎಂದು ಕೇಳುತ್ತಿದ್ದದು ಇಂದೂ ಆಪ್ತವಾಗಿ ಕಿವಿಯಲ್ಲಿ ಧ್ವನಿಸುತ್ತಿದೆ.

ಬಾಪು ನಾಡಕರ್ಣಿ ಅವರು 2020ರ ಜನವರಿ 17 ರಂದು ಈ ಲೋಕವನ್ನಗಲಿದರು.

On the birth anniversary of great cricket player Bapu Nadakarni 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ