ಬಿ. ಪಿ. ರಾಧಾಕೃಷ್ಣ
ಬಿ. ಪಿ. ರಾಧಾಕೃಷ್ಣ
ವೃತ್ತಿಯಲ್ಲಿ ಭೂವಿಜ್ಞಾನಿಗಳಾಗಿ ಮತ್ತು ಪ್ರವೃತ್ತಿಯಲ್ಲಿ ಸಾಹಿತ್ಯರಚನಕಾರರಾಗಿ ಡಾ. ಬಿ. ಪಿ. ರಾಧಾಕೃಷ್ಣ ಮಹತ್ವದ ಕೊಡುಗೆ ನೀಡಿದವರಾಗಿದ್ದಾರೆ. ಅವರು ಅಂತಾರಾಷ್ಟ್ರೀಯ ಖ್ಯಾತಿಯ ಭೂವಿಜ್ಞಾನಿಯಾಗಿ ಕರ್ನಾಟಕದಲ್ಲಿನ ಖನಿಜ ನಿಕ್ಷೇಪಗಳನ್ನು ಗುರುತಿಸಿ ಜಲಸಂಪತ್ತನ್ನು ಪರಿಣಾಮಕಾರಿಯಾಗಿ ಗ್ರಾಮೀಣ ಜನತೆಗೂ ಒದಗಿಸಲು ಯೋಜನೆಗಳನ್ನು ಕೈಗೊಂಡರು. ಕರ್ನಾಟಕದಲ್ಲಿ ನೀರಿನ ಬರವಿದ್ದಾಗ ಗ್ರಾಮಾಂತರ ಜನರಿಗೆ ಕುಡಿಯುವ ನೀರಿನ ಯೋಜನೆಯಿಂದ ನಜೀರ್ ಸಾಬ್ ಅವರಿಗೆ 'ನೀರಿನ ಸಾಬ್' ಎಂದು ಹೆಸರು ಬರುವಲ್ಲಿ ರಾಧಾಕೃಷ್ಣರ ಚಿಂತನೆ ಪ್ರಧಾನವಾದದ್ದು.
ರಾಧಾಕೃಷ್ಣ 1918ರ ಏಪ್ರಿಲ್ 30ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬಿ. ಪುಟ್ಟಯ್ಯ. ತಾಯಿ ವೆಂಕಮ್ಮ. ಪುಟ್ಟಯ್ಯನವರು ಬಿ.ಎಂ.ಶ್ರೀ ಯವರ ಒಡನಾಡಿ. ಪುಟ್ಟಯ್ಯನವರು ಇಂಗ್ಲೆಂಡಿಗೆ ತೆರಳಿ ಮುದ್ರಣ ಕಲೆಯಲ್ಲಿ ಪರಿಣತಿ ಪಡೆದು ಬಂದಿದ್ದು, ತಮ್ಮ ಅನುಭವದಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಚ್ಚುಕೂಟ ಸ್ಥಾಪಿಸುವಲ್ಲಿ ನೆರವಾದರಲ್ಲದೆ ಅದರ ಮೇಲ್ವಿಚಾರಕರಾಗಿಯೂ ಕಾರ‍್ಯನಿರ್ವಹಿಸಿದರು. ಇಂಪಾಗಿ ಹಾಡುತ್ತಿದ್ದ ತಾಯಿಯ ಬಾಯಿಂದ ಕೇಳುತ್ತಿದ್ದ ದಾಸರ ಪದಗಳು ಇವರ ಮೇಲೆ ಪ್ರಭಾವ ಬೀರಿತ್ತು. ಜೊತೆಗೆ ಪ್ರತಿ ಶನಿವಾರ ಹಜಾರದಲ್ಲಿ ಎಲ್ಲರೂ ಸೇರಿದಾಗ ಇವರ ಸೋದರತ್ತೆಯವರು ಕನ್ನಡ ಸಾಹಿತ್ಯದ ಉತ್ತಮ ಕೃತಿಗಳನ್ನು ಓದುತ್ತಿದ್ದಾಗ ಎಲ್ಲರೂ ನಿಶ್ಯಬ್ಧರಾಗಿ ಕುಳಿತು ಕೇಳುತ್ತಿದ್ದರು. ಹೀಗೆ ಕುಟುಂದಲ್ಲೇ ಅವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಒಲವು ಬೆಳೆಯವ ವಾತಾವರಣ ನಿರ್ಮಾಣವಾಗಿತ್ತು.
ತಮ್ಮ ವಿದ್ಯಾಭ್ಯಾಸವನ್ನೆಲ್ಲ ಬೆಂಗಳೂರಿನಲ್ಲಿ ನಡೆಸಿದ ರಾಧಾಕೃಷ್ಣ ಸೆಂಟ್ರಲ್ ಕಾಲೇಜಿನಿಂದ ಭೂವಿಜ್ಞಾನದ ಪದವಿಯನ್ನು 1937 ರಲ್ಲಿ ಪಡೆದರು.
ಮೈಸೂರು ಸಂಸ್ಥಾನದ ಭೂವಿಜ್ಞಾನ ಇಲಾಖೆಗೆ ಕ್ಷೇತ್ರ ಸಹಾಯಕರಾಗಿ ಸೇರಿದ ರಾಧಾಕೃಷ್ಣ, ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಿರ್ದೇಶಕರಾಗಿ ನಿವೃತ್ತರಾದರು. ತಾವು ಸೇರಿದಾಗ ಬೆರಳೆಣಿಕಯಷ್ಟು ಸಿಬ್ಬಂದಿ ಇದ್ದ ಇಲಾಖೆಯು ಬೃಹತ್ತಾಗಿ ಬೆಳೆಯಲು ಕಾರಣರಾದರು. ರಾಮನಗರದ ಕಲ್ಲುಬಂಡೆಗಳ ಬಗ್ಗೆ ವಿಶೇಷಾಧ್ಯಯನ ಕೈಗೊಂಡ ರಾಧಾಕೃಷ್ಣ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ 1954ರಲ್ಲಿ ಡಾಕ್ಟರೇಟ್ ಪಡೆದರು.
ರಾಧಾಕೃಷ್ಣ ಅವರು ಸತ್ಯವನ್ನು ಹೇಳುವಾಗ ಯಾವ ಮುಲಾಜಿಗೂ ಒಳಗಾಗದೆ, ನೇರನುಡಿಯ, ನಿಷ್ಠುರ ವರ್ತನೆಯ, ಸಮಯ ಪ್ರಜ್ಞೆಯ ಖಂಡಿತವಾದಿಯಾಗಿ ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಮಾದರಿಯಾಗಬಲ್ಲ ವ್ಯಕ್ತಿತ್ವದ ಅಪರೂಪದ ವ್ಯಕ್ತಿಯಾಗಿದ್ದರು. ಕರ್ನಾಟಕದ ಶಿಲೆಗಳ ಬಗ್ಗೆ ವಿಶೇಷಾಧ್ಯಯನ ಮಾಡಿದಂತೆ ಭೂಮಿಯ ಒಡಲಲ್ಲಿರುವ ಖನಿಜ ನಿಕ್ಷೇಪವನ್ನು ಗುರುತಿಸಿ, ಕರ್ನಾಟಕದ ಅಭ್ಯುದಯಕ್ಕೆ ಬಳಸಿಕೊಳ್ಳುವಂತಹ ಯೋಜನೆಗಳನ್ನು ಸಿದ್ಧಪಡಿಸಿಕೊಟ್ಟರು.
ಜಲಸಂಪನ್ಮೂಲಗಳನ್ನು ಬಳಸಿಕೊಳ್ಳುವಲ್ಲಿ ವಿಶೇಷ ಕಾರ‍್ಯವನ್ನು ಕೈಗೊಂಡು ಅತ್ಯಂತ ಕಡಿಮೆ ಖರ್ಚಿನಲ್ಲಿ ಗ್ರಾಮೀಣ ಜನರಿಗೆ ಕುಡಿಯುವ ನೀರೊದಗಿಸಲು ಯೋಜನೆಯನ್ನು ರೂಪಿಸಿದಾಗ ಅದನ್ನು ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್ ಸಾಬ್‌ರವರು ಕಾರ‍್ಯಗತಗೊಳಿಸಿ ‘ನೀರ್ ಸಾಬ್’ ಎಂದೇ ಹೆಸರುಗಳಿಸಿದರು.
ರಾಧಾಕೃಷ್ಣ ಅವರು ಜಲ ಹಾಗೂ ಖನಿಜಕ್ಕೆ ಸಂಬಂಧಿಸಿದಂತೆ ನೂರಾರು ಲೇಖನಗಳನ್ನು ಕಾಲಕಾಲಕ್ಕೆ ಬರೆದಿದ್ದು ಅವೆಲ್ಲವೂ ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡು ದೇಶ – ವಿದೇಶಗಳ ವಿಜ್ಞಾನಿಗಳ ಗಮನ ಸೆಳೆದಿದ್ದವು. ಭಾರತೀಯ ಭೂ ವಿಜ್ಞಾನಿಗಳ ಸಂಘದ ಸ್ಥಾಪಕ ಕಾರ‍್ಯದರ್ಶಿಯಾಗಿ, ಅಧ್ಯಕ್ಷರಾಗಿ ದುಡಿದರಲ್ಲದೆ ‘ಜರ್ನಲ್ ಆಫ್ ಬಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ’ ಪತ್ರಿಕೆಯ ಸಂಪಾದಕರಾಗಿಯೂ ಅವರು ದುಡಿದರು.
ಭೂ ವಿಜ್ಞಾನಿಯಾಗಿ ಮಾತ್ರವಲ್ಲದೆ ಲೇಖಕರಾಗಿಯೂ ರಾದಾಕೃಷ್ಣರವರ ಕೊಡುಗೆ ಅಪಾರ. ಎಳವೆಯಿಂದಲೇ ರೂಢಿಸಿಕೊಂಡ ಸಾಹಿತ್ಯಾಭಿಮಾನದಿಂದ ‘ಡಾ. ಸಿ.ವಿ. ರಾಮನ್’, ‘ರಾಮಾನುಜಂ’ ‘ಬಿ.ಜಿ.ಎಲ್.ಸ್ವಾಮಿ’, ‘ಡಾರ್ವಿನ್’, 'ಸಾರ್ಥಕ ಬದುಕು’ (ವಿ.ಸೀ. ಯವರ ಜೀವನ, ಸಾಹಿತ್ಯ ಮತ್ತು ಸಾಧನೆ) ಮುಂತಾದ ಕೃತಿ ರಚಿಸಿದ್ದಲ್ಲದೆ ಅಂತರ್ಜಲ (ಇತರರೊಡನೆ) ಮತ್ತು ಲೋಹವಿದ್ಯೆ ಎಂಬ ಗ್ರಂಥಗಳನ್ನು ಪ್ರಕಟಿಸಿದ್ದರು. ಮಿನರಲ್ ರಿಸೋರ್ಸಸ್ ಆಫ್ ಕರ್ನಾಟಕ ಇಂಗ್ಲಿಷಿನಲ್ಲಿ ರಚಿಸಿರುವ ಅವರ ಮಹತ್ವದ ಕೃತಿ. ಇವರ ಮತ್ತೊಂದು ಪ್ರಮುಖ ಕೃತಿಯೆಂದರೆ ತಮ್ಮ ತಂದೆಯವರಾದ ಬಿ. ಪುಟ್ಟಯ್ಯನವರನ್ನು ಕುರಿತು ಬರೆದ ಗ್ರಂಥ ‘ನನ್ನ ತಂದೆ’. ಇದು 1949ರಲ್ಲಿ ಪ್ರಕಟವಾಗಿದ್ದು ಇದಕ್ಕೆ ಡಿ.ವಿ.ಜಿ. ಯವರು ದೀರ್ಘ ಮುನ್ನುಡಿ ಬರೆದಿದ್ದಾರೆ. ಇವರು ಹಲವಾರು ಮಹತ್ವದ ಕೃತಿಗಳನ್ನೂ ಸಂಪಾದಿಸಿದ್ದರು. ಅವುಗಳಲ್ಲಿ ಒಮ್ಮೆ ಭಾರತದಲ್ಲಿ ಹರಿಯುತ್ತಿದ್ದ ಸರಸ್ವತಿ ನದಿಯ ಕುರಿತಾದ'ವೇದಿಕ್ ಸರಸ್ವತಿ' ಕೃತಿ ಕೂಡಾ ಒಂದು.
ರಾಧಾಕೃಷ್ಣರ ಭೂವಿಜ್ಞಾನ ಕುರಿತ ಸಾಧನೆಗಳಿಗೆ ಸಂದ ಪುರಸ್ಕಾರಗಳು ಹಲವಾರು. ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಭಾರತ ಸರಕಾರದ ‘ಪದ್ಮಶ್ರೀ’ ಮತ್ತು ಇಂಡಿಯನ್ ಸ್ಕೂಲ್ ಆಫ್ ಮೈನ್ಸ್‌ನಿಂದ ಸಂದ ಡಾಕ್ಟರ್ ಆಫ್ ಸೈನ್ಸ್ ಪದವಿ ಇವುಗಳಲ್ಲಿ ಸೇರಿವೆ.
ಸಾಹಿತ್ಯ ಸೇವೆಗಾಗಿ ರಾಧಾಕೃಷ್ಣರಿಗೆ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ವಿಶ್ವ ಮಾನವ ಪ್ರಶಸ್ತಿ ಸಂದಿದ್ದವು. ಇದಲ್ಲದೆ ಡಾ.ಸಿ.ವಿ. ರಾಮನ್ ಮತ್ತು ಡಾರ್ವಿನ್ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಎರಡು ಬಾರಿ ಕೃತಿ ಪುರಸ್ಕಾರಗಳು ಸಂದಿದ್ದವು.
ಮಹತ್ವದ ಭೂ ವಿಜ್ಞಾನಿ ಮತ್ತು ಸಾಹಿತಿಗಳಾದ ಡಾ. ಬಿ.ಪಿ. ರಾಧಾಕೃಷ್ಣ ಅವರು 2012ರ ಜನವರಿ 26 ರಂದು ಈ ಲೋಕವನ್ನಗಲಿದರು.
ಅವರ ಜನ್ಮಶತಾಬ್ದಿ ವರ್ಷವಾದ 2018 ವರ್ಷದಲ್ಲಿ ಭಾರತೀಯ ಅಂಚೆ ಇಲಾಖೆಯು ಅಂಚೆ ಚೀಟಿ ಬಿಡುಗಡೆ ಮಾಡಿ ಗೌರವ ಸಲ್ಲಿಸಿತ್ತು.
On the birth anniversary of leading geologist and writer Dr. B.P. Radhakrishna
ಕಾಮೆಂಟ್‌ಗಳು