ಅಕ್ಷಯ ತೃತೀಯ
ಅಕ್ಷಯ ತೃತೀಯ
ನನಗೆ ‘ಅಕ್ಷಯ ತೃತೀಯ’ ಎಂಬುದರ ಪರಿಕಲ್ಪನೆ ಹಿಂದೆ ಇರಲಿಲ್ಲ. ಅಕ್ಷಯ ತೃತೀಯ ಎಂಬುದು ನನ್ನನ್ನು ಮೊದಲು ಸೆಳೆದದ್ದು ನಾನು ದುಬೈನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಸಂದರ್ಭದಲ್ಲಿ, ಇಲ್ಲಿ ತುಂಬಿ ತುಳುಕುತ್ತಿರುವ ಚಿನ್ನದ ಅಂಗಡಿಗಳಲ್ಲಿ ಭಾರತೀಯರು ಚಿನ್ನ ಕೊಳ್ಳಲು ತುಂಬಿಕೊಳ್ಳುತ್ತಿದ್ದ ಪರಿಯಿಂದ. ಆಗ ತಿಳಿದದ್ದು ಅಕ್ಷಯ ತೃತೀಯ ಎಂಬುದು ಐಶ್ವರ್ಯವನ್ನು ಅಕ್ಷಯಗೊಳಿಸುವುದನ್ನು ಸೂಚಿಸುವ ಹಬ್ಬ ಎಂದು. ಚಿನ್ನವೆಂಬ ಮಾಯಾಮೃಗದ ಹಿಂದೆ ಓಡುವುದು ಅವರವರ ಸಾಮರ್ಥ್ಯ ಅಭೀಷ್ಟೆಗಳಿಗೆ ಸೇರಿದ ವಿಚಾರ. ಆದರೆ ಈ ಅಕ್ಷಯ ತೃತೀಯದ ಹಿಂದಿನ ಮರ್ಮ ತಿಳಿಯಬೇಕೆಂದು ಹೊರಟಾಗ ಕಂಡ ವಿಚಾರಗಳು ಇಂತಿವೆ.
ವೈಶಾಖ - ಶುಕ್ಲ - ತೃತೀಯ ತಿಥಿಯೇ ಅಕ್ಷಯ ತೃತೀಯ. ಭಾರತೀಯ ಜನಾಂಗದ ಪವಿತ್ರ ದಿನಗಳಲ್ಲಿ ಅತ್ಯಂತ ಪವಿತ್ರವಾದ ಮೂರೂವರೆ ಶುಭ ಮುಹೂರ್ತಗಳಲ್ಲಿ ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಮತ್ತು ಬಲಿಪಾಡ್ಯಮಿಯಂದಿನ ಅರ್ಧ ದಿವಸ ಶುಭಕಾರ್ಯಗಳಿಗೆ ಪಂಚಾಂಗ ಶುದ್ದಿ ನೋಡುವ ಅವಶ್ಯಕತೆ ಇರುವುದಿಲ್ಲ ಎಂಬುದು ಶಾಸ್ತ್ರಪಂಡಿತರ ಅಭಿಪ್ರಾಯ.
ಈ ದಿವಸ ಯಾವುದೇ ಶುಭ ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಜೀವನದಲ್ಲಿ ಹೊಸದಾದ ಉತ್ತಮ ಕೆಲಸಗಳನ್ನು ಈ ದಿನ ಪ್ರಾರಂಭಿಸುವುದು ಶುಭಕರ. ಈ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ, ಮಹಾ ಪುಣ್ಯಕರವೆಂದು ಪುರಾಣಗಳು ಹೇಳುತ್ತವೆ. ಈ ಶುಭ ದಿವಸದಂದು ವಿಷ್ಣು ತನ್ನ ಪತ್ನಿ ಲಕ್ಷ್ಮಿಯೊಡಗೂಡಿ ಗಂಗಾದೇವಿಗೆ ಪೂಜೆ ಸಲ್ಲಿಸಿದ್ದರಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆಂದು ಪ್ರತೀತಿ ಇದೆ. ಗಂಗಾ ಮಾತೆ ಸ್ವರ್ಗದಿಂದ ಭೂಮಿಗಿಳಿದ ದಿವಸ ಅಕ್ಷಯ ತೃತೀಯ ದಿವಸ. ಈ ದಿವಸ ಕೃತ ಯುಗದ ಪ್ರಾರಂಭ ದಿನ. ವಿಷ್ಣುವಿನ ಆರನೇ ಅವತಾರವಾದ ಪರಶುರಾಮ ಹಾಗೂ ಹನ್ನೆರಡನೇ ಶತಮಾನದಲ್ಲಿ ಮಹಾ ಪುರುಷ ಬಸವೇಶ್ವರವರು ಜನಿಸಿದ್ದು, ಈ ದಿವಸದಂದು. ಈ ದಿವಸ ಮಹಾವಿಷ್ಣುವಿನ ಪೂಜೆ ಮಾಡಿದರೆ ಸಕಲ ಭವಬಂಧನಗಳಿಂದ ಮುಕ್ತಿ ದೊರೆಯುವುದೆಂಬ ನಂಬಿಕೆಯಿದೆ.
ಈ ಅಕ್ಷಯ ತೃತೀಯದ ದಿನ ರವಿ ಮತ್ತು ಚಂದ್ರ ಏಕಕಾಲದಲ್ಲಿ ಅತ್ಯುಚ್ಚ ಪ್ರಮಾಣ ತಲುಪಿ ಉಚ್ಚರಾಶಿಯಲ್ಲಿ ಉಜ್ವಲತೆ ಉಂಟಾಗುವುದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ರವಿ ಆತ್ಮ ಮತ್ತು ದೇಹಕಾರಕ, ಚಂದ್ರ ಮನಸ್ಸುಕಾರಕ, ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಹೊಂದುವ ದಿವಸವಾಗಿದೆ.
ಪಾಂಡವರು ವನವಾಸದಲ್ಲಿದ್ದಾಗ ಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ, ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು, ಅಕ್ಷಯ ತೃತೀಯ ದಿವಸವೇ ಆಗಿದೆ. ಹಾಗೂ ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದಿದ್ದು, ಅಕ್ಷಯ ತೃತೀಯದಂದು, ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದ್ದು, ಅಕ್ಷಯ ತೃತೀಯ ದಿನದಂದು. ಶ್ರೀಕೃಷ್ಣನು ಕುಚೇಲನನ್ನು ಸತ್ಕರಿಸಿದ ಶ್ರೇಷ್ಠದಿನ ಕೂಡಾ ಇದಾಗಿದೆ. ವೇದವ್ಯಾಸರು ಗಣಪತಿಯೊಂದಿಗೆ ಒಪ್ಪಂದ ಮಾಡಿಕೊಂಡು ಮಹಾಭಾರತ ಬರೆಯಿಸಲು ಪ್ರಾರಂಭಿಸಿದ್ದು ಅಕ್ಷಯ ತೃತೀಯ ದಿನದಂದು.
ಅಕ್ಷಯ ತೃತೀಯದಂದು ಶುಭಕಾರ್ಯಗಳನ್ನು ಹಾಗೂ ಸತ್ಪಾತ್ರರಿಗೆ ಸಹಾಯವನ್ನು ನೀಡಿದರೆ ಹೆಚ್ಚಿನ ಶ್ರೇಯಸ್ಸು ದೊರಕುವುದೆಂಬ ಪ್ರತೀತಿಯಿದೆ. ನಾಲ್ಕು ಪುರುಷಾರ್ಥಗಳಲ್ಲಿ ಅರ್ಥ ಪುರುಷಾರ್ಥವನ್ನು ಅಂದರೆ ಸಂಪತ್ತು, ಕೀರ್ತಿ ಪಡೆಯಲು ಈ ದಿವಸ ಕುಬೇರ ಹಾಗು ಲಕ್ಷ್ಮಿ ಇವರುಗಳ ಪೂಜೆ ಮಾಡಲಾಗುತ್ತದೆ. ಮಹಾಲಕ್ಷ್ಮಿಯ ಪೂಜೆಯಿಂದ ಇಡೀವರ್ಷ ಉತ್ತಮ ಫಲ ದೊರೆಯುತ್ತದೆ. ಎಲ್ಲ ರೀತಿಯ ಸತ್ಕಾರ್ಯಗಳಿಗೂ ಅಕ್ಷಯ ತೃತೀಯ ಶುಭದಿನವೆಂದು ಹೇಳಲಾಗಿದೆ.
ಅಕ್ಷಯ ತೃತೀಯದ ದಿವಸ ಮೌಲ್ಯಯುತವಾದದ್ದನ್ನು ನಮ್ಮದಾಗಿಸಿಕೊಂಡಾಗ ಆ ಸೌಭಾಗ್ಯಗಳು ಅಕ್ಷಯವೆನಿಸುತ್ತವೆ, ಸಮೃದ್ಧಿ ದೊರಕುತ್ತವೆ ಎಂಬುದು ಜನರಲ್ಲಿರುವ ನಂಬಿಕೆ. ಈ ಮೌಲ್ಯಯುತವಾದ ವಸ್ತುಗಳು ಕೇವಲ ಸ್ವರ್ಣ ವಜ್ರ ವೈಡೂರ್ಯಗಳು, ಆಸ್ಥಿ ಒಡೆತನಗಳು ಮಾತ್ರವಲ್ಲ, ಜೀವನದ ಶ್ರೇಷ್ಠ ಮೌಲ್ಯಗಳೂ ಕೂಡಾ ಎಂಬುದು ನಮ್ಮ ನೆನಪಿಗೆ ಬರುವಂತಾಗಲಿ ಎಂದು ಆಶಿಸೋಣ.
ಈ ಲೋಕದಲ್ಲಿ ಎಲ್ಲರಿಗೂ ಅವಶ್ಯಕವಾದ ಯೋಗ್ಯಮಾರ್ಗದಿಂದ ಸಂಪತ್ತನ್ನು ಗಳಿಸುವ ಶಕ್ತಿ, ಸಜ್ಜನಿಕೆ, ಉತ್ತಮ ನಡವಳಿಕೆ, ಸೌಹಾರ್ದ, ಸಹಕಾರ ಮುಂತಾದ ಸಕಲ ಶ್ರೇಷ್ಠತೆಗಳು ಅಕ್ಷಯಗೊಂಡು ಈ ಲೋಕವು ನಂದನವನವಾಗಿ ಪರಿಣಮಿಸಲಿ ಎಂದು ಆಶಿಸುತ್ತಾ ಸಕಲರಿಗೂ ಶುಭ ಹಾರೈಸೋಣ.
Richness refers to values of life too.
ಕಾಮೆಂಟ್‌ಗಳು