ಕಗ್ಗದ ಭಟ್ಟರು
ಎಚ್. ಎಸ್ ಲಕ್ಷ್ಮೀನಾರಾಯಣ ಭಟ್
ಜನಸಾಮಾನ್ಯರಿಗೆ ಮಂಕುತಿಮ್ಮನ ಕಗ್ಗವನ್ನು ಆಪ್ತವಾಗುವಂತೆ ಮಾಡಿದವರಲ್ಲಿ ಪ್ರೊ. ಎಚ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಪ್ರಮುಖರು. ಅವರಂತೆ ಅಪ್ತವಾಗಿ, ರಾಗವಾಗಿ, ಸುಶ್ರಾವ್ಯ ವೈವಿಧ್ಯತೆಗಳಿಂದ ಕಗ್ಗವನ್ನು ಮತ್ತು ಕನ್ನಡದ ಕವಿಗಳ ಸೊಗಡನ್ನು ಸಾಹಿತ್ಯ ಬಲ್ಲದವರಿಗೆ ಕೂಡ ರುಚಿ ಹತ್ತಿಸಿದವರು ಕಡಿಮೆ ಎಂದರೆ ತಪ್ಪಾಗಲಾರದು. ಅವರನ್ನು ಬಹುಜನ ಅನುಕರಿಸಿದ್ದನ್ನು ನೋಡಿದ್ದೇವೆ. ಪ್ರಾವಿಣ್ಯತೆಯ ಕೋಗಿಲೆ ಕೋಗಿಲೆಯೇ.
ಲಕ್ಷ್ಮೀನಾರಾಯಣ ಭಟ್ಟರು 1946ರ ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಆದರ್ಶ ಶಿಕ್ಷಕರೆನಿಸಿದ್ದ ಹೊಸಕೆರೆ ಶೇಷಭಟ್ಟರು. ತಾಯಿ ಚಿನ್ನಮ್ಮ. ಲಕ್ಷ್ಮೀನಾರಾಯಣ ಭಟ್ಟರ ಪ್ರೌಢ ಶಾಲೆ ಹಾಗೂ ಪಿಯುಸಿವರೆಗಿನ ವಿದ್ಯಾಭ್ಯಾಸ ಚಿಕ್ಕಮಗಳೂರು ಜಿಲ್ಲೆಯಲ್ಲಿ, ವಿಜ್ಞಾನ ಪದವಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಮತ್ತು ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ 1966ರಲ್ಲಿ ನೆರವೇರಿತು.
ಎಚ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಬೆಂಗಳೂರಿನ ವಿಶ್ವೇಶ್ವರಪುರ ವಿಜ್ಞಾನ ಕಾಲೇಜಿನಲ್ಲಿ ಭೌತಶಾಸ್ತ್ರದ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಮತ್ತು ಪ್ರಾಚಾರ್ಯರಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತರಾದರು. ಇದೇ ಅವಧಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಯಸ್ಕರ ಶಿಕ್ಷಣ ಕಾರ್ಯಕ್ರಮದ ಸಂಯೋಜಕರಾಗಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು. ಭೌತಶಾಸ್ತ್ರದಲ್ಲಿ ಉತ್ತಮ ಉಪನ್ಯಾಸಕರೆಂಬ ಕೀರ್ತಿಯ ಜೊತೆ ಜೊತೆಯಲ್ಲಿಯೇ, ಸಾಂಸ್ಕೃತಿಕ ಚಟುವಟಿಕೆಗಳ 'ಪ್ರೇರಕ ಶಕ್ತಿ’ಯಾಗಿಯೂ ನಾಡಿನ ಜನತೆಗೆ ಆಪ್ತರಾದರು.
ಲಕ್ಷ್ಮೀನಾರಾಯಣ ಭಟ್ಟರು ಜಿ.ಪಿ.ರಾಜರತ್ನಂ ಅವರು ತೋರಿದ ಆದರ್ಶದಂತೆ, ಕನ್ನಡ ಸಾಹಿತಿಗಳ ಶ್ರೇಷ್ಠ ಕೃತಿಗಳ ಬಗ್ಗೆ ಅನೇಕ ಉಪನ್ಯಾಸಗಳನ್ನೂ ಪರಿಚಾರಿಕೆಯ ಕೆಲಸವನ್ನೂ ಮಾಡುತ್ತಾ ಬಂದರು. 'ಮಂಕುತಿಮ್ಮನ ಕಗ್ಗ’ದ ಬಗ್ಗೆ ವಿಶೇಷವಾಗಿ ಒಲವುಳ್ಳ ಭಟ್ಟರು ಕಳೆದ ನಾಲ್ಕು ದಶಕಗಳಲ್ಲಿ ಈ ಕುರಿತು ಸಹಸ್ರಾರು ಉಪನ್ಯಾಸಗಳನ್ನು ನೀಡಿ ’ಕಗ್ಗದ ಭಟ್ಟರು’ ಎಂದೇ ಕನ್ನಡಪ್ರಿಯರ ಮನೆಮಾತಾಗಿದ್ದಾರೆ. ಈ ಸುಂದರ ಉಪನ್ಯಾಸಗಳ ಸ್ವಾದ ಧ್ವನಿ ಮಾಧ್ಯಮಗಳಲ್ಲೂ ಮೂಡಿವೆ. ಭಟ್ಟರು
'ಘಮಘಮಿಸುವ ವನಸುಮ ಡಿವಿಜಿ' ಎಂಬ ಕೃತಿ ರಚನೆ ಮಾಡಿದ್ದು 2002ರಲ್ಲಿ ಪ್ರಕಟಣೆಗೊಂಡಿದೆ. 2007ರಲ್ಲಿ 'ತಿಮ್ಮಗುರುವಿನ ದರ್ಶನ - ಗುಂಡೋಪನಿಷತ್' ಎಂಬ ಕೃತಿ ಪ್ರಕಟಗೊಂಡಿದೆ.
ಲಕ್ಷ್ಮೀನಾರಾಯಣ ಭಟ್ಟರ ಪ್ರವಚನಗಳಲ್ಲಿ ಮಂಕುತಿಮ್ಮನ ಕಗ್ಗ ಮಾತ್ರವೇ ಅಲ್ಲದೆ, ಕನ್ಮಡದ ಎಲ್ಲ ಪ್ರಸಿದ್ಧ ಕವಿಗಳ, ಅದರಲ್ಲೂ ವಿಶೇಷವಾಗಿ ಜಿ.ಪಿ. ರಾಜರತ್ನಂ, ಕೆ.ಎಸ್. ನರಸಿಂಹ ಸ್ವಾಮಿಗಳ ಕವಿತೆಗಳನ್ನು ಗಾಯನ ರೂಪದಲ್ಲಿ ಅರ್ಥ ಔಚಿತ್ಯ ವಿವರಣೆಗಳೊಂದಿಗೆ ಕೇಳುವುದೇ ಒಂದು ಆನಂದ. ಕನ್ನಡ ಸಾಹಿತ್ಯದಲ್ಲಿನ ಹಾಸ್ಯ ಮಾಧುರ್ಯವುಳ್ಳ ಗೀತೆಗಳ ಗಾಯನ ಮತ್ತು ವ್ಯಾಖ್ಯಾನ ಕಾರ್ಯಕ್ರಮಗಳನ್ನೂ ಭಟ್ಟರು ನಡೆಸಿಕೊಟ್ಟಿದ್ದಾರೆ.
ಲಕ್ಷ್ಮೀನಾರಾಯಣ ಭಟ್ಟರ ಸಾಹಿತ್ಯ ಉಪನ್ಯಾಸಗಳು ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ಕನ್ನಡಿಗರಿರುವ ಭಾರತದೆಡೆಯಲ್ಲೆಲ್ಲ ರಸಭರಿತವಾಗಿ ಹರಿದಿದೆ.
ಜಿ.ವಿ ಅಯ್ಯರ್ ಅವರ 'ಆದಿ ಶಂಕರಾಚಾರ್ಯ' ಚಿತ್ರ ಸಂಸ್ಕೃತದಲ್ಲಿ ಮೂಡಿಬಂದಾಗ ಆ ಚಿತ್ರ ಪ್ರದರ್ಶನ ನಡೆದೆಡೆಗಳಲ್ಲೆಲ್ಲ ಲಕ್ಷ್ಮೀನಾರಾಯಣ ಭಟ್ಟರ ಕನ್ನಡ ವ್ಯಾಖ್ಯಾನ ನಡೆದಿತ್ತು. ಶತಾವಧಾನಿಗಳಾದ ಆರ್. ಗಣೇಶರ ಅವಧಾನ ಕಾರ್ಯಕ್ರಮಗಳಲ್ಲೂ ಭಟ್ಟರು ರಸವತ್ತಾದ ಪ್ರಶ್ನೆಗಳೊಂದಿಗೆ ಪೃಚ್ಛಕರಾಗಿ ಕಳೆಕಟ್ಟಿದ್ದಿದೆ.
ಲಕ್ಷ್ಮೀನಾರಾಯಣ ಭಟ್ಟರಿಗೆ 2002ರಲ್ಲಿ ಡಿವಿಜಿ ಪ್ರಶಸ್ತಿ, ’ಹಂಸ’ ಸಂಸ್ಥೆಯಿಂದ ಕಗ್ಗದ ಪ್ರಚಾರಕ್ಕಾಗಿ ’ಹಂಸ ಸನ್ಮಾನ್’ ಪ್ರಶಸ್ತಿ, ಎಸ್.ಬಿ.ಐ ವತಿಯಿಂದ ’ಕಗ್ಗ ವ್ಯಾಖ್ಯಾನ ಪ್ರವೀಣ’ ಬಿರುದು, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಗೌರವ ಮುಂತಾದ ಹಲವಾರು ಗೌರವಗಳು ಸಂದಿವೆ.
ಮಾಹಿತಿ ಕೃಪೆ: ಸಿ.ಜಿ. ಶಶಿಧರನ್
Shashidharan CG
On the birthday of great scholar Prof. H. S. Lakshminarayana Bhat
ಕಾಮೆಂಟ್‌ಗಳು