ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಯುಕ್ತ ಕರ್ನಾಟಕ


 ಸಂಯುಕ್ತ ಕರ್ನಾಟಕ 


ಸಂಯುಕ್ತ ಕರ್ನಾಟಕ ಪತ್ರಿಕೆಯು 1933 ಏಪ್ರಿಲ್ 27ರಂದು ದಿನಪತ್ರಿಕೆಯಾಗಿ ರೂಪಾಂತರಗೊಂಡಿತು. ಇದಕ್ಕೆ ಮುನ್ನವೇ 1929ರಲ್ಲಿ ಬೆಳಗಾಂವಿಯಲ್ಲಿ ಸಾಪ್ತಾಹಿಕವೆಂದು ಆರಂಭವಾಗಿತ್ತು. ಬಳಿಕ 1937ರಲ್ಲಿ ಹುಬ್ಬಳ್ಳಿಗೆ ಸ್ಥಳಾಂತರ ಹೊಂದಿತು. ಇದು ನಾಡಿನಲ್ಲಿ ಪ್ರಥಮವರ್ಗದ ರಾಷ್ಟ್ರೀಯ ಪತ್ರಿಕೆಯೆಂದು ಹೆಸರು ಪಡೆಯಿತು. 

ಸಂಯುಕ್ತ ಕರ್ನಾಟಕ ಪತ್ರಿಕೆಯು ಹುಬ್ಬಳ್ಳಿ, ಬೆಂಗಳೂರು, ಗುಲ್ಬರ್ಗ, ದಾವಣಗೆರೆ ಮತ್ತು ಮಂಗಳೂರು ನಗರಗಳಿಂದ ಏಕಕಾಲದಲ್ಲಿ ಪ್ರಕಟವಾಗುವ ‍ಕನ್ನಡ ದಿನಪತ್ರಿಕೆ. ಇದು 1935 ಆಗಸ್ಟ್ 1ರಂದು ಹುಬ್ಬಳ್ಳಿಯಲ್ಲಿ ಸ್ಥಾಪಿತವಾದ ರಾಷ್ಟ್ರೀಯ ವಾಙ್ಮಯ ಪ್ರಕಾಶನ ಟ್ರಸ್ಟಿಗೆ (ಅನಂತರ ಲೋಕ ಶಿಕ್ಷಣ ಟ್ರಸ್ಟಿಗೆ) ಸೇರಿತು. ಬೆಂಗಳೂರು ಮುದ್ರಣ 1959 ಜನವರಿಯಿಂದ ಆರಂಭಗೊಂಡಿತು.

1924ರಲ್ಲಿ ಬೆಳಗಾಂವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಸೇರಿದ್ದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ, ಅದೇ ವರ್ಷ ಅದೇ ನಗರದಲ್ಲಿ ಜರುಗಿದ ಪ್ರಥಮ ಏಕೀಕರಣ ಪರಿಷತ್ತು ಯಶಸ್ವಿಯಾಗಿ ಪೂರೈಸಿದ ಪರಿಣಾಮವಾಗಿ ಕನ್ನಡಿಗರಲ್ಲಿ ರಾಜಕೀಯ, ಸಾಂಸ್ಕೃತಿಕ ಹಾಗೂ ಭಾಷಾಜಾಗೃತಿ ಪ್ರಬಲವಾಯಿತು. ಅದರಿಂದ ಉತ್ಸಾಹಿತರಾದ ದಾತಾರ ಬಲವಂತರಾಯರು ತಮ್ಮ ಸ್ನೇಹಿತರ ನೆರವಿನಿಂದ 1929ರಲ್ಲಿ ಬೆಳಗಾಂವಿಯಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಪ್ರಕಟಿಸಲಾರಂಭಿಸಿದರು. 

1932-33ರಲ್ಲಿ ದಾತಾರ ಬಲವಂತ ರಾವ್, ಕೇಶವರಾವ್ ಗೋಖಲೆ ಮತ್ತು ನಾರಾಯಣರಾವ್ ಜೋಶಿ ಇವರ ಪ್ರಯತ್ನದ ಫಲವಾಗಿ 1933 ಏಪ್ರಿಲ್ 27 ರಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಾಗಿ ರೂಪಾಂತರಗೊಂಡಿತು. ಶೇಷಾಚಾರ್ಯ ಕಟ್ಟಿ ಈ ಪತ್ರಿಕೆಯ ಪ್ರಥಮ ಸಂಪಾದಕರಾಗಿ ದುಡಿದರು. ಅನಂತರ ಎಚ್.ಆರ್. ತೆರಗುಂಡಿಯವರು ಕೆಲಕಾಲ ಸಂಪಾದಕರಾಗಿದ್ದರು. ಮೊಹರೆ ಹನುಮಂತರಾಯರು 1934ರಲ್ಲಿ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡು 1958ರ ತನಕ ನಡೆಸಿಕೊಂಡು ಬಂದರು. ಮೊಹರೆ ಅವರ ನಿವೃತ್ತಿಯ ಅನಂತರ ರಂ. ರಾ. ದಿವಾಕರ ಅವರು ಸಂಪಾದಕರಾದರು. ಮೊಹರೆ ಹಾಗೂ ದಿವಾಕರ ಅವರ ನೇತೃತ್ವದಲ್ಲಿ ಪತ್ರಿಕೆ ಬಹಳಷ್ಟು ಅಭಿವೃದ್ಧಿ ಹೊಂದಿತು. ಖಾದ್ರಿ ಶಾಮಣ್ಣನವರು ಕೆಲಕಾಲ ಈ ಪತ್ರಿಕೆಯ ಸಂಪಾದಕರಾಗಿದ್ದರು. 1976ರಲ್ಲಿ ಈ ಪತ್ರಿಕೆ ಕರ್ನಾಟಕ ಪತ್ರಿಕಾ ಪ್ರೈವೇಟ್ ಲಿಮಿಟೆಡ್, ತರುವಾಯ ಜಯಕರ್ನಾಟಕ ನ್ಯೂಸ್ ಪ್ರಿಂಟರ್ಸ್ ಲಿಮಿಟೆಡ್ ಅವರ ಒಡೆತನಕ್ಕೆ ಸೇರಿತ್ತು. ಈಗ ಲೋಕ ಶಿಕ್ಷಣ ಟ್ರಸ್ಟ್‍ನ ಒಡೆತನಕ್ಕೆ ಸೇರಿದೆ. 

ಸಂಯುಕ್ತ ಕರ್ನಾಟಕಕ್ಕೆ ಪ್ರಮುಖ ಕೊಡುಗೆ ಕೊಟ್ಟವರಲ್ಲಿ ದಿ. ಕೆ. ಶ್ಯಾಮರಾವ್ ಅವರೂ ಒಬ್ಬರು. ವಿ.ಎನ್.ಸುಬ್ಬರಾವ್, ಎನ್.ವಿ. ಜಯಶೀಲರಾವ್, ಡಾ. ಪಿ.ಎಸ್. ರಾಮನುಜಂ, ಈಶ್ವರ ದ್ವೈದೋಟ ಮುಂತಾದವರು ಇದರ ಸಂಪಾದಕರಾಗಿ ದುಡಿದ್ದಾರೆ. ಪ್ರಸಕ್ತದಲ್ಲಿ ಹುಣಸವಾಡಿ ರಾಜನ್ ಸಂಪಾದಕರಾಗಿದ್ದಾರೆ

ಸಂಯುಕ್ತ ಕರ್ನಾಟಕ ಈಗ ಗುಲ್ಬರ್ಗ(1999) ದಾವಣಗೆರೆ (2002) ಆವೃತ್ತಿಗಳನ್ನು ಹೊಂದಿದೆ. 2006ರಲ್ಲಿ ಮಂಗಳೂರು ಆವೃತ್ತಿ ಪ್ರಾರಂಭಿಸಿದೆ.

ವಾರಪತ್ರಿಕೆ 'ಕರ್ಮವೀರ' ಮತ್ತು ಮಾಸಿಕ 'ಕಸ್ತೂರಿ' ಸಂಯುಕ್ತ ಕರ್ನಾಟಕದ ಸಹೋದರ ಪ್ರಕಟಣೆಗಳು.

ಮಾಹಿತಿ ಆಧಾರ: ಮೈಸೂರು ವಿಶ್ವಕೋಶ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ