ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೋಹ್ರಾ ಸೆಹಗಲ್


 ಜೋಹ್ರಾ ಸೆಹಗಲ್

ಚಿತ್ರರಂಗದ ಮುದ್ದಿನ ಅಜ್ಜಿಯಾಗಿ, ಭಾರತೀಯ ರಂಗಭೂಮಿಯ ಮಹಾನ್ ಕಲಾವಿದೆಯಾಗಿ, ನೃತ್ಯ ಕಲಾವಿದೆಯಾಗಿ, ದೂರದರ್ಶನದ ಪ್ರಸಿದ್ಧ ಅಭಿನೇತ್ರಿಯಾಗಿ 102 ವರ್ಷ ಬದುಕಿದ್ದು,  ತಮ್ಮ ಜೀವನದ ಕೊನೆಯ ವರ್ಷಗಳಲ್ಲೂ ಸಕ್ರಿಯರಾಗಿದ್ದವರು ಜೋಹ್ರಾ ಸೆಹಗಲ್.

ತಮ್ಮ  96 ನೇ ವಯಸ್ಸಿನಲ್ಲಿ  ‘ಚೀನೀ ಕಮ್’  ಚಿತ್ರದಲ್ಲಿ ವಯಸ್ಸಾದ ಅಮಿತಾಬ್ ಬಚ್ಚನ್ನರಿಗೆ ಹಿರಿಯ ತಾಯಿಯಾಗಿ, ಉತ್ಸಾಹದ ಚಿಲುಮೆಯಾಗಿ ಅಭಿನಯಿಸಿದ್ದ ಜೋಹ್ರಾ ಸೆಹಗಲ್ ಒಬ್ಬ ಅಪರೂಪದ ಕಲಾವಿದೆ.

ಜೋಹ್ರಾ ಸೆಹಗಲ್ 1912ರ ಏಪ್ರಿಲ್ 27ರಂದು
ಉತ್ತರಪ್ರದೇಶದ ಸಹರಾನ್ಪುರದಲ್ಲಿ ಜನಿಸಿದರು.  2007ರ ವರ್ಷದಲ್ಲಿ ತಮ್ಮ 96ನೆಯ ವಯಸ್ಸಿನಲ್ಲೂ ಅವರು 42 ಡಿಗ್ರಿ ಉರಿಬಿಸಿಲಿನಲ್ಲಿ ಕುತುಬ್ ಮಿನಾರಿನ ಮುಂದೆ ಉತ್ಸಾಹಭರಿತವಾಗಿ  ಅಭಿನಯಿಸಿದ್ದನ್ನು ‘ಚೀನೀ ಕಮ್’ ಚಿತ್ರದ ಪ್ರಖ್ಯಾತ ನಿರ್ದೇಶಕ  ಬಾಲ್ಕಿ ಆತ್ಮೀಯವಾಗಿ ಸ್ಮರಿಸುತ್ತಾರೆ.

2008ರ ವರ್ಷದಲ್ಲಿ  ಜೋಹ್ರಾ ಸೆಹಗಾಲರು ಯುನೈಟೆಡ್ ನೇಷನ್ಸ್ ಪಾಪ್ಯುಲೇಶನ್ ಫಂಡಿನ ಲಾಡ್ಲಿ ಮೀಡಿಯಾ ಪ್ರಶಸ್ತಿಗಳಲ್ಲಿ ‘ಲಾಡ್ಲಿ ಆಫ್ ದಿ ಸೆಂಚುರಿ’ ಗೌರವವನ್ನು ಗಳಿಸಿದರು. 

ಜೋಹ್ರಾ ಅವರು ಚಿಕ್ಕಂದಿನಿಂದಲೂ  ನೃತ್ಯದ ಬಗ್ಗೆ ಅಪಾರವಾದ ಒಲವನ್ನು ಹೊಂದಿದ್ದರು.  1935ರಲ್ಲಿ ಅವರು ಭಾರತೀಯ ಮಹಾನ್ ನೃತ್ಯ ಕಲಾವಿದರಾದ ಉದಯಶಂಕರ್ ಅವರೊಂದಿಗೆ ನೃತ್ಯ ಪ್ರದರ್ಶನ ನೀಡುವುದನ್ನು ಪ್ರಾರಂಭಿಸಿದರು.  ನಂತರದಲ್ಲಿ ಅಲ್ಮೋರಾಗೆ ತೆರಳಿ ಅಲ್ಲಿ ನೃತ್ಯ ಶಿಕ್ಷಕಿಯಾಗಿದ್ದ ಅವರು ನೃತ್ಯಕಲಾವಿದರೂ ಚಿತ್ರಗಾರರೂ ಆಗಿದ್ದ ಕಾಮೇಶ್ವರ್ ಸೆಹಗಾಲರನ್ನು ವಿವಾಹವಾದರು.  

ನೃತ್ಯಕ್ಷೇತ್ರದಿಂದ ರಂಗಭೂಮಿಯ ಕ್ಷೇತ್ರಕ್ಕೆ ಆಗಮಿಸಿದ ಜೋಹ್ರಾ ಸೆಹಗಾಲರು 1945  ವರ್ಷದಲ್ಲಿ ಪೃಥ್ವಿ ಥಿಯೇಟರ್ಸ್ ಸೇರಿದರು.  ಪೃಥ್ವೀರಾಜ್ ಕಪೂರರಿಂದ ಪ್ರಾರಂಭಗೊಂಡಂತೆ ರಾಜ್‍ಕಪೂರ್, ರಿಷಿಕಪೂರ್ ಅಲ್ಲದೆ ಇಂದಿನ ಯುವಕ  ರಣಬೀರ್ ಕಪೂರನವರೆಗೆ ಕಪೂರ್ ಕುಟುಂಬದ ನಾಲ್ಕು ತಲೆಮಾರುಗಳೊಂದಿಗೆ ನಟಿಸಿದ ಕೀರ್ತಿ ಜೋಹ್ರಾ ಸೆಹಗಲ್ ಅವರದ್ದು.

ಭಾರತೀಯ ರಂಗಭೂಮಿಯ ಮಹಾನ್ ಅಭಿನೇತ್ರಿಯೆನಿಸಿದ್ದ ಜೋಹ್ರಾ ಸೆಹಗಾಲರು ಉತ್ತಮ ಅವಕಾಶಗಳು ದೊರಕಿದಾಗ ಚಿತ್ರರಂಗದಲ್ಲಿ ಅಭಿನಯಿಸಿದರು.   ಹಮ್ ದಿಲ್ ದೇ ಚುಕೇ ಸನಮ್, ಬೆಂಡ್ ಇಟ್ ಲೈಕ್ ಬೇಕ್ಕಾಮ್, ನಾಟ್ ಎ ನೈಸ್ ಮ್ಯಾನ್ ಟು ನೋ, ದಿಲ್ ಸೆ, ಕಭೀ ಖುಷಿ ಕಭೀ ಗಮ್, ವೀರ್ ಝಾರಾ, ಚೀನೀ ಕಮ್, ಸಾವರಿಯಾ, ಚೀನೀ ಕಮ್ ಮುಂತಾದವು ಜೋಹ್ರಾ ಸೆಹಗಾಲರು ನಟಿಸಿರುವ ಕೆಲವೊಂದು ಪ್ರಸಿದ್ಧ ಚಿತ್ರಗಳು.

ಅರವತ್ತರ ದಶಕದಲ್ಲಿ ಜೋಹ್ರಾ ಸೆಹಗಾಲರು ರುಡ್ಯಾರ್ಡ್ ಕಿಪ್ಲಿಂಗರ ಕಥೆಯಾಧಾರಿತ ‘ದಿ ರೆಸ್ಕ್ಯೂ ಆಫ್ ಪ್ಲಫ್ಫಲ್ಸ್’ ಚಿತ್ರದಲ್ಲಿ ಅಭಿನಯಿಸಿದ್ದರು.  ಎಂಭತ್ತರ ದಶಕದಲ್ಲಿ ಅವರು ಲಂಡನ್ನಿನಲ್ಲಿ ಪ್ರಸಿದ್ಧ ನಿರ್ದೇಶಕರಾದ ಜೇಮ್ಸ್ ಐವರಿ ಅವರ ‘ದಿ ಕೋರ್ಟಿಸಾನ್ಸ್ ಆಫ್ ಬಾಂಬೆ’ ಚಿತ್ರದಲ್ಲಿ ನಟಿಸಿದ್ದರು.   ಜ್ಯೂಯೆಲ್ ಇನ್ ದಿ ಕ್ರೌನ್, ಮೈ ಬ್ಯೂಟಿಫುಲ್ ಲಾಂಡ್ರೆಟ್ ಮುಂತಾದ ಪ್ರಸಿದ್ಧ ದೂರದರ್ಶನ ಧಾರಾವಾಹಿಗಳಲ್ಲಿ ಸಹಾ ಅವರು ಪಾತ್ರ ನಿರ್ವಹಿಸಿದ್ದರು.

ಪದ್ಮಶ್ರೀ, ಪದ್ಮಭೂಷಣ, ಕಾಳಿದಾಸ ಸಮ್ಮಾನ್, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಜೋಹ್ರಾ ಸೆಹಗಾಲರನ್ನು ಅರಸಿ ಬಂದಿದ್ದವು. 

ಜೋಹ್ರಾ ಸೆಹಗಾಲರು 2014 ವರ್ಷದ ಜುಲೈ 10ರಂದು ನಿಧನರಾದಾಗ 102 ತುಂಬಿ 103ನೇ ವಯಸ್ಸಿನಲ್ಲಿದ್ದರು.

On the birth anniversary of great artiste Zohra Sehgal

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ