ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿದುರಾಶ್ವತ್ಥ


 ಕರ್ನಾಟಕದ ಜಲಿಯನ್ ವಾಲಾ ಬಾಗ್ ವಿದುರಾಶ್ವತ್ಥ 



ವಿದುರಾಶ್ವತ್ಥ ಪುರಾಣ ಪ್ರಸಿದ್ಧ ಯಾತ್ರಾಸ್ಥಳವಾಗಿರುವಂತೆಯೇ ಜಲಿಯನ್ ವಾಲಾ ಬಾಗ್ನಲ್ಲಿ ನಡೆದ ಪೋಲೀಸ್ ಕಾರ್ಯಾಚರಣೆಯಂತಹ ಮಾರಣ ಹೋಮಕ್ಕೂ ಸಾಕ್ಷಿಯಾಗಿದೆ.  1938ರ ಏಪ್ರಿಲ್ 22ರಿಂದ ಪ್ರಾರಂಭವಾದ ಈ ಹೋರಾಟದ ವಿರುದ್ಧ ನಡೆದ ಕಾರ್ಯಾಚಾರಣೆ ಏಪ್ರಿಲ್ 25ರ ದಿನದಂದು ಕ್ರೂರ ಪೋಲೀಸ್ ಕಾರ್ಯಾಚರಣೆಯಿಂದಾಗಿ ಅನೇಕ ಜೀವಿಗಳನ್ನು ಬಲಿತೆಗೆದುಕೊಂಡಿತು.

ವಿದುರಾಶ್ವತ್ಥ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನಲ್ಲಿರುವ ಪುರಾಣ ಪ್ರಸಿದ್ಧ ಯಾತ್ರಾಸ್ಥಳ. ಗೌರಿಬಿದನೂರಿನ ಉತ್ತರಕ್ಕೆ ಸುಮಾರು 6 ಕಿ.ಮೀ. ದೂರದಲ್ಲಿ ದೊಡ್ಡ ಕುರುಗೋಡು ಬಳಿ ವಿದುರನೇ ನೆಟ್ಟು ಬೆಳೆಸಿದ್ದೆಂದು ಹೇಳುವ ವಿಶಾಲವಾದ ಒಂದು ಅಶ್ವತ್ಥವೃಕ್ಷ ಪಿನಾಕಿನಿ ನದಿಯ ಎಡದಂಡೆಯ ಮೇಲಿತ್ತು (ಕಳೆದ ಬಾರಿ ಅಲ್ಲಿಗೆ ಹೋದಾಗ ಅದು ಈಗಿಲ್ಲ ಬಿದ್ದು ಹೋಯ್ತು ಅಂದ್ರು ಯಾರೋ). ಇದರ ಬುಡದಲ್ಲಿ ನೂರಾರು ವಿವಿಧಾಕೃತಿಯ ನಾಗರಕಲ್ಲುಗಳನ್ನು ಪ್ರತಿಷ್ಠಾಪಿಸಿದ್ದಾರೆ. ಇಲ್ಲಿ ಈಗಿರುವ ಅಶ್ವತ್ಥ ವೃಕ್ಷದ ಪ್ರಾಕಾರಕ್ಕೆ ಹೊಂದಿಕೊಂಡಂತೆ ಈಶ್ವರ, ನವಗ್ರಹಗಳು, ನಾರಾಯಣ, ಶ್ರೀರಾಮರ ಇತ್ತೀಚಿನ ಕಾಲದ ಸಣ್ಣ ದೇವಸ್ಥಾನಗಳಿವೆ. 

ವಿದುರಾಶ್ವತ್ಥ ದೇವಸ್ಥಾನದ ಹಿಂಭಾಗ ಪಶ್ಚಿಮಕ್ಕೆ ಒಂದು ವಿಶಾಲವಾದ ಮರಗಳ ತೋಪಿದೆ. ಪ್ರತಿವರ್ಷ ಚೈತ್ರಮಾಸದ ಹುಣ್ಣಿಮೆಯ ದಿನ ದೊಡ್ಡ ಜಾತ್ರೆ ನೆರೆಯುತ್ತದೆ.

ಭಾರತ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಇಲ್ಲಿ ನಡೆದ ಒಂದು ಘಟನೆ ಉಲ್ಲೇಖಾರ್ಹವಾಗಿದೆ. 1938ರಲ್ಲಿ ಮೈಸೂರು ಕಾಂಗ್ರೆಸ್ಸಿನ ಪ್ರಮುಖರು ಜವಾಬ್ದಾರಿ ಸರ್ಕಾರ ಅಸ್ತಿತ್ವಕ್ಕೆ ಬರಲು ಶ್ರಮಿಸುತ್ತಿದ್ದರು. ಸತ್ಯಾಗ್ರಹಿಗಳು ಸರ್ಕಾರದ ನಿಷೇಧಾಜ್ಞೆಗಳನ್ನು ಉಲ್ಲಂಘಿಸುತ್ತಿದ್ದರು. ಆ ವರ್ಷದ ಏಪ್ರಿಲ್ 22ರಂದು ವಿದುರಾಶ್ವತ್ಥದಲ್ಲಿ ಜಾತ್ರೆ ನಡೆಯುತ್ತಿದ್ದಾಗ ಪೊಲೀಸರು ನೆರೆದಿದ್ದ ಗುಂಪಿನ ಮೇಲೆ ಗುಂಡುಹಾರಿಸಿ ಅನೇಕ ಕಾಂಗ್ರೆಸ್ ನಾಯಕರನ್ನು ಬಂಧಿಸಿದರು. ಮಾರನೆಯ ದಿನವೂ ಜನಸಮುದಾಯ ಸರ್ಕಾರದ ನಿಷೇಧಾಜ್ಞೆಗಳನ್ನು ಉಲ್ಲಂಘಿಸಿತು ಮತ್ತು ಹಲವಾರು ಜನ ಬಂಧಿಸಲ್ಪಟ್ಟರು. 25ರಂದು ಸುಮಾರು 7,000 ಜನ ವಿದುರಾಶ್ವತ್ಥದ ಬಹಿರಂಗ ಸಭೆಯಲ್ಲಿ ಹಾಜರಿದ್ದು, ಧ್ವಜವಂದನೆ ಕಾರ್ಯಕ್ರಮವನ್ನು ಆಚರಿಸಿದರು. ಪೊಲೀಸಿನವರು ಗುಂಪನ್ನು ಚದುರಿಸಲು ಗುಂಡು ಹಾರಿಸಿದಾಗ ಸ್ಥಳದಲ್ಲೇ ಹತ್ತು ಮಂದಿ ಮೃತಪಟ್ಟರು. ಈ ಘಟನೆಯ ಸ್ಮರಣಾರ್ಥವಾಗಿ ಸ್ವಾತಂತ್ರ್ಯಾನಂತರ 1959ರಲ್ಲಿ ಸರ್ವೋದಯ ಮೆಮೋರಿಯಲ್ ಪ್ರೌಢಶಾಲೆಯನ್ನು ಸ್ಥಾಪಿಸಲಾಗಿದೆ. 1962ರಲ್ಲಿ ದೇವಸ್ಥಾನದಲ್ಲಿರುವ ತೋಪಿನಲ್ಲಿ ಮರಣಹೊಂದಿದ ಸತ್ಯಾಗ್ರಹಿಗಳ ನೆನಪಿಗಾಗಿ ಸ್ಮಾರಕಸ್ತಂಭವೊಂದನ್ನು ನಿಲ್ಲಿಸಲಾಗಿದೆ. ಸ್ವಾತಂತ್ರ್ಯ ಹೋರಾಟದ ಸ್ಮರಣೆಯ 'ವೀರಸೌಧ' ದಲ್ಲಿ ಅನೇಕ ನೆನಪುಗಳನ್ನು ತರುವ ವಿವರಣಾತ್ಮಕ ಚಿತ್ರಗಳ ಸಂಗ್ರಹಾಲಯವಿದೆ.

Vidhurashwatha, Jallian Wallabagh of Karnataka

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ