ಬಿ. ಆರ್. ಚೋಪ್ರಾ
ಬಿ. ಆರ್. ಚೋಪ್ರಾ
ಬಿ. ಆರ್. ಚೋಪ್ರಾ ಅಂದರೆ ಕಿರುತೆರೆಯಲ್ಲಿ ಮೂಡಿಬಂದ 'ಮಹಾಭಾರತ' ಕಥಾಸರಣಿ ನೆನಪಾಗುತ್ತದೆ. ಆ ಭವ್ಯ ಸರಣಿಯೇ ಅಲ್ಲದೆ ಅವರು ಚಿತ್ರೋದ್ಯಮಿಯಾಗಿ ಅನೇಕ ಪ್ರಸಿದ್ಧ ಚಿತ್ರಗಳ ನಿರ್ಮಾಪಕ ನಿರ್ದೇಶಕರಾಗಿ ದುಡಿದು ದಾದಾ ಸಾಹೇಬ್ ಫಾಲ್ಕೆ ಗೌರವಕ್ಕೆ ಪಾತ್ರರಾದವರು.
ಬಲದೇವ ರಾಜ್ ಚೋಪ್ರಾ 1914ರ ಏಪ್ರಿಲ್ 22ರಂದು ಪಂಜಾಬಿನ, ನವಾನ್ ಶಹರ್ (ಈಗ ಶಹೀದ್ ಭಗತ್ ಸಿಂಗ್ ನಗರ್) ಜಿಲ್ಲೆಯ ರಾಹೋನ್ ಎಂಬಲ್ಲಿ ಜನಿಸಿದರು. ತಂದೆ ವಿಲಾಯತಿ ರಾಜ್ ಚೋಪ್ರಾ ಲೋಕೋಪಯೋಗಿ ಇಲಾಖೆ ನೌಕರರಾಗಿದ್ದು ಮುಂದೆ ಲಾಹೋರ್‌ಗೆ ಸ್ಥಳಾಂತರಗೊಂಡರು. ಚಲನಚಿತ್ರ ನಿರ್ಮಾಪಕ ಯಶ್ ಚೋಪ್ರಾ ಅವರು ಬಲದೇವ್ ಚೋಪ್ರಾ ಅವರ ಕಿರಿಯ ಸಹೋದರ.
ಬಿ. ಆರ್. ಚೋಪ್ರಾ ಲಾಹೋರ್‌ನ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪಡೆದರು. ಲಾಹೋರ್‌ನಲ್ಲಿ ಪ್ರಕಟವಾಗುತ್ತಿದ್ದ 'ಸಿನಿ ಹೆರಾಲ್ಡ್' ಎಂಬ ಚಲನಚಿತ್ರ ಮಾಸಿಕದಲ್ಲಿ 1944ರಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮುಂದೆ ಅವರು ಆ ಪತ್ರಿಕೆಯ ಒಡೆತನವನ್ನು ವಹಿಸಿಕೊಂಡು 1947ರವರೆಗೆ ನಡೆಸಿದರು. ಅದೇ ವರ್ಷದಲ್ಲಿ, ಅವರು ಐ.ಎಸ್.ಜೋಹರ್ ಅವರ 'ಚಾಂದನಿ ಚೌಕ್' ಎಂಬ ಕಥೆಯನ್ನು ಚಲನಚಿತ್ರಕ್ಕೆ ಅಳವಡಿಸುವ ಕೆಲಸವನ್ನು ಪ್ರಾರಂಭಿಸಿದರು. ಆದರೆ ಚಿತ್ರದ ನಿರ್ಮಾಣ ಪ್ರಾರಂಭವಾಗುತ್ತಿದ್ದಂತೆಯೇ, ಲಾಹೋರ್‌ನಲ್ಲಿ ದೇಶ ವಿಭಜನೆಯ ಗಲಭೆಗಳು ಭುಗಿಲೆದ್ದು ಚೋಪ್ರಾ ಮತ್ತು ಕುಟುಂಬ ಅಲ್ಲಿಂದ ಪಲಾಯನ ಮಾಡಬೇಕಾಗಿ ಬಂದು ದೆಹಲಿಗೆ ಬಂದರು. ನಂತರ ಮುಂಬೈಗೆ ತೆರಳಿದರು.
ಬಿ. ಆರ್. ಚೋಪ್ರಾ ಅವರ ಮೊದಲ ನಿರ್ಮಾಣದ 'ಕರ್ವಾತ್' 1948ರಲ್ಲಿ ಮೂಡಿಬಂತು. ನಿರ್ದೇಶಕರಾಗಿ ಅವರ ಮೊದಲ ಚಿತ್ರ ‘ಅಫ್ಸಾನಾ’ 1951ರಲ್ಲಿ ಬಿಡುಗಡೆಯಾಯಿತು, ಅದರಲ್ಲಿ ಅಶೋಕ್ ಕುಮಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು. ಚೋಪ್ರಾ ಮೀನಾ ಕುಮಾರಿ ನಾಯಕಿಯಾಗಿ ನಟಿಸಿದ 'ಚಾಂದನಿ ಚೌಕ್' ಚಿತ್ರವನ್ನು 1954ರಲ್ಲಿ ಬಿಡುಗಡೆ ಮಾಡಿದರು.
1955ರಲ್ಲಿ, ಚೋಪ್ರಾ ತಮ್ಮದೇ ಆದ ನಿರ್ಮಾಣ ಸಂಸ್ಥೆಯಾದ 'ಬಿಆರ್ ಫಿಲ್ಮ್ಸ್' ಸ್ಥಾಪಿಸಿದರು. ಈ ನಿರ್ಮಾಣ ಸಂಸ್ಥೆಯ ಮೊದಲ ಚಲನಚಿತ್ರ ‘ಏಕ್ ಹಿ ರಾಸ್ತಾ’ ಅತ್ಯಂತ ಯಶಸ್ವಿಯಾಯಿತು. ಅದರ ನಂತರ ದಿಲೀಪ್ ಕುಮಾರ್ ಮತ್ತು ವೈಜಯಂತಿಮಾಲಾ ಅಭಿನಯದ 'ನಯಾ ದೌರ್' (1957) ಸುವರ್ಣ ಮಹೋತ್ಸವ ಸಂಭ್ರಮ ಆಚರಿಸಿತು. ನಂತರ ಬಿಡುಗಡೆಯಾದ ಕಾನೂನ್, ಗುಮ್ರಾಃ, ಹಮ್ರಾಜ್ ಸಹಾ ಯಶಸ್ಸು ಕಂಡವು.
ಬಿ. ಆರ್. ಚೋಪ್ತಾ 1963ರಲ್ಲಿ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸದಸ್ಯ ತೀರ್ಪುಗಾರರಾಗಿದ್ದರು. ನಟ ದಿಲೀಪ್ ಕುಮಾರ್ ಅವರೊಂದಿಗಿನ ಅವರ ದ್ವಿತೀಯ ಚಿತ್ರ ‘ದಾಸ್ತಾನ್’ 1972ರಲ್ಲಿ ಸೋತಿತು. 1972ರ ನಂತರ ಚೋಪ್ರಾ ಬೇರೆ ಬೇರೆ ಶೈಲಿಯ ಚಿತ್ರಗಳಾದ 'ಡೂಂಡ್', 'ಕರ್ಮ', 'ಪತಿ ಪತ್ನಿ ಔರ್ ವೋ', ‘ಇನ್ಸಾಫ್ ಕಾ ತರಾಜು’, ‘ಆವಾಂ’, ‘ನಿಖಾ’ ಮುಂತಾದ ಚಿತ್ರಗಳನ್ನು ನಿರ್ಮಿಸಿ ಯಶಸ್ಸು ಗಳಿಸಿದರು.
ಬಿ. ಆರ್. ಚೋಪ್ರಾ ತಮ್ಮ ಕಿರಿಯ ಸಹೋದರ ಯಶ್ ಚೋಪ್ರಾ ನಿರ್ದೇಶಿಸಿದ ಧೂಲ್ ಕಾ ಫೂಲ್, ವಕ್ತ್, ಆದ್ಮಿ ಓರ್ ಇನ್ಸಾನ್ ಮತ್ತು ಇತ್ತೆಫಾಕ್ ಮುಂತಾದವುಗಳಿಗೆ ನಿರ್ಮಾಪಕರಾಗಿದ್ದರು. ತಮ್ಮ ಮಗ ರವಿ ಚೋಪ್ರಾ ನಿರ್ದೇಶನದ ದಿ ಬರ್ನಿಂಗ್ ಟ್ರೈನ್, ಆಜ್ ಕಿ ಆವಾಜ್, ಮಜ್ದೂರ್, ಬಾಗ್ಬನ್, ಬಾಬುಲ್, ಭೂತ್‍ನಾಥ್ ಚಿತ್ರಗಳನ್ನೂ ನಿರ್ಮಿಸಿದರು.
ಭಾರತೀಯ ದೂರದರ್ಶನ ಇತಿಹಾಸದಲ್ಲಿ ಅತಿ ದೊಡ್ಡ ಹೆಸರಾದ 'ಮಹಾಭಾರತ್' ಧಾರಾವಾಹಿಯ ಮೂಲಕ ಚೋಪ್ರಾ ಕಿರುತೆರೆಯ ಲೋಕವನ್ನು ಪ್ರವೇಶಿಸಿ ಮನೆ ಮನೆಯ ಮಾತಾದರು. ಅವರು ತಮ್ಮ ಪುತ್ರ ರವಿ ಚೋಪ್ರಾ ಒಂದಿಗೆ ಮಹಾಭಾರತ ಸರಣಿಯನ್ನು ಸಹನಿರ್ದೇಶಿಸಿದರು. ರಮಾನಂದ ಸಾಗರ್ ಅವರ 'ರಾಮಾಯಣ' ಮತ್ತು ಬಿ. ಆರ್. ಚೋಪ್ರಾ ಅವರ 'ಮಹಾಭಾರತ' ಸರಣಿಗಳು ಜನರನ್ನು ಟಿವಿಗಳ ಮುಂದೆ ಹಿಡಿದಿಟ್ಟು ಕೂರಿಸಿದ ರೀತಿ ಅನನ್ಯವಾದದ್ದು.
ಬಿ. ಆರ್. ಚೋಪ್ರಾ ಅವರು ಬಹದ್ದೂರ್ ಷಾ ಜಫರ್, ಕಾನೂನ್, ಆಪ್ ಬೀತಿ, ವಿಷ್ಣು ಪುರಾಣ್, ಮತ್ತು ಮಾ ಶಕ್ತಿ ಮುಂತಾದ ಧಾರಾವಾಹಿಗಳನ್ನು ಸಹಾ ನಿರ್ಮಿಸಿದರು.
ಬಿ. ಆರ್. ಚೋಪ್ರಾ ಅವರಿಗೆ ಕಾನೂನ್, ಧರ್ಮಪುತ್ರ ಚಿತ್ರಗಳಿಗೆ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ, ಹಲವು ಫಿಲಂಫೇರ್ ಪ್ರಶಸ್ತಿ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಂದವು.
ಬಿ. ಆರ್ ಚೋಪ್ರಾ 2008ರ ಅವರು ನವೆಂಬರ್ 5ರಂದು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದರು.
On the birth anniversary of B. R. Chopra
ಕಾಮೆಂಟ್‌ಗಳು