ಶಂಷಾದ್ ಬೇಗಂ
ಶಂಷಾದ್ ಬೇಗಂ
'ಕಹೀಂ ಪೇ ನಿಗಾಹೇಂ ಕಹೀಂ ಪೇ ನಿಶಾನಾ', 'ಮೇರೆ ಪಿಯಾ ಗಯೇ ರಂಗೂನ್', 'ಕಭೀ ಆರ್ ಕಭೀ ಪಾರ್' ಮತ್ತು 'ಕಜೀರಾ ಮೊಹಬ್ಬತ್ ವಾಲಾ' ಮುಂತಾದ ಹಾಡುಗಳ ಮೂಲಕ ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ಧ ಗೊಳಿಸಿ ದಂತಕಥೆಯಾಗಿದ್ದವರು ಹಿನ್ನೆಲೆ ಗಾಯಕಿ ಶಂಷಾದ್ ಬೇಗಂ.
ತಮ್ಮ ಕಾಲಮಾನದ ಅತ್ಯಂತ ಖ್ಯಾತ ಗಾಯಕಿಯಾಗಿದ್ದರೂ ಶಂಷಾದ್ ಬೇಗಂ ಚಿತ್ರೋದ್ಯಮದ ಗ್ಲಾಮರ್ ಜಗತ್ತಿನಿಂದ ತಾವಾಗಿಯೇ ದೂರ ಉಳಿದಿದ್ದರು. ಅವರಿಗೆ ಸದಾ ಪ್ರಚಾರದಲ್ಲಿ ಇರುವುದು ಇಷ್ಟವಿರಲಿಲ್ಲ. ಕಲಾವಿದರು ಎಂದೂ ಸಾಯುವುದಿಲ್ಲ ಎಂದು ಅವರು ಯಾವಾಗಲೂ ಹೇಳುತ್ತಿದ್ದರಂತೆ. ತಮ್ಮ ಹಾಡುಗಳ ಮೂಲಕವೇ ಅವರು ನೆನಪಿನಲ್ಲಿ ಉಳಿಯಲು ಬಯಸಿದ್ದರು.
ಶಂಷಾದ್ ಬೇಗಂ 1919ರ ಏಪ್ರಿಲ್ 14ರಂದು ಅಂದು ಭಾರತದ ಭಾಗವಾಗಿದ್ದ ಲಾಹೋರಿನ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದರು. ಲಾಹೋರಿನ ಪೇಷಾವರ್ ರೇಡಿಯೋ ಮೂಲಕ ತಮ್ಮ ಚೊಚ್ಚಲ ಹಾಡು ಹಾಡಿ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಿದ್ದರು.
ಬೇಗಂ ಅವರಿಗೆ ಗಾಯನ ಪುಟ್ಟ ವಯಸ್ಸಿನಿಂದಲೇ ಬಂದಿದ್ದ ಹವ್ಯಾಸ. ಆದರೆ ಆಕೆಯ ಸಂಪ್ರದಾಯಸ್ಥ ಕುಟುಂಬ ಆಕೆಗೆ ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಿರಲಿಲ್ಲ. ಕಡೆಗೆ ಆಕೆಯ ಚಿಕ್ಕಪ್ಪ ತನ್ನ ಅಣ್ಣನ ಮನವೊಲಿಸಿ ಆಕೆಗೆ ಹಾಡಲು ಅನುಮತಿ ನೀಡುವಂತೆ ಮಾಡಿದ್ದರು. ನಂತರ ಕ್ಸೆನೋಫೋನ್ ಕಂಪೆನಿ ಜೊತೆಗೆ ಹಾಡಲು ಅವರಿಗೆ ಅವಕಾಶ ಲಭಿಸಿತು. ಬುರ್ಖಾ ಧರಿಸಿಕೊಂಡೇ ರೆಕಾರ್ಡಿಂಗ್‍ಗಳಿಗೆ ಹಾಜರಾಗಬೇಕು ಮತ್ತು ಛಾಯಾಚಿತ್ರ ತೆಗೆಯಲು ಅವಕಾಶ ನೀಡಬಾರದು ಎಂಬ ಷರತ್ತಿನ ಮೇಲೆ ಹಾಡಲು ತಂದೆ ಆಕೆಗೆ ಅನುಮತಿ ನೀಡಿದ್ದರು.
1934ರಲ್ಲಿ ಗಣಪತ್ ಲಾಲ್ ಬಟ್ಟೋ ಅವರ ಜೊತೆಗೆ ಮದುವೆಯಾದ ಮೇಲೂ ಬೇಗಂ ತಮ್ಮ ತಂದೆಯ ಆಶಯಗಳನ್ನು ಗೌರವಿಸಿ ಅದರಂತೆಯೇ ನಡೆದುಕೊಳ್ಳುವುದನ್ನು ಮುಂದುವರೆಸಿದ್ದರು.
ಬಹುಮುಖ ಪ್ರತಿಭೆಯ ಶಂಷಾದ್ ಬೇಗಂ ಹಿಂದಿ, ಬಂಗಾಳಿ, ಮರಾಠಿ, ಗುಜರಾತಿ, ತಮಿಳು ಮತ್ತು ಪಂಜಾಬ್ ಭಾಷೆಗಳಲ್ಲಿನ ಹಾಡುಗಳ ಮೂಲಕ ಅಸಂಖ್ಯಾತ ಮಂದಿ ಶ್ರೋತೃಗಳ ಮನ ಗೆದ್ದಿದ್ದರು. ಗುಲಾಂ ಹೈದರ್, ನೌಶಾದ್, ಓ.ಪಿ. ನಯ್ಯರ್ ಸೇರಿದಂತೆ ತಮ್ಮ ಸಮಕಾಲೀನರಾದ ಬಹುತೇಕ ಎಲ್ಲ ಶ್ರೇಷ್ಠ ಸಂಗೀತಕಾರರ ನಿರ್ದೇಶನದಲ್ಲಿ ಅವರು ಹಾಡುಗಳನ್ನು ಹಾಡಿದ್ದರು.
'ಕಹೀಂ ಪೇ ನಿಗಾಹೇಂ ಕಹೀಂ ಪೇ ನಿಶಾನಾ', 'ಭೂಜ್ ಮೇರಾ ಕ್ಯಾ ನಾಮ್ ರೇ' ಮತ್ತು 'ಲೇಕೆ ಪೆಹ್ಲಾ ಪೆಹ್ಲಾ ಪ್ಯಾರ್ (ಸಿಐಡಿ-1956), 'ಸಾಯಿಯಾಂ ದಿಲ್ ಮೇ ಆನಾ ರೇ' (ಬಹಾರ್ 1951), 'ಛೋಡ್ ಬಬುಲ್ ಕಾ ಘರ್' (ಬಬುಲ್-1950) ಮತ್ತು 'ಕಜ್ರಾ ಮೊಹಬ್ಬತ್ ವಾಲಾ' (ಕಸ್ಮತ್- 1968) ಹಾಡುಗಳು ಆ ಕಾಲದಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿದ್ದ ಹಾಡುಗಳಲ್ಲಿ ಕೆಲವು.
ಶಂಷಾದ್ ಬೇಗಂ ಅವರು 1955ರಲ್ಲಿ ಪತಿ ಗಣಪತ್ ಲಾಲ್ ಬಟ್ಟೊ ಅವರು ನಿಧನರಾದಂದಿನಿಂದ ತಮ್ಮ ಪುತ್ರಿ ಉಷಾ ಹಾಗೂ ಅಳಿಯ ಯೋಗ ರಾತ್ರ ಅವರ ಜೊತೆಗೆ ಮುಂಬೈಯಲ್ಲಿ ವಾಸವಾಗಿದ್ದರು. 2013 ವರ್ಷದ ಏಪ್ರಿಲ್ 23 ರಂದು ಈ ಲೋಕವನ್ನಗಲಿದರು.
On the birth anniversary of great singer Shamshad Begum
ಕಾಮೆಂಟ್‌ಗಳು