ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರೇವತಿ ಕಾಮತ್


 ರೇವತಿ ಕಾಮತ್


ರೇವತಿ ಕಾಮತ್ ಅವರು ಸಂಗೀತ ಸಾಹಿತ್ಯ ಸಂಸ್ಕೃತಿಗಳ ಹಿನ್ನೆಲೆಯಿಂದ ರೂಪುಗೊಂಡ ಗೃಹಿಣಿಯಾಗಿದ್ದವರು ಪುಷ್ಪಾಲಂಕರಣ, ತೋಟಗಾರಿಕೆ, ಭೂದೃಶ್ಯಾಲಂಕರಣಗಳಲ್ಲಿ ಉನ್ನತಿ ಸಾಧಿಸಿ,  ಪರಿಸರ ಸಂರಕ್ಷಕರಾಗಿ ಕೆರೆಗಳ ಪುನಃಶ್ಚೇತನಕ್ಕೆ ಅಮೂಲ್ಯ ಕೊಡುಗೆ ನೀಡಿದ್ದು, ನದಿಗಳ ಉಳಿಸುವಿಕೆ ಆಂದೋಲನ, ಶಿಕ್ಷಣ ಹಾಗೂ ಸಮಾಜ ಸೇವೆಗಳಲ್ಲಿಯೂ ಪ್ರಧಾನ ಪಾತ್ರ ನಿರ್ವಹಿಸುತ್ತ ಸಾಗಿದ್ದಾರೆ.

ರೇವತಿ ಅವರು ವೀಣೆಯ ಇಂಚರ, ಪ್ರಬುದ್ಧ ಶಿಕ್ಷಣ ಮತ್ತು ಪ್ರಾಚೀನ ಸಂಪ್ರದಾಯಗಳು ಸಮೃದ್ಧವಾಗಿದ್ದ ಕುಟಂಬದಲ್ಲಿ ಜನಿಸಿದರು. ಅವರು ಹುಟ್ಟಿದ್ದು ಶೃಂಗೇರಿಯಲ್ಲಿ. ಏಪ್ರಿಲ್ 14 ಇವರ ಹುಟ್ಟುಹಬ್ಬ.  ತ್ರಿವಳಿ ಪದವೀಧರರೂ ಮತ್ತು ಪ್ರತಿಭಾವಂತ ವೀಣಾವಾದಕರೂ ಆದ ತಂದೆ ಎನ್.ಕೃಷ್ಣಮೂರ್ತಿ ಮತ್ತು ತಾಯಿ ಶ್ಯಾಮಲಮ್ಮ ಅವರಿಗೆ ಇವರು 10ನೇ ಮಗು. ಇವರ ಹಿರಿಯರು ಸಂಸ್ಕೃತ ವಿದ್ವಾಂಸರು. ಆಕೆಯ ಮಾವನವರು ಮೈಸೂರು ಸ್ಯಾಂಡಲ್‌ವುಡ್‌ ಸಂಸ್ಥೆಯ ಸ್ಥಾಪಕರು. ಬಾಲ್ಯದಿಂದಲೂ ಇವರ ಕುಟುಂಬದಲ್ಲಿ ಸಂಗೀತ ಮತ್ತು ಶಿಕ್ಷಣ ಬಹಳ ಮುಖ್ಯವಾಗಿತ್ತು. ಬಾಲಕಿ ರೇವತಿ ಅವರು ಪ್ರತಿದಿನ  ವೀಣೆಯ ಮಾಧುರ್ಯದಿಂದ ಎಚ್ಚರಗೊಳ್ಳುತ್ತಿದ್ದರು. ವೀಣೆ ವೆಂಕಟಗಿರಿಯಪ್ಪ ಅವರ ಶಿಷ್ಯರಾದ ಆಕೆಯ ತಂದೆ ವೈಣಿಕ ಎನ್. ಕೃಷ್ಣಮೂರ್ತಿ ಅವರು ಪ್ರತಿದಿನ ಬೆಳಿಗ್ಗೆ 4 ಗಂಟೆಗೆಲ್ಲ  ಎದ್ದು ವೀಣೆಯನ್ನು ನುಡಿಸುತ್ತ, ಸಂಗೀತದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತ ಮನೆಯಲ್ಲಿ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತಿದ್ದರು. ಕೃಷ್ಣಮೂರ್ತಿ ವಕೀಲರಾಗಿದ್ದರು. ತಮ್ಮ ಅಧ್ಯಯನವನ್ನು ಮುಗಿಸಿದ ನಂತರ  ಮುಂಬೈಗೆ ತೆರಳಿ ವಕೀಲಿ ವೃತ್ತಿಯನ್ನು ಮಾಡಿದರು. ನಂತರ ಕಾನೂನು ವೃತ್ತಿಯನ್ನು ತೊರೆದು ಮೈಸೂರಿನಲ್ಲಿ ವೀಣಾ ಶಿಕ್ಷಕರಾದರು.

ಬ್ಯಾಂಕ್ನಲ್ಲಿ ವೃತ್ತಿಯಲ್ಲಿದ್ದ ರೇವತಿ ಕಾಮತ್ ಅವರ ಪತಿ ರಘುರಾಮ್ ಕಾಮತ್ ಅವರು ಬ್ಯಾಂಕ್‌ನಿಂದ ಮನೆಗೆ ಹೂವುಗಳನ್ನು ತರುತ್ತಿದ್ದರು.  ರೇವತಿ ಅವರು ಅದನ್ನು ಸೃಜನಶೀಲತೆಯಿಂದ ಕಲಾತ್ಮಕವಾಗಿ ಅಲಂಕರಿಸುತ್ತಿದ್ದರು. ತಮಗೆ ಈ ಕಲೆಯಲ್ಲಿ ಪ್ರತಿಭೆಯಿದೆ ಎಂಬುದನ್ನು ಕಂಡುಕೊಂಡ ರೇವತಿ ಅವರು ಇದನ್ನು  ಗಂಭೀರವಾಗಿ ಪರಿಗಣಿಸಿದರು.  ತಮ್ಮ ಗೆಳತಿ ಒಬ್ಬರಿಂದ ಪಡೆದ  5000 ರೂಪಾಯಿ ಸಾಲದ ಮೂಲಕ ಹೂವಿನ ಅಲಂಕರಣವನ್ನು ನಿರೂಪಿಸಿ, ಅಂತಹ ಸೇವೆಯನ್ನು  ಒದಗಿಸುವುದಕ್ಕಾಗಿ ವಿಪ್ರೋ ಸಂಸ್ಥೆಯನ್ನು ಸಂಪರ್ಕಿಸಿದರು. ಇವರ ಕೌಶಲ್ಯವನ್ನು ಮನಗಂಡ ವಿಪ್ರೊ ಸಂಸ್ಥೆಯು ಇವರಿಗೆ 45,000 ರೂಪಾಯಿಗಳ ಕೆಲಸದ ಆದೇಶವನ್ನು ನೀಡಿತು.  ಇದು ಹೂವಿನ ಕಲಾವಿದೆಯಾಗಿ ರೇವತಿ ಅವರು ನಿರ್ವಹಿಸಿದ ಪ್ರಥಮ ಕಾಯಕ. ರೇವತಿ ಕಾಮತ್ ಅವರು ಗೃಹಿಣಿಯಾಗಿ ಮನೆಗೆಲಸವನ್ನೆಲ್ಲಾ ಮಾಡಿ, ಮಕ್ಕಳನ್ಞೂ ಪಾಲಿಸಿ ನಂತರ ಕೆಲಸಕ್ಕೆ ಹೋಗುತ್ತಿದ್ದರು. ಅವರ ಶ್ರದ್ಧೆಯ ಕಠಿಣ ಪರಿಶ್ರಮವು ಆರಂಭದಿಂದಲೇ ಅವರಿಗೆ ಅದ್ಭುತ ಯಶಸ್ಸನ್ನು ತಂದಿತು.  ರೇವತಿ ಕಾಮತ್ ಅವರು ಜಯನಗರದಲ್ಲಿ 500 ರೂಪಾಯಿಗೆ ಚಿಕ್ಕ ಜಾಗವನ್ನು ಬಾಡಿಗೆಗೆ ಪಡೆದು ಹೂವಿನ ವ್ಯಾಪಾರವನ್ನು ಆರಂಭಿಸಿದರು. ಆರಂಭಿಕ ದಿನಗಳಲ್ಲಿ ಹೆಚ್ಚು ಮಾರಾಟವಾಗುತ್ತಿರಲಿಲ್ಲ.  ಆದರೆ ಕ್ರಮೇಣ ವ್ಯಾಪಾರವು ಪ್ರವರ್ಧಮಾನಕ್ಕೆ ಬಂದಿತು. ಮುಂದೆ ಅವರು ಹೆಚ್‍ಪಿ ಮತ್ತು ಇತರ ಬಹುರಾಷ್ಟ್ರೀಯ ಸಂಸ್ಥೆಗಳನ್ನು ಸಂಪರ್ಕಿಸಿದರು.  ಆಸಕ್ತರಿಗೆ ಹೂವಿನ ಅಲಂಕಾರದಲ್ಲಿ ತರಬೇತಿ ನೀಡಲು ಪ್ರಾರಂಭಿಸಿದರು. ಮುಂದೆ ಮದುವೆ, ಆರತಕ್ಷತೆ ಮತ್ತು ಇತರ ಅನೇಕ ಕಾರ್ಯಕ್ರಮಗಳಿಗೆ ಹೂವಿನ ಅಲಂಕಾರ ವ್ಯವಸ್ಥೆಗಳನ್ನು ಒದಗಿಸತೊಡಗಿದರು.

ತಮ್ಮ ವೃತ್ತಿ ಬೆಳವಣಿಗೆಯನ್ನು ನಿರಂತರವಾಗಿ ನಿರ್ವಹಿಸುತ್ತ ಬಂದ ರೇವತಿ ಕಾಮತ್ ಅವರು ಕ್ಯಾಲಿಕ್ಸ್ ಎಂಬ ತಮ್ಮದೇ ಆದ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ಸ್ಥಾಪಿಸಿ,  ಪೂರ್ಣ ಪ್ರಮಾಣದ ಈವೆಂಟ್ ಮ್ಯಾನೇಜರ್ ಆಗಿ ಮಾರ್ಪಟ್ಟರು. ತಮ್ಮ  ಸಂಸ್ಥೆಯ ಅಡಿಯಲ್ಲಿ, ರೇವತಿ ಕಾಮತ್ ಅವರು ಎಚ್‍ಪಿ, ಮೈಕೊ, ಬಾಷ್  ಮುಂತಾದ ಪ್ರಸಿದ್ದ ಸಂಸ್ಥೆಗಳ ಕಾರ್ಯಕ್ರಮಗಳು, ಪ್ರಸಿದ್ಧ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಾದ ವೆಸ್ಟೆಂಡ್, ಲೀಲಾ ಪ್ಯಾಲೇಸ್, ವಿಂಡ್ಸನ್ ಮ್ಯಾನರ್, ಆರೆಂಜ್ ಕೌಂಟಿ, ಬೆಂಗಳೂರು ಇಂಟರ್ನ್ಯಾಷನಲ್ ಹೋಟೆಲ್ ಮುಂತಾದವುಗಳಲ್ಲಿ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿ ಹೆಸರಾದರು.

ಒಂದು ದಿನ ರೇವತಿ ಕಾಮತ್ ಅವರನ್ನು ಬಾಷ್ ಸಂಸ್ಥೆಯ ಆಡಳಿತ ಮಂಡಳಿಯವರು ಕರೆದು ಲ್ಯಾಂಡ್‌ಸ್ಕೇಪ್ ವರ್ಕ್ ಮಾಡುವಂತೆ ಕೇಳಿದರು. ರೇವತಿ ಅವರಿಗೆ ಅದರ ವ್ಯಾಖ್ಯಾನವೇ ಗೊತ್ತಿರಲಿಲ್ಲ. ಲ್ಯಾಂಡ್‌ಸ್ಕೇಪಿಂಗ್ ಎಂದರೇನು ಎಂದು ಸಪ್ನಾ ಬುಕ್ ಹೌಸ್ ಅಂಗಡಿಗೆ ಹೋಗಿ ಲ್ಯಾಂಡ್‌ಸ್ಕೇಪಿಂಗ್ ಕುರಿತಾದ ಪುಸ್ತಕಗಳನ್ನು ಅರಸಿದರು. ಆ ಕುರಿತು ಕೇವಲ 3 ಪುಸ್ತಕಗಳು ಇದ್ದು ಅವೆಲ್ಲವೂ  ದುಬಾರಿಯಾಗಿದ್ದವು. ಆದ್ದರಿಂದ ಅವರು ಆ ಪುಸ್ತಕಗಳನ್ನು ಅಂಗಡಿಯಲ್ಲಿಯೇ ಓದಲು ಪ್ರಾರಂಭಿಸಿದರು.  ಮರುದಿನ ಅಂಗಡಿಯ ಮ್ಯಾನೇಜರ್ ಅವರಿಗೆ ಓದಲು ಕುರ್ಚಿಯನ್ನು ನೀಡಿದರು. ಒಂದು ವಾರದ ನಂತರ ಅವರು ಬಾಷ್‌ನ ಜನರಲ್ ಮ್ಯಾನೇಜರ್‌ಗಳಿಗೆ ಭೂದೃಶ್ಯದ ಕೆಲಸದ ಬಗ್ಗೆ ಪ್ರಸ್ತುತಿಯನ್ನು ನೀಡಿ ನಾಲ್ಕೂವರೆ ಲಕ್ಷ ರೂಪಾಯಿಗಳ ಒಂದು ದೊಡ್ಡ ಯೋಜನೆಯ ಕಾಂಟ್ರಾಕ್ಟ್ ಪಡೆದರು.  ಈ ಕಾರ್ಯಯೋಜನೆಯ ಸಮರ್ಥ ನಿರ್ವಹಣೆಗೆ ಅವರಿಗೆ  ಪ್ರಶಂಸೆಯ ಸುರಿಮಳೆ ಸಂದಿತು.  ಕ್ಯಾಲಿಕ್ಸ್  ಸಂಸ್ಥೆಯ ಬೇಡಿಕೆಯು ಶೀಘ್ರವಾಗಿ ಗಗನಕ್ಕೇರಿತು. ಕುವೆಂಪು ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ, ತುಮಕೂರು ಕೈಗಾರಿಕಾ ಪ್ರದೇಶಗಳು, ತಲಕಾಡಿನಲ್ಲಿ ಕಾವೇರಿ ಶೋಧನೆ ಘಟಕ,  ಚಿನ್ನಸ್ವಾಮಿ ಸ್ಟೇಡಿಯಂ ಪ್ರತಿಮೆ, ವಿಂಡ್ಸನ್ ಮ್ಯಾನರ್ ವೃತ್ತ, ದೊಮ್ಮಲೂರು ಸಿಗ್ನಲ್, ಆದಾಯ ತೆರಿಗೆ ಇಲಾಖೆ, ನಿತೇಶ್ ಲೆಕ್ಸಿಂಗ್ಟನ್ ಅವೆನ್ಯೂ, ಹಿರಾನಿ ಅಂದಾನಿ ಯೋಜನೆಗಳು, ಯುಎಸ್ ಮೂಲದ ಹೋಟೆಲ್, ಸಿ.ಬಿ.ಆರ್.ಇ. , ಗೋಲ್ಡ್‌ಫಿಂಚ್, ರೆಸಾರ್ಟ್‌ಗಳು, ಫಾರ್ಮ್ ಹೌಸ್‌ಗಳು, ಕಂಟ್ರಿ ಕ್ಲಬ್, ಆಸ್ಪತ್ರೆಗಳು, ಸರ್ಜಾಪುರ ರಸ್ತೆಯಲ್ಲಿರುವ ಧಾಬಾ, ಕಂಟ್ರಿ ಕ್ಲಬ್ ಮತ್ತು ಇನ್ನೂ ಅನೇಕವು ಅವರ ವೃತ್ತಿಜೀವನದಲ್ಲಿ ಅತ್ಯುತ್ತಮ ಲ್ಯಾಂಡ್‌ಸ್ಕೇಪ್ ಕೆಲಸಗಳ ನಿದರ್ಶನಗಳಾಗಿವೆ. ಹೀಗೆ ರೇವತಿ ಕಾಮತ್ ಅವರು ನಿರಂತರವಾಗಿ ತಮ್ಮ ಕಂಪನಿಯ ಬೆಳವಣಿಗೆಯನ್ನು ಮುಂದುವರೆಸಿ ಪ್ರತಿಷ್ಠಿತ ಬಿಲ್ಡರ್‌ಗಳು ಮತ್ತು ವಾಸ್ತುಶಿಲ್ಪಿಗಳೊಂದಿಗೆ ಕೆಲಸ ಮಾಡಿದರು.

ಮುಂದೆ ರೇವತಿ ಕಾಮತ್ ಅವರು ಸೈಟ್ ಕಾನ್ಸೆಪ್ಟ್ ಇಂಟರ್ನ್ಯಾಷನಲ್ ಎಂಬ ಕಂಪನಿಯ ಗುತ್ತಿಗೆದಾರರಾಗಿ ಕೆಲಸ ಮಾಡಿದರು. ಅಲ್ಲಿ ಅವರು 7  ಕೋಟಿ ರೂ ಮೌಲ್ಯದ ಎಲಿಟಾ ಹೊರೈಜನ್ ಎಂಬ ಯೋಜನೆಯನ್ನು ಮಾಡಿದರು. ಇದು ಅವರ ವೃತ್ತಿಜೀವನದ ಹೆಗ್ಗುರುತು ಯೋಜನೆಗಳಲ್ಲಿ ಒಂದಾಗಿದೆ.  ರೇವತಿ ಕಾಮತ್ ನಂತರ ಪೆರಿಡಿಯನ್ ಎಂಬ ಸಂಸ್ಥೆಗಾಗಿ ಕೆಲಸ ಮಾಡಿದರು. ಅಲ್ಲಿ ಅವರು 26 ಸಿದ್ಧ-ರಚನೆ ಯೋಜನೆಗಳನ್ನು ಮತ್ತು 23 ಈಜುಕೊಳಗಳನ್ನು ಮಾಡಿದರು. ಮುಂದೆ ಜುರಾಂಗ್ ಎಂಬ ಸಂಸ್ಥೆಗಾಗಿ, ಟಾಟಾ ಸ್ಟೀಲ್ ಒರಿಸ್ಸಾಕ್ಕಾಗಿ ಭಾರತದ ಅತ್ಯಂತ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದನ್ನು ಮಾಡಿದರು.

ಫ್ಲೋರಲ್ ಆರ್ಟಿಸ್ಟ್, ಈವೆಂಟ್ ಮ್ಯಾನೇಜರ್ ಮತ್ತು ಲ್ಯಾಂಡ್‌ಸ್ಕೇಪಿಂಗ್ ನಿಂಜಾ ಆಗಿ 23 ವರ್ಷಗಳ ಮಹತ್ವದ ಯಶ ಸಾಧಿಸಿದ  ರೇವತಿ ಕಾಮತ್ ಅವರು ಸಮಾಜಮುಖಿಯಾದರು.   ಅವರು ತಮ್ಮ ದೀರ್ಘಕಾಲದ ಕಾಳಜಿಯಾದ ಮರ ನೆಡುವಿಕೆ ಮತ್ತು ಸರೋವರದ ಪುನರುಜ್ಜೀವನದ ಬಗ್ಗೆ ತಮ್ಮ ಗಮನವನ್ನು ಹರಿಸಿದರು. ಸುಡುವ ಬಿಸಿಲಿನಲ್ಲಿ ಬೀದಿಯಲ್ಲಿ ನಡೆಯುವ ಜನರನ್ನು ನೋಡಿದಾಗ, ರೇವತಿ ಕಾಮತ್ ತಕ್ಷಣವೇ ಸಾಲುಗಟ್ಟಿ ನಿಂತಿರುವ ಮರಗಳು ಆ ಜನರಿಗೆ ಸ್ವಲ್ಪ ನೆರಳು ನೀಡುವುದನ್ನು ಕಲ್ಪಿಸಿಕೊಳ್ಳತೊಡಗಿದರು. ಅದು ರೇವತಿ ಕಾಮತ್ ಅವರಲ್ಲಿದ್ದ ಸಾಮಾಜಿಕ ಅನುಕಂಪದ ರೀತಿ. ಇಲ್ಲಿಯವರೆಗೆ, ರೇವತಿ ಕಾಮತ್ ಅವರು ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ.  ಇದು ಒಬ್ಬ ವ್ಯಕ್ತಿಯಿಂದ ಪರಿಸರಕ್ಕೆ ಸಂದ ಅದ್ಭುತವಾದ ಸಮರ್ಪಣೆ ಆಗಿದ್ದು ವಿವಿಧ ಪತ್ರಿಕೆಗಳಲ್ಲಿ ಸ್ಥಾನ ಪಡೆದಿದೆ.

ರೇವತಿ ಕಾಮತ್ ಅವರು ಕನಕಪುರದಲ್ಲಿ ಸಾಯುತ್ತಿದ್ದ ಸೋಮನಹಳ್ಳಿ ಕೆರೆಗೆ ಜೀವ ತುಂಬಿದರು. ಅದನ್ನು ಜೀವಂತವಾಗಿ ತರುವುದು ಬಲು ಪ್ರಯಾಸದ ಕೆಲಸವಾಗಿತ್ತು.  ಪೂರ್ಣ ಸೊರಗಿದ್ದ ಸರೋವರವು ಸುಂದರವಾದ ಭೂದೃಶ್ಯದಂತೆ ಕಾಣುವಂತಾಯಿತು. ಇದರಿಂದ 28 ಎಕರೆ ಜಮೀನಿಗೆ ನೀರು ಬಂದು, 300 ಬೋರ್‌ವೆಲ್‌ಗಳು, 200 ತೆರೆದ ಬಾವಿಗಳು ತುಂಬಿದವು. ಇಂದು ಸೋಮನಹಳ್ಳಿ ಕೆರೆ ತನ್ನಷ್ಟಕ್ಕೆ ತಾನೇ ಸುಂದರ ಕಾಡು ಪ್ರದೇಶದಂತೆ ನಳನಳಿಸಿದೆ.

ಪರಿಸರವಾದಿಯಾಗಿ ತಮ್ಮ ಕಾರ್ಯಗಳನ್ನು ಮುಂದುವರೆಸಿದ ರೇವತಿ ಕಾಮತ್ ಅವರು ಕರ್ನಾಟಕದ ಆನೇಕಲ್‌ನ ನಾಗನಾಯಕನಹಳ್ಳಿ ಕೆರೆ, ಮೂಕೊಂಡ ಕೆರೆ ಮತ್ತು ಕಟ್ಟೆ ಕೆರೆಗಳ ಪುನಃಶ್ಚೇತನಕ್ಕೆ ತೊಡಗಿ, ಪುನರುಜ್ಜೀವನಗೊಂಡ ಸರೋವರಗಳ ಸುತ್ತಲಿನ ಜನ ಜೀವನವನ್ನು ಗಮನಾರ್ಹವಾಗಿ ಮರುರೂಪಿಸಿದ್ದಾರೆ.

ರೇವತಿ ಕಾಮತ್ ಅವರ ಪರಿಸರಕ್ಕಾಗಿನ ಈ ಯಶಸ್ವಿ ಪ್ರಯತ್ನಗಳಿಂದಾಗಿ  ಸದ್ಗುರು ಅವರು ಆಯೋಜಿಸಿದ ನದಿಗಳ ಉತ್ತಮ ನಿರ್ವಹಣೆಯ  'ರ್‍ಯಾಲಿ ಫಾರ್ ರಿವರ್' ಎಂಬ 'ಎನ್‍ಜಿಓ'ದ ನಿರ್ದೇಶಕರಾಗಲು ಆಹ್ವಾನ ಪಡೆದರು. ರೇವತಿ ಕಾಮತ್ ಅವರು  'ರ್‍ಯಾಲಿ ಫಾರ್ ರಿವರ್' ಸಂಸ್ಥೆಯ 7ನೇ ನಿರ್ದೇಶಕರಾಗಿದ್ದಾರೆ.

ರೇವತಿ ಕಾಮತ್ ಅವರು ಹಲವು ಶಾಲೆಗಳನ್ನು ದತ್ತು ಪಡೆದಿದ್ದಾರೆ. ಮೊದಲಿಗೆ ಹಲ್ಲೆಗೆರೆಯಲ್ಲಿ ಶಾಲೆಯನ್ನು ದತ್ತು ಪಡೆದರು. ಆರಂಭದಲ್ಲಿ, ರೇವತಿ ಕಾಮತ್ ಅವರು 350 ಮಕ್ಕಳ ಶಾಲೆಗೆ ಶೌಚಾಲಯವನ್ನು ನಿರ್ಮಿಸಲು ಉದ್ದೇಶಿಸಿದ್ದರು ಆದರೆ ನಂತರ ಸಾಂಕ್ರಾಮಿಕ ಸಮಯದಲ್ಲಿ ಆ ಶಾಲೆಯನ್ನು ಸಂಪೂರ್ಣವಾಗಿ ಡಿಜಿಟಲ್ ಆಗಿ ಪರಿವರ್ತಿಸಿದರು. ಅಮೇರಿಕಾ ಮೂಲದ ಐಟಿ ಕಂಪನಿ ಸಿಸ್ಕೊ, ಈ ಶಾಲೆಯ ಅಭಿವೃದ್ಧಿಗೆ ಮತ್ತಷ್ಟು ನೆರವು ನೀಡಲು ಮುಂದೆ ಬಂದಿತಲ್ಲದೆ, ಫಿನ್ಲೆಂಡ್ ಮೂಲದ ನೋಕಿಯಾ ಮಕ್ಕಳಿಗೆ ರೊಬೊಟಿಕ್ಸ್ ಕಲಿಸಲು ಮುಂದೆ ಬಂದಿತು.

ರೇವತಿ ಕಾಮತ್ ಅವರು ಇನ್ನೂ ಹಲವಾರು ಪ್ರಮುಖ ಯೋಜನೆಗಳತ್ತ  ಗಮನ ಹರಿಸಿದ್ದಾರೆ.  ಅನೇಕ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದು, ಸಾವಿರಾರು ಮರಗಳ ತೋಪುಗಳು ನಿರ್ಮಾಣ,  ರಾಜ ಕಾಲುವೆಯಿಂದ ಅನೇಕ ಕೆರೆಗಳಿಗೆ ಹರಿಯಲು ಹೊಳೆಯನ್ನು ರೂಪಿಸುವುದು ಮುಂತಾದವುಗಳನ್ನು ಜಗತ್ತು ಈ ಮೂಲಕ ಕಾಣುವುದು ನಿಚ್ಚಳವಾಗಿದೆ. 

ರೇವತಿ ಕಾಮತ್ ಅವರಲ್ಲಿ ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಆಸಕ್ತಿಗಳೂ ಅಪಾರ.  ಎಲ್ಲರನ್ನೂ ಪ್ರೀತಿಯಿಂದ ಕಾಣುವ ಔದಾರ್ಯ ಅವರದು. 

ನಿತ್ಯ ಉತ್ಸಾಹಿ ಸಾಧಕಿ ರೇವತಿ ಕಾಮತ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.

ಕೃತಜ್ಞತೆ: ರೇವತಿ ಕಾಮತ್ ಅವರ ಬಗ್ಗೆ ನನ್ನ ಗಮನ ಸೆಳೆ ಅಶ್ವಿನಿ ರಾವ್ ದೇಶ್‍ಮುಖ್  Ashwini Rao Deshmukh ಅವರಿಗೆ🌷🙏🌷

Happy birthday Revathi Kamath 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ