ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀಕೃಷ್ಣ ಆಲನಹಳ್ಳಿ


 ಶ್ರೀಕೃಷ್ಣ ಆಲನಹಳ್ಳಿ


ಶ್ರೀಕೃಷ್ಣ ಆಲನಹಳ್ಳಿ ಕನ್ನಡದ ಮಹತ್ವದ ಕಥೆಗಾರರಲ್ಲೊಬ್ಬರು.

ಶ್ರೀಕೃಷ್ಣ ಆಲನಹಳ್ಳಿ 1947ರ ಏಪ್ರಿಲ್ 3ರಂದು ಮೈಸೂರು ಜಿಲ್ಲೆಯ ಆಲನಹಳ್ಳಿಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾದರು.  ಅವರು ಬದುಕಿದ್ದು ನಲವತ್ತೆರಡು ವರ್ಷಕ್ಕೂ ಕಡಿಮೆ ಅವಧಿ.  ಅವರು ನಿಧನರಾದದ್ದು ಜನವರಿ 4, 1989ರಲ್ಲಿ.  ಈ ಅತಿ ಚಿಕ್ಕ ವಯಸ್ಸಿನಲ್ಲೇ ಅವರು ಕನ್ನಡ ಸಾಹಿತ್ಯದಲ್ಲಿ ಮೂಡಿಸಿ ಹೋದ ಛಾಪು ಅತ್ಯಂತ ಸ್ಮರಣೀಯವಾದದ್ದು.  

ಆಲನಹಳ್ಳಿಯವರು ವಿದ್ಯಾರ್ಥಿ ಜೀವನದಲ್ಲೇ ‘ಸಮೀಕ್ಷಕ’ ಎಂಬ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದ್ದರು.  ಸಾಹಿತ್ಯ ವಲಯದಲ್ಲಿ ಅದು ಎಲ್ಲೆಡೆ ಮೆಚ್ಚುಗೆ ಪಡೆದಿತ್ತು.  ಅಂದಿನ ಬಹುತೇಕ ಪ್ರಸಿದ್ಧ ಬರಹಗಾರರು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು.  ಅಂದಿನ ದಿನ ಆ ಪತ್ರಿಕೆಯಲ್ಲಿ ಬರೆಯಿರಿ ಎಂದು ಅವರು ತಮ್ಮ ಗೆಳೆಯರನ್ನು  ಎಷ್ಟು ಒತ್ತಾಯಿಸುತ್ತಿದ್ದರೆಂದರೆ, ಪಿ. ಲಂಕೇಶ್ ಅವರು ಅವರ ಒತ್ತಾಯದ ಕಾಟವನ್ನೇ ಒಂದು ಕವನದ ಸಾಲಾಗಿ “ನನ್ನ ಸುತ್ತಾ” ಎಂಬ ಪ್ರಸಿದ್ಧ ಕವನದಲ್ಲಿ ಬರೆದಿದ್ದರು.  

ಶ್ರೀಕೃಷ್ಣ ಆಲನಹಳ್ಳಿ ಅವರ ಕವನ ಸಂಗ್ರಹ “ಮಣ್ಣಿನ ಹಾಡು” ಕೃತಿಗೆ ಮುನ್ನುಡಿಯಲ್ಲಿ ಅಡಿಗರು ಅದನ್ನು ಕನ್ನಡ ಕಾವ್ಯದಲ್ಲಿ ನಡೆದ ‘ಘಾತಪಲ್ಲಟ’ ಎಂದು ಬಣ್ಣಿಸಿದ್ದರು. ಅದು ಶ್ರೀಕೃಷ್ಣರಿಗೆ ದೊಡ್ಡ ಹೆಸರು ತಂದಿತು.  ಎಷ್ಟು ಹೆಸರು ಎಂದರೆ ಅಂದು ಮಹಾರಾಜಾ ಕಾಲೇಜಿನಲ್ಲಿ  ಅಧ್ಯಾಪಕರಾಗಿದ್ದ ಎಸ್. ನಾರಾಯಣ ಶೆಟ್ಟರು, “ಲೈಬ್ರೆರಿಯಿಂದ ಕೃಷ್ಣನ ಪುಸ್ತಕ ಎಲ್ಲರೂ ತೆಗೆದುಕೊಂಡು ಹೋಗಿ ಓದುತ್ತಾರೆ, ನನ್ನದು ಯಾರೂ ತೆಗೆದುಕೊಂಡು ಹೋಗುವುದಿಲ್ಲ, ನನ್ನದನ್ನೂ ತೆಗೆದುಕೊಂಡು ಹೋಗಲಿ ಎಂದು ಲೈಬ್ರೆರಿಯಲ್ಲಿ ನನ್ನ ಪುಸ್ತಕವನ್ನು ಅವನ ಪುಸ್ತಕದ ಹತ್ತಿರವೇ ಇಟ್ಟೆ, ಆದರೂ ಯಾರೂ ತೆಗೆದುಕೊಂಡು ಹೋಗಲಿಲ್ಲ” ಎಂದು ತಮಾಷೆಯಾಗಿ ಹೇಳುತ್ತಿದ್ದರಂತೆ.   ಆ ಮಾತು ನಿಜವೂ ಆಗಿತ್ತು. ಕೃಷ್ಣ ಒಳ್ಳೆಯ ಲೇಖಕರು  ಮಾತ್ರ ಅಲ್ಲ, ಜನಪ್ರಿಯರೂ ಆಗಿದ್ದರು.

ಮುಂದೆ ಆಲನಹಳ್ಳಿ ಅವರು ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಅವರ ‘ಕಾಡು’, ‘ಪರಸಂಗದ ಗೆಂಡೆತಿಮ್ಮ’, ‘ಗೀಜಗನ ಗೂಡು’, ‘ಫೀನಿಕ್ಸ್’ ಅಂದಿನ ದಿನದಲ್ಲೇ ಸಿನೆಮಾಗಳಾದವು. ಅವರಿಗೆ ಅಪಾರ ಪ್ರಖ್ಯಾತಿ ಬಂತು. ಆದರೆ ಅವರಿಗೆ ಐಶ್ವರ್ಯ ಬಂತೇ? ಬಹುಶಃ ಇಲ್ಲ ಎನ್ನುತ್ತಾರೆ ಅವರ ಅಂದಿನ ಗೆಳೆಯರು. ತೋಟ ಮಾಡಿದರು. ಅದು ಫಲ ಬರುವಷ್ಟು ಬೆಳೆಯುವ ಹೊತ್ತಿಗೆ ಹೋಗಿಬಿಟ್ಟರು. ‘ಸಮೀಕ್ಷಕ’ ಪ್ರಕಟಿಸುವಾಗಲೂ ಅವರು ಶ್ರೀಮಂತರಾಗಿರಲಿಲ್ಲ. ತಂದೆಯನ್ನು ಚಿಕ್ಕಂದಿನಲ್ಲೇ ಕಳೆದುಕೊಂಡಿದ್ದರು. ತಾಯಿ ಊರಿನಲ್ಲಿ ಇದ್ದರು. ವಿದ್ಯಾರ್ಥಿ ದೆಸೆಯಲ್ಲಿ ಜೆ. ಎಸ್. ಎಸ್  ಹಾಸ್ಟೆಲಿನ ಬಿಟ್ಟಿ ಊಟ, ಗೀತಾ ರಸ್ತೆಯ ಸಂಪಿಗೆ ಮರದ ಕೆಳಗಿನ ಮನೆಗೆ ಹತ್ತು ರೂಪಾಯಿ ಬಾಡಿಗೆ ಕೊಡುವಾಗಲೂ ಪರದಾಡಿ ನೂರೆಂಟು ಸಣ್ಣ ಪುಟ್ಟ ಸಾಲಗಳಲ್ಲಿ ಮುಳುಗಿರುತ್ತಿದ್ದರಂತೆ.  

ಶ್ರೀಕೃಷ್ಣ ಆಲನಹಳ್ಳಿ ಅವರ ನಿಧನಾನಂತರ  ಅವರ “ಭುಜಂಗಯ್ಯನ ದಶಾವತಾರಗಳು” ಕೂಡಾ ಚಲನಚಿತ್ರವಾಯಿತು. ಶ್ರೀಕೃಷ್ಣ ಆಲನಹಳ್ಳಿ ಅವರ ಬದುಕು ಸ್ವಲ್ಪ ಎಗ್ಗಿಲ್ಲದ ಜೀವನಕ್ಕೆ ಹೊಂದಿಕೊಂಡಿತ್ತು  ಎಂಬುದು ಅವರ ಅಂದಿನ ಗೆಳೆಯರುಗಳ ಮಾತಿನಲ್ಲಿ ಕಾಣಬರುತ್ತದೆ.   ಆದರೆ ಅವರು ತಮ್ಮ ಬರಹಗಳಲ್ಲಿ ನಿರಂತರವಾಗಿ ಬೆಳೆಯುತ್ತಿದ್ದವರು.  ಅವರ ಕೊನೆಯ ಕೃತಿಗಳಾದ “ತಿಕ ಸುಟ್ಟ ದೇವರು”, “ಅರಮನೆ” ಮೊದಲಾದವುಗಳಲ್ಲಿನ ಅವರ ಭಾಷೆಯ ಬಳಕೆ, ಅನುಭವ ಹೆಚ್ಚು ಹೆಚ್ಚು ಮಾಗಿದ್ದು ಕಾಣುತ್ತದೆ.  ಅವರು ಶ್ರೇಷ್ಠತೆಯ ಮಟ್ಟ ತಲುಪಿದ್ದರು ಎಂಬುದು ಸಾಹಿತ್ಯ ವಿದ್ವಾಂಸರ ಅಭಿಪ್ರಾಯ.

‘ಮಣ್ಣಿನ ಹಾಡು’ ಅಲ್ಲದೆ ‘ಕಾಡುಗಿಡದ ಹಾಡು ಪಾಡು’, ‘ಡೋಗ್ರಾ ಪಹಾರಿ ಪ್ರೇಮಗೀತೆಗಳು’ ಅವರ ಕಾವ್ಯ ಸಂಕಲನಗಳು.  ‘ತಪ್ತ’, ‘ಫೀನಿಕ್ಸ್’ ಅವರ ಕಥಾ ಸಂಕಲನಗಳು.  ‘ಗ್ರಾಮಾಯಣ ಸಮೀಕ್ಷೆ’, ‘ಅವಲೋಕನ’, ‘ಅಂತಃಕರಣ’ ಅವರ ಸಂಪಾದಿತ ಕೃತಿಗಳು.  

ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿಗಳು ಸಿನಿಮಾಗಳಾದಾಗ ಪ್ರಶಸ್ತಿಗಳಲ್ಲಿ ಕೂಡಾ ಹೆಸರು ಮಾಡಿದವು.  ‘ಗೀಜಗನ ಗೂಡು’ ಟಿ. ಎಸ್.  ರಂಗ ಅವರಿಂದ, ‘ಕಾಡು’ ಗಿರೀಶ್ ಕಾರ್ನಾಡ್ ಅವರಿಂದ, ‘ಪರಸಂಗದ ಗೆಂಡೆ ತಿಮ್ಮ ‘ಮಾರುತಿ ಶಿವರಾಂ’ ಅವರಿಂದ, ‘ಭುಜಂಗಯ್ಯನ ದಶಾವತಾರಗಳು’ ಲೋಕೇಶ್ ಅವರಿಂದ ನಿರ್ದೇಶಿಸಲ್ಪಟ್ಟವು.  ಕಾಡು ಚಿತ್ರದಲ್ಲಿ ಅಮರೀಶ್ ಪುರಿ ನಟಿಸಿದ್ದರು.   ಅವರ ‘ಮಣ್ಣಿನ ಹಾಡು’ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು.

ಆಲನಹಳ್ಳಿ ಅವರ ಕತೆಗಳ ಮೇಲೆ ನವ್ಯದ ಪ್ರಭಾವ ಅಷ್ಟಿಷ್ಟು ಬಿದ್ದಿತ್ತೋ ಏನೋ, ಆದರೆ ಕಾದಂಬರಿಗಳೆಲ್ಲ ಆಲನಹಳ್ಳಿಯಲ್ಲೇ ಅರಳಿದಂಥವು. ಅವುಗಳಿಗೆ ಅದೆಂಥ ದೇಸಿ ಸೊಗಡು.  ಬರೆಯುತ್ತಾ ಬರೆಯುತ್ತಾ ಒಂದು ಮಾಂತ್ರಿಕ ಜಗತ್ತನ್ನು ಕಟ್ಟಿಕೊಡಬಲ್ಲ ತಾಕತ್ತಿದ್ದ ಆಲನಹಳ್ಳಿ, ಹೋರಾಟದಲ್ಲಿ ತೊಡಗಿಕೊಂಡದ್ದು, ಎಲ್ಲೋ ಜಗಳ ಆಡಿದ್ದು, ಯಾರನ್ನೋ ತಡವಿಕೊಂಡು ಜಿದ್ದಿಗೆ ಬಿದ್ದದ್ದು, ರಾತ್ರಿಪೂರ ಎಚ್ಚರಿದ್ದು ಬರೆಯುತ್ತಿದ್ದದ್ದು, ಅಸಂಖ್ಯ ಪ್ರೇಯಸಿರನ್ನು ಕಟ್ಟಿಕೊಂಡು ಅಲೆಯುತ್ತಿದ್ದದ್ದು, ಅದ್ಯಾವುದೋ ಕಾಡು ಹೊಕ್ಕು ಕೂತಿರುತ್ತಿದ್ದದ್ದು – ಇವೆಲ್ಲ ಅವರ ಗೆಳೆಯರ ಊಹೆಯಲ್ಲೇ ನಿಜವಾಗುತ್ತಿದ್ದ ಸಂಗತಿಗಳು.

‘ಕಾಡು’ ಕಾದಂಬರಿಯ ಕಿಟ್ಟಿ, ‘ಪರಸಂಗ’ದ ಗೆಂಡೆತಿಮ್ಮ, ‘ದಶಾವತಾರ’ದ ಭುಜಂಗಯ್ಯ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮುಗ್ಧರೇ. ಕಿಟ್ಟಿಯದು ಸಹಜ ಮುಗ್ಧತೆ. ಗೆಂಡೆತಿಮ್ಮ ನಮ್ಮ ಹಳ್ಳಿಯಲ್ಲಿ ಎದುರಾಗುವಂಥ ಎಡವಟ್ಟು ತರುಣ, ಭುಜಂಗಯ್ಯ ಎಲ್ಲದರಲ್ಲೂ ರೇಜಿಗೆ ಹುಟ್ಟಿ, ಮತ್ತೊಂದೇನೋ ಮಾಡಲು ಹೊರಟು ಎಲ್ಲದರಲ್ಲೂ ವಿಫಲನಾಗುವ ನಮ್ಮೊಳಗಿನ ಹುಂಬ.

ಆಲನಹಳ್ಳಿ ಅಷ್ಟು ಮುಗ್ಧರಾಗಿರಲಿಲ್ಲ ಎಂದು ಗೊತ್ತಾಗುವ ಹೊತ್ತಿಗಾಗಲೇ 1989ರ ಜನವರಿ 4ರಂದು ಕಣ್ಮರೆಯಾಗಿದ್ದರು. ಕೆಲವು ಲೇಖಕರೇ ಹಾಗೆ, ಅವರ ಮಿತಿಗಳು ಸ್ಪಷ್ಟವಾಗುವ ಮುಂಚೆಯೇ ಬರೆಯುವುದನ್ನೂ ಬದುಕುವುದನ್ನೂ ಮುಗಿಸಿರುತ್ತಾರೆ. ಹೀಗಾಗಿ ನಮಗೆ ಅವರ ಕುರಿತು ಅದಮ್ಯವಾದ ಪ್ರೀತಿಯಷ್ಟೇ ಉಳಿಯುವಂತೆ ಮಾಡುತ್ತಾರೆ.  ಶ್ರೀಕೃಷ್ಣ ಆಲನಹಳ್ಳಿ ಕನ್ನಡ ಸಾಹಿತ್ಯ ಲೋಕ ಕಂಡ ಅಪೂರ್ವ ಪ್ರತಿಭೆ.  ಅವರು ನಿಧನರಾದ ಎರಡು ದಶಕಗಳು ಕಳೆದ ನಂತರದಲ್ಲಿ ವಿವೇಕ ಶಾನಭಾಗರ ಸಂಪಾದಕೀಯದಲ್ಲಿ ಹಲವಾರು ಲೇಖಕರು ಕೂಡಿ  ಮೂಡಿಸಿರುವ ‘ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ’ ಅವರು ಹೇಗೆ ಕಾಲಗಳನ್ನು ಮೀರಿ ಸದಾ ಪ್ರಸ್ತುತರು ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

On the birth anniversary of Sri Krishna Alanahalli

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ