ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾನು ಮುಷ್ತಾಕ್


 ಬಾನು ಮುಷ್ತಾಕ್


ಬಾನು ಮುಷ್ತಾಕ್ ಅವರು ಲೇಖಕಿಯಾಗಿ, ಪತ್ರಕರ್ತೆಯಾಗಿ, ನ್ಯಾಯವಾದಿಯಾಗಿ ಹೆಸರಾಗಿದ್ದಾರೆ. 

ಏಪ್ರಿಲ್ 3 ಬಾನು ಮುಷ್ತಾಕ್ ಅವರ ಜನ್ಮದಿನ.  ಹಾಸನ ಜಿಲ್ಲೆಯ ವಲಭಬಾಯಿಯಲ್ಲಿ ಜನಿಸಿದರು.  ಬಿ.ಎಸ್ಸಿ, ಎಲ್.ಎಲ್.ಬಿ ಪದವಿಗಳನ್ನು ಗಳಿಸಿದರು ಪ್ರವೃತ್ತಿಯಲ್ಲಿ ಬರಹಗಾರ್ತಿಯಾದ ಅವರು ವೃತ್ತಿಯಲ್ಲಿ ನ್ಯಾಯವಾದಿ ಆಗಿದ್ದಾರೆ.

ಬಾನು ಮುಷ್ತಾಕ್ ಅವರು ಕಾದಂಬರಿ,  ಕಥಾ ಸಂಕಲನ,  ಪ್ರಬಂಧ ಸಂಕಲನ ಮುಂತಾದ ಹಲವು ಪ್ರಕಾರಗಳಲ್ಲಿ ಕೃತಿ ಪ್ರಕಟಿಸಿದ್ದಾರೆ. ಕೌಟುಂಬಿಕ ತಡೆ ಕಾಯ್ದೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಫಾರಸಿ ಕೃತಿ ತಾರೀಖ್ -ಎ-ಫೆರಿಸ್ತಾವನ್ನು ಉರ್ದುವಿನಿಂದ ಕನ್ನಡೀಕರಿಸಿದ್ದಾರೆ. ಲಂಕೇಶ್ ಪತ್ರಿಕೆಗೆ ಜಿಲ್ಲಾ ವರದಿಗಾರರಗಾಗಿ ಅವರು 9 ವರ್ಷ ಸೇವೆ ಸಲ್ಲಿಸಿದ್ದರು.

ಬಾನು ಮುಷ್ತಾಕ್ ಅವರ 'ಕರಿನಾಗರಗಳು' ಕತೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಅವರು  ’ಹಸೀನಾ’ ಚಿತ್ರ ನಿರ್ದೇಶಿಸಿದ್ದರು. ಅದು 3 ರಾಷ್ಟ್ರಪ್ರಶಸ್ತಿ ಗಳಿಸಿತು. ಬಾನು ಅವರ ಅನೇಕ ಕತೆಗಳು ಹಿಂದಿ, ಇಂಗ್ಲಿಷ್, ಉರ್ದು, ಮಲಯಾಳಂ, ತಮಿಳು ಭಾಷೆಗಳೂ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ‘ಕುಬ್ರ’ ಬಾನು ಮುಷ್ತಾಕ್ ಅವರ ಕಾದಂಬರಿ. ಹೆಜ್ಜೆ ಮೂಡಿದ ಹಾದಿ, ಬೆಂಕಿ ಮಳೆ, ಎದೆಯ ಹಣತೆ, ಸಫೀರಾ, ಬಡವರ ಮಗಳು ಹೆಣ್ಣಲ್ಲ ಅವರ ಕಥಾಸಂಕಲನಗಳಲ್ಲಿ ಸೇರಿವೆ. 'ಇಬ್ಬನಿಯ ಕಾವು', 'ಹೂ ಕಣಿವೆಯ ಚಾರಣ' ಮುಂತಾದವು ಲೇಖನಗಳ ಸಂಕಲನಗಳು. 'ಒದ್ದೆ ಕಣ್ಣಿನ ಬಾಗಿನ' ಕವನ ಸಂಕಲನ. ಅವರ ಅನೇಕ ಬರಹಗಳು ಕನ್ನಡದ ಗಣ್ಯವರೇಣ್ಯರು ಮೂಡಿಸಿರುವ ಅನೇಕ ಮಹತ್ವದ ಸಂಕಲನಗಳಲ್ಲಿ ರಾರಾಜಿಸಿವೆ.  ಎಲ್ಲ ಮಹತ್ವದ ನಿಯತಕಾಲಿಕಗಳು, ಅಂತರಜಾಲ ಪತ್ರಿಕೆಗಳು ಮತ್ತು ಸಾರ್ವಜನಿಕ ಸಂಪರ್ಕ ಮಾಧ್ಯಮಗಳಲ್ಲಿ ಅವರ ಬರಹಗಳು ನಿರಂತರ ಕಂಗೊಳಿಸಿವೆ.

ಬಾನು ಮುಷ್ತಾಕ್ ಅವರ ಮೂಲಕೃತಿ 'ಹಸೀನಾ ಮತ್ತು ಇತರ ಕತೆಗಳು' ಅನುವಾದವಾದ 'Heart Lamp’ selected stories (ಇಂಗ್ಲಿಷಿಗೆ ದೀಪಾ ಭಸ್ತಿ) ಅಂತರರಾಷ್ಟ್ತೀಯ ಬೂಕರ್ ಪ್ರಶಸ್ತಿಯ ಪರಿಗಣನೆ ಪಟ್ಟಿಯಲ್ಲಿ ಸೇರ್ಪಡೆಗೊಂಡಿತ್ತು. 

ಬಾನು ಮುಷ್ತಾಕ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಗೌರವ ಪ್ರಶಸ್ತಿ, ಪದ್ಮಭೂಷಣ ಬಿ.ಸರೋಜದೇವಿ ಸಾಹಿತ್ಯ ಪ್ರಶಸ್ತಿ, ಒಮ್ಮೆ ಹೆಣ್ಣಾಗು ಪ್ರಭುವೆ ನಾಟಕ ರೂಪಾಂತರಕ್ಕೆ ಇಂಟರ್ ನ್ಯಾಷನಲ್ ವುಮನ್ ಫಾರ್‌ ರೇಡಿಯೋ ಆ್ಯಂಡ್ ಟೆಲಿವಿಷನ್ ಬಹುಮಾನ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ ಹಾಗೂ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿ, ಗಿರಿಜಾದೇವಿ ದತ್ತಿ ಪ್ರಶಸ್ತಿ, ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಮಹತ್ಸಾಧನೆ ಮಾಡಿರುವ ಬಾನು ಮುಷ್ತಾಕ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

 Happy birthday Banu Mushtaq 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ