ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎ. ಎನ್. ಮುಕುಂದ


 ಎ. ಎನ್. ಮುಕುಂದ


ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ತೆರನಾದ ಸಾಹಿತ್ಯ ಲೋಕದ ದಿಗ್ಗಜರನ್ನು ಕಂಡಿದ್ದೇವೆ.  ಈ ದಿಗ್ಗಜರ ವಿಶಿಷ್ಟತೆಗಳ ಸೂಕ್ಷ್ಮ ಬೆರಗುಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಿಂದ ಸೆರೆಹಿಡಿದು ಲೋಕಕ್ಕೆ ತೆರೆದಿಟ್ಟವರು ಎ.ಎನ್. ಮುಕುಂದ. 

ಎ.ಎನ್. ಮುಕುಂದರ ವಿಶಿಷ್ಟ ಕೃತಿ 'ಮುಖಮುದ್ರೆ'ಯಲ್ಲಿ  ಕನ್ನಡ ಸಾಹಿತ್ಯ ಲೋಕದ 50 ಮಂದಿ ಸಾಹಿತಿಗಳ ಸುಂದರ ಭಾವಚಿತ್ರಗಳು ಎಡ ಬದಿಗಾದರೆ, ಬಲ ಬದಿಯಲ್ಲಿ ಅವರ ಕುರಿತಾದ ಕೆಲವು ಸ್ಥೂಲ ಮಾಹಿತಿಗಳೂ,  ಅವರನ್ನು ಭೆಟ್ಟಿಯಾಗಲು ಹೋದಾಗ ಲೇಖಕರಿಗಾದ ಅನುಭವಗಳ ಸಂಕ್ಷಿಪ್ತ ವಿವರಗಳೂ ಇವೆ. ಇದಕ್ಕೆ ಎಸ್. ದಿವಾಕರ್ ಅವರ ಮುನ್ನುಡಿ ಮತ್ತು ಗಿರೀಶ್ ಕಾಸರವಳ್ಳಿಯವರ ಹಿನ್ನುಡಿಗಳಿವೆ.

ಎ.ಎನ್. ಮುಕುಂದ,  1955ರ ಏಪ್ರಿಲ್ 22ರಂದು ಜನಿಸಿದರು. ದಾವಣಗೆರೆಯಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮತ್ತು ಬೆಂಗಳೂರಿನ ಬಿ.ಎಮ್.ಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಇವರ ಕಿರು ವಿದ್ಯಾಭ್ಯಾಸದ ವಿವರಗಳು. 'ಕೆಪಿಟಿಸಿಎಲ್'ನಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದ ಅವರು ಬೆಳೆಸಿಕೊಂಡ ಸಾಂಸ್ಕೃತಿಕ ಅಸಕ್ತಿಗಳು ಅಮೂಲ್ಯವಾದದ್ದು.

ಮುಕುಂದ ಬಹಳ ಎಳೆಯ ವಯಸ್ಸಿನಲಿಯೇ ಛಾಯಾಗ್ರಹಣದ ಬಗ್ಗೆ ಅಪಾರ ಕುತೂಹಲವನ್ನು ಬೆಳೆಸಿಕೊಂಡರು.  ಹವ್ಯಾಸಕ್ಕೋಸ್ಕರ ಖರ್ಚು ಮಾಡಲು ಕೈಯಲ್ಲಿ ದುಡ್ಡಿಲ್ಲದ 1970ರ ದಶಕದ ತಮ್ಮ ವಿದ್ಯಾರ್ಥಿ ಜೀವನ ಕಾಲದಲ್ಲಿ, ಅವರಿವರ ಕೃಪೆಯಿಂದ ಆಗಿನ ಕಾಲಕ್ಕೆ ವಿಶೇಷವೆನಿಸಿದ ತಂತ್ರಜ್ಞತೆಗಳಿದ್ದ ಕೆಮರಾಗಳನ್ನು ಬಳಸಿ, ತಜ್ಞ ಛಾಯಾಗ್ರಾಹಕರ ಸಖ್ಯ ಬೆಳೆಸಿಕೊಂಡು ಫೋಟೋಗ್ರಫಿಯ ಬಗ್ಗೆ ಜಿಜ್ಞಾಸೆ ಬೆಳೆಸಿಕೊಂಡರು.  ಈ ದೃಷ್ಟಿ ಅವರನ್ನು ಇತರ ಸಾಮಾನ್ಯ ಫೋಟೋಗ್ರಾಫರ್‍ಗಳಿಗಿಂತ ಭಿನ್ನ ದಾರಿಯಲ್ಲಿ ನಡೆಯುವಂತೆ ಮಾಡಿತು.

ಕೆ ವಿ ಸುಬ್ಬಣ್ಣನವರು ಎಂಭತ್ತರ ದಶಕದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಡಿಯಲ್ಲಿ ಮೂಡಿದ  ‘ಮಂಥನ  ಚಿತ್ರಸಮಾಜ’ದಲ್ಲಿ ಮುಕುಂದ ಅವರು ಗಿರೀಶ್ ಕಾಸರವಳ್ಳಿ, ಟಿ.ಪಿ. ಅಶೋಕ ಮತ್ತು  ಹೆಗ್ಗೋಡಿನ ಇನ್ನಿತರ ಗೆಳೆಯರೊಂದಿಗೆ ಸಕ್ರಿಯರಾಗಿ ದುಡಿದಿದ್ದರು.   ಆ ಮೂಲಕ ಗ್ರಾಮಾಂತರ ಪ್ರದೇಶಗಳಿಗೆ ವಿಶ್ವದ ಶ್ರೇಷ್ಠ ಚಲನಚಿತ್ರಗಳನ್ನು  ಕೊಂಡೊಯ್ದು, ಅವುಗಳ ಕುರಿತಾದ ಬರಹಗಳನ್ನೂ ಜನರಿಗೆ ಕೊಟ್ಟು,  ಅಲ್ಲಿನ ಜನ ಆ ಚಿತ್ರಗಳಿಗೆ ಸಂವಹಿಸುವಂತೆ ಮಾಡಿದ ಈ ಕಾರ್ಯಕ್ರಮಗಳಲ್ಲಿ ಮುಕುಂದರು ವಹಿಸಿದ ಮಹತ್ವದ ಪಾತ್ರವನ್ನು ಗಿರೀಶ್ ಕಾಸರವಳ್ಳಿ ಒಂದೆಡೆ ವಿಸ್ತಾರವಾಗಿ ಪ್ರಸ್ತಾಪಿಸಿದ್ದಾರೆ.  ಹಾಗೆಯೇ ಗಿರೀಶರು,  ಮುಕುಂದರ ಕ್ಯಾಮೆರಾ ಕಣ್ಣಿನ ದೃಷ್ಟಿಯ ಹಿಂದೆ ಇರುವ ವ್ಯಕ್ತಿ,  ಒಬ್ಬ ಕೇವಲ portrait ಸೃಷ್ಟಿಕರ್ತನಾಗುವುದಿಲ್ಲ.  "ತನ್ನ ಕ್ಯಾಮರಾ ಕಣ್ಣಿನ ಮುಂದೆ ಇರುವ  ವ್ಯಕ್ತಿ, ತನ್ನ ಆಳದ ಹಿಂದೆ ಇರುವ ಬೆರಗನ್ನು ತೆರೆದಿಡುವಲ್ಲಿ ಹೇಗೆ ತನ್ನ ಒಳಗಣ್ಣನ್ನು ಹರಿಸಿದ್ದಾರೆ" ಎಂಬುದನ್ನು ಮುಕುಂದರ ಚಿತ್ರಗಳು ನಿಚ್ಚಳವಾಗಿ ಗುರುತಿಸುತ್ತದೆ. 

ವೃತ್ತಿನಿರತ ಛಾಯಾಗ್ರಾಹಕರ ಮುಂದೆ ಫೋಟೋ ತೆಗೆಸಿಕೊಳ್ಳಬಯಸುವವರು ನಿರ್ದಿಷ್ಟ ಪೋಸುಗಳನ್ನು ಕೊಡುತ್ತಾರೆ. ಫೋಟೋ ತಾವು ನಿಜವಾಗಿ ಇರುವುದಕ್ಕಿಂತಲೂ ಚೆನ್ನಾಗಿರಬೇಕೆಂದು ಬಯಸುತ್ತ ಒಳಗಿನಿಂದ ನಿಜವಾಗಿ ಏನು ಅಲ್ಲವೋ ಅಂತಹ ಮುಖವಾಡಗಳನ್ನು ಧರಿಸುತ್ತಾರೆ. ವ್ಯಾಪಾರಿ ದೃಷ್ಟಿಯಿಂದ ಫೋಟೋ ತೆಗೆಯುವ ವೃತ್ತಿನಿರತ ಫೋಟೋಗ್ರಾಫರುಗಳ ಅಂಥ ಕೆಲಸಕ್ಕೆ ಹೆಚ್ಚು ಸೃಜನಶೀಲತೆ ಬೇಕಿಲ್ಲ. ತಾಂತ್ರಿಕ ಪರಿಣತಿ ಇದ್ದರೆ ವಸ್ತುವಿನ ಬಗ್ಗೆ ಗಮನವಿಲ್ಲದಿದ್ದರೂ ಕ್ಲಿಕ್ ಮಾಡಬಹುದು.

ಆದರೆ ಒಬ್ಬ ಸೃಜನಶೀಲ ಹವ್ಯಾಸಿ ಛಾಯಾಗ್ರಾಹಕನ ಉದ್ದೇಶಗಳೇ ಬೇರೆ. ಈ ಕುರಿತು ಸಾಕಷ್ಟು ಪಾಶ್ಚಾತ್ಯ ಕೃತಿಗಳನ್ನೂ ಓದಿ ತಮ್ಮ ಸಿದ್ಧಾಂತಗಳನ್ನು ರೂಪಿಸಿಕೊಂಡ ಮುಕುಂದ್ ಅವರಿಗೆ ಒಬ್ಬ ವ್ಯಕ್ತಿಯ ವಿಶಿಷ್ಟ ಭಾವಚಿತ್ರಗಳನ್ನು  (ಪೋರ್ಟೈಟ್ ಫೋಟೋಗ್ರಫಿ) ತೆಗೆಯುವುದರಲ್ಲಿ ಆಸಕ್ತಿ. ನಿಜವಾದ ಭಾವಚಿತ್ರವು ಆ ವ್ಯಕ್ತಿಯ ವ್ಯಕ್ತಿತ್ವವನ್ನೂ ಬಿಂಬಿಸಬೇಕು, ನೋಡುಗರಿಗೆ ಆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಹೇಳಬೇಕು ಎಂಬುದು ಅವರ ನೀತಿ. ಒಂದು ರೀತಿಯಿಂದ ಅದು 'ವ್ಯಕ್ತಿತ್ವ ಚಿತ್ರ'ವೂ ಹೌದು, ಎಂದು ಮುಕುಂದ ಹೇಳುತ್ತಿದ್ದರು.

ಮುಕುಂದ ಅವರೇ ಹೇಳುತ್ತಿದ್ದಂತೆ ಫೋಟೋ ತೆಗೆಯುವುದೆಂದರೆ ಅದು ವಸ್ತು ಮತ್ತು ಕಲಾವಿದನ ನಡುವಣ ಒಂದು ರೀತಿಯ ಸಂಘರ್ಷ. ಸಾಮಾನ್ಯವಾಗಿ ಮನುಷ್ಯ ಇತರರ ಮುಂದೆ ತನ್ನ ನಿಜ ವ್ಯಕ್ತಿತ್ವವನ್ನು ಪ್ರಕಟಪಡಿಸಲಿಚ್ಛಿಸುವುದಿಲ್ಲ. ಆದರೆ ಕೆಲವು ಲಹರಿಗಳಲ್ಲಿ ಅಥವಾ ಕೆಲವು ಕ್ಷಣಗಳಲ್ಲಿ ಅವರು ತಮ್ಮೊಳಗೆ ಅಡಗಿಸ ಬಯಸುವ ಪ್ರಯತ್ನವನ್ನೂ ಮೀರಿ ಅವರ ಮುಖಭಾವದಲ್ಲಿ ಅವರ ನಿಜ ವ್ಯಕ್ತಿತ್ವ ಕಾಣಿಸಿಕೊಳ್ಳುತ್ತದೆ. ಅದು ಒಂದು ಮಿಂಚಿನ ಕ್ಷಣವೇ ಆಗಿರಬಹುದು. ಆ ಕ್ಷಣವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುವುದೇ ಛಾಯಾಗ್ರಾಹಕನ ಸಾಹಸ. ಆದರೆ ಈ ಕ್ಷಣ ತನ್ನದು ಎಂದು ಛಾಯಾಗ್ರಾಹಕನಿಗೆ ಗೊತ್ತಿರಬೇಕಿದ್ದರೆ ತಾನು ಫೋಟೋ ತೆಗೆಯುವ ವ್ಯಕ್ತಿಯ ಗುಣ, ಸ್ವಭಾವ, ಚಿಂತನಾ ವೈಶಿಷ್ಟ್ಯಗಳ ಬಗ್ಗೆ ಆತ ವಿಶೇಷವಾಗಿ ತಿಳಿದುಕೊಂಡಿರಬೇಕಾಗುತ್ತದೆ, ಮಾತ್ರವಲ್ಲದೆ ತನ್ನ ಗುರಿಯ ಬಗ್ಗೆ ಖಚಿತತೆ ಆತನಲ್ಲಿ ಇರಬೇಕಾಗುತ್ತದೆ.

ಎ.ಎನ್. ಮುಕುಂದರು ತಮ್ಮ 'ಮುಖಮುದ್ರೆ' ಕೃತಿಯಲ್ಲಿ ಮೂಡಿಸಿರುವ 50 ಮಂದಿ ಸಾಹಿತಿಗಳ, ರಂಗಕರ್ಮಿಗಳ ಮತ್ತು ಚಿತ್ರ ರಂಗಗಳಲ್ಲಿ ದುಡಿದ ಮಹನೀಯರ ಚಿತ್ರಗಳನ್ನು ಮೂಡಿಸುವ ಮುಂಚೆ  ಸಾಕಷ್ಟು ಪೂರ್ವ ಅಧ್ಯಯನ ಮಾಡಿದ್ದಾರೆ. ಅವರ ಒಡನಾಟದ ಮೂಲಕವೂ ಅವರ ಬಗ್ಗೆ ಅನುಭವ ಪಡೆದಿದ್ದಾರೆ. ಎ.ಎನ್. ಮೂರ್ತಿ ರಾವ್, ಪರಿಸರ ಪರಿಶ್ರಮಿ ಕೋ.ಲ.ಕಾರಂತ, ಶಿವರಾಮ ಕಾರಂತ, ಸೇಡಿಯಾಪು ಕೃಷ್ಣಭಟ್ಟ, ಜಿ.ಬಿ. ಜೋಷಿ, ಪು ತಿ ನರಸಿಂಹಾಚಾರ್, ಜಿ ವೆಂಕಟಸುಬ್ಬಯ್ಯ, ತ ಸು ಶಾಮರಾವ್, ಎಸ್ ವಿ ಪರಮೇಶ್ವರ ಭಟ್ಟ, ಕೆ ಎಸ್ ನರಸಿಂಹಸ್ವಾಮಿ, ಚದುರಂಗ, ಎಂ ಕೆ ಇಂದಿರಾ, ಸ ರಂ ಎಕ್ಕುಂಡಿ, ಜಿ ಎಸ್ ಅಮೂರ, ಬಿ ಸಿ ರಾಮಚಂದ್ರ ಶರ್ಮ, ಕೀರ್ತಿನಾಥ ಕುರ್ತಕೋಟಿ, ಯಶವಂತ ಚಿತ್ತಾಲ, ಚನ್ನವೀರ ಕಣವಿ, ಶಾಂತಿನಾಥ ದೇಸಾಯಿ, ಹಾ ಮಾ ನಾಯಕ, ಯು ಆರ್ ಅನಂತಮೂರ್ತಿ, ಕೆ ವಿ ಸುಬ್ಬಣ್ಣ, ಎಸ್ ಎಲ್ ಭೈರಪ್ಪ,  ಜಿ ಎಚ್ ನಾಯಕ, ಸುಮತೀಂದ್ರ ನಾಡಿಗ, ಪಿ ಲಂಕೇಶ್, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ, ಶ್ರೀನಿವಾಸ ವೈದ್ಯ, ಕೆ ಎಸ್ ನಿಸಾರ್ ಅಹಮದ್, ಸಿ ಎನ್ ರಾಮಚಂದ್ರನ್, ಚಂದ್ರಶೇಖರ ಕಂಬಾರ, ಗಿರೀಶ ಕಾರ್ನಾಡ, ಕೆ ಪಿ ಪೂರ್ಣ ಚಂದ್ರ ತೇಜಸ್ವಿ, ಎಚ್ ಎಸ್ ವೆಂಕಟೇಶಮೂರ್ತಿ, ವೈದೇಹಿ, ಬಿ ಆರ್ ಲಕ್ಷ್ಮಣರಾವ್, ಬರಗೂರು ರಾಮಚಂದ್ರಪ್ಪ, ಎಚ್ ಎಸ್ ರಾಘವೇಂದ್ರ ರಾವ್, ಎಸ್ ದಿವಾಕರ್, ಚ ಸರ್ವಮಂಗಳಾ, ರಾಘವೇಂದ್ರ ಪಾಟೀಲ, ದೇವನೂರ ಮಹಾದೇವ, ಡಿ ಆರ್ ನಾಗರಾಜ್, ಸಿದ್ದಲಿಂಗಯ್ಯ, ಪ್ರತಿಭಾ ನಂದಕುಮಾರ್, ಟಿ ಪಿ ಅಶೋಕ, ಕೆ ವಿ ಅಕ್ಷರ, ವಿವೇಕ ಶಾನಭಾಗ, ವಸುಧೇಂದ್ರ ಅವರುಗಳ ಮುಖಗಳನ್ನು ತಾವು ನಿರೀಕ್ಷಿಸಿದ ಯಾವುದೋ ಭಾವಪ್ರಕಟಣೆಗಾಗಿ ಕಾದು ಅವರ ಮುಖದ ಜೀವಂತಿಕೆಯನ್ನು ಸೆರೆಹಿಡಿದಿದ್ದಾರೆ. ತಮ್ಮ ಈ ಕಾರ್ಯದಲ್ಲಿ ತಮ್ಮ ಪತ್ನಿ ಹಾಗೂ ನಮ್ಮೆಲ್ಲರ ಆತ್ಮೀಯ ಕವಯತ್ರಿ ಉಮಾ ಮುಕುಂದರ ಆಪ್ತ ಜೊತೆಗಾರಿಕೆ ಕೂಡ ಶೋಭೆಯಾಗಿ ಹರಡಿರುವುದನ್ನು ಮುಕುಂದ ಗುರುತಿಸಿದ್ದಾರೆ. ಪಾರ್ವತಿ ಐತಾಳ ಅವರು ಈ ಜೋಡಿಯ ಸೃಜನಶೀಲ ಜೊತೆಗಾರಿಕೆಯ ಈ ಮಹತ್ಕಾರ್ಯದ ಬಗ್ಗೆ ಸುಂದರ ಲೇಖನ ಬರೆದಿದ್ದಾರೆ. ಮುಕುಂದ ಅವರಿಗೆ ಕಪ್ಪು ಬಿಳುಪು ಚಿತ್ರಣ, ವರ್ಣ ಚಿತ್ರಣಕ್ಕಿಂತ  ಹೆಚ್ಚು ಪರಿಣಾಮಕಾರಿ ಎನಿಸಿದೆ. ಇನ್ನೂ ಅನೇಕ ಸಾಹಿತಿಗಳ ಚಿತ್ರಗಳನ್ನು ಮೂಡಿಸುವ ಆಶಯ ತಮಗಿದ್ದದ್ದರ ಕುರಿತು ಅವರು ಹೇಳುತ್ತಿದ್ದರು.

ಮುಖಮುದ್ರೆ ಪುಸ್ತಕದ ಕುರಿತಾದ ತಮ್ಮ ಅಭಿಪ್ರಾಯದಲ್ಲಿ ಗಿರೀಶ್ ಕಾಸರವಳ್ಳಿಯವರ ಮಾತುಗಳು ಮುಕುಂದರ ಛಾಯಾಗ್ರಹಣವನ್ನು ಕುರಿತು ಬಹಳಷ್ಟು ಹೇಳುತ್ತವೆ.  "ಈ  ಪುಸ್ತಕದಲ್ಲಿರುವ ಪ್ರತೀ ಛಾಯಾಚಿತ್ರದಲ್ಲೂ ಮುಕುಂದ ಕತ್ತಲೆ ಬೆಳಕಿನ ಲಾಸ್ಯವನ್ನು ಮಾರ್ಮಿಕವಾಗಿ ಸೆರೆ ಹಿಡಿದಿದ್ದಾರೆ. ಛಾಯಾಚಿತ್ರಗಳ ಅಂದ ಇದರಿಂದ ದ್ವಿಗುಣಗೊಂಡಿದೆ. ಈ ಚಿತ್ರಗಳನ್ನು ನೋಡುತ್ತಿರುವಾಗ ಯೂಸುಫ್ ಕಾರ್ಷ್ ಹಾಗು ನಮ್ಮವರೇ ಆದ ಕೆ ಜಿ ಸೋಮಶೇಖರ್ ಅವರ ಛಾಯಾಚಿತ್ರಗಳು ನೆನಪಾಗುತ್ತವೆ. ಮುಕುಂದ ತೆಗೆದಿರುವ ಚಿತ್ರಗಳು ಈ ಮೇಲಿನ ಛಾಯಾಚಿತ್ರಗಾರರ ಶೈಲಿಯ ಅನುಕರಣೆ ಖಂಡಿತಾ ಅಲ್ಲ. ಆದರೆ ಅವುಗಳೊಂದಿಗೆ ಒಂದು ಸಕೀಲ ಸಂಬಂಧವನ್ನಿಟ್ಟುಕೊಂಡ ಅವರದ್ದೇ ಆದ ಅನನ್ಯ ಶೈಲಿ.”

ಮುಖಮುದ್ರೆ ಪುಸ್ತಕದ ಆಚೆಗೆ ಸಹಾ ಮುಕುಂದರು ತೆಗೆದಿರುವ ಅನೇಕ ವ್ಯಕ್ತಿಸ್ವಭಾವ ಚಿತ್ರಗಳನ್ನು ನೋಡುವುದೇ ಒಂದು ಸಂತೋಷದನುಭವ. ಜೊತೆಗೆ ಉಮಾ Uma Mukund, ಮುಕುಂದ್ ಮತ್ತು ಈ ದಂಪತಿಗಳ ಸುಪುತ್ರ Prateek Mukunda ಅವರ ಆತಿಥ್ಯ ಸವಿಯುತ್ತ ಮಾತನಾಡುತ್ತಿದ್ದರೆ ಆಹಾ!, ಅದೊಂದು ಅದ್ಭುತ ಲೋಕ.  ಈ ಲೋಕದಲ್ಲಿ ಮಿಂದ ಪುನೀತ ಭಾವ ನನಗೂ ದಕ್ಕಿತ್ತು.  2022ರ ಮಾರ್ಚ್ ತಿಂಗಳಲ್ಲಿ ಅವರು ತಮ್ಮ ಮನೆಯಲ್ಲಿ ನೀಡಿದ ಆತಿಥ್ಯ,  ಪುಸ್ತಕಗಳು ಮತ್ತು ಪ್ರೀತಿ ಅವಿಸ್ಮರಣೀಯ. ನಂತರದಲ್ಲಿ ಕೂಡಾ ಹಲವು ಬಾರಿ ಅಕ್ಕರೆಯಿಂದ ಫೋನ್ ಮಾಡಿದ್ದರು.  ನನ್ನ ಬರಹಗಳ ಕಾಯಕವನ್ನು ಮೆಚ್ಚಿ ಹೃದಯ ತುಂಬಿ ಹಾರೈಸಿದ್ದರು. ಎಂಥ ಭಾಗ್ಯ ನನ್ನದು ಎಂದು ಸಂಭ್ರಮಿಸುತ್ತಿದ್ದೆ!!! 

2022ರ ಜುಲೈ 18ರಂದು ಮುಕುಂದರು ಈ ಲೋಕವನ್ನು ಅಗಲಿದರು ಎಂಬ ಸುದ್ದಿ ಬಂದಾಗ ಅಲಗಿಹೋದೆ.  ಬೆಳಗಾಗೆದ್ದು ಅವರ ಮುಖಮುದ್ರೆ ಪುಸ್ತಕ ತೆಗೆದು ಒಂದೊಂದೇ ಪುಟ ತೆರೆದಾಗ ಅವರೆಲ್ಲೊ ನನ್ನೊಡನಿದ್ದಾರೆ ಎಂಬ ಸಮಾಧಾನ ಮೂಡಿತು. ಜೊತೆಗೆ ಅವರು ನಮ್ಮ ಆತ್ಮೀಯ ಹೃದಯಿಗಳಾದ ಉಮಾ ಮುಕುಂದ ಮತ್ತು ಪ್ರತೀಕ್ ಮುಕುಂದರ ರೂಪದಲ್ಲೂ ನಮ್ಮೊಡನೆ ಜೀವಂತರಿದ್ದಾರೆ. 

ಮಾಹಿತಿ ಕೃಪೆ: 'ಅವಧಿ'ಯಲ್ಲಿ ಪ್ರೊ. ಪಾರ್ವತಿ ಐತಾಳ್ Parvathi Aithal ಅವರ ಲೇಖನ ಮತ್ತು 'ಮುಖಮುದ್ರೆ' ಪುಸ್ತಕಕ್ಕೆ ಗಿರೀಶ್ ಕಾಸರವಳ್ಳಿ ಅವರ ಪ್ರಸ್ತಾವನೆ.


On the birth anniversary of our great photographer Mukunda AN Sir

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ