ಶಂಕರಗೌಡ ಬೆಟ್ಟದೂರು
ಶಂಕರಗೌಡ ಬೆಟ್ಟದೂರು
ಕರ್ನಾಟಕದ ಪ್ರಸಿದ್ಧ ಕಲಾವಿದರಲ್ಲಿ ಶಂಕರಗೌಡ ಬೆಟ್ಟದೂರು ಒಬ್ಬರು. ಕರ್ನಾಟಕ ಸಾಂಪ್ರದಾಯಿಕ ಚಿತ್ರಕಲೆಗೆ ಬಂಗಾಳಿ ಕಲೆಯನ್ನು ಸಂಮಿಶ್ರಣ ಮಾಡಿ ವಿನೂತನ ಶೈಲಿಯನ್ನು ರೂಪಿಸಿದ ಕೀರ್ತಿ ಶಂಕರಗೌಡ ಬೆಟ್ಟದೂರು ಅವರದ್ದು.
ಶಂಕರ ಗೌಡರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬೆಟ್ಟದೂರಿನಲ್ಲಿ 1928ರ ಏಪ್ರಿಲ್ 14ರಂದು ಜನಿಸಿದರು. ಗುಲ್ಬರ್ಗದ ಸರಕಾರಿ ಪ್ರೌಢಶಾಲೆಯಲ್ಲಿ ಓದಿದ ನಂತರದಲ್ಲಿ ಮದರಾಸು, ಮುಂಬಯಿಗಳಲ್ಲಿ ತಮ್ಮ ಶಿಕ್ಷಣವನ್ನು ನಡೆಸಿದ ಶಂಕರಗೌಡರು ಮುಂಬೈನ ಚಿತ್ರಕಲಾ ಶಾಲೆ ಮತ್ತು ವಿಶ್ವಭಾರತಿ ಶಾಂತಿ ನಿಕೇತನಗಳಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡಿದರು. ಶಾಂತಿನಿಕೇತನದಲ್ಲಿ ಅವರು ವಿಶ್ವದ ಶ್ರೇಷ್ಠ ಚಿತ್ರಗಾರರಲ್ಲೊಬ್ಬರಾದ ನಂದಾಲಾಲ್ ಬೋಸರ ಶಿಷ್ಯರಾಗಿದ್ದರು. ರೇಖಾಚಿತ್ರ, ಜಲವರ್ಣ, ನೆರಳು ಬೆಳಕಿನ ಕಲೆ, ತೈಲವರ್ಣ, ಭಾವಚಿತ್ರ ಮುಂತಾದುವುಗಳಲ್ಲಿ ಶಂಕರಗೌಡರದ್ದು ಅಪ್ರತಿಮ ಸಾಧನೆ. ಇನ್ನೂ 14ರ ವಯಸ್ಸಿನಲ್ಲಿಯೇ ಗೌಡರು ಠಾಗೂರ್, ಮಹಾತ್ಮಾಗಾಂಧಿ, ಸುಭಾಷ್ ಚಂದ್ರರ ಸುಂದರ ಭಾವಚಿತ್ರಗಳನ್ನು ಮೂಡಿಸಿ ಖ್ಯಾತಿವಂತರಾಗಿದ್ದರು.
ವಿವಿಧ ಅಕಾಡೆಮಿ, ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದ ಶಂಕರಗೌಡರು ಕಲೆ, ಕೈಗಾರಿಕಾ, ಪರೀಕ್ಷಾ ಮಂಡಲಿ, ಕರ್ನಾಟಕ ವಸ್ತುಚಿತ್ರಕಲಾ ಸಂಗ್ರಹಾಲಯ, ಸ್ವರ-ಸಂಗಮ ಸಂಗೀತ ಶಿಕ್ಷಣ ಸಂಸ್ಥೆ, ಪ್ರಾಣ ಚೈತನ್ಯ ಚಿಕಿತ್ಸಾ ಕೇಂದ್ರ, ಪ್ರಸಾರ ಭಾರತಿ ಸಲಹಾ ಮಂಡಳಿ ಮುಂತಾದುವುಗಳಲ್ಲಿ ಸದಸ್ಯರಾಗಿ, ಸಲಹೆಗಾರರಾಗಿ, ಅಧ್ಯಕ್ಷರಾಗಿ ಸಮರ್ಥ ಸೇವೆ ಸಲ್ಲಿಸಿದ್ದರು. ಆಯುರ್ವೇದವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದ ಅವರು ಚಿಕಿತ್ಸಕರಾಗಿ ಹೃದಯ ಸಂಬಂಧಿ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದರು.
ಸದಾ ಜನಸಾಮಾನ್ಯರ ಬದುಕಿಗೆ ತುಡಿಯುತ್ತಿದ್ದು ಜನಸಾಮಾನ್ಯರ ಮೇಲೆ ಆಡಳಿತದ ದಬ್ಬಾಳಿಕೆಗಳನ್ನು ಸಹಿಸದಿದ್ದ ಶಂಕರಗೌಡರು ಹಲವಾರು ಜನಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲೂ ಸಕ್ರಿಯರಾಗಿ ಭಾಗಿಗಳಾಗಿದ್ದ ಶಂಕರಗೌಡ ಬೆಟ್ಟದೂರು ಅವರನ್ನು ನಿಜಾಮ್ ಆಡಳಿತ ಕಾರಾಗೃಹವಾಸಕ್ಕೆ ತಳ್ಳಿತ್ತು.
ಗಾಂಧಿಯವರು ತಮ್ಮ ಕೊನೆಯ ದಿನಗಳನ್ನು ಕಳೆದ ಬಿರ್ಲಾಭವನದಲ್ಲಿ ಮೂರು ವರ್ಷಕಾಲವಿದ್ದ ಶಂಕರಗೌಡರು, ಗಾಂಧಿಯವರ ಇಡೀ ಜೀವನದ ಕುರಿತಾದ ಭಿತ್ತಿಚಿತ್ರಗಳನ್ನು ರಚಿಸಿದರು. ಭಾರತ ಸರ್ಕಾರದ ಕೋರಿಕೆಯ ಮೇರೆಗೆ, ಚೀನಾಕ್ಕೆ ಹೋಗಿ ಅಲ್ಲಿನ ಗುಹೆಯೊಂದರಲ್ಲಿದ್ದ ಬುದ್ಧನ ಜೀವನದ ಕುರಿತಾದ 6ನೇ ಶತಮಾನದ ಹಿಂದಿನ ಚಿತ್ರಗಳ ನಕಲುಗಳನ್ನು ಸಿದ್ಧಪಡಿಸಿಕೊಟ್ಟರು. ಲಾಲ್ ಬಹಾದ್ದೂರ್ ಶಾಸ್ತ್ರಿಗಳಿಗೆ ಅವರು ಅತ್ಯಂತ ಪ್ರಿಯರಾಗಿದ್ದವರು. ಇಷ್ಟಾದರೂ ಬೆಟ್ಟದೂರು ಅವರು ತಮಗೆ ಯಾವುದೇ ಪ್ರಚಾರಗಳನ್ನು ಕೊಟ್ಟುಕೊಳ್ಳದೆ ಸಾಮಾನ್ಯನಂತೆ ತಮ್ಮನ್ನು ಕೃಷಿ ಕಾಯಕದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಅವರು ಹೆಚ್ಚು ಚಿತ್ರಿಸಿರುವುದು ಕೂಡಾ ದುಡಿಮೆಯಲ್ಲಿ ನಿರತರಾದ ಜನರನ್ನೇ; ಚಪ್ಪಲಿ ಹೊಲೆಯುವ ಚಮ್ಮಾರ; ಹೊಲದಲ್ಲಿ ದುಡಿಯುತ್ತಿರುವ ಒಕ್ಕಲಿಗ; ಚಕ್ಕಡಿ ಹೊಡೆಯುವ ರೈತ; ದೋಣಿ ನಡೆಸುತ್ತಿರುವ ಅಂಬಿಗ; ಕುರಿ ಕಾಯುವ ಪಶುಗಾಹಿ; ಬುಟ್ಟಿಹೊತ್ತಿರುವ ಮಹಿಳೆ; ಗಂಟೆಕಾಯಕ ಮಾಡುವ ಅಯ್ಯ; ಸೋರೆ ಮಾರುತ್ತಿರುವ ಕುಂಬಾರಗಿತ್ತಿಗೆ ಕಸಬರಿಗೆ ಕಟ್ಟುತ್ತಿರುವ ಸಂತಾಲ ವ್ಯಕ್ತಿ; ಅಕ್ಕಿಕೇರುತ್ತಿರುವ ಮಹಿಳೆ; ತಂಬೂರಿ ಹಿಡಿದು ಹಾಡುತ್ತಿರುವ ಗಾಯಕ-ಎಲ್ಲರೂ ಕಾಯಕದಲ್ಲಿ ನಿರತರಾದವರೇ. ಶರಣ ಸಾಹಿತ್ಯದಿಂದಲೇ ತಮ್ಮ ಚಿಂತನೆಗಳನ್ನು ಪಡೆಯುತ್ತಿದ್ದ ಬೆಟ್ಟದೂರು ಅವರ ಕುಟುಂಬದ ವೈಚಾರಿಕ ಪರಂಪರೆಗೆ ಅನುಗುಣವಾದ ಚಿತ್ರಗಳಿವು.
ಕರ್ನಾಟಕದಲ್ಲಿ ಚಿತ್ರಕಲಾ ಮಂಟಪ ಸ್ಥಾಪನೆ ಮಾಡಿದ ಕೀರ್ತಿ ಶಂಕರಗೌಡ ಬೆಟ್ಟದೂರು ಅವರದ್ದು. ಅವರು ಹಲವಾರು ಸ್ಥಳಗಳಲ್ಲಿ ಕಲಾ ತಮ್ಮ ಪ್ರದರ್ಶನಗಳನ್ನು ಏರ್ಪಡಿಸಿದ್ದರು. ಕೋಲ್ಕತ್ತಾದ ಯುವಜನ ಮೇಳ, ದೆಹಲಿಯ ಬಿರ್ಲಾ ಭವನ, ಕರ್ನಾಟಕ ಲಲಿತ ಕಲಾ ಅಕಾಡಮಿ, ಗುಲಬರ್ಗಾದ ಖಾಜಾ ಬಂದೆ ನವಾಜ್ ಶಿಕ್ಷಣ ಸಂಸ್ಥೆ ಮುಂತಾದೆಡೆಗಳಲ್ಲಿ ಅವರ ಚಿತ್ರಕಲಾ ಪ್ರದರ್ಶನಗಳು ಜರುಗಿದ್ದವು.
ಶಂಕರಗೌಡ ಬೆಟ್ಟದೂರು ಅವರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು. ಇವುಗಳಲ್ಲಿ ಅಖಿಲ ಭಾರತ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸೊಸೈಟಿ – ದೆಹಲಿ, ಬಸವೇಶ್ವರರ ಎಂಟನೆಯ ಶತಮಾನೋತ್ಸವ ಸಂದರ್ಭ, ಗುಲಬರ್ಗದ ಐಡಿಯಲ್ ಫೈನ್ ಆರ್ಟ್ಸ್ ಸಂಘ, ರಾಯಚೂರಿನಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ಲರಿಂದ ಪ್ರಶಸ್ತಿ ನೀಡಿಕೆ, ಭಾರತೀಯ ಮೆಡಿಕಲ್ ಅಸೋಸಿಯೇಷನ್ನಿನವರಿಂದ ಸನ್ಮಾನ, ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ರಾಯಚೂರು ಜಿಲ್ಲಾ ಗಣರಾಜ್ಯೊತ್ಸವ ಪ್ರಶಸ್ತಿ ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕಾರಗಳು ಮುಂತಾದವುಗಳು ಪ್ರಮುಖವಾಗಿವೆ.
ರೈತನಾಯಕರೂ ಲೇಖಕರೂ ಚಿಂತಕರೂ ಆಗಿದ್ದ ಚನ್ನಬಸವಪ್ಪ ಬೆಟ್ಟದೂರು ಶಂಕರಗೌಡರ ಸಹೋದರರು. ಶಂಕರ ಗೌಡರ ಮಕ್ಕಳಾದ ಬಸವಪ್ರಭು ಪಾಟೀಲ್ ಮತ್ತ ಶರಣಬಸವ ಪಾಟೀಲ್ ಸಹಾ ಅಪಾರ ಸಾಧನೆ ಮಾಡಿದ್ದಾರೆ.
ಯಾವುದಕ್ಕೂ ಹೆಚ್ಚು ಪ್ರಚಾರವನ್ನು ಬಯಸದೆ ಇರುತ್ತಿದ್ದ ಶಂಕರಗೌಡರು ಅತ್ಯಂತ ಸಹಜರೀತಿಯ ಸಾವಿನಿಂದ ಯಾವುದೇ ಸದ್ದುಗದ್ದಲವಿಲ್ಲದೆ ಈ ಲೋಕದಿಂದ 2011ರ ಏಪ್ರಿಲ್ 22ರಂದು ಅಗಲಿದರು.
Great artiste Shankar Gowda Bettadur
ಕಾಮೆಂಟ್‌ಗಳು